ಶಿವಮೊಗ್ಗ: ವೀರಶೈವ-ಲಿಂಗಾಯತ ಸಮಾಜ ಈಗಾಗಲೇ ಜಿಲ್ಲೆಯಾದ್ಯಂತ ನೂರಾರು ಸಂಘಟನೆಗಳು, ಸೇವಾ ಟ್ರಸ್ಟ್‌ಗಳು, ಮಠಗಳು ಮತ್ತು ಘಟಕಗಳು ಸಮಾಜದ ಹೆಸರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂದರ್ಭದಲ್ಲಿ ಹೊಸದಾಗಿ ಉದ್ಭವಿಸಿರುವ “ಶಿವ ಸಂಕಲ್ಪ ವೀರಶೈವ-ಲಿಂಗಾಯತ ಒಕ್ಕೂಟ” ದ ಅಗತ್ಯತೆಯೇನು ಎಂಬ ಪ್ರಶ್ನೆ ಸಹಜವಾಗಿದೆ.
ಆದರೆ, ಈ ಹೊಸ ವೇದಿಕೆಯ ಮುಖಂಡರ ಪ್ರಕಾರ, “ಶಿವ ಸಂಕಲ್ಪ” ಯಾವುದೋ ಹೊಸ ವಿಭಜನೆಯ ಚಟುವಟಿಕೆ ಅಲ್ಲ; ಬದಲಿಗೆ ಹಳೆಯ ಸಂಘಟನೆಗಳಲ್ಲಿನ ಭೇದಭಾವ, ಉಪಜಾತಿ ರಾಜಕಾರಣ ಮತ್ತು ಪರಸ್ಪರ ಅನುಮಾನಗಳಿಂದ ಪರಿಸ್ಥಿತಿಯಿಂದ ಹೊರಬಂದು, ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ತರಲು ಉದ್ದೇಶಿಸಿರುವ ಸಂಘಟನಾ ಸಮನ್ವಯ ವೇದಿಕೆ ಆಗಿದೆ ಎಂದು ಹೇಳಿರುತ್ತಾರೆ.
ಸಮಾಜದ ನಿಜವಾದ ಶಕ್ತಿಯನ್ನು ಒಂದು ದಿಕ್ಕಿನಲ್ಲಿ ಕೇಂದ್ರೀಕರಿಸುವ ಕೆಲಸ ಈ ವೇದಿಕೆಯ ಧ್ಯೇಯವಾಗಿದೆ ಎಂದು ಸಂಘಟಕರು ಹೇಳುತ್ತಿದ್ದಾರೆ. ಆದರೆ ಜನಸಾಮಾನ್ಯರ ದೃಷ್ಟಿಯಿಂದ, “ಇದು ನಿಜಕ್ಕೂ ಒಗ್ಗಟ್ಟಿಗೆ ಕಾರಣವಾಗುತ್ತದೆಯೋ, ಅಥವಾ ಮತ್ತೊಂದು ಸಂಘಟನೆ ಎಂಬ ಹೆಸರಿನಲ್ಲಿ ಹೊಸ ವಿಭಜನೆಗೆ ವೇದಿಕೆಯಾಗುತ್ತದೆಯೋ?” ಎಂಬ ಪ್ರಶ್ನೆ ಎದುರಾಗುತ್ತಿದೆ.
