ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದಲ್ಲಿ ಪತ್ರಿಕಾ ಭವನ ವಿವಾದ ತೀವ್ರ — ಧ್ವನಿ ಸಂಘಟನೆಯಿಂದ ದೊಡ್ಡ ಮಟ್ಟದ ಪ್ರತಿಭಟನೆ ಘೋಷಣೆ

On: November 7, 2025 3:12 PM
Follow Us:

ಶಿವಮೊಗ್ಗ: ಶಿವಮೊಗ್ಗದ ಆರ್.ಟಿ.ಓ. ರಸ್ತೆಯಲ್ಲಿರುವ ಸರ್ಕಾರಿ ಪತ್ರಿಕಾ ಭವನದ ಮಾಲೀಕತ್ವ, ಹೆಸರಿನ ಬಳಕೆ ಮತ್ತು ನಿರ್ವಹಣೆ ಕುರಿತು ಗಂಭೀರ ವಿವಾದ ತಲೆದೋರಿದ್ದು, “ಸರ್ಕಾರ ನಿರ್ಮಿಸಿದ ಪತ್ರಿಕಾ ಭವನವನ್ನು ಖಾಸಗಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ತನ್ನದೇ ಆಸ್ತಿಯಂತೆ ಬಳಸುತ್ತಿದೆ, ಹಣಕಾಸು ದುರುಪಯೋಗ ಮತ್ತು ಪತ್ರಕರ್ತರ ಪ್ರವೇಶಕ್ಕೆ ಅಡ್ಡಿ ಮಾಡುತ್ತಿದೆ” ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಪ್ರತಿಭಟನಾ ಚಳುವಳಿ ಘೋಷಿಸಿದೆ.

ನಿನ್ನೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜಿ. ನಾಗರಾಜ್ ಮಾತನಾಡಿ, ನವೆಂಬರ್ 20, 2025 ರಂದು ಬೆಳಿಗ್ಗೆ 11 ಗಂಟೆಗೆ ಜಯನಗರ ಪೊಲೀಸ್ ಠಾಣೆ ಬಳಿ ಪ್ರಾರಂಭವಾಗಿ ಪತ್ರಿಕಾ ಭವನದವರೆಗೆ ಮೆರವಣಿಗೆ ನಡೆಸಿ, ನಂತರ ಅನಿರ್ದಿಷ್ಟಾವಧಿ ಧರಣಿ–ಸತ್ಯಾಗ್ರಹ ಕೈಗೊಳ್ಳುವುದಾಗಿ ಘೋಷಿಸಿದರು.

