ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಭಯ ಹುಟ್ಟಿಸುವುದಲ್ಲ ಧರ್ಮ; ದಯೆ, ಸಮಾನತೆ ಮತ್ತು ಕಾಯಕವೇ ಬಸವಣ್ಣನವರ ಧರ್ಮದ ಜೀವಾಳ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

On: November 15, 2026 5:16 PM
Follow Us:

ಶಿವಮೊಗ್ಗ: ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವೆ ಗೋಡೆಗಳನ್ನು ಕಟ್ಟಲಾಗುತ್ತಿರುವ ಈ ಕಾಲದಲ್ಲಿ, 900 ವರ್ಷಗಳ ಹಿಂದೆಯೇ ಮನುಷ್ಯನ ಹೃದಯದಲ್ಲಿ ದಯೆ, ಬದುಕಿನಲ್ಲಿ ಸಮಾನತೆ, ದುಡಿಮೆಯಲ್ಲಿ ಗೌರವ ಹಾಗೂ ನಡತೆಯಲ್ಲಿ ಪ್ರಾಮಾಣಿಕತೆಯನ್ನು ಬಿತ್ತಿದ ವಿಶ್ವಗುರು ಬಸವಣ್ಣನವರ ಚಿಂತನೆಗಳು ಮತ್ತೊಮ್ಮೆ ಸಮಾಜದ ಆತ್ಮಸಾಕ್ಷಿಯನ್ನು ಎಚ್ಚರಿಸಬೇಕಿದೆ. ಒಂದು ಕಡೆ ಧರ್ಮದ ಹೆಸರಿನಲ್ಲಿ ಭಯ, ಕ್ರೌರ್ಯ ಮತ್ತು ರಕ್ತಪಾತದ ಘಟನೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಅದೇ ಧರ್ಮದ ನಿಜವಾದ ಅರ್ಥವನ್ನು ಜಗತ್ತಿಗೆ ಸಾರುವ ಬಸವಣ್ಣನವರ ತತ್ವಗಳು ಮಾನವೀಯತೆಯ ಬೆಳಕಾಗಿ ನಿಂತಿವೆ. ಮನುಷ್ಯನನ್ನು ಮನುಷ್ಯನಿಂದ ದೂರ ಮಾಡುವುದಲ್ಲ ಧರ್ಮ, ಎಲ್ಲರನ್ನೂ ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆಯಿಂದ ಬೆಸೆಯುವುದೇ ಧರ್ಮ. ಇನ್ನೊಬ್ಬರಿಗೆ ಒಳಿತನ್ನು ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ನಮ್ಮ ನಡೆ-ನುಡಿ ಮತ್ತು ವರ್ತನೆಗಳಿಂದ ಯಾರಿಗೂ ನೋವುಂಟು ಮಾಡದಿರುವುದೇ ನಿಜವಾದ ಧರ್ಮ. ‘ಸರಿದಾರಿಯಲ್ಲಿ ನಡೆಯುವುದೇ ಧರ್ಮ’ ಎಂಬ ಸರಳವಾದರೂ ಅತ್ಯಂತ ಆಳವಾದ ಸಂದೇಶವನ್ನು ಜೀವನದ ದಾರಿದೀಪವಾಗಿಸಿಕೊಳ್ಳಬೇಕು ಎಂದು ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು ಆಶಯ ವ್ಯಕ್ತಪಡಿಸಿದರು.

ನಗರದ ಜೆ.ಹೆಚ್. ಪಟೇಲ್ ಬಡಾವಣೆಯ ನಿವಾಸಿಗಳಾದ ಸೇವಾರ್ಥಿ ಸಂಪತ್ ಕುಮಾರ್ ಜಿ.ಎಸ್. ಮತ್ತು ಕುಟುಂಬದವರು, ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು ಹಾಗೂ ಬಸವಕೇಂದ್ರ, ಶಿವಮೊಗ್ಗ ಇವರ ಆಶ್ರಯದಲ್ಲಿ ಆಯೋಜಿಸಿದ್ದ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮದ ಎರಡನೇ ದಿನದಂದು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಸವಣ್ಣನವರ ‘ದಯವಿಲ್ಲದ ಧರ್ಮ ಅದಾವುದಯ್ಯ, ದಯವಿರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ, ದಯವೇ ಧರ್ಮದ ಮೂಲವಯ್ಯ, ಕೂಡಲಸಂಗಮದೇವನಂತಲ್ಲನೊಲ್ಲನಯ್ಯ‘ ಎಂಬ ವಚನವನ್ನು ಪ್ರಸ್ತಾಪಿಸಿದ ಸ್ವಾಮೀಜಿಗಳು, ಧರ್ಮದ ಮೂಲದಲ್ಲಿ ಇರಬೇಕಾದದ್ದು ದಯೆಯೇ ಹೊರತು ಭಯವಲ್ಲ ಎಂಬುದನ್ನು ಮನದಟ್ಟು ಮಾಡಿದರು.

12 ವರ್ಷಗಳ ಹಿಂದಿನ ಪ್ಯಾರಿಸ್‌ನ ಭಯೋತ್ಪಾದಕ ದಾಳಿ ಹಾಗೂ ಲಂಡನ್‌ನ ಥೇಮ್ಸ್ ನದಿ ದಂಡೆಯ ಬಳಿ ವಿಶ್ವಗುರು ಬಸವಣ್ಣನವರ ಪುತ್ಥಳಿ ಅನಾವರಣಗೊಂಡ ಸಂದರ್ಭವನ್ನು ಸ್ಮರಿಸಿದರು. ಈ ಎರಡು ಘಟನೆಗಳ ಹಿನ್ನೆಲೆಯಲ್ಲಿ ಶಿವಮೊಗ್ಗದ ಖ್ಯಾತ ವ್ಯಂಗ್ಯಚಿತ್ರಕಾರ ರಾಮಧ್ಯಾನಿ ಅವರು ರಚಿಸಿದ್ದ ವ್ಯಂಗ್ಯಚಿತ್ರದ ಮಹತ್ವವನ್ನು ವಿವರಿಸಿದರು.

ಒಂದು ಕಡೆ ಬಸವಣ್ಣನವರ ಪುತ್ಥಳಿ, ಮತ್ತೊಂದು ಕಡೆ ಐಫೆಲ್ ಟವರ್, ಇವೆರಡರ ನಡುವೆ ಕ್ರೌರ್ಯವನ್ನು ಪ್ರತಿಬಿಂಬಿಸುವ ಮುಖ, ಐಫೆಲ್ ಟವರ್ ಬಳಿ ರಕ್ತದ ಕಲೆಗಳು ಹಾಗೂ ಬಸವಣ್ಣನವರ ಪುತ್ಥಳಿ ಬಳಿ ಹೂವುಗಳು. ಅದರ ಕೆಳಗೆ ‘ದಯವೇ ಧರ್ಮದ ಮೂಲ, ಭಯವೇ ಧರ್ಮದ ಮೂಲವಯ್ಯ‘ ಎಂಬ ಸಾಲನ್ನು ಬರೆದಿದ್ದರು. ಕೆಲವೇ ಚಿತ್ರಗಳ ಮೂಲಕ ನೂರಾರು ಮಾತುಗಳಲ್ಲಿ ಹೇಳಲಾಗದ ಸಂದೇಶವನ್ನು ರಾಮಧ್ಯಾನಿ ಅವರು ಜಗತ್ತಿಗೆ ತಲುಪಿಸಿದ್ದರು.

