ಅಂತರಂಗದ ಅರಿವು ಬಹಿರಂಗದ ಆಚರಣೆಯಲ್ಲಿ ಪ್ರತಿಫಲಿಸಬೇಕು | ಮನುಷ್ಯ ಮೊದಲು ತನ್ನನ್ನು ತಾನು ತಿದ್ದಿಕೊಂಡಾಗ ಸಮಾಜದ ಪರಿವರ್ತನೆ ಸಾಧ್ಯ | 12ನೇ ಶತಮಾನದ ಬಸವಾದಿ ಶರಣರ ವಚನಗಳು ಇಂದಿಗೂ ಮಾನವೀಯ ಬದುಕಿಗೆ ದಾರಿದೀಪ
ಶಿವಮೊಗ್ಗ: ಮನುಷ್ಯನ ಮನಸ್ಸಿನಲ್ಲಿ ಒಂದು, ಮಾತಿನಲ್ಲಿ ಮತ್ತೊಂದು, ನಡೆಯಲ್ಲಿ ಮಗದೊಂದು ಇದ್ದರೆ ಅಲ್ಲಿ ವ್ಯಕ್ತಿತ್ವದ ಪಾವಿತ್ರ್ಯ ಉಳಿಯುವುದಿಲ್ಲ. ತನ್ನ ಮಗು ಅತ್ತಾಗ ಎದೆಹಾಲು ಉಕ್ಕುವುದು ತಾಯಿಯ ಸಹಜ ಮಮತೆ. ಆದರೆ ತನ್ನದಲ್ಲದ, ಅನಾಥವಾಗಿರುವ ಮತ್ತೊಂದು ಮಗು ಅತ್ತಾಗಲೂ ಅದೇ ತಾಯಿಯ ಎದೆಯಲ್ಲಿ ಹಾಲು ಉಕ್ಕಿ, ಆ ಮಗುವನ್ನೂ ತನ್ನದೆಂಬ ಪ್ರೀತಿಯಿಂದ ಎತ್ತಿಕೊಂಡು ಹಾಲುಣಿಸುವ ಮನೋಭಾವವಿದೆಯಲ್ಲ, ಅದೇ ನಿಜವಾದ ಅಂತರಂಗ ಶುದ್ಧಿ. ಆ ಪ್ರೀತಿ ಕೇವಲ ಮನಸ್ಸಿನ ಭಾವನೆಯಾಗಿ ಉಳಿಯದೆ, ಕೃತಿಯ ರೂಪದಲ್ಲಿ ಮತ್ತೊಂದು ಮಗುವಿಗೆ ತಲುಪಿದಾಗ ಅದು ಬಹಿರಂಗ ಶುದ್ಧಿಯಾಗುತ್ತದೆ. ಅಂದರೆ ಮನಸ್ಸಿನಲ್ಲಿ ಮೂಡುವ ಮಾನವೀಯತೆ ಬದುಕಿನ ನಡವಳಿಕೆಯಲ್ಲಿ ಪ್ರತಿಫಲಿಸಬೇಕು. ಅಂತರಂಗ ಮತ್ತು ಬಹಿರಂಗದ ನಡುವಿನ ಈ ಪವಿತ್ರ ಸಂಬಂಧವನ್ನೇ 900 ವರ್ಷಗಳ ಹಿಂದೆಯೇ ಬಸವಣ್ಣನವರು ತಮ್ಮ ಬದುಕು, ವಚನ ಮತ್ತು ಸಾಮಾಜಿಕ ಕ್ರಾಂತಿಯ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಬಸನಗೌಡ ಮಾಳಗಿ ಅವರು ಹೇಳಿದರು.
ಶಿವಮೊಗ್ಗ ತಾಲ್ಲೂಕಿನ ಸೋಮಿನಕೊಪ್ಪದ ನಿವಾಸಿಗಳಾದ ಸೇವಾರ್ಥಿಗಳಾದ ಶ್ರೀಮತಿ ಎಸ್. ಗಾಯತ್ರಿ, ಎಸ್.ಎಚ್. ಷಣ್ಮುಖಪ್ಪ ಹಾಗೂ ಕೆಳಗಿನ ಮನೆ ಕುಟುಂಬದವರು, ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು, ಬಸವಕೇಂದ್ರ, ಶಿವಮೊಗ್ಗ, ಅರಳಿಕಟ್ಟೆ ಅನುಭವ ಮಂಟಪ–5 ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಇವರ ಆಶ್ರಯದಲ್ಲಿ, ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮದ ನಾಲ್ಕನೇ ದಿನದ ಚಿಂತನಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ‘ಬಸವಣ್ಣ – ಅಂತರಂಗ, ಬಹಿರಂಗ’ ವಿಷಯ ಕುರಿತು ಬಸನಗೌಡ ಮಾಳಗಿ ಅವರು ಉಪನ್ಯಾಸ ನೀಡಿದರು.

ತಾಯಿಯ ಮಮತೆಯಿಂದ ಅಂತರಂಗ ಶುದ್ಧಿಯ ಪಾಠ
ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿಯ ವ್ಯತ್ಯಾಸವನ್ನು ತಾಯಿಯ ಮಮತೆಯ ಉದಾಹರಣೆಯ ಮೂಲಕ ವಿವರಿಸಿದ ಬಸನಗೌಡ ಮಾಳಗಿ ಅವರು, ಒಂದು ತಾಯಿಗೆ ತನ್ನದೇ ಮಗುವಿನ ಜೊತೆಗೆ ತಾಯಿ ಕಳೆದುಕೊಂಡ ಮತ್ತೊಂದು ಮಗುವೂ ಇದ್ದಾಗ, ಎರಡೂ ಮಕ್ಕಳು ಅತ್ತಾಗಲೂ ಆಕೆಯ ಎದೆಯಲ್ಲಿ ಹಾಲು ಉಕ್ಕುವುದು ನಿಜವಾದ ಮಾನವೀಯತೆಯ ಸಂಕೇತ. ತನ್ನ ಮಗುವಿಗೆ ಹಾಲುಣಿಸುವುದು ಸಹಜ ಕ್ರಿಯೆ. ಆದರೆ ತನ್ನದಲ್ಲದ ಮಗುವನ್ನೂ ತನ್ನದೇ ಮಗು ಎಂದು ಭಾವಿಸಿ ಪ್ರೀತಿಯಿಂದ ಹಾಲುಣಿಸುವುದು ಅಂತರಂಗದ ಶುದ್ಧಿ. ಆ ಭಾವನೆಯನ್ನು ಕಾರ್ಯರೂಪಕ್ಕೆ ತಂದು ಮಗುವಿಗೆ ಹಾಲುಣಿಸುವುದು ಬಹಿರಂಗ ಶುದ್ಧಿ. ಹೀಗೆ ಮನಸ್ಸಿನೊಳಗಿನ ಒಳ್ಳೆಯತನ ನಡೆ-ನುಡಿಗಳಲ್ಲಿ ವ್ಯಕ್ತವಾಗಬೇಕು ಎಂದರು.
ವಚನಕಾರರು ಅಂತರಂಗದ ಅರಿವು ಮತ್ತು ಬಹಿರಂಗದ ಆಚರಣೆಯ ನಡುವಿನ ಸಂಬಂಧವನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ಬೆಳಗ್ಗೆ ಐದು ಗಂಟೆಗೆ ಎದ್ದು ವಾಯುವಿಹಾರಕ್ಕೆ ಹೋಗಬೇಕು ಎಂದು ಮನಸ್ಸಿನಲ್ಲಿ ನಿರ್ಧರಿಸುತ್ತೇವೆ. ಆದರೆ ಬೆಳಗಾದಾಗ ಏಳು ಗಂಟೆಗೆ ಏಳುತ್ತೇವೆ. ದುಶ್ಚಟಗಳನ್ನು ಬಿಡಬೇಕು ಎಂಬ ಅರಿವಿದ್ದರೂ ಆಚರಣೆಯಲ್ಲಿ ಅದನ್ನು ಪಾಲಿಸುವುದಿಲ್ಲ. ಅಂತರಂಗದಲ್ಲಿ ಮೂಡುವ ಅರಿವು ಬಹಿರಂಗದ ಬದುಕಿನಲ್ಲಿ ಅನುಷ್ಠಾನಕ್ಕೆ ಬಂದಾಗ ಮಾತ್ರ ವ್ಯಕ್ತಿಯ ಜೀವನ ಸಾರ್ಥಕವಾಗುತ್ತದೆ. ಈ ತತ್ವವನ್ನು ತಮ್ಮ ಬದುಕಿನಲ್ಲಿ ಅಚ್ಚುಕಟ್ಟಾಗಿ ಅಳವಡಿಸಿಕೊಂಡವರು 12ನೇ ಶತಮಾನದ ಬಸವಾದಿ ಶರಣರು ಎಂದು ಹೇಳಿದರು.