ಸಂಘದ ನಾಯಕರ ಪ್ರಕಾರ, ಪತ್ರಿಕಾ ಭವನವನ್ನು ಸರ್ಕಾರದ ಅನುದಾನ ಮತ್ತು ಜನಪ್ರತಿನಿಧಿಗಳ ನಿಧಿಯಿಂದ ನಿರ್ಮಿಸಲಾಗಿದ್ದು, ನಿವೃತ್ತ ನ್ಯಾಯಾಧೀಶರ ವರದಿ ಹಾಗೂ ಜಿಲ್ಲಾಧಿಕಾರಿಗಳ ನಡಾವಳಿ ವರದಿಯಲ್ಲಿಯೂ “ಈ ಕಟ್ಟಡವು ಸರ್ಕಾರದ ಒಡೆತನ” ಎಂದು ಸ್ಪಷ್ಟವಾಗಿದೆ. “ಆದರೂ ಜಿಲ್ಲಾಡಳಿತ ಸರ್ಕಾರಿ ನಾಮಫಲಕ ಅಳವಡಿಸಲು ಹಿಂದೇಟು ಹಾಕುತ್ತಿದೆ; ಟ್ರಸ್ಟ್‌ನ ಅಕ್ರಮಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಬಂಗ್ಲೆ ಮಲ್ಲಿಕಾರ್ಜುನ್ ಆರೋಪಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯು ಕ್ರಾಂತಿದೀಪ ದಿನಪತ್ರಿಕೆಯ ಸಂಪಾದಕ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಜೊತೆಗೆ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಗಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ಸಂಘದ ಆರೋಪದ ಪ್ರಕಾರ, ಸರ್ಕಾರ ನಿರ್ಮಿಸಿದ ಸರ್ಕಾರಿ ಪತ್ರಿಕಾ ಭವನವನ್ನು ತಮ್ಮದೇ ಖಾಸಗಿ ಆಸ್ತಿಯಂತೆ ಬಳಸಿಕೊಳ್ಳುತ್ತಾ, ಪ್ರೆಸ್ ಮೀಟ್‌ಗಳನ್ನು ಆಯೋಜಿಸಲು ಪ್ರತಿದಿನ ಸಂಸ್ಥೆಗಳು ಮತ್ತು ಸಂಘಟನೆಗಳಿಂದ ರೂ. 1500ರಿಂದ 2000ರ ವರೆಗೆ ಶುಲ್ಕವಸೂಲಿ ಮಾಡಲಾಗುತ್ತಿದೆ. ಅಲ್ಲದೆ, ಸುದ್ದಿಗೋಷ್ಠಿಗೆ ನೀಡಲು ಬಂದ ಪ್ರೆಸ್ ನೋಟ್‌ಗಳಿಗೆ ರೂ.150 ವಸೂಲಿ ಮಾಡುವ ಪದ್ಧತಿ ಜಾರಿಯಲ್ಲಿದೆ ಎಂಬುದನ್ನೂ ಸಂಘ ಹೊರಗೆ ತಂದಿದೆ.

ಇದೆಲ್ಲವನ್ನೂ ಸರ್ಕಾರ ಅಥವಾ ಜಿಲ್ಲಾಡಳಿತಕ್ಕೆ ಜವಾಬ್ದಾರಿಯಾಗಿ ಲೆಕ್ಕವಹಿಸಲಾಗದೆ, ವಸೂಲಾದ ಹಣವನ್ನು ಟ್ರಸ್ಟ್‌ನ ಖಾಸಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ಸಂಘ ಆರೋಪಿಸಿದೆ. ಬಿಲ್ಡಿಂಗ್ ಫಂಡ್ ಹೆಸರಿನಲ್ಲಿ, “ಪತ್ರಿಕಾ ಭವನ ಅಭಿವೃದ್ಧಿ” ನೆಪದಲ್ಲಿ, ಉದ್ಯಮಿಗಳು, ಸಂಸ್ಥೆಗಳು ಹಾಗೂ ಗಣ್ಯರಿಂದ ಹಣ ಹಾಗೂ ಫ್ಯಾನ್‌, ಎ.ಸಿ., ಸಿಸಿ ಕ್ಯಾಮೆರಾ, ಮೇಜು-ಕುರ್ಚಿಗಳು ಸೇರಿದಂತೆ ವಸ್ತುಗಳನ್ನು ಕೊಡುಗೆಯಾಗಿ ಸ್ವೀಕರಿಸಲಾಗಿದೆ. ಆದರೆ ಈ ವಸ್ತುಗಳು ಹಾಗೂ ಹಣ ಪತ್ರಿಕಾ ಭವನದ ಅಭಿವೃದ್ಧಿಗೆ ಬಳಸಲ್ಪಟ್ಟಿಲ್ಲ ಎಂದು ಸಂಘ ಆರೋಪಿಸಿದೆ.

ಸಂಘದ ಪ್ರಕಾರ, ಕಳೆದ 10 ವರ್ಷಗಳಲ್ಲಿ ರೂ. 60 ಲಕ್ಷಕ್ಕೂ ಹೆಚ್ಚು ಮೊತ್ತ ವಸೂಲಿ ಆಗಿರುವುದು ದಾಖಲೆಗಳಿಂದ ತಿಳಿದುಬಂದಿದೆ, ಆದರೆ ಅದರ ಲೆಕ್ಕಪತ್ರಗಳ ಬಗ್ಗೆ ಯಾವುದೇ ಪಾರದರ್ಶಕತೆ ಇಲ್ಲ. ಈ ಹಣದ ಬಳಕೆಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಟ್ರಸ್ಟ್ ನಿರಾಕರಿಸಿದೆ ಎನ್ನಲಾಗುತ್ತಿದೆ.

