ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ – ನವೆಂಬರ್ 2ಕ್ಕೆ ಗ್ರೀನ್ ಸಿಗ್ನಲ್

On: October 19, 2025 11:42 AM
Follow Us:

ಕಲಬುರಗಿ: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಆಡಳಿತ ನಿರಾಕರಿಸಿದ ಬಳಿಕ ಸಂಘಟಕರು ನ್ಯಾಯಾಲಯದ ಮೊರೆ ಹೋಗಿದ್ದು, ಹೈಕೋರ್ಟ್ ನವೆಂಬರ್ 2ರಂದು ಪಥಸಂಚಲನ ನಡೆಸಲು ಅನುಮತಿ ನೀಡಿದೆ.

ಆರ್‌ಎಸ್‌ಎಸ್ ಪರವಾಗಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿದೆ. ಈ ಮಧ್ಯಂತರ ಅವಧಿಗೆ ನವೆಂಬರ್ 2ರಂದು ಪಥಸಂಚಲನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಹೈಕೋರ್ಟ್ ತೀರ್ಪಿನಿಂದ ಚಿತ್ತಾಪುರ ಆಡಳಿತ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮುಖಭಂಗವಾಗಿದೆ. ಸ್ಥಳೀಯ ಕಾರ್ಯಕರ್ತರ ಪ್ರಕಾರ, ಆರ್‌ಎಸ್‌ಎಸ್ ಪಥಸಂಚಲನವನ್ನು ಉದ್ದೇಶಪೂರ್ವಕವಾಗಿ ತಡೆಯಲು ಪ್ರಯತ್ನ ನಡೆದಿದ್ದು, ಪುರಸಭೆ ಮತ್ತು ತಹಶೀಲ್ದಾರ್ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ತಲೆಬಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸರ್ಕಾರದ ತಡೆಗೆ ಹೈಕೋರ್ಟ್ ನೀಡಿದ ಅನುಮತಿ ನಿರ್ಧಾರ ಈಗ ಖರ್ಗೆ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜಕೀಯ ವಲಯದಲ್ಲಿ ಛೀಮಾರಿ ಎಬ್ಬಿಸಿದೆ. ಬಿಜೆಪಿ ಹಾಗೂ ಬಲಪಂಥೀಯ ವಲಯಗಳು “ಸರ್ಕಾರ ಕಾನೂನು ಸುವ್ಯವಸ್ಥೆ ನೆಪದಲ್ಲಿ ಸಂಘದ ಚಟುವಟಿಕೆಗಳನ್ನು ನಿಲ್ಲಿಸಲು ಯತ್ನಿಸಿತು, ಆದರೆ ನ್ಯಾಯಾಲಯ ಸತ್ಯದ ಪರ ನಿಂತಿದೆ” ಎಂದು ಪ್ರತಿಕ್ರಿಯಿಸಿದ್ದು, ಈ ಬೆಳವಣಿಗೆಯು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಅನುಮತಿ ನಿರಾಕರಣೆ ಹಿನ್ನೆಲೆ

ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದಲ್ಲಿ ಆರ್‌ಎಸ್‌ಎಸ್ 100ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಭಾನುವಾರ ಬೃಹತ್ ಪಥಸಂಚಲನಕ್ಕೆ ಸಿದ್ಧತೆ ನಡೆಸಿತ್ತು. ಆದರೆ, ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಉಲ್ಲೇಖಿಸಿ ಅನುಮತಿ ನಿರಾಕರಿಸಿದ್ದರು.

ಪಥಸಂಚಲನಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ 12 ಪ್ರಶ್ನೆಗಳು ಕೇಳಿದ್ದರು. ಸಂಘಟನೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದರೂ, ಮಧ್ಯರಾತ್ರಿ 11 ಗಂಟೆಯವರೆಗೂ ಅನುಮತಿ ನೀಡಲಾಗಿಲ್ಲ. ಬಳಿಕ ಅಧಿಕೃತ ಆದೇಶ ಹೊರಡಿಸಿ “ಕಾನೂನು ಸುವ್ಯವಸ್ಥೆಗೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ” ಎಂದು ಉಲ್ಲೇಖಿಸಿ ಅರ್ಜಿಯನ್ನು ತಿರಸ್ಕರಿಸಲಾಯಿತು.

ಪುರಸಭೆಯ ಮಧ್ಯರಾತ್ರಿ ಕ್ರಮ ವಿವಾದಕ್ಕೆ ಕಾರಣ

ಶುಕ್ರವಾರ ತಡರಾತ್ರಿಯಲ್ಲಿ ಪುರಸಭೆ ಸಿಬ್ಬಂದಿ ಪರವಾನಗಿ ಇಲ್ಲದ ಅಳವಡಿಕೆಯ ನೆಪದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಕಲಾಗಿದ್ದ ಕೇಸರಿ ಧ್ವಜ, ಭಗವಾ ಬ್ಯಾನರ್‌ಗಳು ಹಾಗೂ ಬಂಟಿಂಗ್‌ಗಳನ್ನು ತೆರವುಗೊಳಿಸಿದರು. ಈ ಕ್ರಮವನ್ನು ಖಂಡಿಸಿ ಕಾರ್ಯಕರ್ತರು ಚಿತ್ತಾಪುರ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಾನೂನು ಸುವ್ಯವಸ್ಥೆ ಆತಂಕ ಉಲ್ಲೇಖ

ತಹಶೀಲ್ದಾರ್ ಆದೇಶದ ಪ್ರಕಾರ, ಇದೇ ದಿನ ಭೀಮ್ ಆರ್ಮಿ ಹಾಗೂ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಗಳು ಸಹ ಪಥಸಂಚಲನಕ್ಕೆ ಅನುಮತಿ ಕೇಳಿದ್ದು, ಒಂದೇ ದಿನ ಎರಡು ಸಂಘಟನೆಗಳ ಪಥಸಂಚಲನ ನಡೆದರೆ ಗಲಾಟೆ ಸಂಭವಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ವರದಿ ತಿಳಿಸಿದೆ. ಇದರ ಆಧಾರದ ಮೇಲೆ ಅನುಮತಿ ನಿರಾಕರಣೆ ಮಾಡಲಾಗಿತ್ತು.

ಇತ್ತೀಚೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು “ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳಿಗೆ ಅನುಮತಿ ನೀಡಬಾರದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಅದರಂತೆ ರಾಜ್ಯ ಕ್ಯಾಬಿನೆಟ್ ಸರ್ಕಾರದ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ತಡೆ ಹಾಕಲು ನಿರ್ಧರಿಸಿತ್ತು.

ಅದೇ ವೇಳೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಲ್ಲಿ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ ಪಿಡಿಒ ಒಬ್ಬರನ್ನು ಅಮಾನತು ಮಾಡಿರುವ ಘಟನೆ ಕೂಡಾ ಚರ್ಚೆಗೆ ಗ್ರಾಸವಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment