ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕನ್ನಡದ ಭಾಷಾ-ಸಾಂಸ್ಕೃತಿಕ ವೈಭವಕ್ಕೆ ಬಸವಣ್ಣನವರ ಕೊಡುಗೆ ಅಪಾರ; ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆಗೆ ಅವರೇ ಅಸ್ಮಿತೆ: ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು

On: November 19, 2026 1:54 PM
Follow Us:

ಶಿವಮೊಗ್ಗ: ಒಂದು ಭಾಷೆಯ ಶ್ರೇಷ್ಠತೆ ಅದರ ಅಕ್ಷರಗಳಲ್ಲಷ್ಟೇ ಇರುವುದಿಲ್ಲ, ಆ ಭಾಷೆಯ ಮೂಲಕ ರೂಪುಗೊಂಡ ಬದುಕಿನ ಮೌಲ್ಯಗಳು, ಸಂಸ್ಕೃತಿ, ಸಾಹಿತ್ಯ, ಆಧ್ಯಾತ್ಮಿಕ ಚಿಂತನೆ ಮತ್ತು ಮಾನವೀಯ ಸಂಬಂಧಗಳಲ್ಲಿ ಅಡಗಿರುತ್ತದೆ. ಕನ್ನಡ ಭಾಷೆಗೆ ಇಂತಹ ವಿಶಿಷ್ಟ ಅಸ್ಮಿತೆಯನ್ನು ತಂದುಕೊಟ್ಟವರು ವಿಶ್ವಗುರು ಬಸವಣ್ಣನವರು ಮತ್ತು ಬಸವಾದಿ ಶರಣರು. ಆಡುಭಾಷೆಯನ್ನೇ ತತ್ವಪ್ರತಿಪಾದನೆಯ ಮಾಧ್ಯಮವಾಗಿಸಿ, ಸಾಮಾನ್ಯ ಜನರ ಬದುಕಿನ ಅನುಭವಗಳನ್ನೇ ವಚನಗಳ ಮೂಲಕ ವಿಶ್ವಮಟ್ಟದ ಚಿಂತನೆಯಾಗಿ ರೂಪಿಸಿದ ಶರಣ ಪರಂಪರೆ ಕನ್ನಡದ ಹೆಮ್ಮೆಯಾಗಿದೆ ಎಂದು ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು ತಿಳಿಸಿದರು.

ನಗರದ ಸವಳಂಗ ರಸ್ತೆ, ನವುಲೆಯಲ್ಲಿರುವ ಶ್ರೀ ಯಗಟಿ ಮಲ್ಲಿಕಾರ್ಜುನ ಟ್ರೇಡರ್ಸ್‌ನ ಮಾಲೀಕರಾದ ಸೇವಾರ್ಥಿ ಕೆ.ಡಿ. ರುದ್ರೇಶ್ ಮತ್ತು ಕುಟುಂಬದವರ ನಿವಾಸದ ಆವರಣದಲ್ಲಿ ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು ಹಾಗೂ ಬಸವಕೇಂದ್ರ, ಶಿವಮೊಗ್ಗ ಇವರ ಆಶ್ರಯದಲ್ಲಿ ಆಯೋಜಿಸಿದ್ದ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮದ ಆರನೇ ದಿನದಂದು ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಯಾರಿಗಾದರೂ ನಾವು ನಮಸ್ಕಾರ ಮಾಡಿದಾಗ ಅವರು ಪ್ರತಿಯಾಗಿ ನಮಸ್ಕರಿಸುವುದು ನಮ್ಮ ಸಂಸ್ಕೃತಿ. ಅದೇ ರೀತಿ ಯಾರಾದರೂ ಶರಣು ಎಂದಾಗ ನಾವು ಕೂಡ ಶರಣು ಶರಣಾರ್ಥಿ ಎಂದು ಪ್ರತಿಕ್ರಿಯಿಸಬೇಕು. ಶರಣು ಎಂದವರಿಗೆ ಚಪ್ಪಾಳೆ ತಟ್ಟುವುದಲ್ಲ, ಪ್ರತಿಯಾಗಿ ಶರಣು ಎನ್ನುವುದು ನಮ್ಮ ಸಂಸ್ಕಾರದ ಭಾಗವಾಗಬೇಕು. ಇಂತಹ ಸಣ್ಣ ಸಣ್ಣ ಆಚರಣೆಗಳೇ ಶರಣ ಸಂಸ್ಕೃತಿಯನ್ನು ಜೀವಂತವಾಗಿಡುತ್ತವೆ. ಪ್ರತಿಯೊಬ್ಬರೂ ಇದನ್ನು ತಮ್ಮ ನಿತ್ಯದ ಬದುಕಿನಲ್ಲಿ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸೇವಾರ್ಥಿಗಳಾದ ಕೆ.ಡಿ. ರುದ್ರೇಶ್ ಮತ್ತು ರೂಪ ದಂಪತಿಗಳು ತಮ್ಮ 19ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ಚಿಂತನ ಕಾರ್ತಿಕದೊಂದಿಗೆ ಅರ್ಥಪೂರ್ಣವಾಗಿ ಆಚರಿಸುತ್ತಿರುವುದನ್ನು ಬಸವಕೇಂದ್ರ ಶ್ರೀಗಳು ವಿಶೇಷವಾಗಿ ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಅವರ ನಿವಾಸದ ಗೃಹಪ್ರವೇಶವಾಗಿ ಮೂರು ವರ್ಷಗಳು ಪೂರ್ಣಗೊಂಡಿರುವುದನ್ನೂ ಸ್ಮರಿಸಿದರು. ಮೂರು ವರ್ಷಗಳ ಹಿಂದೆ ಇದೇ ಮನೆಗೆ ಆಗಮಿಸಿ ಪಾದಪೂಜೆ ಸ್ವೀಕರಿಸಿ, ಶಿವಾನುಭವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೆನಪುಗಳನ್ನು ಹಂಚಿಕೊಂಡರು.

ವಿವಾಹ ವಾರ್ಷಿಕೋತ್ಸವ ಹಾಗೂ ಗೃಹಪ್ರವೇಶದ ಸ್ಮರಣೀಯ ಸಂದರ್ಭಗಳನ್ನು ಆಧ್ಯಾತ್ಮಿಕ ಚಿಂತನೆಯೊಂದಿಗೆ ಬೆಸೆದು ಚಿಂತನ ಕಾರ್ತಿಕ ಆಯೋಜಿಸಿರುವುದು ಪ್ರಶಂಸನೀಯ. ರುದ್ರೇಶ್ ಮತ್ತು ರೂಪ ದಂಪತಿಗಳಿಗೆ ದೇವರು ನೂರಾರು ವರ್ಷಗಳ ಕಾಲ ಅನ್ಯೋನ್ಯತೆ, ಆರೋಗ್ಯ, ಸಂತೋಷ ಹಾಗೂ ಸಮೃದ್ಧಿಯ ಬದುಕನ್ನು ಕರುಣಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಡಾ. ಚಿದಾನಂದ ಎನ್.ಕೆ. ಅವರು ‘ಕನ್ನಡದ ಅಸ್ಮಿತೆ ಬಸವಣ್ಣ‘ ಎಂಬ ವಿಷಯದ ಕುರಿತು ಅತ್ಯಂತ ಪರಿಣಾಮಕಾರಿಯಾಗಿ ಮಾತನಾಡಿದ್ದು, ಅವರ ಉಪನ್ಯಾಸದ ಆಳ ಮತ್ತು ವಿಸ್ತಾರವನ್ನು ಬಸವಕೇಂದ್ರ ಶ್ರೀಗಳು ಪ್ರಶಂಸಿಸಿದರು.