ಇದರ ಜೊತೆಗೆ, ಟ್ರಸ್ಟ್ ಐಡಿ ಕಾರ್ಡ್ ಇಲ್ಲದ ಪತ್ರಕರ್ತರಿಗೆ ಪತ್ರಿಕಾ ಭವನ ಪ್ರವೇಶ ನಿಷೇಧ, “ಟ್ರಸ್ಟ್ ಕಾರ್ಡ್ ಇಲ್ಲದೆ ಒಳಬಂದರೆ ಅತಿಕ್ರಮ ಪ್ರವೇಶ” ಎಂಬ ಪ್ರಕಟಣೆ ಇರುವ ಪೋಸ್ಟರ್‌ಗಳನ್ನು ಕಟ್ಟಡದ ಒಳಗೂ ಹೊರಗೂ ಅಂಟಿಸಲಾಗಿದೆ. ಇದರಿಂದ, ಖಾಸಗಿ ಟ್ರಸ್ಟ್ ಪತ್ರಿಕಾ ಭವನದ ಮೇಲೆ ಸಂಪೂರ್ಣ ಮಾನಸಿಕ ಮತ್ತು ಆಡಳಿತಾತ್ಮಕ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದೆ ಎಂದು ಸಂಘ ಹೇಳಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ಘಟಕದ ಅಧ್ಯಕ್ಷ ಡಿ.ಜಿ. ನಾಗರಾಜ್ ಅವರು, ಸರ್ಕಾರಿ ಅನುದಾನದಿಂದ ನಿರ್ಮಿಸಲಾದ ಸಾರ್ವಜನಿಕ ಕಟ್ಟಡದಲ್ಲಿ ಖಾಸಗಿ ಟ್ರಸ್ಟ್ ಹಣ ವಸೂಲಿ ಮಾಡುತ್ತಿರುವುದು ಗಂಭೀರ ಕಾನೂನು ಉಲ್ಲಂಘನೆ ಹಾಗೂ ಅಧಿಕಾರದ ದುರುಪಯೋಗ ಎಂದು ಆರೋಪಿಸಿದರು. “ಸರ್ಕಾರ ನಿರ್ಮಿಸಿದ ಕಟ್ಟಡದಲ್ಲಿ ಖಾಸಗಿ ವ್ಯಕ್ತಿಗಳು ಶುಲ್ಕ ವಸೂಲಿ ಮಾಡಿ ತನ್ನ ಟ್ರಸ್ಟ್ ಖಾತೆಗೆ ಹಣ ಜಮಾ ಮಾಡಿಕೊಳ್ಳುವುದು ಸಂಪೂರ್ಣವಾಗಿ ಕಾನೂನುಬಾಹಿರ. ಇದರಿಂದ ಸರ್ಕಾರಕ್ಕೆ ಆದಾಯ ಬರುವುದನ್ನು ತಡೆಯಲಾಗುತ್ತಿದೆ ಮತ್ತು ಸಾರ್ವಜನಿಕ ಆಸ್ತಿಯನ್ನು ಖಾಸಗಿ ಲಾಭಕ್ಕೆ ಬಳಸಲಾಗುತ್ತಿದೆ. ಇಂತಹ ಅಕ್ರಮ ಕೃತ್ಯಗಳ ಕುರಿತು ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ,” ಎಂದು ಅವರು ಹೇಳಿದರು. ನಾಗರಾಜ್ ಅವರು ಮುಂದುವರೆದು, “ಈ ಅಕ್ರಮಗಳನ್ನು ಮೌನವಾಗಿ ನೋಡುತ್ತಿದ್ದರೆ ಅಂತಹವರಿಗೆ ಕಾನೂನಿನ ಅಡಿಯಲ್ಲಿ ಉತ್ತರಿಸಬೇಕಾಗುತ್ತದೆ. ಎಫ್‌ಐಆರ್ ದಾಖಲಿಸಿ, ಹೊಣೆಗಾರರನ್ನು ಬಂಧಿಸುವುದು ಮಾತ್ರ ಪರಿಹಾರ,” ಎಂದು ಜಿಲ್ಲಾಡಳಿತದ ನಿರ್ಲಕ್ಷ್ಯತೆಯನ್ನು ಗಟ್ಟಿಯಾಗಿ ಟೀಕಿಸಿದರು.