ಇಡೀ ಕಲ್ಯಾಣದ ಕುಟುಂಬಕ್ಕೆ ತಾಯಿಯಾದ ಬಸವಣ್ಣ
ಬಸವಣ್ಣನವರು ಧರ್ಮಪ್ರಚಾರಕ್ಕಾಗಿ ಊರೂರು ಸುತ್ತಿದವರಲ್ಲ. ಅವರ ಅಂತರಂಗದಲ್ಲಿದ್ದ ಎಲ್ಲರನ್ನು ಒಳಗೊಳ್ಳುವ ವಿಶಾಲ ಮನೋಭಾವವೇ ಕಲ್ಯಾಣವನ್ನು ಜಾಗತಿಕ ಚಿಂತನೆಯ ಕೇಂದ್ರವನ್ನಾಗಿ ರೂಪಿಸಿತು. ಕಾಶ್ಮೀರ, ಅಫ್ಘಾನಿಸ್ತಾನ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬಂದ ಶರಣರನ್ನು ತಾಯಿಯ ಮಮತೆಯಿಂದ ಆರೈಕೆ ಮಾಡಿ, ಪೋಷಿಸಿ, ಎಲ್ಲರನ್ನೂ ಒಂದೇ ಕುಟುಂಬದ ಸದಸ್ಯರಂತೆ ಸ್ವೀಕರಿಸಿದರು. 1,96,000 ಶರಣರನ್ನು ಒಳಗೊಂಡ ಕಲ್ಯಾಣದ ಸಾಮಾಜಿಕ ವ್ಯವಸ್ಥೆಯ ಹಿಂದೆ ಬಸವಣ್ಣನವರ ಅಪಾರ ಅಂತಃಕರಣ ಮತ್ತು ಸಮಾನತೆಯ ದೃಷ್ಟಿಕೋನವಿತ್ತು.
ಬಸವಣ್ಣನವರ ಕುರಿತು ಶಿವಯೋಗಿ ಸಿದ್ಧರಾಮೇಶ್ವರರು ರಚಿಸಿರುವ,
‘ಬಸವಣ್ಣ ನಿಮ್ಮಿಂದ ಕಂಡೆನಯ್ಯ ಭಕ್ತಿಯ,
ಬಸವಣ್ಣ ನಿಮ್ಮಿಂದ ಕಂಡೆನಯ್ಯ ಜ್ಞಾನವ,
ಬಸವಣ್ಣ ನಿಮ್ಮಿಂದ ಕಂಡೆನಯ್ಯ ವೈರಾಗ್ಯವ,
ಕಪಿಲಸಿದ್ಧ ಮಲ್ಲಿನಾಥಯ್ಯ ನಿಮಗೂ ಎನಗೂ
ಬಸವಣ್ಣನೇ ಶಿವಪಥಿಕನಯ್ಯ’
ಎಂಬ ವಚನವನ್ನು ಉಲ್ಲೇಖಿಸಿದ ಅವರು, ಸೊನ್ನಲಿಗೆಯನ್ನು ಭೂಕೈಲಾಸವನ್ನಾಗಿ ರೂಪಿಸಿದ ಮಹಾನ್ ಕನಸುಗಾರ ಸಿದ್ಧರಾಮೇಶ್ವರರೇ ಬಸವಣ್ಣನವರನ್ನು ಶಿವಪಥದ ಮಾರ್ಗದರ್ಶಕ ಎಂದು ಕೊಂಡಾಡಿದ್ದಾರೆ. ಇದು ಬಸವಣ್ಣನವರ ಅಂತರಂಗದ ಶುದ್ಧತೆ, ಜ್ಞಾನ, ಭಕ್ತಿ ಮತ್ತು ವೈರಾಗ್ಯದ ಎತ್ತರವನ್ನು ಸಾರುತ್ತದೆ ಎಂದರು.
ಬಸವಣ್ಣನವರು ಕಾಲವಾಗಿ ಸುಮಾರು 900 ವರ್ಷಗಳು ಕಳೆದಿದ್ದರೂ ಅವರು ನಮ್ಮಿಂದ ದೂರವಾಗಿದ್ದಾರೆ ಎಂಬ ಭಾವನೆ ಮೂಡುವುದಿಲ್ಲ. ನಮ್ಮ ತಾತ, ಮುತ್ತಾತ ಅಥವಾ ಹಿರಿಯರ ಬದುಕಿನ ಘಟನೆಗಳನ್ನು ನೆನಪಿಸಿಕೊಳ್ಳುವಷ್ಟು ಆತ್ಮೀಯವಾಗಿ ಬಸವಣ್ಣನವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅದಕ್ಕೆ ಕಾರಣ ಅವರು ನೀಡಿದ ವಚನ ಸಾಹಿತ್ಯ ಮತ್ತು ಬದುಕಿನ ಆದರ್ಶಗಳು. ನಮಗೆ ಲಭ್ಯವಾಗಿರುವ ಸಾವಿರಾರು ವಚನಗಳಲ್ಲಿ ಯಾವ ವಚನವನ್ನೇ ತೆಗೆದುಕೊಂಡರೂ ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿಯ ಸಂದೇಶವೇ ಪ್ರತಿಧ್ವನಿಸುತ್ತದೆ ಎಂದು ಹೇಳಿದರು.

ಅರಿವನ್ನೇ ಗುರುವಾಗಿ ಸ್ವೀಕರಿಸಿದ ಶರಣರು
ಶರಣರು ತಮ್ಮೊಳಗಿನ ಅರಿವಿನ ಬೆಳಕನ್ನೇ ಗುರುವಾಗಿ ಸ್ವೀಕರಿಸಿದವರು. ತಮ್ಮ ಅಂತರಂಗದಲ್ಲಿದ್ದ ಅರಿವಿನ ಹಣತೆಯ ಮೂಲಕ ಸಮಾಜಕ್ಕೆ ಸೌಹಾರ್ದ, ಸಮಾನತೆ ಮತ್ತು ಮಾನವೀಯತೆಯ ಬೆಳಕು ನೀಡಲು ಪ್ರಯತ್ನಿಸಿದರು. ತನ್ನ ಶುದ್ಧೀಕರಣದಿಂದಲೇ ಸಮಾಜದ ಶುದ್ಧೀಕರಣ ಸಾಧ್ಯ ಎಂಬ ನಂಬಿಕೆ ಅವರಲ್ಲಿತ್ತು. ನಾನು ಸರಿಯಾದರೆ ನನ್ನ ಸುತ್ತಲಿನ ಜಗತ್ತು ಸರಿಯಾಗುತ್ತದೆ ಎಂಬ ತತ್ವವನ್ನು ಅವರು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು.
ಬಸವಣ್ಣನವರ ವ್ಯಕ್ತಿತ್ವ ತೆರೆದಿಟ್ಟ ಪುಸ್ತಕದಂತಿತ್ತು. ಮುಚ್ಚುಮರೆ ಇಲ್ಲದ, ಪಾರದರ್ಶಕ ಮತ್ತು ಬಿಚ್ಚುಮನಸ್ಸಿನ ವ್ಯಕ್ತಿತ್ವ ಅವರದ್ದಾಗಿತ್ತು. ತಮ್ಮ ನೋವು, ಸಂಕಟ, ಸೋಲು, ಕಳವಳ ಹಾಗೂ ಆಂತರಿಕ ಸಂಘರ್ಷಗಳನ್ನೂ ಕೂಡಲಸಂಗಮದೇವನ ಮುಂದೆ ನೇರವಾಗಿ ನಿವೇದಿಸಿಕೊಳ್ಳುತ್ತಿದ್ದರು.
‘ಹಾಡಿದಡೆನ್ನೊಡೆಯನ ಹಾಡುವೆ,
ಬೇಡಿದಡೆನ್ನೊಡೆಯನ ಬೇಡುವೆ,
ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ. ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ
ಸೆರಗೊಡ್ಡಿ ಬೇಡುವೆ’.