ಭಯವನ್ನು ಹುಟ್ಟಿಸುವ ಧರ್ಮ ಈ ಜಗತ್ತಿಗೆ ಬೇಕಾಗಿಲ್ಲ. ಮನುಷ್ಯನೊಳಗಿನ ದಯೆ, ಕರುಣೆ ಮತ್ತು ಮಾನವೀಯತೆಯೇ ಧರ್ಮದ ನಿಜವಾದ ಅಡಿಪಾಯವಾಗಬೇಕು. ಧರ್ಮದ ಹೆಸರಿನಲ್ಲಿ ಭಯವನ್ನು ಸೃಷ್ಟಿಸುವುದು ಯಾವ ದೃಷ್ಟಿಯಿಂದಲೂ ಧರ್ಮವಾಗಲು ಸಾಧ್ಯವಿಲ್ಲ. ಬಸವಣ್ಣನವರು ಸಾರಿದ ದಯೆಯ ತತ್ವ ಇಂದಿನ ಜಗತ್ತಿಗೆ ಅತ್ಯಂತ ಅಗತ್ಯವಾಗಿದೆ ಎಂದರು.

ಧರ್ಮ ಎಂಬ ಪರಿಕಲ್ಪನೆ ಇತ್ತೀಚಿನ ದಿನಗಳಲ್ಲಿ ಅಪವ್ಯಾಖ್ಯಾನಕ್ಕೆ ಒಳಗಾಗುತ್ತಿದೆ. ಧರ್ಮದ ಹೆಸರಿನಲ್ಲಿ ಅನೇಕ ಅನರ್ಥಗಳು ನಡೆಯುತ್ತಿವೆ. ಸರಳವಾಗಿ ಹೇಳುವುದಾದರೆ ಧರ್ಮ ಎಂದರೆ ನಮ್ಮ ನಡತೆ. ಈ ಸಂದರ್ಭದಲ್ಲಿ ಸಿ.ಎಸ್. ಷಡಕ್ಷರಿ ಅವರು ಹೇಳಿದ ‘ಸರಿದಾರಿಯಲ್ಲಿ ನಡೆಯುವುದೇ ಧರ್ಮ‘ ಎಂಬ ಮಾತು ಅತ್ಯಂತ ಅರ್ಥಪೂರ್ಣವಾಗಿದೆ.

ಆದರೆ ಸರಿದಾರಿ ಎಂದರೆ ಯಾವುದು ಎಂಬ ಪ್ರಶ್ನೆ ಮುಖ್ಯ. ಪ್ರತಿಯೊಬ್ಬರೂ ತಮ್ಮ ದೃಷ್ಟಿಕೋನದಲ್ಲಿ ತಾವು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಳ್ಳುತ್ತಾರೆ. ತಪ್ಪು ಮಾಡಿದ ವ್ಯಕ್ತಿಯನ್ನು ಪ್ರಶ್ನಿಸಿದರೂ ತನ್ನ ಕೃತ್ಯಕ್ಕೆ ಯಾವುದಾದರೂ ಕಾರಣವನ್ನು ಮುಂದಿಟ್ಟು ಸಮರ್ಥಿಸಿಕೊಳ್ಳುತ್ತಾನೆ. ಆದರೆ ನಮ್ಮ ಅನುಕೂಲಕ್ಕೆ ತಕ್ಕಂತೆ ನಾವು ನಿರ್ಧರಿಸುವುದೇ ಸತ್ಯವಲ್ಲ.

ಇನ್ನೊಬ್ಬರಿಗೆ ಒಳಿತನ್ನು ಮಾಡುವ ನಡವಳಿಕೆ, ನಮ್ಮ ನಡೆ-ನುಡಿ ಹಾಗೂ ವರ್ತನೆಗಳಿಂದ ಬೇರೆಯವರಿಗೆ ಯಾವುದೇ ತೊಂದರೆ ಉಂಟಾಗದಂತೆ ಬದುಕುವುದು ನಿಜವಾದ ಧರ್ಮ. ಬಸವಣ್ಣನವರು ಕೂಡ ಇದೇ ಆಶಯದೊಂದಿಗೆ ತಮ್ಮ ಕಾಲದಲ್ಲಿ ಸಮಾಜದಲ್ಲಿದ್ದ ಧಾರ್ಮಿಕ ಅಂಧಶ್ರದ್ಧೆ, ಅಸಮಾನತೆ ಮತ್ತು ಅನ್ಯಾಯಗಳನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾದರು. ಅದರ ಫಲವಾಗಿ ಕನ್ನಡ ನಾಡಿನಲ್ಲಿ ಹೊಸ ಧಾರ್ಮಿಕ ಪರಿಕಲ್ಪನೆ ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಶರಣ ಚಳವಳಿ ರೂಪುಗೊಂಡಿತು ಎಂದು ಬಸವಕೇಂದ್ರ ಶ್ರೀಗಳು ವಿವರಿಸಿದರು.

ಬಸವಣ್ಣನವರ ಧರ್ಮದ ಪ್ರಮುಖ ಆಶಯವೇ ಪ್ರತಿಯೊಬ್ಬರಿಗೂ ಸಮಾನ ಧಾರ್ಮಿಕ ಸ್ವಾತಂತ್ರ್ಯ ನೀಡುವುದು. ಹೆಣ್ಣುಮಕ್ಕಳು ಮತ್ತು ಶೂದ್ರರು ಧಾರ್ಮಿಕ ಸಂಸ್ಕಾರಕ್ಕೆ ಅರ್ಹರಲ್ಲ ಎಂಬ ತಾರತಮ್ಯದ ಮನೋಭಾವವನ್ನು ಬಸವಣ್ಣನವರು ತಿರಸ್ಕರಿಸಿದರು. ಮಹಿಳೆಯರು ಸೇರಿದಂತೆ ಸಮಾಜದ ಪ್ರತಿಯೊಬ್ಬರಿಗೂ ದೇವರ ಪೂಜೆ ಮಾಡುವ, ಧಾರ್ಮಿಕ ಮಾರ್ಗದಲ್ಲಿ ನಡೆಯುವ ಸಮಾನ ಅವಕಾಶ ಕಲ್ಪಿಸಿದರು.

ಬ್ರಾಹ್ಮಣರಿಂದ ಹಿಡಿದು ಸಮಾಜದ ತಳಸಮುದಾಯದವರೆಗೂ ಪ್ರತಿಯೊಬ್ಬರೂ ಇಷ್ಟಲಿಂಗ ಧಾರಣೆ ಮಾಡಿ ಪೂಜೆ ಸಲ್ಲಿಸಬಹುದು ಎಂಬ ಮಹತ್ವದ ಸಂದೇಶ ನೀಡಿದರು. ಮಹಿಳೆಯರಿಗೂ ಹಾಗೂ ಶೋಷಿತ ಸಮುದಾಯದವರಿಗೂ ಇಷ್ಟಲಿಂಗ ಧಾರಣೆ ಮಾಡಿಸುವ ಮೂಲಕ ಧಾರ್ಮಿಕ ಸ್ವಾತಂತ್ರ್ಯ ಮತ್ತು ಆತ್ಮಗೌರವದ ಹಕ್ಕನ್ನು ದೊರಕಿಸಿಕೊಟ್ಟರು.