ಪತ್ರಿಕಾ ಭವನದ ನಿರ್ವಹಣೆ ಮತ್ತು ಹಣಕಾಸು ಲೆಕ್ಕಪತ್ರಗಳಲ್ಲಿ ನಡೆದಿರುವ ಅಕ್ರಮಗಳಿಗೆ ಅಧಿಕಾರಿಗಳೂ ಸಹಭಾಗಿಗಳಾಗಿದ್ದಾರೆ ಎಂದು ಸಂಘ ಗಂಭೀರ ಆರೋಪ ಮಾಡಿದೆ. ರಿನೋವೇಷನ್‌ ಹೆಸರಿನಲ್ಲಿ ಪಿಡಬ್ಲ್ಯುಡಿ ವಿಶೇಷ ವಿಭಾಗವು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ದಾಖಲೆಗಳಿವೆ, ಆದರೆ ಕಾರ್ಯದ ಗುಣಮಟ್ಟ ದಯನೀಯವಾಗಿದ್ದು, ಕಟ್ಟಡದ ಬಾಗಿಲು ಹಾಗೂ ಸುಧಾರಣೆ ಕಾರ್ಯಗಳು ಕೇವಲ ಕಾಗದದ ಮೇಲೆ ಮಾತ್ರ ನಡೆದಂತಿದೆ ಎಂದು ಸಂಘ ವಾದಿಸಿದೆ. ಟ್ರಸ್ಟ್ ಅಧ್ಯಕ್ಷನೊಂದಿಗೆ ಅಧಿಕಾರಿಗಳು ಒಪ್ಪಂದ ಮಾಡಿಕೊಂಡು, ಕಳಪೆ ಕಾಮಗಾರಿ ನಡೆಸಿ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವೇಳೆ, ವಾರ್ತಾ ಇಲಾಖೆಯ ವಾರ್ತಾಧಿಕಾರಿ ಆರ್. ಮಾರುತಿ ಕುರಿತು ಕೂಡ ಸಂಘ ಕೇಂದ್ರೀಕರಿಸಿ, ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಖಾಸಗಿ ಟ್ರಸ್ಟ್ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ರಾಜ್ಯದಿಂದ ವರ್ಗಾವಣೆ ಆದೇಶ ಹೊರಬಿದ್ದಿದ್ದರೂ ಅವರು ಇನ್ನೂ ಅದೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ ಎಂದು ಸಂಘ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘವು ಸ್ಪಷ್ಟವಾಗಿ ಹೇಳಿದ್ದು—“ಪತ್ರಿಕಾ ಭವನ ಸರ್ಕಾರಿ ಆಸ್ತಿ; ಕೆಲವರ ಖಾಸಗಿ ಆಸ್ತಿ ಅಲ್ಲ.” ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುತ್ತಿರುವವರ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಲು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಸಂಘ ಒತ್ತಾಯಿಸಿದೆ. ಟ್ರಸ್ಟ್ ಕಚೇರಿ ತನ್ನ ಏಕಾಧಿಪತ್ಯದಂತೆ ವರ್ತಿಸಿ ಸರ್ಕಾರಿ ವೇದಿಕೆಯನ್ನು ಕೈವಶ ಮಾಡಿಕೊಂಡಿರುವುದು ಕಾನೂನುಬಾಹಿರ ಎಂದು ಸಂಘ ಆರೋಪಿಸಿದೆ.