ಕನ್ನಡದ ಅಸ್ಮಿತೆ ಎಂದರೇನು? ಬಸವಣ್ಣನವರು ಕನ್ನಡದ ಅಸ್ಮಿತೆಯಾಗುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಸಾವಿರಾರು ಪುಟಗಳ ಸಾಹಿತ್ಯ ಸೃಷ್ಟಿಯಾಗುವಷ್ಟು ವಿಶಾಲವಾದ ವಿಷಯವಿದು. ಇಂತಹ ಗಹನವಾದ ವಿಚಾರವನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳ ಉದಾಹರಣೆಗಳೊಂದಿಗೆ ಡಾ. ಚಿದಾನಂದ ಅವರು ವಿವರಿಸಿದ್ದಾರೆ. ಅರ್ಧಗಂಟೆಗೂ ಹೆಚ್ಚು ಕಾಲ ಉಪನ್ಯಾಸ ನಡೆದರೂ ಸಮಯ ಕಳೆದಿದ್ದೇ ತಿಳಿಯದಷ್ಟು ಆಕರ್ಷಕವಾಗಿ ವಿಷಯ ಮಂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಚಿದಾನಂದ ಅವರು ಶಿಕ್ಷಕರಿಗೆ ಬೋಧನೆಯ ಕೌಶಲ ಕಲಿಸುವ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರ ಮಾತಿನಲ್ಲಿರುವ ಸ್ಪಷ್ಟತೆ, ವಿಷಯದ ಮೇಲಿನ ಹಿಡಿತ ಹಾಗೂ ಹಾಸ್ಯದ ಮೂಲಕ ಗಂಭೀರ ವಿಚಾರಗಳನ್ನು ಮನದಟ್ಟು ಮಾಡುವ ಸಾಮರ್ಥ್ಯ ಉಪನ್ಯಾಸದಲ್ಲಿ ಸ್ಪಷ್ಟವಾಗಿ ವ್ಯಕ್ತವಾಯಿತು ಎಂದರು.

ಮಾತೃಭಾಷೆಯ ಶಕ್ತಿಯನ್ನು ವಿವರಿಸಿದ ಬಸವಕೇಂದ್ರ ಶ್ರೀಗಳು, ಪ್ರತಿಯೊಬ್ಬ ಮನುಷ್ಯನ ಭಾವನೆಗಳು ಅತ್ಯಂತ ಸಹಜವಾಗಿ ಹೊರಹೊಮ್ಮುವುದು ತನ್ನ ತಾಯ್ನುಡಿಯಲ್ಲಿಯೇ. ಯಾರಾದರೂ ಅನಿರೀಕ್ಷಿತವಾಗಿ ಹೊಡೆದರೆ ವ್ಯಕ್ತಿಯ ಬಾಯಿಂದ ಸಹಜವಾಗಿ ಹೊರಬರುವ ಪ್ರತಿಕ್ರಿಯೆ ಮಾತೃಭಾಷೆಯಲ್ಲಿರುತ್ತದೆ. ಕನಸಿನಲ್ಲಿಯೂ ಬಹುತೇಕರು ತಮ್ಮ ಮಾತೃಭಾಷೆಯಲ್ಲಿಯೇ ಆಲೋಚಿಸುತ್ತಾರೆ. ತೀವ್ರವಾದ ಸಂತೋಷ, ನೋವು, ಕೋಪ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವಾಗ ಮಾತೃಭಾಷೆಯೇ ಸಹಜ ಮಾಧ್ಯಮವಾಗುತ್ತದೆ ಎಂದು ಹೇಳಿದರು.

ಭಾಷೆ ದೊಡ್ಡದು, ಚಿಕ್ಕದು ಎಂಬ ಭೇದ ಮಾಡುವುದು ಸರಿಯಲ್ಲ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಶಕ್ತಿ ಮತ್ತು ಸತ್ವವಿದೆ. ದೇವರು ಭಾಷೆಯನ್ನು ನೋಡಿ ಒಲಿಯುವುದಿಲ್ಲ, ಭಕ್ತನ ಭಾವನೆಯನ್ನು ನೋಡಿ ಒಲಿಯುತ್ತಾನೆ. ಮೂಕರಿಗೂ ದೇವರ ಅನುಗ್ರಹ ದೊರೆಯುತ್ತದೆ ಎಂದಾದರೆ ದೇವರನ್ನು ಒಲಿಸಿಕೊಳ್ಳಲು ನಿರ್ದಿಷ್ಟ ಭಾಷೆಯೇ ಬೇಕು ಎಂಬ ನಿಯಮ ಹೇಗೆ ಸಾಧ್ಯ? ಪ್ರತಿಯೊಂದು ಭಾಷೆಯೂ ತನ್ನದೇ ಆದ ಮಹತ್ವ ಹೊಂದಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಸಂಸ್ಕೃತದ ಛಂದೋಬದ್ಧ ಕಾವ್ಯಗಳು ಮತ್ತು ಹಳೆಗನ್ನಡದ ಸಾಹಿತ್ಯವನ್ನು ಅರ್ಥಮಾಡಿಕೊಳ್ಳಲು ವಿಶೇಷ ಭಾಷಾ ಜ್ಞಾನ ಬೇಕಾಗಬಹುದು. ಆದರೆ ಬಸವಣ್ಣನವರ ವಚನಗಳು ಜನಸಾಮಾನ್ಯರ ಆಡುಭಾಷೆಯಲ್ಲಿರುವುದರಿಂದ ಎಲ್ಲರಿಗೂ ಸುಲಭವಾಗಿ ಅರ್ಥವಾಗುತ್ತವೆ. ಇದಕ್ಕೆ ‘ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ‘ ಎಂಬ ವಚನವೇ ಸಾಕ್ಷಿ. ಈ ವಚನದ ಆಶಯವನ್ನು ಅರ್ಥಮಾಡಿಕೊಳ್ಳಲು ವಿಶೇಷ ಪಾಂಡಿತ್ಯದ ಅಗತ್ಯವಿಲ್ಲ. ಪ್ರತಿಯೊಬ್ಬರ ಮನಸ್ಸಿಗೂ ಅದರ ಮಾನವೀಯ ಸಂದೇಶ ತಲುಪುತ್ತದೆ ಎಂದು ವಿವರಿಸಿದರು.

ಆಡುಭಾಷೆಯನ್ನೇ ಧರ್ಮದ ಭಾಷೆಯನ್ನಾಗಿ, ದೇವರ ಭಾಷೆಯನ್ನಾಗಿ ಹಾಗೂ ತತ್ವಪ್ರತಿಪಾದನೆಯ ಮಾಧ್ಯಮವನ್ನಾಗಿ ರೂಪಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಇದೇ ಕನ್ನಡದ ವಿಶಿಷ್ಟ ಅಸ್ಮಿತೆಯಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯದ ಮಹಾನ್ ಕವಿಗಳಾದ ಪಂಪ, ಪೊನ್ನ, ರನ್ನ, ಜನ್ನ, ಶ್ರೀವಿಜಯ, ನೃಪತುಂಗ ಮತ್ತು ಕುಮಾರವ್ಯಾಸರು ಕನ್ನಡದ ಅಸ್ಮಿತೆಯನ್ನು ಶ್ರೀಮಂತಗೊಳಿಸಿದ ಮಹನೀಯರು. ಅವರ ಸಾಹಿತ್ಯ ಕನ್ನಡದ ಹೆಮ್ಮೆಯಾಗಿದೆ. ಆದರೆ ಬಸವಣ್ಣನವರ ವಿಶೇಷತೆ ಏನೆಂದರೆ, ಅವರು ಕೇವಲ ಒಬ್ಬ ವ್ಯಕ್ತಿಯಾಗಿ ನಿಂತವರಲ್ಲ. ಅವರ ಸುತ್ತಲೂ 770 ಅಮರಗಣಗಳ ಮಹಾಸಮೂಹವಿತ್ತು. ಅವರಲ್ಲಿ ಸುಮಾರು 250ರಿಂದ 300 ವಚನಕಾರರ ವಚನಗಳು ನಮಗೆ ಲಭ್ಯವಾಗಿವೆ.

ಬಸವಣ್ಣನವರು ಒಬ್ಬರೇ ಸಾಹಿತ್ಯ ರಚಿಸುವುದಕ್ಕಿಂತ ಸಮಾಜದ ವಿವಿಧ ವರ್ಗಗಳ ಜನರಿಗೆ ಅಭಿವ್ಯಕ್ತಿಯ ಸ್ವಾತಂತ್ರ್ಯ ನೀಡಿದರು. ಅವರ ಅನುಭವ, ಆಲೋಚನೆ ಮತ್ತು ಬದುಕಿನ ಸತ್ಯಗಳನ್ನು ವಚನಗಳ ಮೂಲಕ ದಾಖಲಿಸುವ ವಾತಾವರಣ ಸೃಷ್ಟಿಸಿದರು. ಹೀಗೆ ಒಂದು ಸಮುದಾಯವನ್ನೇ ಸಾಹಿತ್ಯ ಸೃಷ್ಟಿಯ ಭಾಗವಾಗಿಸಿದ ಮಹಾನ್ ಕಾರ್ಯವನ್ನು ಬಸವಣ್ಣನವರು ಮಾಡಿದರು.

ಇಂದು ನಮಗೆ 22,000ಕ್ಕೂ ಅಧಿಕ ವಚನಗಳು ಲಭ್ಯವಾಗಿವೆ. ಈ ವಚನಗಳ ಭಾಷಾ ಸೌಂದರ್ಯ, ತಾತ್ವಿಕ ಆಳ ಮತ್ತು ಸಾಮಾಜಿಕ ಕಾಳಜಿ ಶರಣರು ಕನ್ನಡ ಭಾಷೆಯನ್ನು ಎಷ್ಟು ಸಮರ್ಥವಾಗಿ ಬಳಸಿಕೊಂಡಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಶರಣ ಪರಂಪರೆಯಲ್ಲಿ ಮಹಿಳೆಯರ ಕೊಡುಗೆಯನ್ನು ವಿವರಿಸಿದ ಬಸವಕೇಂದ್ರ ಶ್ರೀಗಳು, ಸುಮಾರು 35ರಿಂದ 36 ಮಹಿಳಾ ವಚನಕಾರ್ತಿಯರು ವಚನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಭತ್ತ ಕುಟ್ಟಿ ಅಕ್ಕಿ ಮಾಡುವ ಕಾಯಕದಲ್ಲಿ ತೊಡಗಿದ್ದ ಕೊಟ್ಟಣದ ಸೋಮವ್ವೆಯ ಉದಾಹರಣೆ ನೀಡಿದ ಅವರು, ಆಕೆಯ ಒಂದೇ ಒಂದು ವಚನದಲ್ಲಿರುವ ಜೀವನದರ್ಶನವನ್ನು ವಿವರಿಸಿದರು.

‘ಹದ ತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ.
ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ.
ಅರಿಯದುದು ಹೋಗಲಿ, ಅರಿದು ಬೆರೆದೆನಾದೊಡೆ
ಕಾದಕತ್ತಿಯಲಿ ಕಿವಿಯ ಕೊಯ್ವರಯ್ಯಾ!
ಒಲ್ಲೆಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ.’

ಎಂಬ ಆಕೆಯ ವಚನ ಕೇವಲ ಭತ್ತ ಕುಟ್ಟುವ ಪ್ರಕ್ರಿಯೆಯ ವಿವರಣೆಯಲ್ಲ. ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಮನುಷ್ಯ ಹದ ಕಾಯ್ದುಕೊಳ್ಳಬೇಕು ಎಂಬ ದೊಡ್ಡ ಸಂದೇಶ ಅದರಲ್ಲಿದೆ. ಆಹಾರ, ನಿದ್ರೆ, ಮಾತು, ನಡೆ-ನುಡಿ, ಸಂಬಂಧ ಹಾಗೂ ಕಾಯಕ ಎಲ್ಲದರಲ್ಲಿಯೂ ಮಿತಿಯಿರಬೇಕು. ಹದ ತಪ್ಪಿದರೆ ಬದುಕಿನ ಸಮತೋಲನ ಕಳೆದುಹೋಗುತ್ತದೆ ಎಂಬ ತತ್ವವನ್ನು ಒಬ್ಬ ಸಾಮಾನ್ಯ ಮಹಿಳೆ ತನ್ನ ಕಾಯಕದ ಅನುಭವದಿಂದಲೇ ಕಟ್ಟಿಕೊಟ್ಟಿದ್ದಾಳೆ.

