ಬೆಂಗಳೂರು: ರಾಜ್ಯದ ರೈತರಿಗೆ ವಂಚನೆ ಮಾಡಿದ ತೆಲಂಗಾಣದ ವ್ಯಾಪಾರಿಗಳ ವಿರುದ್ಧದ ಪ್ರಕರಣವನ್ನು ಮುಚ್ಚಿಹಾಕಲು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಭಾವ ಬೀರಿದ್ದಾರೆ ಎನ್ನುವ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೆಸಂದ್ರ ಪಿಎಸ್‌ಐ ಜಗದೀಶ್ ರೆಡ್ಡಿ ಅವರಿಗೆ ಕರೆಮಾಡಿರುವ ಜಮೀರ್ ಅಹ್ಮದ್ ಖಾನ್, ರೈತರ ಹಿತವಿರುದ್ಧವಾಗಿ ವಂಚಕರ ಪರ ನಿಂತು “ಕೇಸ್ ಸೆಟಲ್‌ಮೆಂಟ್ ಮಾಡಿ” ಎಂದು ಒತ್ತಡ ಹಾಕಿದ ಆಡಿಯೋ ಕ್ಲಿಪ್ ಈಗ ವೈರಲ್ ಆಗಿದೆ.
ಈ ಆಡಿಯೋವನ್ನು ಜೆಡಿಎಸ್ ಅಧಿಕೃತ ಖಾತೆಯಿಂದ ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಪಕ್ಷದ ನಾಯಕರು ಸಚಿವ ಜಮೀರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಜೆಡಿಎಸ್ ಸವಾಲು – “ಸೆಟಲ್‌ಮೆಂಟ್ ಸಚಿವರನ್ನು ವಜಾ ಮಾಡಿ” ಬೇಡಿಕೆ!
“ರಾಜ್ಯದ ಜವಾಬ್ದಾರಿಯುತ ಸಚಿವರಾಗಿರುವ ವ್ಯಕ್ತಿ ವಂಚಕರ ಪರವಾಗಿ ನಿಂತು ರೈತರ ಹಕ್ಕು ಕಸಿಯಲು ಪ್ರಯತ್ನಿಸುತ್ತಿರುವುದು ಅತ್ಯಂತ ವಿಷಾದಕರ. ಇಂಥವರು ಸಚಿವ ಸ್ಥಾನದಲ್ಲಿ ಮುಂದುವರಿಯುವುದು ಸರ್ಕಾರದ ನೈತಿಕತೆಗೂ ಅವಮಾನ,” ಎಂದು ಜೆಡಿಎಸ್ ಟೀಕಿಸಿದೆ.
ಅವರು ಮುಂದೆ ಹೇಳಿದ್ದು — “ರಾಜ್ಯದಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ಬದಲು, ಪೊಲೀಸ್ ಠಾಣೆಗಳು ಈಗ ಸೆಟಲ್‌ಮೆಂಟ್ ಕೇಂದ್ರಗಳಾಗಿವೆ, ಇದಕ್ಕೆ ಈ ಘಟನೆ ಜೀವಂತ ಉದಾಹರಣೆ. ಸಿಎಂ ಸಿದ್ದರಾಮಯ್ಯ ಅವರು ನೈತಿಕತೆ ತೋರಿಸಿ, ರೌಡಿಗಳು ಹಾಗೂ ವಂಚಕರ ಪರ ವಹಿಸುವ ಸೆಟಲ್‌ಮೆಂಟ್ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು,” ಎಂದು ಆಗ್ರಹ ವ್ಯಕ್ತಪಡಿಸಿದೆ.
ಈ ಬೆಳವಣಿಗೆಯಿಂದ ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ, ಜಮೀರ್ ಅಹ್ಮದ್ ಖಾನ್ ವಿರುದ್ಧ ವಿರೋಧಿ ಪಕ್ಷಗಳು ನೇರ ದಾಳಿ ಆರಂಭಿಸಿವೆ.






