ಬೆಂಗಳೂರು, ಅಕ್ಟೋಬರ್ 12: ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಮುಂಜಾನೆ ಮತ್ತಿಕೆರೆಯ ಜೆಪಿ ಪಾರ್ಕ್‌ಗೆ ಭೇಟಿ ನೀಡಿ ವಾಯುವಿಹಾರಕ್ಕೆ ಬಂದ ಜನರೊಂದಿಗೆ ಸಂವಾದ ನಡೆಸಿದರು. ಆದರೆ ಈ ಸಂದರ್ಭ ಆರ್.ಆರ್. ನಗರ ಶಾಸಕ ಮುನಿರತ್ನ ಅವರ ಆಗಮನದಿಂದ ಸ್ಥಳದಲ್ಲೇ ಹೈಡ್ರಾಮಾ ನಡೆಯಿತು.
ಶಿವಕುಮಾರ್ ಅವರೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು. ಜನರ ಅಹವಾಲುಗಳನ್ನು ಆಲಿಸುತ್ತಿದ್ದ ವೇಳೆ ಆರ್‌ಎಸ್‌ಎಸ್ ಉಡುಪಿನಲ್ಲಿ ಹಾಗೂ ಕಪ್ಪು ಟೋಪಿ ಧರಿಸಿ ಬಂದ ಮುನಿರತ್ನ ಅವರು ಜನರ ಮಧ್ಯೆ ಕುಳಿತರು. ವೇದಿಕೆಯ ಮೇಲೆ ಡಿಕೆ ಶಿವಕುಮಾರ್ “ಹೇಯ್, ಕರಿ ಟೋಪಿ ಎಂಎಲ್‌ಎ, ಬಾರಯ್ಯ” ಎಂದು ಕರೆಯುತ್ತಿದ್ದರೂ, ಮುನಿರತ್ನ ವೇದಿಕೆಗೆ ಹೋಗದೇ “ನಾನು ಜನರ ಮಧ್ಯೆ ಕೂರುತ್ತೇನೆ” ಎಂದರು.

ನಂತರ ಮುನಿರತ್ನ ಅವರು ಎದ್ದು ನಿಂತು ಡಿಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಿಗೂ ಆಹ್ವಾನ ನೀಡಿಲ್ಲ. ನಮ್ಮ ಫೋಟೋಗಳನ್ನೂ ಎಲ್ಲಿಯೂ ಹಾಕಿಲ್ಲ. ಇದು ಸಾರ್ವಜನಿಕ ಕಾರ್ಯಕ್ರಮವಲ್ಲ, ಕಾಂಗ್ರೆಸ್ ಕಾರ್ಯಕ್ರಮವಾಗಿದೆ, ಎಂದು ಅವರು ಆರೋಪಿಸಿದರು.
ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿ ಗದ್ದಲ ಸೃಷ್ಟಿಯಾಯಿತು. “ರೇಪಿಸ್ಟ್ ಮುನಿರತ್ನ” ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಗಲಾಟೆ ತೀವ್ರಗೊಂಡ ಕಾರಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮುನಿರತ್ನರನ್ನು ಜೆಪಿ ಪಾರ್ಕ್‌ನಿಂದ ಹೊರತಂದರು.
ಮುನಿರತ್ನ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ, ನನಗೆ ಆಹ್ವಾನ ನೀಡದೇ ಅವಮಾನ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರು ಸಾರ್ವಜನಿಕ ಕಾರ್ಯಕ್ರಮವನ್ನೂ ಪಕ್ಷದ ವೇದಿಕೆಯನ್ನಾಗಿ ಮಾಡಿದ್ದಾರೆ. ನನ್ನ ವಿರುದ್ಧ ಕೇಸ್‌ಗಳನ್ನು ಎತ್ತಿ ಹಿಡಿದು ರಾಜಕೀಯ ದಾಳಿಯನ್ನೇ ನಡೆಸುತ್ತಿದ್ದಾರೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.