ಇಂತಹ ಅನುಭವದ ಮಾತುಗಳನ್ನು ವಚನಗಳಾಗಿ ರೂಪಿಸಲು ಬಸವಣ್ಣನವರು ಸಾಮಾನ್ಯ ಜನರಿಗೆ ನೀಡಿದ ಅವಕಾಶವೇ ಕಾರಣ. ಅಕ್ಷರ ಜ್ಞಾನವಿಲ್ಲದವರಲ್ಲಿಯೂ ಅಪಾರವಾದ ಜೀವನಜ್ಞಾನ ಮತ್ತು ತಾತ್ವಿಕ ಚಿಂತನೆ ಇರುತ್ತದೆ ಎಂಬುದನ್ನು ಶರಣರು ಜಗತ್ತಿಗೆ ತೋರಿಸಿಕೊಟ್ಟರು ಎಂದು ಹೇಳಿದರು.

ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳನ್ನು ವಿವರಿಸಿದ ಶ್ರೀಗಳು, ಕೆಲಸ ಎಂಬ ಪದಕ್ಕೆ ಇಂಗ್ಲಿಷ್‌ನಲ್ಲಿ ವರ್ಕ್, ಸಂಸ್ಕೃತದಲ್ಲಿ ಕರ್ಮ ಮುಂತಾದ ಪದಗಳಿವೆ. ಆದರೆ ಕಾಯಕ ಎಂಬ ಪದದ ಹಿಂದೆ ಇರುವ ಶ್ರಮದ ಗೌರವ, ಪ್ರಾಮಾಣಿಕತೆ, ಆತ್ಮಗೌರವ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಒಂದೇ ಪದದಲ್ಲಿ ಸಂಪೂರ್ಣವಾಗಿ ವ್ಯಕ್ತಪಡಿಸುವುದು ಸುಲಭವಲ್ಲ. ಕಾಯಕಕ್ಕೆ ವಿಶಿಷ್ಟ ತಾತ್ವಿಕ ಅರ್ಥವನ್ನು ನೀಡಿದವರು ಬಸವಾದಿ ಶರಣರು ಎಂದು ಹೇಳಿದರು.

ಅದೇ ರೀತಿ ದಾಸೋಹ ಎಂದರೆ ಕೇವಲ ದಾನ ಮಾಡುವುದಲ್ಲ. ತಾನು ಸಂಪಾದಿಸಿದುದನ್ನು ಸಮಾಜದೊಂದಿಗೆ ಹಂಚಿಕೊಳ್ಳುವುದು, ಕೊಟ್ಟೆ ಎಂಬ ಅಹಂಕಾರವಿಲ್ಲದೆ ಇತರರೊಂದಿಗೆ ಹಂಚಿಕೊಂಡು ಬದುಕುವುದು ನಿಜವಾದ ದಾಸೋಹದ ತತ್ವವಾಗಿದೆ.

ಇಷ್ಟಲಿಂಗವನ್ನು ಎದೆಯ ಮೇಲೆ ಧರಿಸಿ, ತನ್ನ ಅಂಗದ ಮೇಲೆಯೇ ದೇವರನ್ನು ಪ್ರತಿಷ್ಠಾಪಿಸಿಕೊಂಡು ತಾನೇ ಪೂಜಿಸುವ ಪದ್ಧತಿ ಶರಣ ಧರ್ಮದ ವಿಶಿಷ್ಟತೆಯಾಗಿದೆ. ಇಲ್ಲಿ ದೇವರು ಮತ್ತು ಭಕ್ತನ ನಡುವೆ ಮಧ್ಯವರ್ತಿಯ ಅಗತ್ಯವಿಲ್ಲ. ವ್ಯಕ್ತಿಯ ದೇಹ, ಬದುಕು ಮತ್ತು ಭಕ್ತಿಯೇ ಪೂಜೆಯ ಮಾಧ್ಯಮವಾಗುತ್ತವೆ. ಸ್ನಾನ ಮಾಡುವಾಗ ದೇವರಿಗೆ ಅಭಿಷೇಕ, ಊಟ ಮಾಡುವಾಗ ನೈವೇದ್ಯ, ನಡೆಯುವಾಗ ದೇವರ ಮೆರವಣಿಗೆ ಎಂಬ ಆಧ್ಯಾತ್ಮಿಕ ಕಲ್ಪನೆ ಬದುಕನ್ನೇ ಧಾರ್ಮಿಕ ಅನುಭವವನ್ನಾಗಿ ಪರಿವರ್ತಿಸುತ್ತದೆ ಎಂದು ವಿವರಿಸಿದರು.

ಬಸವಣ್ಣನವರ ತತ್ವಗಳು ಕೇವಲ ವಚನಗಳಲ್ಲೋ, ಧಾರ್ಮಿಕ ಕಾರ್ಯಕ್ರಮಗಳಲ್ಲೋ ಸೀಮಿತವಾಗಿಲ್ಲ. ನಮ್ಮ ಮನೆಗಳ ದೈನಂದಿನ ಬದುಕಿನಲ್ಲಿಯೂ ಅವು ಬೆರೆತುಹೋಗಿವೆ ಎಂಬುದನ್ನು ಶ್ರೀಗಳು ಉದಾಹರಣೆಗಳ ಮೂಲಕ ತಿಳಿಸಿದರು.

ಹಿಂದಿನ ಕಾಲದಲ್ಲಿ ರಾತ್ರಿ ಮಲಗುವ ಮುನ್ನ ಮನೆಯ ಹಿರಿಯರು ಅಡುಗೆ ಪಾತ್ರೆಗಳನ್ನು ಸಂಪೂರ್ಣ ಖಾಲಿ ಮಾಡದೆ, ಒಬ್ಬರಿಗೆ ಆಗುವಷ್ಟು ಅನ್ನವನ್ನಾದರೂ ಉಳಿಸಿಡುವಂತೆ ಹೇಳುತ್ತಿದ್ದರು. ರಾತ್ರಿ ಹೊತ್ತಿನಲ್ಲಿ ಹಸಿದವರು ಮನೆ ಬಾಗಿಲಿಗೆ ಬಂದರೆ ಅವರಿಗೆ ಊಟ ನೀಡಲು ಸಾಧ್ಯವಾಗಬೇಕು ಎಂಬುದು ಅದರ ಹಿಂದಿನ ಆಶಯವಾಗಿತ್ತು.

ಇದು ಕೇವಲ ಆಹಾರ ಉಳಿಸುವ ಪದ್ಧತಿಯಲ್ಲ, ಹಸಿದವರನ್ನು ಬರಿಗೈಯಲ್ಲಿ ಕಳುಹಿಸಬಾರದು ಎಂಬ ದಾಸೋಹದ ಮನೋಭಾವ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಸಾರಿದ ಮಾನವೀಯ ಮೌಲ್ಯಗಳು ನಮ್ಮ ಮನೆಗಳ ಅಡುಗೆ ಮನೆಯವರೆಗೂ ತಲುಪಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.

