ಸಿರಿಗೆರೆ: ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆಯು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾದ “ಆಸ್ತಿ, ಅಧಿಕಾರ ದುರ್ಬಳಕೆ: ತರಳಬಾಳು ಶ್ರೀಗೆ ಹೈಕೋರ್ಟ್ ನೋಟಿಸ್” ಎಂಬ ವರದಿ ತಪ್ಪು ಗ್ರಹಿಕೆ ಉಂಟುಮಾಡುವ ರೀತಿಯದಲ್ಲಿದೆ ಎಂದು ಸ್ಪಷ್ಟೀಕರಣ ನೀಡಿದೆ.
ಮಠದ ಕಾರ್ಯದರ್ಶಿಗಳು ತಿಳಿಸಿದಂತೆ, 2021ರಲ್ಲಿ ಮಠ, ವಿದ್ಯಾಸಂಸ್ಥೆ ಮತ್ತು ಮಠದ ಶಿಷ್ಯರ ಸಂಘ (SSV ಸಂಘ) ವಿರುದ್ಧ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದಲ್ಲಿ ಕೆಲವರು ಮೊಕದ್ದಮೆ ದಾಖಲಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಈ ಕೇಸಿನ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಯುತ್ತಿದ್ದು, ದಿನಾಂಕ 29-3-2025 ರಂದು ನ್ಯಾಯಾಲಯವು ಎಲ್ಲಾ ಮಧ್ಯಂತರ ಅರ್ಜಿಗಳನ್ನು ಖರ್ಚು ಸಮೇತ ವಜಾಗೊಳಿಸಿದೆ.

ಹಿರೇಕೆರೂರಿನ ಎಸ್.ಎಸ್. ಪಾಟೀಲರು ಮತ್ತು ಅವರ ಸಂಗಡಿಗರು ದಾಖಲಿಸಿದ್ದ ಈ ಕೇಸಿನಲ್ಲಿ ಮಠದ ಪರ ನೂರಾರು ಶಿಷ್ಯರು ‘ಸೇರ್ಪಡೆ ಅರ್ಜಿ’ ಸಲ್ಲಿಸಿದ್ದರು. ಚಿತ್ರದುರ್ಗ ನ್ಯಾಯಾಲಯವು ಆ ಅರ್ಜಿಯನ್ನು ಅಂಗೀಕರಿಸಿದ ನಂತರ, ದೂರುದಾರರು ಹೈಕೋರ್ಟಿಗೆ ಹೋಗಿ ತಾತ್ಕಾಲಿಕ ತಡೆ ಆದೇಶ ಪಡೆದಿದ್ದಾರೆ.
ಇತ್ತೀಚೆಗಷ್ಟೇ 17 ಮಧ್ಯಂತರ ಅರ್ಜಿಗಳಲ್ಲಿ 4 ಅರ್ಜಿಗಳನ್ನು ನ್ಯಾಯಾಲಯವು ಖರ್ಚು ಸಮೇತ ವಜಾಗೊಳಿಸಿದ್ದು, ಇದು ಮಠದ ಪರವಾಗಿರುವ ತೀರ್ಪು ಎಂದು ಸ್ಪಷ್ಟಪಡಿಸಲಾಗಿದೆ.
ಈ ಮಧ್ಯೆ ದೂರುದಾರರಲ್ಲಿ ಪ್ರಮುಖರಾದ ಹಿರೇಕೆರೂರಿನ ಎಸ್.ಎಸ್. ಪಾಟೀಲರು, ಯಾರೂ ಒತ್ತಾಯಿಸದೇ ಸ್ವಪ್ರೇರಣೆಯಿಂದಲೇ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ. ಅವರು ಬೆಂಗಳೂರಿನ ಹಿಂದಿನ ವಕೀಲರ ಬದಲಿಗೆ ಹೊಸ ವಕೀಲರನ್ನು ನೇಮಿಸಿಕೊಂಡು, ಮಠ ಮತ್ತು ಪರಮಪೂಜ್ಯ ಶ್ರೀ ಜಗದ್ಗುರುಗಳವರ ವಿರುದ್ಧ ನೀಡಿದ್ದ ಎಲ್ಲಾ ದೂರುಗಳನ್ನು ಹಿಂಪಡೆದು ಕೇಸನ್ನು ವಾಪಾಸ್ ಪಡೆಯಲು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯಕ್ಕೆ 2025ರ ಸೆಪ್ಟೆಂಬರ್ 20ರಂದು ಪ್ರಮಾಣಪತ್ರ ಸಲ್ಲಿಸಿ, ಬಳಿಕ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ತಮ್ಮ ಹೇಳಿಕೆಯನ್ನು ಸಹ ನೀಡಿದ್ದಾರೆ.