ಎಂಬ ವಚನದಲ್ಲಿ ಬಸವಣ್ಣನವರ ಏಕದೇವೋಪಾಸನೆ, ಭಕ್ತಿ ಮತ್ತು ಸರಳ ವ್ಯಕ್ತಿತ್ವ ವ್ಯಕ್ತವಾಗುತ್ತದೆ. ಯಾರ ಮುಂದೆಯೂ ಕೈಚಾಚದೆ, ತನ್ನ ಸಂಕಟಗಳನ್ನೆಲ್ಲ ಭಗವಂತನ ಮುಂದೆ ಹೇಳಿಕೊಳ್ಳುವ ವಿನಯ ಅವರಲ್ಲಿತ್ತು ಎಂದರು.
‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’
ಬಸವಣ್ಣನವರ ವ್ಯಕ್ತಿತ್ವದಲ್ಲಿ ಮಾನವೀಯ ಅನುಕಂಪ, ದಯೆ, ಕರುಣೆ, ನ್ಯಾಯನಿಷ್ಠೆ, ನಿಸ್ವಾರ್ಥ, ನಿರಹಂಕಾರ, ವಿನಯ, ವಿಧೇಯತೆ, ಪ್ರೀತಿ ಮತ್ತು ವಿಶ್ವಾಸ ಹೀಗೆ ಅನೇಕ ಉನ್ನತ ಗುಣಗಳು ಒಂದಾಗಿದ್ದವು. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯಲ್ಲಿ ಒಂದು ಅಥವಾ ಎರಡು ಒಳ್ಳೆಯ ಗುಣಗಳನ್ನು ಕಾಣಬಹುದು. ಆದರೆ ಇಡೀ ಮಾನವಕುಲಕ್ಕೆ ಮಾದರಿಯಾಗುವ ಎಲ್ಲ ಸದ್ಗುಣಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡವರು ಬಸವಣ್ಣನವರು.
‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂಬ ಅವರ ವಚನದ ಸಾಲುಗಳು ಅವರ ವಿನಯದ ಆಳವನ್ನು ತೋರಿಸುತ್ತವೆ. ಇದೇ ಮನೋಭಾವದಿಂದ ಮಹಾಮನೆ, ಅನುಭವ ಮಂಟಪ, ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳಿಗೆ ಬಲ ತುಂಬಿದರು. ಮನುಷ್ಯನನ್ನು ಜಾತಿ, ವರ್ಗ, ಅಂತಸ್ತು ಮತ್ತು ಅಧಿಕಾರದಿಂದ ಅಳೆಯದೆ, ಆತನಲ್ಲಿರುವ ಭಕ್ತಿ ಮತ್ತು ಮಾನವೀಯತೆಯಿಂದ ಗೌರವಿಸುವ ಸಾಮಾಜಿಕ ವ್ಯವಸ್ಥೆಯನ್ನು ಕಟ್ಟಿದರು.
ಬಸವಣ್ಣನವರ ಬದುಕನ್ನು ಮೂರು ಪ್ರಮುಖ ಹಂತಗಳಲ್ಲಿ ಗುರುತಿಸಬಹುದು. ಮೊದಲನೆಯದು ಬಾಗೇವಾಡಿಯ ಅಗ್ರಹಾರದ ಪರಿಸರ. ಅಲ್ಲಿ ಕಂಡ ಯಜ್ಞ, ಯಾಗ, ಕರ್ಮಕಾಂಡ, ವರ್ಣಭೇದ ಮತ್ತು ಸಾಮಾಜಿಕ ಅಸಮಾನತೆಗಳಿಂದ ಜಿಗುಪ್ಸೆಗೊಂಡು ಜನ್ಮಜಾತಿಯ ಹಂಗನ್ನು ತೊರೆದು ಕೂಡಲಸಂಗಮಕ್ಕೆ ತೆರಳಿದರು. ಎರಡನೆಯದು ಕೂಡಲಸಂಗಮದ ಶೈವ ಆಧ್ಯಾತ್ಮಿಕ ಪರಿಸರದಲ್ಲಿ ಭಕ್ತಿಯ ಸಾಧನೆಯ ಮೂಲಕ ಜ್ಞಾನ ಮತ್ತು ಅನುಭಾವವನ್ನು ಗಳಿಸಿದ ಹಂತ. ಮೂರನೆಯದು ಬಿಜ್ಜಳನ ಕಲ್ಯಾಣಕ್ಕೆ ಆಗಮಿಸಿ, ಭಂಡಾರಿಯಾಗಿ ಕಾರ್ಯನಿರ್ವಹಿಸುತ್ತಾ ಅಲ್ಲಿನ ಆಡಳಿತ ವ್ಯವಸ್ಥೆ ಮತ್ತು ಸಾಮಾಜಿಕ ಅಸಮಾನತೆಗಳನ್ನು ಗಮನಿಸಿ, ತಮ್ಮ ಪ್ರಗತಿಪರ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದ ಹಂತ. ಈ ಮೂರು ಹಂತಗಳು ಬಸವಣ್ಣನವರ ವ್ಯಕ್ತಿತ್ವವನ್ನು ರೂಪಿಸಿದವು ಎಂದು ಹೇಳಿದರು.

ಹೊಗಳಿಕೆಗಿಂತ ಆತ್ಮಪರಿಶೀಲನೆ ಮುಖ್ಯ
ಬಸವಣ್ಣನವರನ್ನು ಜನರು ಭಕ್ತಿ ಭಂಡಾರಿ ಎಂದು ಕರೆದರೂ ಅವರು ಅದರಿಂದ ಅಹಂಕಾರ ಬೆಳೆಸಿಕೊಳ್ಳಲಿಲ್ಲ. ಬದಲಿಗೆ,
ಭಕ್ತಿಯಿಲ್ಲದ ಬಡವ ನಾನಯ್ಯ,
ಕಕ್ಕಯ್ಯನ ಮನೆಯಲು ಬೇಡಿದೆ,
ಚೆನ್ನಯ್ಯನ ಮನೆಯಲು ಬೇಡಿದೆ,
ದಾಸಯ್ಯನ ಮನೆಯಲೂ ಬೇಡಿದೆ.
ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದರೆ
ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.
ಎಂದು ತಮ್ಮನ್ನು ತಾವು ಬಡವನೆಂದು ಕರೆದುಕೊಂಡರು. ಎಲ್ಲರಲ್ಲಿರುವ ಭಕ್ತಿಯ ಭಿಕ್ಷೆಯನ್ನು ಸ್ವೀಕರಿಸುವ ವಿನಯ ಅವರಲ್ಲಿತ್ತು. ಹೊಗಳಿಕೆ ಕೇಳಿದ ತಕ್ಷಣ ಉಬ್ಬಿ ಹೋಗುವ ವ್ಯಕ್ತಿತ್ವ ಅವರದ್ದಾಗಿರಲಿಲ್ಲ. ಹೊರಗಿನ ಉಡುಗೆ ತೊಡುಗೆ ಸುಂದರವಾಗಿದ್ದರೂ ಒಳಗಿನ ಮನಸ್ಸು ಶುದ್ಧವಾಗಿರಬೇಕು. ಅಂತರಂಗದಲ್ಲಿ ಅಹಂಕಾರವನ್ನು ಅಳಿಸಿ, ಸಮಾಜದ ಒಳಿತಿಗಾಗಿ ತನ್ನನ್ನು ಅರ್ಪಿಸಿಕೊಂಡಾಗ ಮಾತ್ರ ನಿಜವಾದ ಭಕ್ತಿ ಸಾಧ್ಯ ಎಂದು ಹೇಳಿದರು.
ಇದಕ್ಕೆ ವಿರುದ್ಧವಾಗಿ ಒಳಗೊಂದು, ಹೊರಗೊಂದು ಮನಸ್ಸು ಹೊಂದಿರುವವರನ್ನು ಬಸವಣ್ಣನವರು ಎಚ್ಚರಿಸಿದ್ದಾರೆ.
ಎನ್ನ ನಡೆಯೊಂದು ಪರಿ ಎನ್ನ ನುಡಿಯೊಂದು ಪರಿ
ಎನ್ನೊಳಗೇನೂ ಶುದ್ಧವಿಲ್ಲ, ನೋಡಯ್ಯಾ.