ಸಾಮೂಹಿಕ ಪ್ರಸಾದ ಸ್ವೀಕಾರಕ್ಕೂ ವಿಶೇಷ ಅರ್ಥವಿದೆ. ಎಲ್ಲರಿಗೂ ಊಟ ಬಡಿಸಿದ ಬಳಿಕ ಕರ್ಪೂರ ಹಚ್ಚಿ ಸಾಷ್ಟಾಂಗ ನಮಸ್ಕಾರ ಮಾಡುವ ಸಂಪ್ರದಾಯದ ಹಿಂದೆ ಅಹಂಕಾರವನ್ನು ತ್ಯಜಿಸುವ ಭಾವವಿದೆ. ನಾನು ಅಡುಗೆ ಮಾಡಿಸಿದೆ, ನಾನು ನಿಮಗೆ ಊಟ ನೀಡುತ್ತಿದ್ದೇನೆ ಎಂಬ ಭಾವ ಇರಬಾರದು. ಶಿವಸ್ವರೂಪಿಗಳಾದ ನಿಮಗೆ ದೇವರು ನೀಡಿದ ಪ್ರಸಾದವನ್ನು ನಾನು ಹಂಚುತ್ತಿದ್ದೇನೆ ಎಂಬ ವಿನಯ ಇರಬೇಕು. ಕರ್ಪೂರ ಉರಿದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವಂತೆ, ನನ್ನಿಂದಲೇ ಎಲ್ಲವೂ ಆಯಿತು ಎಂಬ ಅಹಂಕಾರವೂ ಕರಗಿಹೋಗಬೇಕು ಎಂಬ ಸಂದೇಶ ಅದರಲ್ಲಿದೆ ಎಂದು ಹೇಳಿದರು.

ಬಸವಣ್ಣನವರಿಗಿಂತ ಹಿಂದೆಯೂ ಕನ್ನಡದಲ್ಲಿ ಪಂಪ, ರನ್ನ, ಜನ್ನ, ಕುಮಾರವ್ಯಾಸ ಸೇರಿದಂತೆ ಅನೇಕ ಮಹಾನ್ ಕವಿಗಳು ಅದ್ಭುತ ಸಾಹಿತ್ಯವನ್ನು ರಚಿಸಿದ್ದರು. ಆದರೆ ಆ ಕಾಲದ ಬಹುತೇಕ ಕಾವ್ಯಗಳ ವಸ್ತು ರಾಮಾಯಣ, ಮಹಾಭಾರತ ಮತ್ತು ಜೈನ ಪುರಾಣಗಳ ಕಥನಗಳ ಸುತ್ತ ಕೇಂದ್ರೀಕೃತವಾಗಿತ್ತು.

ವಚನ ಸಾಹಿತ್ಯದ ಪ್ರಭಾವದ ನಂತರ ಕನ್ನಡ ಸಾಹಿತ್ಯದ ವಸ್ತು ಮತ್ತು ನಾಯಕತ್ವದ ಕಲ್ಪನೆಯಲ್ಲಿಯೇ ಮಹತ್ವದ ಬದಲಾವಣೆಯಾಯಿತು. ಹರಿಹರನಂತಹ ಕವಿಗಳು ರಗಳೆ ಛಂದಸ್ಸಿನಲ್ಲಿ ಶಿವಭಕ್ತರ ಬದುಕನ್ನು ಕಾವ್ಯದ ವಸ್ತುವಾಗಿಸಿಕೊಂಡರು. ಮಾದಾರ ಚೆನ್ನಯ್ಯ, ಅಕ್ಕಮಹಾದೇವಿ, ಕೋಳೂರು ಕೊಡಗೂಸು, ಸಿದ್ಧರಾಮೇಶ್ವರ, ಬಸವಣ್ಣ ಮತ್ತು ಅಲ್ಲಮಪ್ರಭು ಮೊದಲಾದವರು ಕಾವ್ಯಗಳ ನಾಯಕರಾದರು.

ಸಮಾಜದ ಸಾಮಾನ್ಯ ವರ್ಗದವರು, ಕಾಯಕಜೀವಿಗಳು, ಮಹಿಳೆಯರು ಮತ್ತು ಶರಣರು ಸಾಹಿತ್ಯದ ಕೇಂದ್ರಬಿಂದುವಾದರು. ಈ ಬದಲಾವಣೆಗೆ ಪ್ರೇರಣೆಯಾದದ್ದು ವಚನ ಪರಂಪರೆ. ಸಾಹಿತ್ಯದಲ್ಲಿ ಯಾರು ನಾಯಕನಾಗಬಹುದು ಎಂಬ ಕಲ್ಪನೆಯನ್ನೇ ವಿಸ್ತರಿಸಿದ ಶರಣರ ಕೊಡುಗೆ ಕನ್ನಡದ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ್ದಾಗಿದೆ ಎಂದು ಶ್ರೀಗಳು ತಿಳಿಸಿದರು.

ಕುಮಾರವ್ಯಾಸನ ಕಾವ್ಯದಲ್ಲಿ ರಾಜನ ಆಡಳಿತವನ್ನು ಪ್ರಶ್ನಿಸುವ ರೀತಿಯೂ ಇಂದಿನ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಪ್ರಸ್ತುತವಾಗಿದೆ. ಅಧಿಕಾರಿಗಳು ಜನರನ್ನು ಶೋಷಿಸುತ್ತಿದ್ದಾರೆಯೇ? ಆಡಳಿತದಲ್ಲಿ ಜನರಿಗೆ ನೆಮ್ಮದಿ ಇದೆಯೇ? ಎಂಬ ಪ್ರಶ್ನೆಗಳನ್ನು ಸಾಹಿತ್ಯದ ಮೂಲಕವೇ ಮುಂದಿಡುವ ಶಕ್ತಿ ಕನ್ನಡ ಕಾವ್ಯಕ್ಕಿತ್ತು ಎಂದರು.

ಕನ್ನಡದ ವಚನ ಸಾಹಿತ್ಯದ ಜಾಗತಿಕ ಪ್ರಭಾವವನ್ನು ವಿವರಿಸಿದ ಶ್ರೀಗಳು, ಜರ್ಮನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತೀಯ ಭಾಷೆ ಮತ್ತು ತತ್ವಶಾಸ್ತ್ರದ ಅಧ್ಯಯನದಲ್ಲಿ ತೊಡಗಿರುವ ಪ್ರಾಧ್ಯಾಪಕ ರಾಬರ್ಟ್ ಜೈಡನ್ ಬೋಸ್ ಅವರನ್ನು ಭೇಟಿಯಾದ ಅನುಭವ ಹಂಚಿಕೊಂಡರು.

ಕರ್ನಾಟಕದಲ್ಲಿ ಸುಮಾರು 14 ವರ್ಷಗಳ ಕಾಲ ನೆಲೆಸಿ ಕನ್ನಡ ಭಾಷೆ, ಜೈನ ಸಾಹಿತ್ಯ ಮತ್ತು ಶರಣ ಸಾಹಿತ್ಯವನ್ನು ಅಧ್ಯಯನ ಮಾಡಿರುವ ಅವರು, ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ. ಅವರೊಂದಿಗೆ ಕನ್ನಡದಲ್ಲಿಯೇ ಸುದೀರ್ಘವಾಗಿ ಮಾತನಾಡುವ ಅವಕಾಶ ದೊರೆತಿತ್ತು. ವಚನ ಸಾಹಿತ್ಯದಿಂದ ಪ್ರಭಾವಿತರಾಗಿದ್ದ ಅವರು ಕನ್ನಡದ ವಚನಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿ ಪ್ರಕಟಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು.