ವೀರಶೈವ–ಲಿಂಗಾಯತ ಸಮಾಜದ ಒಗ್ಗಟ್ಟಿಗಾಗಿ “ಶಿವ ಸಂಕಲ್ಪ ಒಕ್ಕೂಟ” ಸಮಾಲೋಚನಾ ಸಭೆ
ಪ್ರಸ್ತುತ ಸನ್ನಿವೇಶದಲ್ಲಿ ಸಮಾಜದ ಸಂಘಟನೆಯಲ್ಲಿ ಉಂಟಾದ ಗೊಂದಲದ ವಾತಾವರಣವನ್ನು ನಿವಾರಿಸಲು ವೀರಶೈವ-ಲಿಂಗಾಯತ ಸಮಾಜದ ಸಮಾನ ಮನಸ್ಕ ಮುಖಂಡರು ಮುಂದಾಗಿದ್ದಾರೆ. ಸಮಾಜದ ಒಳಗೆ ಉಂಟಾದ ಭೇದ-ಭಾವ, ಉಪಜಾತಿ-ಪಂಗಡದ ಅಸಮಾನತೆಯ ನಡುವೆಯೂ “ವೀರಶೈವ-ಲಿಂಗಾಯತ ದಡಿಯಲ್ಲಿ ಒಗ್ಗಟ್ಟಿನ ಪುನರ್‌ಸ್ಥಾಪನೆ” ಗುರಿಯೊಂದಿಗೆ “ಶಿವ ಸಂಕಲ್ಪ ವೀರಶೈವ-ಲಿಂಗಾಯತ ಒಕ್ಕೂಟ” ರೂಪುಗೊಂಡಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ಧಾರೆ.
ಸಮಾಜದ ನಾಯಕರ ಪ್ರಕಾರ, ಹಿಂದೆ ಬಸವಾದಿ ಶರಣರು ಬೋಧಿಸಿದ ಸಮಾನತೆ, ಸೇವೆ ಮತ್ತು “ಕಾಯಕವೇ ಕೈಲಾಸ” ಎಂಬ ಆದರ್ಶಗಳನ್ನು ಮರೆತು, ಇತ್ತೀಚಿನ ದಿನಗಳಲ್ಲಿ ಕೆಲವರು ಸ್ವಹಿತಾಸಕ್ತಿ ಮತ್ತು ರಾಜಕೀಯ ಲಾಭಕ್ಕಾಗಿ ಸಮಾಜವನ್ನು ವಿಭಜಿಸುವ ದುರ್ಬಳಕೆ ಮಾಡಿದ್ದಾರೆ ಎಂಬುದು ಕಳವಳಕಾರಿ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಜಾತಿ, ಉಪಜಾತಿ, ಪಂಗಡಗಳ ಭೇದ-ಭಾವಗಳನ್ನು ತೊರೆದು ಒಂದೇ ದಡಿಯಲ್ಲಿ ಸಂಘಟನೆಯ ಅಗತ್ಯತೆಯು ತುರ್ತಾಗಿದೆ ಎಂದು ಒಕ್ಕೂಟದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಈ ನಿಟ್ಟಿನಲ್ಲಿ, ರಾಜ್ಯದ ವಿವಿಧ ಭಾಗಗಳಲ್ಲಿ ಸಮಾಜದ ನಾಯಕರೊಂದಿಗೆ ನಡೆದ ಚರ್ಚೆಗಳಲ್ಲಿ ಒಮ್ಮತ ಮೂಡಿಸಿ, ವೀರಶೈವ-ಲಿಂಗಾಯತ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಯಶಸ್ವಿಯಾಗಿ ಸಾಗುತ್ತಿದೆ. ಇದರ ಮುಂದಿನ ಹಂತವಾಗಿ ಅಕ್ಟೋಬರ್ 14, 2025 (ಮಂಗಳವಾರ) ರಂದು ಸಂಜೆ 6.00 ಗಂಟೆಗೆ, ಶಿವಮೊಗ್ಗದ ವಿನೋಬನಗರದಲ್ಲಿರುವ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಸಮಾಲೋಚನಾ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಪ್ರಮುಖ ವಾಗ್ಮಿಗಳಾಗಿ ಖ್ಯಾತ ಚಿಂತಕ ಹಾಗೂ ವಿವೇಕವಂತಿ ಫೌಂಡೇಶನ್, ಮೈಸೂರು ಸಂಸ್ಥಾಪಕ ಶ್ರೀ ನಿತ್ಯಾನಂದ ಎಸ್.ಬಿ. ಭಾಗವಹಿಸಲಿದ್ದಾರೆ. ಸಮಾಜದ ಸಂಘಟನೆಯ ದೃಷ್ಟಿಯಿಂದ ಮುಂದಿನ ದಿಕ್ಕು-ದಶೆಯನ್ನು ನಿಗದಿಪಡಿಸಲು, ವೀರಶೈವ-ಲಿಂಗಾಯತ ಬಾಂಧವರು ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಳ್ಳಬೇಕೆಂದು ಆಯೋಜಕರು ಕೋರಿದ್ದಾರೆ.