ನುಡಿಗೆ ತಕ್ಕ ನಡೆಯ ಕಂಡೊಡೆ
ಕೂಡಲ ಸಂಗಮದೇವನೊಳಗಿರ್ಪನಯ್ಯಾ.
ಎಂಬ ವಚನವು ಮನುಷ್ಯನ ನಡೆ-ನುಡಿಗಳಲ್ಲಿನ ಅಂತರವನ್ನು ಪ್ರಶ್ನಿಸುತ್ತದೆ. ನಾವು ಮಾತನಾಡುವುದೇ ಒಂದು, ಮಾಡುವುದೇ ಮತ್ತೊಂದು. ನಮ್ಮ ಮಾತು ಮತ್ತು ಕೃತಿಗಳ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ವ್ಯಕ್ತಿತ್ವಕ್ಕೆ ಮೌಲ್ಯವಿರುವುದಿಲ್ಲ. ಮನಸ್ಸು ಶುದ್ಧವಾಗಿದ್ದಾಗ ಮಾತ್ರ ಹೊರಗಿನ ಕಾರ್ಯಗಳೂ ಶುದ್ಧವಾಗಿರಲು ಸಾಧ್ಯ. ಯಾವುದೇ ಕಾರ್ಯಕ್ರಮ ಜನ ಮೆಚ್ಚಲಿ ಎಂಬ ಉದ್ದೇಶದಿಂದಲ್ಲ, ಅಂತರಂಗದ ಪ್ರೀತಿ ಮತ್ತು ಶ್ರದ್ಧೆಯಿಂದ ನಡೆದಾಗ ಮಾತ್ರ ಯಶಸ್ವಿಯಾಗುತ್ತದೆ ಎಂದರು.
ನಡೆ-ನುಡಿಗಳಲ್ಲಿ ಒಂದು ಜವೆಯಷ್ಟೂ ವ್ಯತ್ಯಾಸವಿರಬಾರದು
ಬಸವಣ್ಣನವರು ತಮ್ಮ ನಡೆ ಮತ್ತು ನುಡಿಗಳ ಸಾಮರಸ್ಯಕ್ಕೆ ಎಷ್ಟು ಮಹತ್ವ ನೀಡಿದ್ದರು ಎಂಬುದಕ್ಕೆ ಮತ್ತೊಂದು ವಚನ ಸಾಕ್ಷಿಯಾಗಿದೆ.
ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ-
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ;
ಒಂದು ಜವೆ ಕೊರತೆಯಾದರೆ
ಎನ್ನನದ್ದಿ ನೀನೆದ್ದು ಹೋಗು,
ಕೂಡಲಸಂಗಮದೇವಾ.
ತಮ್ಮ ನಡವಳಿಕೆ ಮತ್ತು ಮಾತುಗಳನ್ನು ತಕ್ಕಡಿಯ ಎರಡು ತಟ್ಟೆಗಳಂತೆ ಭಾವಿಸಿ, ಅವುಗಳಲ್ಲಿ ಒಂದು ಜವೆಯಷ್ಟೂ ವ್ಯತ್ಯಾಸ ಕಂಡುಬಂದರೆ ತಮ್ಮನ್ನು ಶಿಕ್ಷಿಸಬೇಕೆಂದು ಭಗವಂತನನ್ನೇ ಕೇಳಿಕೊಳ್ಳುವಷ್ಟು ಆತ್ಮಶುದ್ಧಿ ಬಸವಣ್ಣನವರಲ್ಲಿತ್ತು. ಮನುಷ್ಯರ ಮುಂದೆ ಸುಳ್ಳು ಹೇಳಿ ಬದುಕಬಹುದು. ಆದರೆ ತನ್ನ ಅಂತರಾತ್ಮದ ಮುಂದೆ ಮತ್ತು ಭಗವಂತನ ಮುಂದೆ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂಬ ಅರಿವು ಅವರಿಗಿತ್ತು.
ಮಾತನಾಡುವಾಗಲೂ ಎಚ್ಚರಿಕೆ ಇರಬೇಕು ಎಂಬುದನ್ನು ಬಸವಣ್ಣನವರು ಮತ್ತೊಂದು ವಚನದಲ್ಲಿ ವಿವರಿಸಿದ್ದಾರೆ.
ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದರೆ ಲಿಂಗ ಮೆಚ್ಚಿ ʼಅಹುದಹುದೆʼನಬೇಕು.
ನುಡಿಯೊಳಗಾಗಿ ನಡೆಯದಿದ್ದರೆ,
ಕೂಡಲಸಂಗಮದೇವನೆಂತೊಲಿವನಯ್ಯಾ?
ಮುತ್ತಿನ ಹಾರದಂತೆ ಮಾತುಗಳು ಒಂದಕ್ಕೊಂದು ಪೂರಕವಾಗಿರಬೇಕು. ಮಾಣಿಕ್ಯದ ಕಾಂತಿಯಂತೆ ಮಾತಿನಲ್ಲಿ ಅರ್ಥಪೂರ್ಣತೆ ಮತ್ತು ಗಟ್ಟಿತನ ಇರಬೇಕು. ಸ್ಫಟಿಕದಂತೆ ಪಾರದರ್ಶಕತೆ ಇರಬೇಕು. ನಾವು ಮಾತನಾಡಿದಾಗ ನಮ್ಮ ಅಂತರಂಗದ ಬೆಳಕು ಇತರರಿಗೂ ತಲುಪಬೇಕು. ಜನರನ್ನು ಮೆಚ್ಚಿಸುವುದಕ್ಕಿಂತ ನಮ್ಮ ಮನಸ್ಸು ಮತ್ತು ಅಂತರಾತ್ಮ ಒಪ್ಪುವ ಮಾತುಗಳನ್ನಾಡಬೇಕು. ನುಡಿದಂತೆ ನಡೆಯದಿದ್ದರೆ ಭಗವಂತ ಒಲಿಯುವುದಿಲ್ಲ ಎಂಬುದು ಈ ವಚನದ ಆಶಯ ಎಂದರು.

ಬಾವಿ ಮಾರಿದವನು ನೀರು ಮಾರಿಲ್ಲ ಎಂದರೆ ಹೇಗೆ?
ನಡೆ ಮತ್ತು ನುಡಿಗಳ ನಡುವಿನ ವ್ಯತ್ಯಾಸವನ್ನು ವಿವರಿಸಲು ಅವರು ರಾಮಣ್ಣ ಮತ್ತು ಶ್ಯಾಮಣ್ಣರ ಬಾವಿಯ ವ್ಯಾಪಾರದ ಪ್ರಸಂಗವನ್ನು ಉದಾಹರಿಸಿದರು. ರಾಮಣ್ಣ ತನ್ನ ಬಾವಿಯನ್ನು ಶ್ಯಾಮಣ್ಣನಿಗೆ ಮಾರಾಟ ಮಾಡಿ, ನೋಂದಣಿಯನ್ನೂ ಮಾಡಿಸಿಕೊಡುತ್ತಾನೆ. ಮರುದಿನ ಶ್ಯಾಮಣ್ಣ ಬಾವಿಯಿಂದ ನೀರು ತೆಗೆದುಕೊಳ್ಳಲು ಹೋದಾಗ, ರಾಮಣ್ಣ ಬಾವಿಯನ್ನು ಮಾತ್ರ ಮಾರಿದ್ದೇನೆ, ಅದರೊಳಗಿನ ನೀರನ್ನು ಮಾರಿಲ್ಲ ಎಂದು ತಕರಾರು ಮಾಡುತ್ತಾನೆ. ಆಗ ಊರಿನ ಹಿರಿಯರು ಮಧ್ಯಪ್ರವೇಶಿಸಿ, ಬಾವಿ ಮಾರುವಾಗ ಅದರಲ್ಲಿರುವ ನೀರನ್ನೂ ಸೇರಿಸಿಯೇ ಮಾರಬೇಕಿತ್ತು ಎಂದು ತಿಳಿಸುತ್ತಾರೆ. ಮಾತು ಮತ್ತು ಕೃತಿಗಳಲ್ಲಿ ವ್ಯತ್ಯಾಸವಿದ್ದರೆ ಸಮಾಜದಲ್ಲಿ ಹೇಗೆ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂಬುದಕ್ಕೆ ಈ ಪ್ರಸಂಗ ಉದಾಹರಣೆ ಎಂದರು.