ಹಿರಿಯ ತರಳಬಾಳು ಜಗದ್ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ ‘ಹೊಟ್ಟೆ ಇದ್ದವನು ಉಣ್ಣಬೇಕು, ರಟ್ಟೆ ಇದ್ದವನು ದುಡಿಯಬೇಕು, ನೆತ್ತಿ ಇದ್ದವನು ಓದಬೇಕು‘ ಎಂಬ ಮಾತನ್ನು ಉಲ್ಲೇಖಿಸಿದ ಸ್ವಾಮೀಜಿಗಳು, ಈ ತತ್ವದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿ, ಆತ್ಮವಿರುವ ಪ್ರತಿಯೊಬ್ಬರಿಗೂ ಪರಮಾತ್ಮನನ್ನು ಪೂಜಿಸುವ ಹಕ್ಕಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಎಲ್ಲರಿಗೂ ಹೊಟ್ಟೆ ಇದೆ, ಎಲ್ಲರೂ ಊಟ ಮಾಡಬೇಕು. ಎಲ್ಲರಿಗೂ ಕೈಗಳಿವೆ, ಎಲ್ಲರೂ ದುಡಿಯಬೇಕು. ಎಲ್ಲರಿಗೂ ಬುದ್ಧಿ ಇದೆ, ಎಲ್ಲರೂ ಜ್ಞಾನ ಸಂಪಾದಿಸಬೇಕು. ಅದೇ ರೀತಿ ಪ್ರತಿಯೊಬ್ಬರಿಗೂ ದೇವರ ಪೂಜೆ ಮಾಡುವ ಹಕ್ಕು ಇರಬೇಕು. ಯಾರನ್ನೂ ಜಾತಿ, ವರ್ಗ, ಲಿಂಗ ಅಥವಾ ಜನ್ಮದ ಆಧಾರದ ಮೇಲೆ ಧಾರ್ಮಿಕ ಹಕ್ಕುಗಳಿಂದ ವಂಚಿಸಬಾರದು ಎಂಬುದು ಬಸವಣ್ಣನವರ ಧರ್ಮದ ಆಶಯವಾಗಿದೆ ಎಂದರು.

ಬಸವಣ್ಣನವರ ಧರ್ಮದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಜೊತೆಗೆ ಕಾಯಕಕ್ಕೂ ಅತ್ಯಂತ ಮಹತ್ವವಿದೆ. ಕೇವಲ ದೇವರ ಪೂಜೆ ಮಾಡುತ್ತಾ ಕುಳಿತರೆ ಸಾಲದು, ಜೀವನದಲ್ಲಿ ಕಾಯಕವನ್ನೂ ಶ್ರದ್ಧೆಯಿಂದ ಮಾಡಬೇಕು. ಈ ಹಿನ್ನೆಲೆಯಲ್ಲಿ ಶರಣರು ನೀಡಿದ ‘ಗುರುವಾದಡೆಯೂ ಕಾಯಕದಿಂದಲೇ ಜೀವನ್ಮುಕ್ತಿ, ಲಿಂಗವಾದಡೆಯೂ ಕಾಯಕದಿಂದಲೇ ಶಿಲೆಯ ಕುರುಹರಿಯುವುದು, ಜಂಗಮವಾದಡೆಯೂ ಕಾಯಕದಿಂದಲೇ ವೇಷದ ಪಾಶಹರಿಯುವುದು‘ ಎಂಬ ತತ್ವವನ್ನು ವಿವರಿಸಿದರು.

ಗುರು, ಲಿಂಗ ಮತ್ತು ಜಂಗಮ ಇವುಗಳಿಗೂ ತಮ್ಮದೇ ಆದ ಕಾಯಕವಿದೆ. ಗುರು ತನ್ನ ಬಳಿಗೆ ಬಂದ ಭಕ್ತರಿಗೆ ಸನ್ಮಾರ್ಗ ತೋರಿಸಿ, ಆಧ್ಯಾತ್ಮಿಕ ಜ್ಞಾನ ನೀಡಿ, ಜೀವನದ ಸಾರ್ಥಕತೆಯ ದಾರಿಯನ್ನು ತಿಳಿಸಬೇಕು. ಜಂಗಮನು ಗುರು ತೋರಿಸಿದ ಮಾರ್ಗದಲ್ಲಿ ಭಕ್ತರು ನಡೆಯುವಂತೆ ಮಾರ್ಗದರ್ಶನ ಮಾಡಬೇಕು. ಭಕ್ತರು ದಾರಿ ತಪ್ಪದಂತೆ ಅವರ ನಡೆ-ನುಡಿಗಳ ಮೇಲೆ ಗಮನವಿಟ್ಟು ಸರಿದಾರಿಯಲ್ಲಿ ಮುನ್ನಡೆಸಬೇಕು.

ಬೆಂಗಳೂರು ಹೋಗುವ ದಾರಿಯನ್ನು ಸೂಚಿಸುವ ಫಲಕದಂತೆ ಗುರು ದಾರಿ ತೋರಿಸುತ್ತಾನೆ. ಆದರೆ ಆ ದಾರಿಯಲ್ಲಿ ಭಕ್ತನ ಕೈಹಿಡಿದು ನಡೆಸುವ ಜವಾಬ್ದಾರಿ ಜಂಗಮನದ್ದಾಗಿದೆ. ಇನ್ನು ಲಿಂಗದ ಕಾಯಕವೆಂದರೆ ಭಕ್ತನ ಅಂಗದ ಮೇಲೆ ಸದಾ ನೆಲೆಸಿ, ಆತನ ಬದುಕಿನ ಪ್ರತಿಯೊಂದು ಅನುಭವವನ್ನೂ ಅರ್ಪಣಾಭಾವದಿಂದ ಸ್ವೀಕರಿಸಿ, ಆತ್ಮಶುದ್ಧಿಗೆ ಮಾರ್ಗವಾಗುವುದು.

ಹೀಗೆ ಗುರುವಾಗಲಿ, ಲಿಂಗವಾಗಲಿ, ಜಂಗಮವಾಗಲಿ ಪ್ರತಿಯೊಂದಕ್ಕೂ ಕಾಯಕ ಮುಖ್ಯ. ಕಾಯಕವಿಲ್ಲದೆ ಗುರುತ್ವವೂ ಇಲ್ಲ, ಲಿಂಗತ್ವವೂ ಇಲ್ಲ, ಜಂಗಮತ್ವವೂ ಇಲ್ಲ. ಈ ಮೂಲಕ ಬಸವಣ್ಣನವರು ಧಾರ್ಮಿಕ ಜೀವನಕ್ಕೂ ದುಡಿಮೆಗೂ ಅವಿನಾಭಾವ ಸಂಬಂಧ ಕಲ್ಪಿಸಿದರು ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.

ಕಾಯಕದ ವಿಚಾರ ಬಂದಾಗ ಗುರುವಿನ ಕೆಲಸ ಶ್ರೇಷ್ಠ, ಜಂಗಮನ ಕೆಲಸ ಶ್ರೇಷ್ಠ ಅಥವಾ ಲಿಂಗದ ಕೆಲಸ ಶ್ರೇಷ್ಠ ಎಂಬ ಭೇದಭಾವ ಇರಬಾರದು. ಒಬ್ಬ ವ್ಯಕ್ತಿ ಮಾಡುವ ಪ್ರತಿಯೊಂದು ಪ್ರಾಮಾಣಿಕ ದುಡಿಮೆಯೂ ಸಮಾನ ಗೌರವಕ್ಕೆ ಅರ್ಹವಾಗಿದೆ.