ಆದರೆ ಉಳಿದ ಏಳು ದೂರುದಾರರು, ಎಸ್.ಎಸ್. ಪಾಟೀಲರಿಗೆ ಕೇಸನ್ನು ವಾಪಾಸ್ ಪಡೆಯಲು ಅವಕಾಶ ನೀಡಬಾರದೆಂದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅವರ ಹೆಸರುಗಳು ಈಂತಿವೆ –ಮಂಜಪ್ಪ ಬಿ.ಎಚ್ (ನಿವೃತ್ತ ರಿಜಿಸ್ಟ್ರಾರ್, ಬಿದರಗಡ್ಡೆ, ಹೊನ್ನಾಳಿ ತಾ., ವಾಸ: ಬೆಂಗಳೂರು) ಎಂ. ಶಿವಕುಮಾರ ಸ್ವಾಮಿ (ನಿವೃತ್ತ ಕಾರ್ಯದರ್ಶಿ, ಜುಡಿಷಿಯಲ್ ಲೇಔಟ್, ಬೆಂಗಳೂರು) ಸುಭಾಶ್ಚಂದ್ರ (ತಿಪ್ಪಣ್ಣ) – ವಕೀಲರು, ಹಿರೇಕೆರೂರು, ಡಾ. ಜಿ. ಎಂ. ಲಿಂಗರಾಜು – ವಿಜ್ಞಾನಿ, ನಾಗರಬಾವಿ, ಬೆಂಗಳೂರು
ಟಿ. ಪಿ. ಕಲ್ಲೇಶ್ – ಕೈಗಾರಿಕೋದ್ಯಮಿ, ನಾಗರಬಾವಿ, ಬೆಂಗಳೂರು, ಪಿ. ಕಾಂತರಾಜ್ – ಬಿಲ್ಡರ್, ಮಲ್ಲತಹಳ್ಳಿ, ಬೆಂಗಳೂರು, ಎಸ್. ಶಿವಕುಮಾರ್ – ಮಾಳಿಗೆ ಎಲೆಕ್ಟ್ರಿಕಲ್ ಕನ್ಸಲ್ಟೆಂಟ್, ನಾಗರಬಾವಿ, ಬೆಂಗಳೂರು.
ಈ ವಿಚಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ದಿನಾಂಕ 6-11-2025 ರಂದು ತಾತ್ಕಾಲಿಕ ತಡೆ ಆದೇಶ ನೀಡಿದ್ದು, ಪ್ರಕ್ರಿಯೆ ಮುಂದುವರೆಯುವ ಹಂತದಲ್ಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಕೆಲವರು ಉದ್ದೇಶಪೂರ್ವಕವಾಗಿ ಮಠದ ವಿರುದ್ಧ ತಪ್ಪು ಅರ್ಥ ಸೃಷ್ಟಿಸುವ ರೀತಿಯಲ್ಲಿ ಸುದ್ದಿ ಮಾಡುತ್ತಿದ್ದಾರೆ. ನಿಜವಾದ ವಿಚಾರಗಳನ್ನು ತಿಳಿಯದೆ ಪ್ರಕಟಿಸಿದ ವರದಿಗಳು ಶಿಷ್ಯರ ಮನಸ್ಸಿಗೆ ನೋವುಂಟುಮಾಡುತ್ತಿವೆ.” ಎಂದು ಮಠದ ಪರವಾಗಿ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಮಠವು ಪರಮಪೂಜ್ಯ ಶ್ರೀ ಜಗದ್ಗುರುಗಳವರ ಆದೇಶದ ಮೇರೆಗೆ ಸತ್ಯಸಂಗತಿಯನ್ನು ಶಿಷ್ಯರು ಹಾಗೂ ಸಾರ್ವಜನಿಕರಿಗೆ ತಿಳಿಸಲು ಈ ಸ್ಪಷ್ಟೀಕರಣ ನೀಡಿದೆ.