ಅದೇ ರೀತಿ,
ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ,
ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದರೆ,
ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ?
ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು,
ಕೂಡಲಸಂಗಮದೇವಾ.
ಎಂಬ ವಚನದ ಮೂಲಕ ವ್ಯಕ್ತಿಯ ಮೂಲ ಸ್ವಭಾವ ಮತ್ತು ಸಂಸ್ಕಾರಗಳ ಮಹತ್ವವನ್ನು ವಿವರಿಸಿದರು. ಮನೆಯಲ್ಲಿ ತಂದೆ-ತಾಯಿಗಳು ಹೇಗೆ ನಡೆದುಕೊಳ್ಳುತ್ತಾರೋ ಮಕ್ಕಳು ಅದನ್ನೇ ಕಲಿಯುತ್ತಾರೆ. ಮೊಬೈಲ್ ಬಳಕೆಯಿಂದ ಮಕ್ಕಳನ್ನು ದೂರವಿಡಬೇಕು ಎಂದು ಹೇಳುವ ಪೋಷಕರೇ ಗಂಟೆಗಟ್ಟಲೆ ಮೊಬೈಲ್ ನೋಡುತ್ತಾ ಕುಳಿತರೆ ಮಕ್ಕಳಿಗೆ ಯಾವ ಸಂದೇಶ ನೀಡಿದಂತಾಗುತ್ತದೆ? ಸಂಸ್ಕಾರವು ಮೊದಲು ಮನೆಯಿಂದಲೇ ಆರಂಭವಾಗಬೇಕು. ಮನೆಯೊಳಗಿನ ನಡೆ-ನುಡಿಗಳು ಸರಿಯಾಗಿದ್ದಾಗ ಮಾತ್ರ ಸಮಾಜದಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ಸಾಧ್ಯ ಎಂದರು.
ನಾಗಲಾಂಬಿಕೆಯ ಸಂಸ್ಕಾರದಲ್ಲಿ ರೂಪುಗೊಂಡ ಬಸವಣ್ಣ
ಬಸವಣ್ಣನವರ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಅವರ ಸಹೋದರಿ ನಾಗಲಾಂಬಿಕೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕುಟುಂಬದಲ್ಲಿ ಅಕ್ಕ ಎಂದರೆ ಎರಡನೇ ತಾಯಿಯ ಸ್ಥಾನ. ತಾಯಿ ಕಲಿಸುವ ಸಂಸ್ಕಾರ, ಶಿಸ್ತು ಮತ್ತು ಜೀವನಮೌಲ್ಯಗಳನ್ನು ಅಕ್ಕನೂ ತಮ್ಮಂದಿರಿಗೆ ಕಲಿಸುತ್ತಾಳೆ. ಬಸವಣ್ಣನವರ ಬದುಕಿನ ಮೇಲೆ ನಾಗಲಾಂಬಿಕೆಯ ಪ್ರಭಾವ ಅಪಾರವಾಗಿತ್ತು.
ನಾಗಲಾಂಬಿಕೆ ತನ್ನ ತಮ್ಮನ ಕುರಿತು,
ಎನ್ನ ಕುಲಸೂತಕವ ಕಳೆದಾತ ಬಸವಣ್ಣ
ಎನ್ನ ಮನಸೂತಕವ ಕಳೆದಾತ ಬಸವಣ್ಣ
ಎನ್ನ ತನುಸೂತಕವ ಕಳೆದಾತ ಬಸವಣ್ಣ
ಎನ್ನ ನೆನಹು ಸೂತಕವ ಕಳೆದಾತ ಬಸವಣ್ಣ
ಎನ್ನ ಕುರುಹು ಸೂತಕವ ಕಳೆದಾತ ಬಸವಣ್ಣ
ಎಂದು ಕೊಂಡಾಡುತ್ತಾಳೆ. ತನ್ನ ಕುಟುಂಬದ ಸಾಮಾಜಿಕ ಮತ್ತು ಮಾನಸಿಕ ಬಂಧನಗಳನ್ನು ಕಳೆದು ಹೊಸ ಅರಿವಿನ ಬದುಕಿಗೆ ದಾರಿ ತೋರಿದವನು ಬಸವಣ್ಣ ಎಂದು ಅಕ್ಕ ಹೆಮ್ಮೆಯಿಂದ ಹೇಳಿಕೊಂಡಿದ್ದಾಳೆ. ಅಕ್ಕ-ತಮ್ಮಂದಿರ ಸಂಬಂಧದಲ್ಲಿ ಪ್ರೀತಿ, ಗೌರವ, ವಿಶ್ವಾಸ ಮತ್ತು ಪರಸ್ಪರ ತ್ಯಾಗ ಇರಬೇಕು. ಇಂದಿನ ಕುಟುಂಬಗಳಲ್ಲಿ ಆಸ್ತಿ, ಹಣ ಮತ್ತು ಇತರ ಲೌಕಿಕ ಆಸೆಗಳಿಂದ ಸಂಬಂಧಗಳಲ್ಲಿ ಬಿರುಕು ಮೂಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಹೊರಗಿನ ಪಾಂಡಿತ್ಯಕ್ಕಿಂತ ಅಂತರಂಗದ ಪರಿಪಕ್ವತೆ ಮುಖ್ಯ
ಬಸವಣ್ಣನವರು ಹೊರಗಿನ ಆಡಂಬರ ಮತ್ತು ತೋರಿಕೆಯ ಭಕ್ತಿಗಿಂತ ಮನಸ್ಸಿನ ಪರಿಶುದ್ಧತೆಗೆ ಹೆಚ್ಚಿನ ಮಹತ್ವ ನೀಡಿದರು.
ಹೊರಗೆ ಹೂಸಿ ಏವೆನಯ್ಯಾ,
ಒಳಗೆ ಶುದ್ಧವಾಗದನ್ನಕ್ಕ?
ಮಣಿಯ ಕಟ್ಟಿ ಏವೆನಯ್ಯಾ.
ಮನ ಮುಟ್ಟದನ್ನಕ್ಕ?
ನೂರನೋದಿ ಏವೆನಯ್ಯಾ,
ನಮ್ಮ ಕೂಡಲಸಂಗಮದೇವರ ಮನಮುಟ್ಟಿ ನೆನೆಯದನ್ನಕ್ಕ?
ಎಂಬ ವಚನವು ಹೊರಗಿನ ವೇಷಭೂಷಣ, ಪಾಂಡಿತ್ಯ ಮತ್ತು ಧಾರ್ಮಿಕ ಆಚರಣೆಗಳಿಗಿಂತ ಅಂತರಂಗದ ಪರಿಪಕ್ವತೆ ಮುಖ್ಯ ಎಂಬುದನ್ನು ಸಾರುತ್ತದೆ.
ಕಬ್ಬಿನ ತೋಟಕ್ಕೆ ಕುರಿ ಮತ್ತು ಆನೆ ಎರಡೂ ಹೋದರೂ ಕುರಿ ಹೊರಗಿನ ಎಲೆಗಳನ್ನು ಮಾತ್ರ ಮೇಯುತ್ತದೆ. ಆದರೆ ಆನೆ ಕಬ್ಬಿನ ಕಾಂಡದಲ್ಲಿರುವ ಸಿಹಿ ರಸವನ್ನು ಆಸ್ವಾದಿಸುತ್ತದೆ. ಅದೇ ರೀತಿ ಮೇಲ್ನೋಟಕ್ಕೆ ಬದುಕನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಅದರ ಆಳಕ್ಕೆ ಇಳಿದು ಸತ್ಯವನ್ನು ಅರಿತುಕೊಳ್ಳಬೇಕು. ಅಂತರಂಗದೊಳಗೆ ಹೊಕ್ಕು ಆತ್ಮಪರಿಶೀಲನೆ ಮಾಡಿಕೊಂಡಾಗ ಮಾತ್ರ ನಮ್ಮ ಕಾರ್ಯಗಳು ಪರಿಶುದ್ಧವಾಗಲು ಸಾಧ್ಯ ಎಂದು ವಿವರಿಸಿದರು.