ಬಸವಣ್ಣನವರು ತಮ್ಮ ವಚನದಲ್ಲಿ ‘ದೇವಸಹಿತ ಭಕ್ತ ಮನೆಗೆ ಬಂದರೆ, ಕಾಯಕವಾವುದೆಂದು ಬೆಸಗೊಂಡರೆ
ನಿಮ್ಮಾಣೆ ! ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ!! ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದರೆ ನಿಮ್ಮ ರಾಣಿವಾಸದಾಣೆ!
‘ ಎಂದು ಹೇಳಿದ್ದಾರೆ. ಅಂದರೆ ದೇವರ ಸಹಿತ ಭಕ್ತ ಮನೆಗೆ ಬಂದಾಗ ಆತನ ಕಾಯಕ ಯಾವುದೆಂದು ವಿಚಾರಿಸಿ ಗೌರವಿಸುವುದಿಲ್ಲ ಎಂಬ ಉದಾತ್ತ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಹಿಂದಿನ ಕಾಲದಲ್ಲಿ ವ್ಯಕ್ತಿಯ ಜಾತಿಯನ್ನು ತಿಳಿದುಕೊಳ್ಳಲು ಆತ ಮಾಡುವ ಕೆಲಸವನ್ನು ಕೇಳುವ ಪದ್ಧತಿ ಇತ್ತು. ಬಟ್ಟೆ ಒಗೆಯುವವರು ಮಡಿವಾಳರು, ಎಣ್ಣೆ ತೆಗೆಯುವವರು ಗಾಣಿಗರು, ಚಪ್ಪಲಿ ಹೊಲಿಯುವವರು ಸಮಗಾರರು ಎಂದು ಕಾಯಕದ ಆಧಾರದ ಮೇಲೆ ಜಾತಿಯನ್ನು ಗುರುತಿಸಲಾಗುತ್ತಿತ್ತು. ಇಂತಹ ವ್ಯವಸ್ಥೆಯನ್ನೇ ಬಸವಣ್ಣನವರು ಪ್ರಶ್ನಿಸಿದರು.

ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದೇ ದೊಡ್ಡದು, ಕಚೇರಿಯನ್ನು ಸ್ವಚ್ಛಗೊಳಿಸುವುದು ಸಣ್ಣದು ಎಂಬ ಭಾವನೆ ತಪ್ಪು. ಬೆಳಗ್ಗೆ ಕಚೇರಿ ಸ್ವಚ್ಛವಾಗದಿದ್ದರೆ ಅಲ್ಲಿ ಕುಳಿತು ಕೆಲಸ ಮಾಡಲು ಸಾಧ್ಯವೇ? ಕಚೇರಿಯನ್ನು ಸ್ವಚ್ಛಗೊಳಿಸುವವರ ಕೆಲಸ ಎಷ್ಟು ಮುಖ್ಯವೋ, ಅಲ್ಲಿ ಕುಳಿತು ಕಾರ್ಯನಿರ್ವಹಿಸುವವರ ಕೆಲಸವೂ ಅಷ್ಟೇ ಮುಖ್ಯ. ಯಾವುದೂ ಕನಿಷ್ಠವಲ್ಲ, ಯಾವುದೂ ಶ್ರೇಷ್ಠವಲ್ಲ.

ಕುವೆಂಪು ಅವರು ಹೇಳಿದಂತೆ, ‘ಅಧ್ಯಕ್ಷನೋ, ಸೇನಾನಿಯೋ, ಕಮ್ಮಾರನೋ, ಚಮ್ಮಾರನೋ ಕಾಯಕವೆಲ್ಲವೂ ಪೂಜ್ಯ’ ಎಂಬ ಭಾವನೆ ಸಮಾಜದಲ್ಲಿ ನೆಲೆಗೊಳ್ಳಬೇಕು. ಇದೇ ವಿಚಾರವನ್ನು ಬಸವಣ್ಣನವರು 12ನೇ ಶತಮಾನದಲ್ಲಿಯೇ ತಮ್ಮ ಕಾಯಕ ತತ್ವದ ಮೂಲಕ ಸಾರಿದ್ದರು ಎಂದು ತಿಳಿಸಿದರು.

ಬಸವಣ್ಣನವರು ಪ್ರತಿಯೊಬ್ಬರಿಗೂ ತಮ್ಮ ದೇಹದ ಮೇಲೆಯೇ ಇಷ್ಟಲಿಂಗ ಧರಿಸಿ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಿದರು. ಜಗತ್ತಿನ ಅನೇಕ ಧಾರ್ಮಿಕ ವ್ಯವಸ್ಥೆಗಳಲ್ಲಿ ದೇವರನ್ನು ಪೂಜಿಸಲು ನಿರ್ದಿಷ್ಟ ಸ್ಥಳ, ವ್ಯವಸ್ಥೆ ಅಥವಾ ಮಧ್ಯವರ್ತಿಗಳ ಅವಶ್ಯಕತೆ ಇರುತ್ತದೆ. ಆದರೆ ಇಷ್ಟಲಿಂಗ ಧಾರಣೆಯ ಮೂಲಕ ಪ್ರತಿಯೊಬ್ಬರೂ ತಮ್ಮ ಅಂಗದ ಮೇಲೆಯೇ ದೇವರನ್ನು ಧರಿಸಿ ಪೂಜಿಸುವ ವಿಶಿಷ್ಟ ಅವಕಾಶವನ್ನು ಬಸವಣ್ಣನವರು ಕಲ್ಪಿಸಿದರು.

ಪ್ರತಿನಿತ್ಯ ಪೂಜೆ ಮಾಡಲು ಸಾಧ್ಯವಾಗದಿದ್ದರೂ ಇಷ್ಟಲಿಂಗವನ್ನು ಧರಿಸಿಕೊಂಡಿರುವುದೇ ಒಂದು ಮಹತ್ವದ ಭಕ್ತಿಯ ಸಂಕೇತ. ಸ್ನಾನ ಮಾಡುವಾಗ ಲಿಂಗದ ಮೇಲೆ ನೀರು ಹರಿದರೆ ಅಭಿಷೇಕ ಮಾಡಿದಂತೆಯೇ, ಊಟ ಮಾಡುವಾಗ ಲಿಂಗದ ಸಮ್ಮುಖದಲ್ಲಿ ಆಹಾರ ಸೇವಿಸಿದರೆ ನೈವೇದ್ಯ ಅರ್ಪಿಸಿದಂತೆಯೇ, ಇಷ್ಟಲಿಂಗ ಧರಿಸಿ ನಡೆಯುವುದೇ ದೇವರ ಮೆರವಣಿಗೆಯನ್ನು ಹೊತ್ತೊಯ್ದಂತೆಯೇ ಎಂಬ ಭಾವನೆಯನ್ನು ಶರಣರು ವಿವರಿಸಿದ್ದಾರೆ.

ಇಷ್ಟಲಿಂಗ ಕೇವಲ ಒಂದು ಧಾರ್ಮಿಕ ಸಂಕೇತವಲ್ಲ. ಅದು ನಮ್ಮ ಆತ್ಮಸಾಕ್ಷಿಯ ಪ್ರತೀಕವೂ ಹೌದು. ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ನಮ್ಮ ಅಂತರಂಗವೇ ಸಾಕ್ಷಿಯಾಗಿರುತ್ತದೆ. ರಾತ್ರಿ ಮಲಗುವಾಗ ದಿನವಿಡೀ ಮಾಡಿದ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು ನಮ್ಮ ಆತ್ಮಸಾಕ್ಷಿಗೆ ತಿಳಿಯುತ್ತವೆ. ನಮ್ಮ ಮನಸ್ಸೇ ನಮಗೆ ನ್ಯಾಯಾಧೀಶನಾಗುತ್ತದೆ.

ಇತರರು ನಮ್ಮನ್ನು ಪ್ರಶ್ನಿಸುವ ಮೊದಲೇ ನಮ್ಮ ಆತ್ಮಸಾಕ್ಷಿ ನಮ್ಮನ್ನು ಪ್ರಶ್ನಿಸಬೇಕು. ನಾವು ತಪ್ಪು ಮಾಡಿದಾಗ ಒಳಗಿನಿಂದಲೇ ಪಶ್ಚಾತ್ತಾಪ ಮೂಡಬೇಕು. ಈ ಆತ್ಮಾವಲೋಕನದ ಭಾವನೆಯನ್ನು ಸದಾ ಜೀವಂತವಾಗಿರಿಸಿಕೊಳ್ಳುವುದೇ ಇಷ್ಟಲಿಂಗ ಧಾರಣೆಯ ಮಹತ್ವವಾಗಿದೆ. ಇಷ್ಟಲಿಂಗವನ್ನು ಧರಿಸುವುದರ ಜೊತೆಗೆ ನಮ್ಮ ಮನಸ್ಸು ಮತ್ತು ನಡತೆಯನ್ನೂ ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.