ಸಿರಿಗೆರೆ ಜಗದ್ಗುರುಗಳ ಮಾರ್ಗದರ್ಶನದಲ್ಲಿ ರೂಪುಗೊಂಡಿರುವ ವಚನಗಳ ಅಂತರ್ಜಾಲ ತಾಣದಲ್ಲಿ 22,000ಕ್ಕೂ ಅಧಿಕ ವಚನಗಳನ್ನು ಮೊಬೈಲ್ ಮೂಲಕವೇ ಓದುವ ಅವಕಾಶವಿದೆ. ಕನ್ನಡದ ಜೊತೆಗೆ ಹಿಂದಿ, ಮರಾಠಿ, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ವಚನಗಳ ಅನುವಾದ ಮತ್ತು ವಿವರಣೆಗಳು ಲಭ್ಯವಿವೆ. ವಿದೇಶಿ ವಿದ್ವಾಂಸರಿಗೂ ವಚನ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿರುವುದು ಕನ್ನಡದ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಶರಣರ ವಚನ ಸಾಹಿತ್ಯವು ದಾಸ ಪರಂಪರೆಯ ಮೇಲೂ ಆಳವಾದ ಪ್ರಭಾವ ಬೀರಿದೆ ಎಂದು ಬಸವಕೇಂದ್ರ ಶ್ರೀಗಳು ವಿವರಿಸಿದರು.

ಅಕ್ಕಮಹಾದೇವಿಯ ಸ್ವರವಚನಗಳ ಪ್ರೇರಣೆಯಿಂದ ಪುರಂದರದಾಸರು ತಮ್ಮದೇ ಆದ ಭಕ್ತಿಗೀತೆಗಳನ್ನು ರಚಿಸಿರುವುದನ್ನು ಉದಾಹರಿಸಿದರು. ಬಸವಣ್ಣನವರ ವಚನಗಳಲ್ಲಿರುವ ಆಶಯ ಮತ್ತು ರಚನಾ ಮಾದರಿಗಳು ಪುರಂದರದಾಸರ ಕೆಲವು ಕೀರ್ತನೆಗಳಲ್ಲಿಯೂ ಕಾಣಿಸುತ್ತವೆ. ಬಸವಣ್ಣನವರ ‘ಹಾಡಿದಡೆನ್ನೊಡೆಯನ ಹಾಡುವೆ, ಬೇಡಿದೊಡೆ ಎನ್ನೊಡೆಯನ ಬೇಡುವೆ,
ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ.
ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರಗೊಡ್ಡಿ ಬೇಡುವೆ‘

ಎಂಬ ವಚನದ ಆಶಯವನ್ನು ಪುರಂದರದಾಸರು ತಮ್ಮ ‘ಪುರಂದರ ವಿಠ್ಠಲ‘ ಅಂಕಿತದೊಂದಿಗೆ ಬಳಸಿಕೊಂಡಿರುವುದನ್ನು ಉಲ್ಲೇಖಿಸಿದರು.

ಕನ್ನಡದಲ್ಲಿ ಸ್ವರಸಹಿತ ಭಕ್ತಿ ಸಾಹಿತ್ಯದ ಬೆಳವಣಿಗೆಗೆ ಶರಣರ ಸ್ವರವಚನಗಳು ಪ್ರೇರಣೆಯಾಗಿವೆ. ದಾಸ ಪರಂಪರೆ ಸೇರಿದಂತೆ ಹಲವು ಆಧ್ಯಾತ್ಮಿಕ ಪರಂಪರೆಗಳಿಗೂ ಶರಣರ ವಚನ ಸಂಸ್ಕೃತಿ ಪ್ರೇರಕ ಶಕ್ತಿಯಾಗಿದೆ. ಹೀಗಾಗಿ ಬಸವಣ್ಣನವರನ್ನು ಕನ್ನಡದ ಅಸ್ಮಿತೆ ಎಂದು ಕರೆಯುವುದು ಕೇವಲ ಭಾವನಾತ್ಮಕ ಹೇಳಿಕೆಯಲ್ಲ; ಅದಕ್ಕೆ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಇತಿಹಾಸದ ಆಧಾರವಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಬಸವಣ್ಣನವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಧಾರರಹಿತ ಟೀಕೆಗಳನ್ನು ಮಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀಗಳು, ಬಸವಣ್ಣನವರ ತತ್ವ ಮತ್ತು ಸಾಧನೆಯ ಮಹತ್ವವನ್ನು ಅರಿಯದೆ ಅಪಪ್ರಚಾರ ಮಾಡುವವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

ಬಸವಣ್ಣನವರು ದೈಹಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ ಅವರ ವಿಚಾರಗಳು, ವಚನಗಳು ಮತ್ತು ಮಾನವೀಯ ಮೌಲ್ಯಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಯಾರಾದರೂ ಬಸವಣ್ಣನವರ ಕುರಿತು ಅವಹೇಳನಕಾರಿ ವಿಡಿಯೋ ಅಥವಾ ವಿಷಯಗಳನ್ನು ಪ್ರಕಟಿಸಿದರೆ ಅವುಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುವ ಮೂಲಕ ಮತ್ತಷ್ಟು ಜನರಿಗೆ ತಲುಪಿಸಬಾರದು. ಅಂತಹ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವರದಿ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಬೇಕು ಎಂದು ಸಲಹೆ ನೀಡಿದರು.

ಬಸವಣ್ಣನವರ ಅನುಯಾಯಿಗಳೆಂದು ಹೇಳಿಕೊಳ್ಳುವ ನಾವು ಮೊದಲು ಜಾತಿ ಭೇದಗಳನ್ನು ಮೀರಿ ಬದುಕಬೇಕು. ಬಸವಣ್ಣನವರ ಹೆಸರನ್ನು ಹೇಳಿಕೊಂಡು ಜಾತಿಯ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವುದು ಅವರ ತತ್ವಗಳಿಗೆ ಮಾಡುವ ಅವಮಾನ. ಈ ಮನೋಭಾವದಿಂದ ಹೊರಬಂದು ಸಮಾನತೆ ಮತ್ತು ಮಾನವೀಯತೆಯ ಹಾದಿಯಲ್ಲಿ ನಡೆಯಬೇಕು ಎಂದು ಬಸವಕೇಂದ್ರ ಶ್ರೀಗಳು ಕರೆ ನೀಡಿದರು.