ಅಕ್ಕಮಹಾದೇವಿಯಲ್ಲಿ ತಾಯಿಯನ್ನು ಕಂಡ ಬಸವಣ್ಣ
ಅನುಭವ ಮಂಟಪಕ್ಕೆ ಅಕ್ಕಮಹಾದೇವಿಯವರು ಆಗಮಿಸಿದ ಸಂದರ್ಭವನ್ನು ವಿವರಿಸಿದ ಬಸನಗೌಡ ಮಾಳಗಿ, ಅಕ್ಕಮಹಾದೇವಿಯವರ ವೈರಾಗ್ಯ, ಆತ್ಮಸ್ಥೈರ್ಯ ಮತ್ತು ಆಧ್ಯಾತ್ಮಿಕ ದೃಢತೆಯನ್ನು ಶರಣರು ಹೇಗೆ ಗೌರವಿಸಿದರು ಎಂಬುದನ್ನು ವಿವರಿಸಿದರು. ಅಲ್ಲಮಪ್ರಭುಗಳ ಪ್ರಶ್ನೆಗಳಿಗೆ ಅಕ್ಕಮಹಾದೇವಿ ನೀಡಿದ ಉತ್ತರಗಳು ಆಕೆಯ ಅನುಭಾವದ ಎತ್ತರವನ್ನು ತೋರಿಸಿದವು. ಆ ಸಂದರ್ಭದಲ್ಲಿ ಬಸವಣ್ಣನವರು ಅಕ್ಕಮಹಾದೇವಿಯವರನ್ನು ನೋಡುವ ದೃಷ್ಟಿಯೇ ಅವರ ಅಂತರಂಗದ ಪರಿಶುದ್ಧತೆಗೆ ಸಾಕ್ಷಿಯಾಗಿದೆ ಎಂದರು.
‘ಹೆಂಗೂಸಿನಂದವ ನೋಡಿರೆ ಪುರಾತನರು,
ಬಾಲತನದಂಗವ ನೋಡಿರೆ ಶರಣರು,
ಬ್ರಹ್ಮವನಾಚರಿಸಿ ತನ್ನ ಮರೆದಿಪ್ಪರ ನೋಡಿರೆ ಲಿಂಗವಂತರು’
ಎಂಬ ವಚನವನ್ನು ಉಲ್ಲೇಖಿಸಿ, ಹೆಣ್ಣಿನ ದೇಹವನ್ನು ನೋಡುವ ಸಾಮಾನ್ಯ ದೃಷ್ಟಿಯನ್ನು ಮೀರಿ, ಆಕೆಯಲ್ಲಿನ ಬಾಲಸಹಜ ನಿರ್ಮಲತೆ ಮತ್ತು ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಗುರುತಿಸುವ ಮನೋಭಾವ ಬಸವಣ್ಣನವರಲ್ಲಿತ್ತು ಎಂದು ಹೇಳಿದರು.
ಅದೇ ರೀತಿ,
ಕಾಯದ ಲಜ್ಜೆಯ ಕಲ್ಪಿತವ ಕಳೆದು
ಜೀವದ ಲಜ್ಜೆಯ ಮೋಹವನಳಿದು
ಮನದ ಲಜ್ಜೆಯ ನೆನಹ ಸುಟ್ಟು
ಭಾವದ ಕೂಟ ಬತ್ತಲೆಯೆಂದರಿದು
ತವಕದ ಸ್ನೇಹ ವ್ಯವಹಾರಕ್ಕೆ ಹುಗದು. ಕೂಡಲಸಂಗಮದೇವಯ್ಯಾ
ಎನ್ನ ಹೆತ್ತ ತಾಯಿ ಮಹದೇವಿಕ್ಕನ ನಿಲವ ನೋಡಯ್ಯಾ ಪ್ರಭುವೆ.
ಎಂದು ಅಕ್ಕಮಹಾದೇವಿಯವರನ್ನು ‘ಎನ್ನ ಹೆತ್ತ ತಾಯಿ’ ಎಂದು ಸಂಬೋಧಿಸಿದ ಬಸವಣ್ಣನವರು, ಮಹಿಳೆಯ ಆಧ್ಯಾತ್ಮಿಕ ಸಾಧನೆಗೆ ನೀಡಿದ ಗೌರವ ಅನನ್ಯವಾದುದು. ಕನ್ನಡ ಸಾಹಿತ್ಯ ಮತ್ತು ಶರಣ ಪರಂಪರೆಯಲ್ಲಿ ಅಕ್ಕಮಹಾದೇವಿಗೆ ‘ಅಕ್ಕ’ ಎಂಬ ಗೌರವದ ಸಂಬೋಧನೆಗೆ ವಿಶೇಷ ಸ್ಥಾನವಿದೆ ಎಂದರು.
ಮೊದಲು ತನ್ನನ್ನು ತಾನು ತಿದ್ದಿಕೊಳ್ಳಬೇಕು
‘ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ’ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಅವರು, ಇತರರ ತಪ್ಪುಗಳನ್ನು ಹುಡುಕುವ ಮೊದಲು ನಮ್ಮಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು. ಜಗತ್ತನ್ನು ಬದಲಾಯಿಸುವ ಮೊದಲು ನಮ್ಮ ದೇಹ, ಮನಸ್ಸು ಮತ್ತು ನಡವಳಿಕೆಯನ್ನು ತಿದ್ದಿಕೊಳ್ಳಬೇಕು. ವ್ಯಕ್ತಿಯ ಪರಿವರ್ತನೆಯಿಂದ ಕುಟುಂಬದ ಪರಿವರ್ತನೆ, ಕುಟುಂಬದ ಪರಿವರ್ತನೆಯಿಂದ ಸಮಾಜದ ಪರಿವರ್ತನೆ ಸಾಧ್ಯವಾಗುತ್ತದೆ ಎಂದರು.
ಹಣ ಮತ್ತು ಆಸ್ತಿಯ ಹಿಂದೆ ಓಡುವ ಇಂದಿನ ಕಾಲಘಟ್ಟದಲ್ಲಿ ಬಸವಣ್ಣನವರ ಸರಳ ಜೀವನ ಮಾದರಿಯಾಗಿದೆ.
ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ
ನಿಮ್ಮಾಣೆ! ನಿಮ್ಮ ಪುರಾತರಾಣೆ.
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ,
ಕೂಡಲಸಂಗಮದೇವಾ.
ಎಂಬ ವಚನದ ಮೂಲಕ ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತಿನ ಆಸೆ ಬೆಳೆಸಿಕೊಳ್ಳಬಾರದು ಎಂಬ ಸಂದೇಶ ನೀಡಿದ್ದಾರೆ. ಪ್ರಧಾನಿಯಂತಹ ಉನ್ನತ ಸ್ಥಾನದಲ್ಲಿದ್ದರೂ ಅಧಿಕಾರವನ್ನು ವೈಯಕ್ತಿಕ ಸಂಪತ್ತಿನ ಸಂಗ್ರಹಕ್ಕೆ ಬಳಸದೆ, ಪರಿಶ್ರಮ ಮತ್ತು ಸರಳತೆಯಿಂದ ಬದುಕಿದವರು ಬಸವಣ್ಣನವರು ಎಂದು ಹೇಳಿದರು.
ದಯೆಯೇ ನಿಜವಾದ ಧರ್ಮ
ಬಸವಣ್ಣನವರ ದಯಾಪರತೆಗೆ ಸಂಬಂಧಿಸಿದಂತೆ ಮನೆಯಲ್ಲಿ ಸಾಕಿದ್ದ ಹಸುವನ್ನು ಯಾರೋ ಕಳ್ಳರು ಕದ್ದೊಯ್ದಾಗ ಅವರು ತೋರಿದ ಪ್ರತಿಕ್ರಿಯೆಯನ್ನು ವಿವರಿಸಿದರು. ಹಸುವನ್ನು ಕದ್ದೊಯ್ದಿದ್ದಾರೆ ಎಂದು ದುಃಖಿಸುವ ಬದಲು, ಅದರ ಹಾಲು ಕುಡಿಯುವ ಕರು ತಾಯಿಯಿಂದ ದೂರವಾಗಿ ಹಸಿವಿನಿಂದ ಬಳಲಬಾರದು. ಮೊದಲು ಆ ಕರುವನ್ನು ಬಿಟ್ಟು ಕಳುಹಿಸಿ ಎಂದು ಹೇಳಿದ ಬಸವಣ್ಣನವರ ಮನಸ್ಸಿನಲ್ಲಿ ಕಳ್ಳರ ಮೇಲೂ ದ್ವೇಷವಿರಲಿಲ್ಲ. ಪ್ರಾಣಿಗಳ ನೋವನ್ನೂ ಅರ್ಥಮಾಡಿಕೊಳ್ಳುವ ಅಪಾರ ಕರುಣೆ ಅವರಲ್ಲಿತ್ತು.