ಬಸವಣ್ಣನವರು ದೇವರ ಮುಂದೆ ನಿಂತು ಹಣ, ಆಸ್ತಿ, ಅಧಿಕಾರ, ಐಶ್ವರ್ಯಗಳನ್ನು ಬೇಡುವ ಭಕ್ತರಾಗಿರಲಿಲ್ಲ. ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಆತ್ಮಶುದ್ಧಿಗಾಗಿ ಪ್ರಾರ್ಥಿಸುವ ಭಕ್ತರಾಗಿದ್ದರು.

‘ಹೆಣ್ಣು ತಪ್ಪು ಅನಂತ ಕೋಟಿ, ನಿಮ್ಮ ಶರಣರಿಗೆ ಲೆಕ್ಕವಿಲ್ಲಯ್ಯ, ಇನ್ನೂ ತಪ್ಪಿದೆನಾದರೆ ಕೂಡಲಸಂಗಮ ನಿಮ್ಮಾಣೆ’ ಎಂಬ ವಚನದ ಮೂಲಕ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಮತ್ತಷ್ಟು ತಪ್ಪು ಮಾಡದಂತೆ ಅನುಗ್ರಹಿಸಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.

ನಾವು ದೇವರಲ್ಲಿ ನನಗೆ ಅದು ಕೊಡು, ಇದು ಕೊಡು ಎಂದು ಬೇಡಿಕೊಳ್ಳುತ್ತೇವೆ. ಆದರೆ ದೇವರಲ್ಲಿ ಬೇಡುವುದಾದರೆ ಕಷ್ಟಗಳನ್ನು ಎದುರಿಸುವ ಧೈರ್ಯ, ದುಡಿದು ಬದುಕುವ ಶಕ್ತಿ, ಸತ್ಯದ ಹಾದಿಯಲ್ಲಿ ನಡೆಯುವ ಸಾಮರ್ಥ್ಯವನ್ನು ಬೇಡಬೇಕು. ದೇವರು ಮನುಷ್ಯನಿಗೆ ಬದುಕಲು ಬೇಕಾದ ಪ್ರಕೃತಿ ಸಂಪತ್ತು, ಶರೀರ, ಬುದ್ಧಿಶಕ್ತಿ ಮತ್ತು ವಿವೇಚನೆಯನ್ನು ಈಗಾಗಲೇ ನೀಡಿದ್ದಾನೆ. ಅವುಗಳನ್ನು ಬಳಸಿಕೊಂಡು ಬದುಕು ಕಟ್ಟಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.

ಈ ಹಿನ್ನೆಲೆಯಲ್ಲಿ ಬಸವಣ್ಣನವರ ‘ಕಾಯದ ಕಳವಳ ಕಂಜಿ ಕಾಯಯ್ಯಾ ಎನ್ನೆನು, ಜೀವನೋಪಾಯ ಕಂಜಿ ಈಯಯ್ಯಾ ಎನ್ನೆನು, ಎದ್ಭಾವಂ ತದ್ಭವತಿ ಉರಿ ಬರಲಿ ಸಿರಿ ಬರಲಿ, ಬೇಕು ಬೇಡೆನ್ನೆನು, ಆಣು ನಿಮ್ಮ ಹಾರೇನು ಮಾನವರ ಬೇಡೆನು, ಆಣೆ ನಿಮ್ಮಾಣೆ ಕೂಡಲಸಂಗಮ ದೇವ’ ಎಂಬ ವಚನವನ್ನು ಉಲ್ಲೇಖಿಸಿದರು.

ಬದುಕಿನ ಕಷ್ಟಗಳಿಗೆ ಹೆದರಿ ದೇವರಲ್ಲಿ ಮೊರೆ ಹೋಗುವುದಿಲ್ಲ. ಜೀವನೋಪಾಯಕ್ಕಾಗಿ ಮತ್ತೊಬ್ಬರ ಮುಂದೆ ಕೈಚಾಚುವುದಿಲ್ಲ. ಏನೇ ಬರಲಿ, ಅದನ್ನು ಎದುರಿಸುವ ಮನೋಬಲವನ್ನು ಹೊಂದಿರುತ್ತೇನೆ ಎಂಬ ದೃಢ ಸಂಕಲ್ಪವನ್ನು ಬಸವಣ್ಣನವರು ವ್ಯಕ್ತಪಡಿಸಿದ್ದಾರೆ.

ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಎಂಬ ಪಂಚಭೂತಗಳ ಮೂಲಕ ಪ್ರಕೃತಿ ಮನುಷ್ಯನ ಬದುಕಿಗೆ ಅಪಾರ ಸಂಪತ್ತನ್ನು ನೀಡಿದೆ. ಒಂದು ಕಾಳನ್ನು ಬಿತ್ತಿದರೆ ನೂರಾರು ಕಾಳುಗಳನ್ನು ಕೊಡುವ ಶಕ್ತಿ ಭೂಮಿಗಿದೆ. ಈ ಪ್ರಕೃತಿ ಸಂಪತ್ತನ್ನು ಬಳಸಿಕೊಂಡು ಬದುಕು ರೂಪಿಸಿಕೊಳ್ಳಲು ಬೇಕಾದ ದೇಹ ಮತ್ತು ಬುದ್ಧಿಶಕ್ತಿಯನ್ನೂ ದೇವರು ನೀಡಿದ್ದಾನೆ. ಹೀಗಿರುವಾಗ ಪ್ರತಿಯೊಂದಕ್ಕೂ ದೇವರ ಮುಂದೆ ಬೇಡಿಕೊಳ್ಳುವುದಕ್ಕಿಂತ ನಮ್ಮ ಸಾಮರ್ಥ್ಯವನ್ನು ಬಳಸಿಕೊಂಡು ದುಡಿಯಬೇಕು.

ದೇವರಲ್ಲಿ ನಿಜವಾಗಿ ಬೇಡಿಕೊಳ್ಳಬೇಕಾದದ್ದು ಭವಬಂಧನದಿಂದ ಮುಕ್ತಿ. ಮತ್ತೆ ಮತ್ತೆ ಹುಟ್ಟಿ, ಸಾಯುವ ಜನನ-ಮರಣದ ಚಕ್ರದಿಂದ ಮುಕ್ತಗೊಳಿಸಿ, ಸದಾ ಭಕ್ತಿಯ ಮಾರ್ಗದಲ್ಲಿ ನಡೆಯುವಂತೆ ಅನುಗ್ರಹಿಸು ಎಂದು ಪ್ರಾರ್ಥಿಸಬೇಕು. ಭಕ್ತಿಯ ಪಂಜರದೊಳಗೆ ನನ್ನನ್ನು ಇರಿಸಿ ಕಾಪಾಡು ಎಂಬುದು ಬಸವಣ್ಣನವರ ಪ್ರಾರ್ಥನೆಯ ಆಶಯವಾಗಿದೆ ಎಂದು ವಿವರಿಸಿದರು.

ಧರ್ಮದೊಳಗೆ ಜಾತಿ, ಜಾತಿಯೊಳಗೆ ಉಪಜಾತಿ, ಉಪಜಾತಿಯೊಳಗೆ ಮತ್ತಷ್ಟು ಒಳಪಂಗಡಗಳನ್ನು ಸೃಷ್ಟಿಸಿಕೊಂಡು ಸಮಾಜವನ್ನು ವಿಭಜಿಸುವ ಮನೋಭಾವ ಬಸವಣ್ಣನವರ ಧರ್ಮದ ಆಶಯಕ್ಕೆ ವಿರುದ್ಧವಾಗಿದೆ. ಮನುಷ್ಯರನ್ನು ಒಗ್ಗೂಡಿಸಬೇಕಾದ ಧರ್ಮವೇ ಒಡಕು ಮೂಡಿಸುವ ಸಾಧನವಾಗಬಾರದು.