ಡಿಜೆ ಸಂಸ್ಕೃತಿಯ ಕುರಿತು ಡಾ. ಚಿದಾನಂದ ಅವರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಉಲ್ಲೇಖಿಸಿದ ಶ್ರೀಗಳು, ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಅಸಭ್ಯ ಹಾಡುಗಳು, ಅತಿಯಾದ ಶಬ್ದ ಮತ್ತು ಅನಗತ್ಯ ಆಡಂಬರಕ್ಕೆ ಪ್ರೋತ್ಸಾಹ ನೀಡಬಾರದು ಎಂದರು.

ಗಣಪತಿ ಉತ್ಸವವಾಗಲಿ, ಇತರ ಧಾರ್ಮಿಕ ಕಾರ್ಯಕ್ರಮಗಳಾಗಲಿ ಭಕ್ತಿ ಗೀತೆಗಳು, ಭಜನೆಗಳು ಮತ್ತು ಸಂಸ್ಕೃತಿಗೆ ಪೂರಕವಾದ ಸಂಗೀತಕ್ಕೆ ಆದ್ಯತೆ ನೀಡಬೇಕು. ಡಿಜೆ ಬಳಸುವುದೇ ತಪ್ಪಲ್ಲ. ಆದರೆ ಕಿವಿಗಳಿಗೆ ಹಾನಿಯಾಗುವಷ್ಟು ಅತಿಯಾದ ಶಬ್ದ ಹಾಗೂ ಅಸಭ್ಯ ಹಾಡುಗಳನ್ನು ಬಳಸುವುದು ಸರಿಯಲ್ಲ. ಭಕ್ತಿಯ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ಸಮಾಜಕ್ಕೆ ಗೌರವ ತರುವಂತಿರಬೇಕು. ಧರ್ಮ ಮತ್ತು ಹಿಂದುತ್ವದ ಹೆಸರಿನಲ್ಲಿ ಅನಗತ್ಯ ಗದ್ದಲವನ್ನು ಸಮರ್ಥಿಸಿಕೊಳ್ಳಬಾರದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್.ಎಸ್. ಹಾಲಸ್ವಾಮಿ ಅವರ ಸಾಂಸ್ಕೃತಿಕ ಮತ್ತು ರಂಗಭೂಮಿ ಸೇವೆಯನ್ನು ಶ್ರೀಗಳು ಶ್ಲಾಘಿಸಿದರು. ಅತ್ಯಂತ ಸೂಕ್ಷ್ಮ ಹಾಗೂ ವಿವಾದಾತ್ಮಕ ವಿಷಯಗಳನ್ನೂ ಸಂಘರ್ಷಕ್ಕೆ ಅವಕಾಶವಾಗದಂತೆ ನಾಟಕದ ಮೂಲಕ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಸಾಮರ್ಥ್ಯ ಅವರಲ್ಲಿದೆ. ‘ಕನ್ಯಾದಾನ’ ನಾಟಕವನ್ನು ವಿವಿಧ ಸಮುದಾಯಗಳ ನಡುವೆ ಸಂಘರ್ಷ ಉಂಟಾಗದ ರೀತಿಯಲ್ಲಿ ಪ್ರದರ್ಶಿಸಿ ಯಶಸ್ವಿಗೊಳಿಸಿರುವುದು ಅವರ ನಿರ್ದೇಶನ ಕೌಶಲಕ್ಕೆ ಸಾಕ್ಷಿಯಾಗಿದೆ ಎಂದರು.

ಶಿವಮೊಗ್ಗದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಾಲಸ್ವಾಮಿ ಅವರ ಕೊಡುಗೆ ಮಹತ್ವದ್ದಾಗಿದೆ. ತಮ್ಮ ಸ್ವಂತ ನಿವಾಸದಲ್ಲಿಯೂ ಎರಡು ಬಾರಿ ಚಿಂತನ ಕಾರ್ತಿಕ ಆಯೋಜಿಸಿ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ. 2020ರಲ್ಲಿ ಕೋವಿಡ್ ಸಂದರ್ಭದಲ್ಲಿಯೂ ಅಂತರ್ಜಾಲದ ಮೂಲಕ ಚಿಂತನ ಕಾರ್ತಿಕವನ್ನು ಆಯೋಜಿಸಲು ನೆರವಾಗಿದ್ದರು. ಕಡಿಮೆ ವೆಚ್ಚದಲ್ಲಿ 30 ದಿನಗಳ ಕಾಲ ಕಾರ್ಯಕ್ರಮವನ್ನು ದೂರದರ್ಶನ ಮಾಧ್ಯಮದಲ್ಲಿ ಪ್ರಸಾರಗೊಳಿಸುವಲ್ಲಿ ಸಹಕಾರ ನೀಡಿದ್ದನ್ನು ಸ್ಮರಿಸಿದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರ ಆಸಕ್ತಿ ಹೊಂದಿರುವ ಅ.ಮ. ಶಿವಮೂರ್ತಿ ಅವರನ್ನೂ ಅಭಿನಂದಿಸಿದ ಶ್ರೀಗಳು, ಅವರು ಸಾಹಿತ್ಯ ಓದುವುದರ ಜೊತೆಗೆ ಸೃಜನಶೀಲ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದು, ನಾಟಕ ರಚನೆಯ ಪ್ರಯತ್ನ ಮಾಡುತ್ತಿರುವುದು ಸಂತಸದ ಸಂಗತಿ ಎಂದರು. ಹಿಂದಿನ ಎರಡು ವರ್ಷಗಳಲ್ಲಿ ತಮ್ಮ ನಿವಾಸದಲ್ಲಿ ಚಿಂತನ ಕಾರ್ತಿಕ ಆಯೋಜಿಸಿ ಸಹಕಾರ ನೀಡಿದ್ದನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಸೇವಾರ್ಥಿ ಕೆ.ಡಿ. ರುದ್ರೇಶ್ ಅವರ ಸಹೋದರ ಬೆಳಕಟ್ಟೆ ನಾಗರಾಜ್ ಅವರ ಶ್ರಮ ಮತ್ತು ಸೇವಾಭಾವವನ್ನೂ ಶ್ರೀಗಳು ಪ್ರಶಂಸಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಕುಟುಂಬದ ಎಲ್ಲ ಸದಸ್ಯರು ತೋರಿದ ಆಸಕ್ತಿ ಮತ್ತು ಪರಿಶ್ರಮ ಅಭಿನಂದನೀಯ ಎಂದರು.