ಇದಕ್ಕೆ ಪೂರಕವಾಗಿ ಸಿದ್ಧಗಂಗಾ ಶ್ರೀಗಳ ಜೀವನದ ಪ್ರಸಂಗವನ್ನೂ ವಿವರಿಸಿದರು. ಮಠದಲ್ಲಿ ತೆಂಗಿನಕಾಯಿ ಕದಿಯುತ್ತಿದ್ದ ವ್ಯಕ್ತಿಯನ್ನು ಹಿಡಿದು ಭಕ್ತರು ಮರಕ್ಕೆ ಕಟ್ಟಿ ಥಳಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಶ್ರೀಗಳು, ಕಳ್ಳನನ್ನು ಹೊಡೆಯುತ್ತಿದ್ದ ಭಕ್ತರನ್ನೇ ತರಾಟೆಗೆ ತೆಗೆದುಕೊಂಡು, ಮೊದಲು ಆತನನ್ನು ಬಂಧನದಿಂದ ಬಿಡಿಸಿ, ಗಾಯಗಳಿಗೆ ಔಷಧಿ ಹಚ್ಚಿಸಿ, ಬಿಸಿನೀರಿನಿಂದ ಸ್ನಾನ ಮಾಡಿಸಿ, ಪಾಯಸ ನೀಡಿ ಊಟ ಮಾಡಿಸಿದರು. ಶಿಕ್ಷೆಗಿಂತ ಪ್ರೀತಿ ಮತ್ತು ಮಾನವೀಯತೆಯಿಂದ ವ್ಯಕ್ತಿಯ ಮನಸ್ಸನ್ನು ಪರಿವರ್ತಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ಬದುಕಿದಾಗ ಮಾತ್ರ ಇಂತಹ ದಯಾಗುಣ ಸಾಧ್ಯ ಎಂದರು.
ತಪ್ಪನ್ನು ಒಪ್ಪಿಕೊಳ್ಳುವ ದೊಡ್ಡ ಗುಣ ಬಸವಣ್ಣನವರದು
ಬಸವಣ್ಣನವರು ತಮ್ಮಿಂದ ತಪ್ಪುಗಳಾದಾಗ ಅದನ್ನು ಮುಚ್ಚಿಡದೆ ಬಹಿರಂಗವಾಗಿ ಒಪ್ಪಿಕೊಂಡು ತಿದ್ದಿಕೊಳ್ಳುತ್ತಿದ್ದರು. ಅನುಭವ ಮಂಟಪದಲ್ಲಿ ಕಿನ್ನರಿ ಬೊಮ್ಮಯ್ಯನವರ ಆಹಾರ ಪದ್ಧತಿಯ ವಿಚಾರವಾಗಿ ಈರುಳ್ಳಿ ಬಳಸುವುದನ್ನು ಆಕ್ಷೇಪಿಸಿದ ಸಂದರ್ಭದಲ್ಲಿ, ತಮ್ಮ ಮಾತಿನಿಂದ ಅವರ ಮನಸ್ಸಿಗೆ ನೋವಾಗಿದೆ ಎಂಬುದನ್ನು ಅರಿತ ಬಸವಣ್ಣನವರು ತಮ್ಮ ತಪ್ಪನ್ನು ಒಪ್ಪಿಕೊಂಡರು. ಒಬ್ಬ ಪ್ರಧಾನಿಯಾಗಿದ್ದರೂ ತಮ್ಮ ತಪ್ಪಿಗೆ ತಾವೇ ಹೊಣೆ ಹೊತ್ತು, ಈರುಳ್ಳಿಯಿಂದ ತಯಾರಿಸಿದ ಆಭರಣಗಳನ್ನು ಧರಿಸಿ ಮಹಾಮನೆಯ ಬೀದಿಯಲ್ಲಿ ನಡೆದರು ಎಂಬ ಪ್ರಸಂಗವನ್ನು ವಿವರಿಸಿದರು.
ಈ ಘಟನೆಯನ್ನು ನೆನಪಿಸುವ ವಚನ,
ಎನ್ನ ತಪ್ಪು ಅನಂತಕೋಟಿ:
ನಿಮ್ಮ ಸೈರಣೆಗೆ ಲೆಕ್ಕವಿಲ್ಲಾ!
ಇನ್ನು ತಪ್ಪಿದೆನಾದರೆ ನಿಮ್ಮ ಪಾದವೇ ದಿಬ್ಯ!
ಕೂಡಲಸಂಗಮದೇವಯ್ಯಾ,
ನಿಮ್ಮ ಪ್ರಮಥರ ಮುಂದೆ ಕಿನ್ನರ ಬೊಮ್ಮಣ್ಣನೆ ಸಾಕ್ಷಿ!
ಎಂಬುದು ಬಸವಣ್ಣನವರ ಆತ್ಮಪರಿಶೀಲನೆ ಮತ್ತು ತಪ್ಪನ್ನು ತಿದ್ದಿಕೊಳ್ಳುವ ಗುಣವನ್ನು ತೋರಿಸುತ್ತದೆ. ಅಧಿಕಾರ, ಅಂತಸ್ತು ಅಥವಾ ಹುದ್ದೆ ಯಾವುದೂ ವ್ಯಕ್ತಿಯನ್ನು ತಪ್ಪುಗಳಿಂದ ಮುಕ್ತಗೊಳಿಸುವುದಿಲ್ಲ. ತನ್ನ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವವನೇ ನಿಜವಾದ ದೊಡ್ಡ ವ್ಯಕ್ತಿ ಎಂದು ಹೇಳಿದರು.
ಮಾನವೀಯ ಮೌಲ್ಯಗಳ ಪುನರ್ನಿರ್ಮಾಣ ಇಂದಿನ ಅಗತ್ಯ
ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿರುವುದು ಮಾನವೀಯ ಮೌಲ್ಯಗಳ ಪುನರ್ನಿರ್ಮಾಣ. ನಗರಗಳಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹಜ ಸಜ್ಜನಿಕೆ, ಪ್ರಾಮಾಣಿಕತೆ ಮತ್ತು ಪರಸ್ಪರ ವಿಶ್ವಾಸ ಕುಸಿಯುತ್ತಿರುವುದು ಆತಂಕಕಾರಿ. ಆರ್ಥಿಕವಾಗಿ ಜನರು ಸಬಲರಾಗುತ್ತಿದ್ದರೂ ಮೌಲ್ಯಗಳ ವಿಚಾರದಲ್ಲಿ ಹಿಂದುಳಿಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಜನರ ಮುಗ್ಧ ಬದುಕಿಗೆ ಸಲ್ಲದ ಆಮಿಷಗಳನ್ನು ತೋರಿಸಿ ತಮ್ಮ ಸ್ವಾರ್ಥ ಸಾಧಿಸುವ ಶಕ್ತಿಗಳು ಹೆಚ್ಚಾಗುತ್ತಿವೆ. ಇದರಿಂದ ಪರಂಪರೆಯ ಗ್ರಾಮೀಣ ಸಮಾಜದ ಸಂಬಂಧಗಳು ದುರ್ಬಲವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂತಹ ಸಂದರ್ಭದಲ್ಲಿ ಬಸವತತ್ವ, ವಚನ ಸಾಹಿತ್ಯ ಮತ್ತು ಶರಣರ ಬದುಕಿನ ಮೌಲ್ಯಗಳನ್ನು ಹಳ್ಳಿಹಳ್ಳಿಗಳಿಗೆ ತಲುಪಿಸುವ ಉದ್ದೇಶದಿಂದ ಅರಳಿಕಟ್ಟೆ ಅನುಭವ ಮಂಟಪದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕೇವಲ ವೇದಿಕೆಯ ಭಾಷಣಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ. ಕೇಳಿದ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಬಾಳೆದಿಂಡು ಎಷ್ಟೇ ದಪ್ಪವಾಗಿದ್ದರೂ ಮನೆಯ ತೊಲೆಯಾಗಲು ಸಾಧ್ಯವಿಲ್ಲ. ಸಮುದ್ರದ ನೀರು ಎಷ್ಟೇ ಸಮೃದ್ಧವಾಗಿದ್ದರೂ ಬಾಯಾರಿಕೆಯನ್ನು ನೀಗಿಸಲಾರದು. ಅದೇ ರೀತಿ ಹೊರಗಿನ ಆಡಂಬರ ಮತ್ತು ಆಕರ್ಷಣೆಗಳಿಂದ ಮಾತ್ರ ಸಮಾಜದ ಒಳಿತನ್ನು ಸಾಧಿಸಲು ಸಾಧ್ಯವಿಲ್ಲ. ಬದುಕಿನಲ್ಲಿ ಮೌಲ್ಯಗಳು ಕ್ರಿಯಾತ್ಮಕವಾಗಿ ಅನುಷ್ಠಾನಕ್ಕೆ ಬರಬೇಕು ಎಂದರು.