ಸಮಾಜದಲ್ಲಿನ ಎಲ್ಲ ಸಮಸ್ಯೆಗಳಿಗೂ ರಾಜಕಾರಣಿಗಳೇ ಕಾರಣ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ. ನಮ್ಮೆಲ್ಲರ ಸಂಕುಚಿತ ಮನೋಭಾವನೆಗಳ ಒಟ್ಟು ಮೊತ್ತವೇ ನಮ್ಮ ನಾಯಕನಾಗಿರುತ್ತಾನೆ. ಜನರು ಹೇಗಿರುತ್ತಾರೋ, ಅವರ ಆಯ್ಕೆಯ ನಾಯಕರು ಕೂಡ ಬಹುತೇಕ ಅದೇ ಮನೋಭಾವನೆಯನ್ನು ಪ್ರತಿಬಿಂಬಿಸುತ್ತಾರೆ. ಆದ್ದರಿಂದ ಮೊದಲು ಬದಲಾಗಬೇಕಾದವರು ನಾವೇ.

ರಾಜಕಾರಣಿಗಳಿಗೆ ನೈತಿಕ ಹೊಣೆಗಾರಿಕೆ ಖಂಡಿತವಾಗಿಯೂ ಇದೆ. ಆದರೆ ಜನರನ್ನು ಮೆಚ್ಚಿಸುವ ರಾಜಕಾರಣದ ಒತ್ತಡದಲ್ಲಿ ಅವರು ತಪ್ಪು ದಾರಿಯಲ್ಲಿ ಸಾಗದಂತೆ ಜನರೂ ಜಾಗೃತರಾಗಿರಬೇಕು.

ಇದಕ್ಕೆ ಉದಾಹರಣೆಯಾಗಿ ಔಷಧಿ ಅಂಗಡಿಯೊಂದರ ವ್ಯವಹಾರವನ್ನು ವಿವರಿಸಿದ ಸ್ವಾಮೀಜಿಗಳು, 10 ರೂಪಾಯಿ ಮೌಲ್ಯದ ಔಷಧಿಗೆ ತೆರಿಗೆ ಸೇರಿಸಿ 12 ರೂಪಾಯಿ ಬಿಲ್ ನೀಡಬೇಕೆಂದಾಗ, ಎರಡು ರೂಪಾಯಿ ಉಳಿಸಿಕೊಳ್ಳುವ ಉದ್ದೇಶದಿಂದ ಬಿಲ್ ಬೇಡ ಎಂದು ಹೇಳಿ ಹಣ ಕೊಟ್ಟು ಬರುವ ಗ್ರಾಹಕರೂ ತಪ್ಪು ಮಾಡುತ್ತಿದ್ದಾರೆ. ಸಣ್ಣ ಪ್ರಮಾಣದ ತೆರಿಗೆ ವಂಚನೆಯನ್ನು ನಾವು ಪ್ರೋತ್ಸಾಹಿಸುತ್ತಾ, ದೊಡ್ಡ ಮಟ್ಟದ ಭ್ರಷ್ಟಾಚಾರವನ್ನು ಪ್ರಶ್ನಿಸುವುದರಲ್ಲಿ ಅರ್ಥವಿಲ್ಲ.

ಸಣ್ಣ ತಪ್ಪುಗಳನ್ನು ಸಹಜವೆಂದು ಒಪ್ಪಿಕೊಳ್ಳುವ ಮನೋಭಾವವೇ ದೊಡ್ಡ ತಪ್ಪುಗಳಿಗೆ ದಾರಿ ಮಾಡಿಕೊಡುತ್ತದೆ. ಬೇರು ಸರಿಯಾಗಿದ್ದರೆ ಮರ ಸರಿಯಾಗಿರುತ್ತದೆ. ಸಮಾಜದ ಬೇರುಗಳಾದ ಸಾಮಾನ್ಯ ಜನರು ಮೊದಲು ಪ್ರಾಮಾಣಿಕವಾಗಿ ಬದುಕಲು ಕಲಿಯಬೇಕು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದಾಗ ಸಮಾಜವೂ ಸುಧಾರಿಸುತ್ತದೆ. ಇದೇ ಸರಿದಾರಿಯಲ್ಲಿ ನಡೆಯುವ ಧರ್ಮದ ನಿಜವಾದ ಆಶಯವಾಗಿದೆ ಎಂದರು.

ಶಂಕರಣ್ಣನವರು ತಮ್ಮ ಊರಿನಲ್ಲಿ ಪ್ರತಿವಾರ ಇಷ್ಟಲಿಂಗ ಪೂಜೆಯ ಮೂಲಕ ಜನರಲ್ಲಿ ಧಾರ್ಮಿಕ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿರುವುದನ್ನು ಸ್ವಾಮೀಜಿಗಳು ಶ್ಲಾಘಿಸಿದರು. ಆರಂಭದಲ್ಲಿ 8-10 ಜನರು ಭಾಗವಹಿಸುತ್ತಿದ್ದ ಈ ಕಾರ್ಯಕ್ರಮದಲ್ಲಿ ಕ್ರಮೇಣ ಜನರ ಸಂಖ್ಯೆ ಕಡಿಮೆಯಾದರೂ, ಇಬ್ಬರು ಮಾತ್ರ ಉಳಿದಿದ್ದರೂ ತಮ್ಮ ಸಂಕಲ್ಪವನ್ನು ಬಿಡದೆ ಪ್ರತಿವಾರ ಬೆಳಗಿನ ಜಾವ ದೇವಸ್ಥಾನದಲ್ಲಿ ಇಷ್ಟಲಿಂಗ ಪೂಜೆ ಸಲ್ಲಿಸುತ್ತಿದ್ದಾರೆ.

ಲಿಂಗಪೂಜೆಯನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಆದರೆ ಸಾರ್ವಜನಿಕವಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ಇತರರಿಗೂ ಪ್ರೇರಣೆ ದೊರೆಯುತ್ತದೆ. ನಾವೂ ಲಿಂಗಪೂಜೆ ಮಾಡಿಕೊಳ್ಳಬೇಕು ಎಂಬ ಅರಿವು ಜನರಲ್ಲಿ ಮೂಡುತ್ತದೆ. ಅವರ ಈ ಪ್ರಯತ್ನ ಮತ್ತಷ್ಟು ಜನರಿಗೆ ಪ್ರೇರಣೆಯಾಗಲಿ, ಲಿಂಗಪೂಜೆಯ ಮಹತ್ವ ಸಮಾಜದಲ್ಲಿ ವ್ಯಾಪಕವಾಗಿ ಹರಡಲಿ ಎಂದು ಹಾರೈಸಿದರು.

