ಮೈಸೂರು, ಅ.17:ರಾಜ್ಯ ಸರ್ಕಾರವು ಯುವಜನರ ಭವಿಷ್ಯ ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದು, “ನಮ್ಮದು ನುಡಿದಂತೆ ನಡೆದುಕೊಳ್ಳುತ್ತಿರುವ ಸರ್ಕಾರ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಆಯೋಜಿಸಿದ್ದ “ಬೃಹತ್ ಉದ್ಯೋಗ ಮೇಳ ಹಾಗೂ ಯುವ ಸಮೃದ್ಧಿ ಸಮ್ಮೇಳನ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಯುವನಿಧಿ ಯೋಜನೆ ಕುರಿತು ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಟೀಕಿಸಿದರು.
ಕೌಶಲ್ಯ ತರಬೇತಿ ಪಡೆಯುವುದರಿಂದ ಯುವನಿಧಿ ಭತ್ಯೆ ನಿಲ್ಲಿಸುವುದಿಲ್ಲ. ಉದ್ಯೋಗ ದೊರೆತ ಬಳಿಕ ಮಾತ್ರ ಆ ಭತ್ಯೆ ನಿಲ್ಲಿಸಲಾಗುವುದು. ಬಿಜೆಪಿಯ ಸುಳ್ಳುಗಳಿಗೂ ಪ್ರಚಾರಕ್ಕೂ ಜನರು ಕಿವಿಗೊಡಬಾರದು, ಎಂದು ಅವರು ಹೇಳಿದರು.
ಕೊಟ್ಟ ಮಾತು ತಪ್ಪಿ ನಡೆಯಲು ನಾನು ಪ್ರಧಾನಿ ನರೇಂದ್ರ ಮೋದಿ ಅಲ್ಲ. ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಮಾತು ತಪ್ಪಿದ್ದಾರೆ. ಈ 11 ವರ್ಷಗಳಲ್ಲಿ ಒಟ್ಟು 22 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಾಗಿತ್ತು, ಎಂದು ಕಟುವಾಗಿ ಟೀಕಿಸಿದರು.
ಸರ್ಕಾರದ ಉದ್ಯೋಗಾವಕಾಶ ಸೃಷ್ಟಿ ಕುರಿತ ಸಾಧನೆ ವಿವರಿಸುತ್ತಾ ಸಿಎಂ ಸಿದ್ದರಾಮಯ್ಯ ಹೇಳಿದರು,
ಕಳೆದ ಎರಡೂವರೆ ವರ್ಷಗಳಲ್ಲಿ ಬೆಂಗಳೂರಿನಲ್ಲಿ ನಡೆದ ಉದ್ಯೋಗ ಮೇಳಗಳಲ್ಲಿ 58,892 ಮಂದಿ ಅಭ್ಯರ್ಥಿಗಳು ಭಾಗವಹಿಸಿದ್ದಾರೆ.
ಇವರಲ್ಲಿ 11,507 ಅಭ್ಯರ್ಥಿಗಳು ನೇಮಕಾತಿ ಪತ್ರ ಪಡೆದಿದ್ದು, 22,819 ಅಭ್ಯರ್ಥಿಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾಮಟ್ಟದಲ್ಲಿ ನಡೆದ ಉದ್ಯೋಗ ಮೇಳಗಳಲ್ಲಿ 1,20,563 ಅಭ್ಯರ್ಥಿಗಳು ಭಾಗವಹಿಸಿದ್ದು, 24,391 ಅಭ್ಯರ್ಥಿಗಳು ನೇಮಕಾತಿ ಪತ್ರ ಪಡೆದಿದ್ದಾರೆ, ಹಾಗೂ 48,232 ಅಭ್ಯರ್ಥಿಗಳು ಅಂತಿಮ ಹಂತಕ್ಕೆ ತಲುಪಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಉದ್ಯೋಗಾಕಾಂಕ್ಷಿಗಳನ್ನು ಸಂಪೂರ್ಣ ನಿರ್ಲಕ್ಷಿಸಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳಲ್ಲಿ 28,000 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿದ್ದು, ಮತ್ತಷ್ಟು 35,000 ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ, ಎಂದು ಅವರು ಮಾಹಿತಿ ನೀಡಿದರು.
ಉದ್ಯಮ ಕ್ಷೇತ್ರದ ಬೇಡಿಕೆಗೆ ತಕ್ಕಂತೆ ಯುವಜನರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಸೃಷ್ಟಿಸುವ ಮಹತ್ತರ ಕಾರ್ಯವನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ಮುಂದುವರೆಸುತ್ತಿದೆ ಎಂದು ಸಿಎಂ ತಿಳಿಸಿದರು.