ಟ್ರಸ್ಟ್ ತನ್ನ ಹೆಸರಿನಲ್ಲಿ ಪತ್ರಿಕಾ ಭವನವನ್ನು ಕಚೇರಿಯಂತೆ ಬಳಸಿಕೊಂಡು, ಸಂಗ್ರಹಿಸಿದ ನಿಧಿಗಳ ಹಣಕಾಸು ವ್ಯವಹಾರಗಳ ಬಗ್ಗೆ ಪಾರದರ್ಶಕತೆಯಿಲ್ಲದೆ ನಡೆದುಕೊಂಡಿರುವುದು ಗಂಭೀರ ಆರೋಪವನ್ನು ಧ್ವನಿ ಸಂಘ ಮಾಡಿದೆ. ಈ ಹಿನ್ನೆಲೆಯಲ್ಲಿ ಭವನದ ಒಳ–ಹೊರಗೆ ‘ಸರ್ಕಾರಿ ಪತ್ರಿಕಾ ಭವನ’ಎಂಬ ನಾಮಫಲಕವನ್ನು ಅಳವಡಿಸಿ, ಟ್ರಸ್ಟ್ ಬೋರ್ಡ್ ಮತ್ತು ಕಚೇರಿಯನ್ನು ತಕ್ಷಣ ತೆರವು ಮಾಡಲು ಆಗ್ರಹಿಸಲಾಗಿದೆ. ಜೊತೆಗೆ ಕಳೆದ 10 ವರ್ಷಗಳ ಹಣಕಾಸು ದಾಖಲೆಗಳನ್ನು ವಾಪಸು ಪಡೆದು ಪರಿಶೀಲನೆಗೆ ಒಳಪಡಿಸಬೇಕೆಂದು ಸಂಘ ಸೂಚಿಸಿದೆ.

ಪತ್ರಿಕಾ ಭವನವು ಕೆಲವರ ಸ್ವಂತ ಆಸ್ತಿಯಾಗಿ ಮಾಡಿಕೊಂಡಿದ್ದಾರೆ, ಪತ್ರಕರ್ತರ ಸಂವಾದ ಮತ್ತು ಒಕ್ಕೂಟದ ವೇದಿಕೆಯಾಗಿರಬೇಕು ಎಂಬುದು ಸಂಘದ ನಿಲುವಾಗಿದೆ. ಆದ್ದರಿಂದ ಟ್ರಸ್ಟ್ಗೆ ನೀಡಿದ್ದ ಲೀಸ್ / ಕರಾರ್ ರದ್ದುಪಡಿಸಿ, ಎಲ್ಲ ಪತ್ರಕರ್ತರಿಗೆ ಮುಕ್ತ ಪ್ರವೇಶ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