ಡಾ. ಚಿದಾನಂದ ಎನ್.ಕೆ. ಅವರ ಪರಿಣಾಮಕಾರಿ ಉಪನ್ಯಾಸ, ಆರ್.ಎಸ್. ಹಾಲಸ್ವಾಮಿ ಅವರ ಸಾಂಸ್ಕೃತಿಕ ಸೇವೆ, ಅ.ಮ. ಶಿವಮೂರ್ತಿ ಅವರ ಸಾಹಿತ್ಯಾಸಕ್ತಿ ಹಾಗೂ ಸೇವಾರ್ಥಿ ಕುಟುಂಬದ ಸಹಕಾರದಿಂದ ಆರನೇ ದಿನದ ಚಿಂತನ ಕಾರ್ತಿಕ ಅರ್ಥಪೂರ್ಣವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

20ನೇ ವರ್ಷದ ಚಿಂತನ ಕಾರ್ತಿಕದ ಮುಂದಿನ ಕಾರ್ಯಕ್ರಮಗಳಿಗೆ ಎಲ್ಲರೂ ಭಾಗವಹಿಸುವಂತೆ ಶ್ರೀಗಳು ಆಹ್ವಾನ ನೀಡಿದರು.

ನವೆಂಬರ್ 19ರಂದು ಮಧ್ಯಾಹ್ನ 3 ಗಂಟೆಗೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕದಳಿ ವನಿತಾ ಸಮಾಜದ ವತಿಯಿಂದ ಕಾರ್ಯಕ್ರಮ ನಡೆಯಲಿದ್ದು, ‘ಬಸವಣ್ಣನವರ ಮೌಲ್ಯಗಳ ಪ್ರಸ್ತುತಿ’ ವಿಷಯದ ಕುರಿತು ಎಂ.ಎನ್. ಸುಂದರರಾಜ್ ಅವರು ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಚಿಂತನ ಕಾರ್ತಿಕದ ಸಮಾರೋಪ ಕಾರ್ಯಕ್ರಮದ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಪ್ರಕಟಿಸಿದರು. ಮೊದಲು ಡಿಸೆಂಬರ್ 12ರಂದು ಸಮಾರೋಪ ಹಾಗೂ ಡಿಸೆಂಬರ್ 13ರಂದು ಗಣಪರ್ವ ನಿಗದಿಪಡಿಸಲಾಗಿತ್ತು. ಸಮಾರೋಪವನ್ನು ವಿಶೇಷವಾಗಿ ಆಯೋಜಿಸುವ ಉದ್ದೇಶದಿಂದ ದಿನಾಂಕ ಬದಲಾಯಿಸಲಾಗಿದ್ದು, ಡಿಸೆಂಬರ್ 14 ಮತ್ತು 15ರಂದು ಎರಡು ದಿನಗಳ ಕಾಲ ಸಮಾರೋಪ ಸಮಾರಂಭ ನಡೆಯಲಿದೆ.

ನಗರದ ಬಸವನಗುಡಿಯಲ್ಲಿರುವ ಸರ್ಕಾರಿ ನೌಕರರ ವಿಕಾಸ ಕೇಂದ್ರದ ಆವರಣದಲ್ಲಿ ಸಮಾರೋಪ ಕಾರ್ಯಕ್ರಮ ಜರುಗಲಿದೆ. ಈ ಸಂದರ್ಭದಲ್ಲಿ ಸಾಣೆಹಳ್ಳಿಯ ಶಿವಸಂಚಾರ ಕಲಾವಿದರಿಂದ ‘ನುಲಿಯ ಚಂದಯ್ಯ’ ಹಾಗೂ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ. ಸಾಹಿತ್ಯ, ಕಲೆ ಮತ್ತು ಆಧ್ಯಾತ್ಮಿಕ ಚಿಂತನೆಗಳ ಸಂಗಮವಾಗಲಿರುವ ಈ ಕಾರ್ಯಕ್ರಮಕ್ಕೆ ಎಲ್ಲರೂ ಕುಟುಂಬ ಸಮೇತರಾಗಿ ಆಗಮಿಸಬೇಕು ಎಂದು ಆಹ್ವಾನಿಸಿದರು.

ಸೇವಾರ್ಥಿ ಕೆ.ಡಿ. ರುದ್ರೇಶ್ ಮತ್ತು ರೂಪ ದಂಪತಿಗಳು, ಅವರ ಕುಟುಂಬದ ಸದಸ್ಯರು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಬಸವಾದಿ ಶರಣರ ಅನುಗ್ರಹ ಸದಾ ಇರಲಿ. ಇನ್ನಷ್ಟು ವರ್ಷಗಳ ಕಾಲ ಇಂತಹ ಅರ್ಥಪೂರ್ಣ ಧಾರ್ಮಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಶಕ್ತಿ ದೊರೆಯಲಿ ಎಂದು ಹಾರೈಸಿದರು.

K.M.Sathish Gowda

Join WhatsApp

Join Now

Facebook

Join Now

Read more

ಭಕ್ತಿಯ ಬೆಳಕಿನಲ್ಲಿ ಕಂಗೊಳಿಸಲಿದೆ ಶ್ರೀ ರಂಭಾಪುರಿ ಪೀಠ; ನ.24ರಂದು ಕಾರ್ತಿಕ ಸಹಸ್ರ ದೀಪೋತ್ಸವದ ಸಂಭ್ರಮ

ಜಾತಿಯ ಸಂಕೋಲೆ ಮುರಿದು ಕಾಯಕಕ್ಕೆ ಘನತೆ ನೀಡಿದ ಬಸವಣ್ಣ; ದುಡಿಮೆಯೇ ಜ್ಞಾನ, ಶ್ರಮವೇ ಶರಣರ ಸಾಧನೆ: ಚನ್ನಯ್ಯ ಬಿ. ಮಾರವಳ್ಳಿ

ಮದುವೆ ಆಡಂಬರಕ್ಕೆ ಕಡಿವಾಣ ಹಾಕಿ, ರೈತನ ಬೆವರಿನ ಅನ್ನಕ್ಕೆ ಗೌರವ ಕೊಡಿ: ಸರಳ ವಿವಾಹಕ್ಕೆ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಕರೆ

ಅಂತರಂಗ ಶುದ್ಧಿಯಾದಾಗಲೇ ಬಹಿರಂಗದ ಬದುಕು ಪವಿತ್ರವಾಗುತ್ತದೆ; ನಡೆ-ನುಡಿಗಳಲ್ಲಿ ಸಾಮರಸ್ಯವೇ ಬಸವಣ್ಣನವರ ಬದುಕಿನ ಸಂದೇಶ: ಬಸನಗೌಡ ಮಾಳಗಿ

ಆಸ್ತಿ-ಅಂತಸ್ತಿಗಿಂತ ಮಾನವೀಯ ಸಂಬಂಧಗಳೇ ದೊಡ್ಡ ಸಂಪತ್ತು; ಬಸವಣ್ಣನವರ ವಚನಗಳಲ್ಲಿ ಬದುಕಿನ ಸಾರ್ಥಕತೆಯ ದರ್ಶನ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ಭಯ ಹುಟ್ಟಿಸುವುದಲ್ಲ ಧರ್ಮ; ದಯೆ, ಸಮಾನತೆ ಮತ್ತು ಕಾಯಕವೇ ಬಸವಣ್ಣನವರ ಧರ್ಮದ ಜೀವಾಳ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

Leave a Comment