ಸಮಾಜಕ್ಕೆ ಬೇಕಾಗಿರುವುದು ಪ್ರೀತಿ, ಪ್ರಾಮಾಣಿಕತೆ ಮತ್ತು ಕಾರುಣ್ಯ
ಇಂದಿನ ಬದುಕಿನಲ್ಲಿ ಯಾವುದಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂಬುದನ್ನು ವಿವರಿಸಿದ ಅವರು, ಧರಿಸುವ ವೇಷಕ್ಕಿಂತ ಬಳಸುವ ಭಾಷೆ ಮುಖ್ಯ. ಹುಟ್ಟಿದ ಜಾತಿಗಿಂತ ಕಟ್ಟಿದ ಪ್ರೀತಿ ಮುಖ್ಯ. ಆಡುವ ನುಡಿಗಿಂತ ನಡೆ ಮುಖ್ಯ. ಗಳಿಸುವ ಸಂಪತ್ತಿಗಿಂತ ಅದನ್ನು ಬಳಸುವಲ್ಲಿನ ಎಚ್ಚರ ಮುಖ್ಯ. ಕಾನೂನಿಗಿಂತ ಕಾರುಣ್ಯ ಮುಖ್ಯ ಎಂದು ಹೇಳಿದರು.
ಸಮಾಜಕ್ಕೆ ಇಂದು ಆಧ್ಯಾತ್ಮಿಕ ಅನುಭಾವ ಹೊಂದಿರುವ ಧರ್ಮಗುರುಗಳು, ಶುದ್ಧ ಬದುಕಿನ ಬುದ್ಧಿಜೀವಿಗಳು, ಮಾತೃ ಹೃದಯದ ಮಹಿಳೆಯರು, ಆತ್ಮವಿಶ್ವಾಸದ ಕೃಷಿಕರು ಮತ್ತು ಹೆತ್ತವರನ್ನು ಪ್ರೀತಿಯಿಂದ ನೋಡಿಕೊಳ್ಳುವ ಮಕ್ಕಳು ಬೇಕಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅಂತರಂಗ ಮತ್ತು ಬಹಿರಂಗ ಎರಡರಲ್ಲೂ ಶುದ್ಧತೆ ಹೊಂದಿರುವ ಬಸವಣ್ಣನಂತಹ ಶರಣರು ಮತ್ತೆ ಹುಟ್ಟಿ ಬರಬೇಕಾಗಿದೆ ಎಂದರು.
ಬಸವಣ್ಣನ ಬದುಕನ್ನು ಕವಿತೆಯಲ್ಲಿ ಕಟ್ಟಿಕೊಟ್ಟ ಜಿ.ಎಸ್. ಶಿವರುದ್ರಪ್ಪ
ತಮ್ಮ ಉಪನ್ಯಾಸದ ಕೊನೆಯಲ್ಲಿ ಖ್ಯಾತ ಕವಿ ಜಿ.ಎಸ್. ಶಿವರುದ್ರಪ್ಪನವರು ಬಸವಣ್ಣನವರ ಕುರಿತು ರಚಿಸಿರುವ ಕವಿತೆಯ ಸಾಲುಗಳನ್ನು ವಾಚಿಸಿದರು.
‘ಇರಬಹುದು ನಿನಗಿಂತ ದೊಡ್ಡವರು,
ಅನುಭಾವದಲ್ಲಿ ಮೇಲೇರಿ ಬಯಲಾದವರು,
ಇರಬಹುದು ನಿನಗಿಂತಲೂ ದೊಡ್ಡ ತ್ಯಾಗಿಗಳು ವಿರಾಗಿಗಳು, ಇರಲಾರರೆಂದೇ ತೋರುತ್ತದೆ,
ನಿನ್ನಂತೆ ನಿನ್ನೊಳಗಿನ ಅಂಕುಡೊಂಕುಗಳ ಕಂಡುಕೊಂಡವರು’
ಎಂಬ ಸಾಲುಗಳ ಮೂಲಕ ಬಸವಣ್ಣನವರ ಆತ್ಮಪರಿಶೀಲನೆಯ ವಿಶಿಷ್ಟತೆಯನ್ನು ವಿವರಿಸಿದರು.
ಮುಂದುವರಿದು, ತಮ್ಮ ಅಂತರಂಗದ ಅಂಕುಡೊಂಕುಗಳನ್ನು ಮುಚ್ಚಿಡದೆ ಪ್ರತಿದಿನವೂ ತಿದ್ದಿಕೊಂಡು, ಇಷ್ಟದೈವದ ಗುಡಿಗೆ ನಡೆಮಡಿಯಾಗಿ ತಮ್ಮ ಬದುಕನ್ನೇ ಅರ್ಪಿಸಿಕೊಂಡ ಬಸವಣ್ಣನವರು, ಸಂಸಾರ, ರಾಜ್ಯದ ಪ್ರಭುತ್ವ ಮತ್ತು ಸಾಮಾಜಿಕ ಜವಾಬ್ದಾರಿಗಳ ನಡುವೆಯೂ ಲಿಂಗದ ಮೆಚ್ಚುಗೆಗೆ ಪಾತ್ರವಾಗುವಂತೆ ಬದುಕಿದ ಮಹಾನ್ ಶರಣರು ಎಂದು ಕವಿತೆಯ ಆಶಯವನ್ನು ವಿವರಿಸಿದರು.
‘ಇಲ್ಲಿ ಸಲ್ಲದ್ದು ಅಲ್ಲಿಯೂ ಸಲ್ಲುವಂತೆ ಬದುಕಿದವ ನೀನು, ಸಂಗನ ಮುಂದೆ ಕರ್ಪೂರದ ಉರಿಯಂತೆ ಬದುಕಿದವ’ ಎಂಬ ಸಾಲುಗಳು ಬಸವಣ್ಣನವರ ಬದುಕಿನ ಸಾರವನ್ನು ಹಿಡಿದಿಟ್ಟಿವೆ. ಅವರ ಜೀವನ ಕೇವಲ ಧಾರ್ಮಿಕ ಚಿಂತನೆಯಾಗಿರಲಿಲ್ಲ, ಅದು ಮಾನವೀಯತೆ, ಪ್ರಾಮಾಣಿಕತೆ, ಸಮಾನತೆ ಮತ್ತು ಆತ್ಮಶುದ್ಧಿಯ ಜೀವಂತ ಮಾದರಿಯಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೋಮಿನಕೊಪ್ಪದ ಮುಖಂಡರಾದ ಎಂ. ಚಂದ್ರಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಹೊಳಲೂರಿನ ಮುಖಂಡರಾದ ಕಲ್ಯಾಣಪ್ಪನವರು, ಲವಕುಮಾರಸ್ವಾಮಿ ಎನ್.ಎಸ್, ಬಸವರಾಜಪ್ಪ ಎಂ, ಕುಮಾರ್ ವೈ.ಎಂ., ಬಸವರಾಜಪ್ಪ ಎಲ್.ಹೆಚ್, ಜಿ.ಸಿ. ಹಿರೇಮಠ್, ಶ್ರೀಮತಿ ಮಮತ, ಶ್ರೀಮತಿ ಸುಧಾ, ಸೇರಿದಂತೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಹಾಗೂ ತಾಲ್ಲೂಕು ಕದಳಿ ಮಹಿಳಾ ವೇದಿಕೆ, ಶಿವಮೊಗ್ಗದ ಪದಾಧಿಕಾರಿಗಳು ಮತ್ತು ಸೋಮಿನಕೊಪ್ಪದ ಗ್ರಾಮಸ್ಥರು ಉಪಸ್ಥಿತರಿದ್ದರು.