ಪತ್ರಿಕೋದ್ಯಮದ ಹಕ್ಕು ಮತ್ತು ಸಾರ್ವಜನಿಕ ಸಂಪತ್ತಿನ ರಕ್ಷಣೆಯ ವಿಷಯದಲ್ಲಿ ಸಂಘವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ತೀವ್ರ ಖಂಡನೆಯ ಧಾಟಿಯಲ್ಲಿ ಮಾತನಾಡುತ್ತಾ, “ಸರ್ಕಾರ ಬದಲಾಗಬಹುದು, ಅಧಿಕಾರಿಗಳು ಬದಲಾಗಬಹುದು. ಆದರೆ ಪತ್ರಿಕೋದ್ಯಮ ಜನರ ವಿಶ್ವಾಸ — ಅದು ಯಾರಾದರೂ ಒಬ್ಬರ ಆಸ್ತಿ ಅಲ್ಲ” ಎಂದು ನುಡಿದರು. ಪತ್ರಿಕಾ ಭವನದ ಮೇಲಿನ ಖಾಸಗಿ ಹಿಡಿತ ಮತ್ತು ನಿರ್ವಾಹಕ ಸಂಸ್ಥೆಯ ಅಕ್ರಮಗಳನ್ನು ಜಿಲ್ಲಾಡಳಿತ ಸರಿಯಾಗಿ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಅವರು ಎಚ್ಚರಿಸಿದರು. ಪರಿಸ್ಥಿತಿ ತಕ್ಷಣ ಸರಿಯಾದ ದಾರಿಗೆ ಬರದಿದ್ದರೆ ಮತ್ತು ಬೇಡಿಕೆಗಳನ್ನು ಜಾರಿಗೊಳಿಸಲಿಲ್ಲವಾದರೆ, ಸಂಘವು ಪತ್ರಿಕಾ ಭವನಕ್ಕೆ ಬೀಗ ಹಾಕಿ, ಅನಿರ್ದಿಷ್ಟಾವಧಿ ಪ್ರತಿಭಟನೆ ಹಾಗೂ ಧರಣಿ ನಡೆಸಲು ಹಿಂಜರಿಯುವುದಿಲ್ಲ ಎಂದು ಘೋಷಿಸಿದರು. ಈ ಮಹತ್ವದ ಹೋರಾಟಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ 1,000ಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತರು ಸೇರಲಿದ್ದು, “ಇದು ವ್ಯಕ್ತಿಗಳ ವಿರುದ್ದದ ಹೋರಾಟವಲ್ಲ — ಪತ್ರಿಕೋದ್ಯಮದ ಗೌರವ ಮತ್ತು ಪತ್ರಕರ್ತರ ಹಕ್ಕುಗಳನ್ನು ರಕ್ಷಿಸುವ ಚಳವಳಿ” ಎಂದು ಸಂಘ ಸ್ಪಷ್ಟಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಚಿತ್ರಪ್ಪ ಯರಬಾಳ, ಕೆ.ಎಂ. ಸತೀಶ್ ಗೌಡ,  ಕಮಲಾಕ್ಷ ಎಸ್.ಡಿ., ಅಣ್ಣಪ್ಪ, ಗಿರೀಶ್ ಬಿಸಿ, ನಂದನ್ ಕುಮಾರ್ ಸಿಂಗ್, ಹೆಚ್.ಎಸ್. ವಿಷ್ಣುಪ್ರಸಾದ್, ಡಿ.ಪಿ. ಅರವಿಂದ , ಮಹಮ್ಮದ್ ಫಾರೂಕ್ ಹಾಗೂ ಕಾನೂನು ಸಲಹೆಗಾರ ಷಡಾಕ್ಷರಪ್ಪ ಜಿ.ಆರ್. ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಪೊಲೀಸ್ ಇಲಾಖೆಯಲ್ಲಿ ‘ಮೇಜರ್ ಸರ್ಜರಿ’: 129 ಇನ್ಸ್‌ಪೆಕ್ಟರ್‌, 23 ಡಿವೈಎಸ್ಪಿಗಳಿಗೆ ವರ್ಗಾವಣೆ; ಬೆಂಗಳೂರು ಸಿಟಿ ಪಟ್ಟಿ ಇನ್ನೂ ಬಾಕಿ

ಸೂಡಾ ಕಾಮಗಾರಿಗಳ ಮೇಲೆ ಭ್ರಷ್ಟಾಚಾರ ನೆರಳು; ಡಿಸಿ ಕಚೇರಿ ಮುಂದೆ ಜೆಡಿಎಸ್ ಪ್ರತಿಭಟನೆ

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

“ಮೊದಲು ನಿಮ್ಮ ಹೈಕಮಾಂಡ್‌ ಹುಡುಕಿ, ಬಳಿಕ ಮೋದಿ ಬಗ್ಗೆ ಮಾತನಾಡಿ”: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಉತ್ಸವಕ್ಕೆ ಹರಕೆರೆ ಹರಕೇಶ್ವರ ದೇವಸ್ಥಾನದಲ್ಲಿ ಸಂಕಲ್ಪ

ಜನಸೇವೆಗೆ ಬದ್ಧ ನಾಯಕತ್ವ: ಹಾರನಹಳ್ಳಿಯಲ್ಲಿ ಡಿ.ಎಸ್. ಅರುಣ್ ಅವರಿಂದ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ

Leave a Comment