ಕೆ.ಎಸ್. ಈಶ್ವರಪ್ಪನವರ ಆಶೀರ್ವಾದದಲ್ಲಿ “ಶಿವ ಸಂಕಲ್ಪ” – ರಾಜಕೀಯ ಲಾಭದ ನೂತನ ಪ್ರಯೋಗವೇ?

ವೀರಶೈವ-ಲಿಂಗಾಯತ ಸಮಾಜದ ಸಂಘಟನೆಯ ಹೆಸರಿನಲ್ಲಿ ಹೊಸದಾಗಿ ಉದ್ಭವಿಸಿರುವ “ಶಿವ ಸಂಕಲ್ಪ ವೀರಶೈವ-ಲಿಂಗಾಯತ ಒಕ್ಕೂಟ” ಕುರಿತಾಗಿ ಹೊಸ ವಿವಾದಗಳು ಮೊಳೆಕೆಯೊಡೆದಿವೆ. ಈ ಹೊಸ ವೇದಿಕೆಯ ಹಿಂದೆ ಬಿಜೆಪಿಯ ಮಾಜಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಅವರ ಪುತ್ರ ಕೆ.ಈ. ಕಾಂತೇಶ್ ಅವರ ರಾಜಕೀಯ ಲೆಕ್ಕಾಚಾರ ಅಡಗಿದೆ ಎಂಬ ಆರೋಪಗಳು ಸಮಾಜದ ಒಳಗಿನಿಂದಲೇ ಕೇಳಿಬರುತ್ತಿವೆ ಇದಕ್ಕೆ ಪುಷ್ಟಿ ನೀಡುವಂತೆ ಪತ್ರಿಕಾ ಗೋಷ್ಠಿ ಮುಗಿದ ನಂತರ ನೇರವಾಗಿ ಈಶ್ವರಪ್ಪನವರ ಭೇಟಿ ಮಾಡಿ ವರದಿ ಒಪ್ಪಿಸಿದ್ದು ನಿಜವಾ,.!?
ಸಮಾಜದ ಕೆಲವು ಮುಖಂಡರ ಪ್ರಕಾರ, ಈಶ್ವರಪ್ಪನವರ ಆಶೀರ್ವಾದದಲ್ಲಿ ಹುಟ್ಟು ಹಾಕಲಾಗಿರುವ ಈ ಸಂಘಟನೆ, ವೀರಶೈವ-ಲಿಂಗಾಯತ ಸಮುದಾಯದ ನಂಬಿಕೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ರೂಪಿತವಾಗಿರುವ ಯೋಜನೆಯಾಗಿದೆ. ತಮ್ಮ ಪುತ್ರ ಕಾಂತೇಶ್ ಅವರ ರಾಜಕೀಯ ಭವಿಷ್ಯಕ್ಕಾಗಿ ಸಮುದಾಯದ ಬೆಂಬಲವನ್ನು ಪಡೆಯುವುದು ಇದರ ಮೂಲ ಉದ್ದೇಶ ಎಂದು ವೀರಶೈವ ಲಿಂಗಾಯತ ಮುಖಂಡರು ಟೀಕಿಸಿದ್ದಾರೆ.
ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದವರಲ್ಲಿ ಬಹುಪಾಲು ಮಂದಿ ರಾಷ್ಟ್ರಭಕ್ತ ಬಳಗದ ಮುಖಂಡರು ಆಗಿದ್ದು, ಈಶ್ವರಪ್ಪನವರ ರಾಜಕೀಯ ವಲಯದವರು ಎಂಬ ಆರೋಪವೂ ಕೇಳಿಬಂದಿದೆ. ಸಮಾಜದ ಕೆಲವು ನಾಯಕರ ಅಭಿಪ್ರಾಯದಂತೆ, ಈಶ್ವರಪ್ಪನವರ ತಮ್ಮ ಕುರುಬ ಸಮಾಜದ ಬಲವರ್ಧನೆಗಾಗಿ ಪ್ರಯತ್ನ ಮಾಡುವ ಬದಲು, ವೀರಶೈವ-ಲಿಂಗಾಯತ ಸಮಾಜದ ಹೆಸರಿನಲ್ಲಿ ಹೊಸ ವೇದಿಕೆ ರಚಿಸಿ ತಮ್ಮ ಮತ್ತು ಮಗನ ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಯತ್ನಿಸುತ್ತಿದ್ದಾರೆ ಹೇಳಲಾಗುತ್ತಿದೆ.
ಕೆ.ಈ. ಕಾಂತೇಶ್ ಅವರ ರಾಜಕೀಯ ಬೆಳವಣಿಗೆಗೆ ವೀರಶೈವ-ಲಿಂಗಾಯತ ಸಮಾಜದ ಬೆಂಬಲ ಅತ್ಯಾವಶ್ಯಕವಾಗಿದ್ದು, ಅದಕ್ಕಾಗಿ ಈ ಹೊಸ ಒಕ್ಕೂಟವನ್ನು ವೇದಿಕೆಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾತುಗಳು ಸಮಾಜದೊಳಗೆ ಗಾಢವಾಗಿವೆ.
ಶಿವಮೊಗ್ಗದಲ್ಲಿ ಈಗಾಗಲೇ ವೀರಶೈವ-ಲಿಂಗಾಯತ ಸಮಾಜದ ಅನೇಕ ಸಂಘಟನೆಗಳು ಸಕ್ರಿಯವಾಗಿವೆ. ಅಖಿಲ ಭಾರತ ವೀರಶೈವ ಮಹಾಸಭಾ, ಬಸವೇಶ್ವರ ವೀರಶೈವ ಸಮಾಜ, ಸಾಧು ಸದ್ಧರ್ಮ ಸಮಾಜ, ಜಂಗಮ ಸಮಾಜ, ನೊಳಂಬ ವೀರಶೈವ ಸಂಘ, ಬಸವದಳ, ಬಸವಬಳಗ, ಬಸವಸಂಗಮ, ವೀರಶೈವ ಲಿಂಗಾಯತ ಸಂಘಟನೆ, ಶಿವಶಕ್ತಿ ಸಂಘ, ಹಾಗೂ ವಿವಿಧ ಮಹಿಳಾ ಸಂಘಟನೆಗಳು ಸೇರಿದಂತೆ ಅನೇಕ ಸಂಘಟನೆಗಳು ಸಮಾಜ ಸೇವೆ ಮತ್ತು ಶರಣ ಸಿದ್ಧಾಂತಗಳ ಪ್ರಚಾರದಲ್ಲಿ ತೊಡಗಿವೆ.
ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ಹೊಸ ಸಂಘಟನೆಯ ಅವಶ್ಯಕತೆ ಏನು ಎಂಬ ಪ್ರಶ್ನೆ ಸಹಜವಾಗಿ ಮೂಡಿದ್ದು, “ಶಿವ ಸಂಕಲ್ಪ” ದ ಉದ್ದೇಶ ನಿಜಕ್ಕೂ ಸಂಘಟನೆಯೇ ಅಥವಾ ರಾಜಕೀಯದ ಹೊಸ ಪ್ರಯೋಗವೇ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ.