20ನೇ ವರ್ಷದ ಚಿಂತನ ಕಾರ್ತಿಕದ ಆರಂಭದಿಂದಲೂ ನಿರಂತರವಾಗಿ ಕೈಜೋಡಿಸುತ್ತಿರುವ ಎಂ.ಜೆ. ಮಹೇಶ್ವರಪ್ಪ, ನಿದಿಗೆ ಗೌಡರ ಕುಟುಂಬದವರು ಹಾಗೂ ಶಂಕರಣ್ಣನವರಂತಹ ಕಾರ್ಯಕರ್ತರ ಕೊಡುಗೆಯನ್ನು ಸ್ಮರಿಸಿದರು. ತಮ್ಮ ಮನೆಗಳಲ್ಲಿ, ಸಂಬಂಧಿಕರ ಮನೆಗಳಲ್ಲಿ ಹಾಗೂ ಊರಿನ ಇತರ ಕುಟುಂಬಗಳಲ್ಲಿ ಚಿಂತನ ಕಾರ್ತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರಿವಿನ ತೇರನ್ನು ಎಳೆಯಲು ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಇಂದಿನ ಕಾರ್ಯಕ್ರಮದ ಸೇವಾರ್ಥಿಗಳಾದ ಸಂಪತ್ ಕುಮಾರ್ ಮತ್ತು ಅವರ ಕುಟುಂಬದವರ ಧಾರ್ಮಿಕ ಕಾಳಜಿಯನ್ನು ವಿಶೇಷವಾಗಿ ಪ್ರಶಂಸಿಸಿದರು.

ಸುಸಂಸ್ಕೃತ ಕುಟುಂಬವಾಗಿರುವ ಸಂಪತ್ ಕುಮಾರ್ ಅವರ ಮನೆಯಲ್ಲಿ ಬಸವಕೇಂದ್ರದ ಗುರುಗಳನ್ನು ಆಹ್ವಾನಿಸಿ ಇಷ್ಟಲಿಂಗ ಪೂಜೆ ಮಾಡಿಸಬೇಕು ಎಂಬ ಬಹುದಿನಗಳ ಆಸೆ ಇತ್ತು. ಮನೆಗೆ ಸುಣ್ಣ-ಬಣ್ಣ ಮಾಡಿಸಿ ಸಿದ್ಧಪಡಿಸಿದ ಬಳಿಕ ಇಷ್ಟಲಿಂಗ ಪೂಜೆಯನ್ನು ಆಯೋಜಿಸಿ, ಲಿಂಗಾಯತರಾಗಿ ಹುಟ್ಟಿದ್ದರೂ ಇಷ್ಟಲಿಂಗ ಧಾರಣೆ ಮಾಡದಿದ್ದವರಿಗೆ ಲಿಂಗಧಾರಣೆ ಮಾಡಿಸುವ ಮೂಲಕ ಧಾರ್ಮಿಕ ಸಂಸ್ಕಾರವನ್ನು ಬೆಳೆಸುವ ಕಾರ್ಯ ಮಾಡಿದ್ದಾರೆ.

ಹೆಸರಿನಲ್ಲಿ ಮಾತ್ರ ಲಿಂಗಾಯತರಾಗಿರುವುದಲ್ಲ, ಆಚರಣೆ ಮತ್ತು ಅನುಷ್ಠಾನದಲ್ಲಿಯೂ ಲಿಂಗಾಯತ ಧರ್ಮದ ತತ್ವಗಳನ್ನು ಪಾಲಿಸಬೇಕು ಎಂಬುದು ನಮ್ಮ ಕಾಳಜಿ. ಇಷ್ಟಲಿಂಗ ಧಾರಣೆಯ ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದಲೇ ಭಕ್ತರಿಗೆ ಮಾರ್ಗದರ್ಶನ ಮಾಡಲಾಗುತ್ತದೆ. ಅದನ್ನು ಕುಟುಂಬದವರು ಮುಕ್ತ ಮನಸ್ಸಿನಿಂದ ಸ್ವೀಕರಿಸಿರುವುದು ಸಂತೋಷದ ಸಂಗತಿ.

ಈ ವರ್ಷದ ಚಿಂತನ ಕಾರ್ತಿಕವನ್ನು ಇನ್ನಷ್ಟು ಅದ್ದೂರಿಯಾಗಿ ನಡೆಸುವ ಆಸೆ ಕುಟುಂಬದವರಿಗಿದ್ದರೂ, ಕಾರ್ಯಕ್ರಮದ ಸರಳತೆ ಮತ್ತು ನಿರಂತರತೆಗೆ ಆದ್ಯತೆ ನೀಡಲಾಗಿದೆ. ಒಂದು ವರ್ಷಕ್ಕೆ ಮಾತ್ರ ಸೀಮಿತವಾಗದೆ, 30, 40, 50 ವರ್ಷಗಳವರೆಗೆ ತಲೆಮಾರುಗಳಿಂದ ಮುಂದುವರಿಯುವ ಸತ್ಪರಂಪರೆಯಾಗಿ ಚಿಂತನ ಕಾರ್ತಿಕ ಬೆಳೆಯಬೇಕು. ಮುಂದಿನ ದಿನಗಳಲ್ಲಿ ಬೇರೆ ಬೇರೆ ಕುಟುಂಬಗಳೂ ತಮ್ಮ ಮನೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ.

ಸುಮಾರು 150 ಜನರ ಮಿತಿಯಲ್ಲಿ ಕುಟುಂಬದವರು, ಬಂಧುಗಳು, ಸ್ನೇಹಿತರು ಮತ್ತು ಆತ್ಮೀಯರನ್ನು ಆಹ್ವಾನಿಸಿ ಅತ್ಯಂತ ಅರ್ಥಪೂರ್ಣವಾಗಿ ಕಾರ್ಯಕ್ರಮ ರೂಪಿಸಿದ್ದಾರೆ. ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ನಿರಂತರವಾಗಿ ನಡೆಸಲು ಬಸವಾದಿ ಶರಣರ ಕೃಪೆ ಸಂಪತ್ ಕುಮಾರ್ ಮತ್ತು ಕುಟುಂಬದವರಿಗೆ ಸದಾ ಇರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಅವರ ಸೇವಾ ಕಾರ್ಯಗಳನ್ನು ಸ್ಮರಿಸಿದ ಸ್ವಾಮೀಜಿಗಳು, ಮುಂದಿನ ಕಾರ್ಯಕ್ರಮಗಳಲ್ಲಿ ಅವರ ಸಹಕಾರ ಮತ್ತು ಸಲಹೆಗಳು ಉಪಯುಕ್ತವಾಗಲಿವೆ ಎಂದರು.

ಸಿ.ಎಸ್. ಷಡಕ್ಷರಿ ಅವರ ಸಂಘಟನಾ ಸಾಮರ್ಥ್ಯ ಮತ್ತು ಕಾರ್ಯನಿರ್ವಹಣೆಯ ಶೈಲಿಯನ್ನು ಪ್ರಶಂಸಿಸಿದ ಅವರು, ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪುರಸ್ಕಾರ ನೀಡುವ ಕಾರ್ಯಕ್ರಮವನ್ನು ಕೇವಲ 15ರಿಂದ 20 ನಿಮಿಷಗಳಲ್ಲಿ ಶಿಸ್ತಿನಿಂದ, ಗೌರವಯುತವಾಗಿ ನಿರ್ವಹಿಸುವ ಅವರ ಸಾಮರ್ಥ್ಯ ಅನುಕರಣೀಯವಾಗಿದೆ ಎಂದರು.

ಸಿದ್ದಗಂಗಾ ಮಠಕ್ಕೆ ನೆರವು, ನೌಕರರ ಭವನ ನಿರ್ಮಾಣ, ಶಿವಕುಮಾರ ಸ್ವಾಮೀಜಿ ನೌಕರರ ಬಳಗದ ಮೂಲಕ ಹಾಸ್ಟೆಲ್ ನಿರ್ಮಾಣ ಹಾಗೂ ನೌಕರರಿಗಾಗಿ ಕ್ಲಬ್ ಮತ್ತು ವಿಶ್ರಾಂತಿ ಸೌಲಭ್ಯಗಳ ವ್ಯವಸ್ಥೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಅವರು ಸಂಘಟಿಸಿದ್ದಾರೆ. ಕಡಿಮೆ ಸಮಯದಲ್ಲಿ ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸುವುದು ಮತ್ತು ಸಂಘಟನೆಯನ್ನು ಮುನ್ನಡೆಸುವುದು ಹೇಗೆ ಎಂಬುದನ್ನು ಅವರಿಂದ ಕಲಿಯಬೇಕು ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.

ಚಿಂತನ ಕಾರ್ತಿಕದ ಸಮಾರೋಪ ಸಮಾರಂಭವನ್ನು ಎಲ್ಲಿ ಆಯೋಜಿಸಬೇಕು ಎಂಬ ಕುರಿತು ಅವರ ಸಲಹೆಗಳನ್ನು ಪರಿಗಣಿಸಿ, ಸೂಕ್ತ ಸ್ಥಳವನ್ನು ನಿರ್ಧರಿಸಲಾಗುವುದು. ಸುವರ್ಣ ಸಂಸ್ಕೃತಿ ಭವನ, ಸರ್ಕಾರಿ ನೌಕರರ ವಿಕಾಸ ಕೇಂದ್ರ ಹಾಗೂ ಅಂಬೇಡ್ಕರ್ ಭವನದಂತಹ ಸ್ಥಳಗಳ ಕುರಿತು ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

ಬೆಕ್ಕಿನಕಲ್ಲು ಮಠದ ಆಹ್ವಾನ ಪತ್ರಿಕೆಗಳು, ಕಾರ್ಯಕ್ರಮಗಳ ರೂಪುರೇಷೆ ಹಾಗೂ ಲೇಖನಗಳ ಸಿದ್ಧತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕರ್ವಸೋಯಿ ಅವರು ಚಿಂತನ ಕಾರ್ತಿಕದ ಕಾರ್ಯಕ್ರಮಗಳಲ್ಲಿಯೂ ನಿರಂತರವಾಗಿ ಕೈಜೋಡಿಸುತ್ತಿದ್ದಾರೆ. ಪ್ರತಿ ವರ್ಷವೂ ನಿಲಯದ ಕಲಾವಿದರಾಗಿ ನಮ್ಮೊಂದಿಗೆ ಇರುವ ಅವರ ಸೇವೆ ಶ್ಲಾಘನೀಯವಾಗಿದೆ ಬಸವಕೇಂದ್ರ ಶ್ರೀಗಳು ಎಂದು ಹೇಳಿದರು.

ಒಟ್ಟಾರೆಯಾಗಿ ಎಲ್ಲರ ಸಹಕಾರದಿಂದ 20ನೇ ವರ್ಷದ ಚಿಂತನ ಕಾರ್ತಿಕದ ಎರಡನೇ ದಿನದ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆದಿದೆ. ಬಸವಣ್ಣನವರ ತತ್ವಗಳನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸದೆ, ನಮ್ಮ ಬದುಕಿನ ನಡೆ-ನುಡಿಗಳಲ್ಲಿ ಅಳವಡಿಸಿಕೊಳ್ಳಬೇಕು. ದಯೆ, ಸಮಾನತೆ, ಕಾಯಕ, ದಾಸೋಹ, ಆತ್ಮಾವಲೋಕನ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಬದುಕಿನಲ್ಲಿ ಸರಿದಾರಿಯಲ್ಲಿ ನಡೆಯುವ ಸಂಕಲ್ಪ ಮಾಡಿದಾಗ ಮಾತ್ರ ಬಸವಣ್ಣನವರ ಧರ್ಮದ ನಿಜವಾದ ಅನುಯಾಯಿಗಳಾಗಲು ಸಾಧ್ಯ ಎಂದು ಬಸವಕೇಂದ್ರ ಶ್ರೀಗಳು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಮೋಹನ್ ಕುಮಾರ್, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ನಿರ್ದೇಶಕ ಟಿ.ಬಿ. ಜಗದೀಶ್, ಉಪನ್ಯಾಸಕರಾದ ಕರಿಬಸವಯ್ಯ ಹಾರ್ನಳ್ಳಿ, ಶಂಕರಪ್ಪ, ಎನ್.ಜಿ. ಮಹೇಶ್ವರಪ್ಪ, ಚಂದ್ರಶೇಖರ್ ತಳಗಿನಾಳ ಸೇರಿದಂತೆ ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಬಸವಣ್ಣನವರ ಸಮಾನತೆಯ ಸಂದೇಶ ಇಂದಿನ ಯುವಜನತೆಗೆ ತಲುಪಬೇಕು; ಜಾತಿ, ಉಪಜಾತಿಗಳ ಕಂದಕ ಹೆಚ್ಚಿಸುವ ಬದಲು ಸಮಾನತೆಯ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡೋಣ: ಸಿ.ಎಸ್. ಷಡಾಕ್ಷರಿ

ಬಸವಕೇಂದ್ರದ ಶ್ರೀಗಳ ಸಾನ್ನಿಧ್ಯದಲ್ಲಿ ಚಿಂತನ ಕಾರ್ತಿಕದ 20ನೇ ವರ್ಷದ ಸಂಭ್ರಮ; ಧರ್ಮದ ಹೆಸರಿನಲ್ಲಿ ವಿಭಜನೆ ಬೇಡ, ಬಸವಣ್ಣನವರ ಹಾದಿಯಲ್ಲಿ ಸಮ ಸಮಾಜ ನಿರ್ಮಿಸೋಣ: ಕರಿಬಸವಯ್ಯ ಹಾರ್ನಳ್ಳಿ

ಹಣ, ಅಧಿಕಾರ, ಅಂತಸ್ತು ಶಾಶ್ವತವಲ್ಲ; ಆಧ್ಯಾತ್ಮದ ಜ್ಞಾನಸಂಪತ್ತೇ ನಿಜವಾದ ಸಂಪತ್ತು, ಜಾತಿ-ಮತಗಳ ಭೇದ ಮರೆತು ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬದುಕಬೇಕು: ಶ್ರೀ ರಂಭಾಪುರಿ ಜಗದ್ಗುರುಗಳು

ಬಸವಕೇಂದ್ರದ ಶ್ರೀಗಳ ಸಾನ್ನಿಧ್ಯದಲ್ಲಿ ಚಿಂತನ ಕಾರ್ತಿಕದ 20ನೇ ವರ್ಷದ ಸಂಭ್ರಮ; ಮನೆಮನೆಗೆ ತಲುಪಿದ ಬಸವತತ್ವದ ಬೆಳಕು – ಜನರ ಮನಸ್ಸಿನಲ್ಲಿ ಚಿಂತನದ ಕಿಡಿ ಹೊತ್ತಿಸಿದ ‘ಚಿಂತನ ಕಾರ್ತಿಕ’

ವಚನಗಳ ತತ್ವ ಕೇವಲ ಮಾತಿಗೆ ಸೀಮಿತವಾಗದೆ ನಮ್ಮ ನಡೆ-ನುಡಿಯಲ್ಲಿ ಸಾಕಾರಗೊಳ್ಳಲಿ; ಜಾತಿ-ಉಪಜಾತಿಗಳ ಗೋಡೆ ಒಡೆದು ಸಮಾನತೆಯ ಸಮಾಜ ಕಟ್ಟೋಣ: ಉಪಕುಲಪತಿ ಡಾ. ಎಂ.ವಿ. ಧನಂಜಯ

ದೇವಸ್ಥಾನಗಳು ಸಮಾಜದಲ್ಲಿ ಸಾಮರಸ್ಯ, ಸದ್ಭಾವನೆ ಬೆಳೆಸುವ ಪವಿತ್ರ ಕೇಂದ್ರಗಳು: ಶ್ರೀ ರಂಭಾಪುರಿ ಜಗದ್ಗುರುಗಳು

Leave a Comment