ದೆಹಲಿ: ದೆಹಲಿ ಕೆಂಪುಕೋಟೆ ಸಮೀಪ ಸೋಮವಾರ ಸಂಜೆ ಸಂಭವಿಸಿದ ಭೀಕರ ಕಾರ್ ಸ್ಫೋಟವು ರಾಜಧಾನಿಯ ಭದ್ರತಾ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆ ಎಬ್ಬಿಸಿದೆ. ಕೆಂಪುಕೋಟೆಯ ಪೂರ್ವ ದಿಕ್ಕಿನ ಮೆಟ್ರೋ ನಿಲ್ದಾಣದ ಹತ್ತಿರ ಪಾರ್ಕ್ ಮಾಡಲಾಗಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿತು. ಕ್ಷಣಾರ್ಧದಲ್ಲೇ ಜ್ವಾಲೆಗಳು ಆಕಾಶ ಮುಟ್ಟುವಷ್ಟು ಎದ್ದವು. ಬೆಂಕಿ ಪಕ್ಕದಲ್ಲಿದ್ದ ಮತ್ತೊಂದು ಕಾರಿಗೆ ತಗುಲಿದ್ದು, ಒಟ್ಟು ಮೂರು ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲ್ಪಟ್ಟಿವೆ. ಈ ದುರಂತದಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಸಂಜೆಯ 6.05ರ ಸುಮಾರಿಗೆ ಸಂಭವಿಸಿದ ಸ್ಫೋಟದ ಶಬ್ದವನ್ನು ಜನರು “ಭೂಕಂಪದಂತೆ” ಅನುಭವಿಸಿದ್ದು, ಟ್ರಾಫಿಕ್ ಇರುವ ಪ್ರದೇಶವಾಗಿದ್ದರಿಂದ ಜನರು ಗಾಬರಿಯಿಂದ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಪ್ರಕಾರ, ಕಾರಿನಿಂದ ಏಕಾಏಕಿ ಬೆಂಕಿ ಎದ್ದದ್ದು, ಉಷ್ಣತೆಯ ತೀವ್ರತೆಯಿಂದ ಸುತ್ತಲಿನವರು ಗಾಬರಿಗೊಂಡು ಓಡಿ ಹೋದರು. ಮೊದಲ ಸ್ಫೋಟದ ಮೂರು ನಿಮಿಷಗಳಲ್ಲೇ ಪಕ್ಕದ ಮತ್ತೊಂದು ವಾಹನಕ್ಕೂ ಬೆಂಕಿ ಹರಡಿತು. ಮೊದಲ ಕಾರಿನ ಇಂಧನ ಟ್ಯಾಂಕ್ ಸ್ಫೋಟದಿಂದ ಬೆಂಕಿ ಪಕ್ಕದ ವಾಹನಕ್ಕೆ ತಗುಲಿದ ಪರಿಣಾಮ ಎರಡನೇ ಕಾರಿನಲ್ಲೂ ಸ್ಫೋಟ ಸಂಭವಿಸಿದಂತೆ ಪೊಲೀಸರು ತಿಳಿಸಿದರು. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಿ ಬೆಂಕಿ ನಿಯಂತ್ರಣಕ್ಕೆ ತರಲು ಹೋರಾಟ ಪ್ರಾರಂಭಿಸಿತು.
ಬೆಂಕಿ ತೀವ್ರವಾಗಿದ್ದರಿಂದ ಅಗ್ನಿಶಾಮಕ ದಳವು ಏಳು ಅಗ್ನಿಶಾಮಕ ವಾಹನಗಳನ್ನು ಬಳಸಿ ಕಾರ್ಯಾಚರಣೆ ನಡೆಸಿತು. ಅಪಾಯ ನಿರ್ವಹಣಾ ಪಡೆಗಳು ಮತ್ತು ದೆಹಲಿ ಪೊಲೀಸರು ಸೇರಿ ಸ್ಥಳವನ್ನು ಸಂಪೂರ್ಣವಾಗಿ ಸೀಲ್ ಮಾಡಿದರು. ಬೆಂಕಿಯ ಉಷ್ಣತೆಯಿಂದ ರಸ್ತೆ ಮೇಲ್ಮೈ ಬಿಸಿಯಾಗಿ ಪಕ್ಕದ ಅಂಗಡಿಗಳಿಗೆ ಬೆಂಕಿ ತಗುಲುವ ಆತಂಕವಿತ್ತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. “ಸ್ಫೋಟ ಸಾಮಾನ್ಯ ಅಗ್ನಿ ಅವಘಡದಂತಿರಲಿಲ್ಲ, ವಾಹನಗಳು ಚೂರುಚೂರಾಗಿದ್ದವು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ದಿಕ್ಕಿನತ್ತ ಗಮನ ಹರಿಸಿದಾಗ, ಇದು ಆಕಸ್ಮಿಕ ಘಟನೆಯಲ್ಲ ಎಂಬ ಶಂಕೆ ಹುಟ್ಟಿಸುತ್ತದೆ. ಏಕೆಂದರೆ ಕೆಲವು ಗಂಟೆಗಳ ಮುನ್ನವೇ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದ ದಾಳಿಯಲ್ಲಿ ಭದ್ರತಾ ಪಡೆಗಳು 2,500 ಕಿಲೋ ಸ್ಫೋಟಕವನ್ನು ವಶಕ್ಕೆ ಪಡೆದುಕೊಂಡಿದ್ದವು. ಇದಕ್ಕೆ ಸಂಬಂಧಿಸಿದಂತೆ ಗುಪ್ತಚರ ಸಂಸ್ಥೆಗಳು ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಸಂಪರ್ಕ, ಸೋಶಿಯಲ್ ಮೀಡಿಯಾ ಮೂಲಕ ಸಂವಹನದ ಸುಳಿವು, ರಾಷ್ಟ್ರದ ಪ್ರಮುಖ ಸ್ಥಳಗಳನ್ನು ಗುರಿಯಾಗಿಸುವ ಸಂಚು ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆಂಪುಕೋಟೆ ಸಮೀಪ ಸ್ಫೋಟವಾದ ಶಂಕೆ ಮತ್ತಷ್ಟು ಗಂಭೀರವಾಗಿ ಕಾಣಿಸುತ್ತಿದೆ.
ಘಟನೆ ನಂತರ ದೆಹಲಿ ಪೊಲೀಸ್ ಕಮಿಷನರ್ ತುರ್ತು ಸಭೆ ಕರೆದಿದ್ದು, ದೆಹಲಿಯ ಎಲ್ಲಾ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ತಪಾಸಣೆ ಆರಂಭಿಸಲಾಗಿದೆ. ಕೆಂಪುಕೋಟೆ, ಇಂಡಿಯಾ ಗೇಟ್, ಸಂಸತ್ ಭವನ, ರೈಲು ನಿಲ್ದಾಣಗಳು ಮತ್ತು ಪ್ರಮುಖ ಮೆಟ್ರೋ ಸ್ಟೇಷನ್‌ಗಳಲ್ಲಿ ಭದ್ರತೆ ಹೆಚ್ಚು ಮಾಡಲಾಗಿದೆ. ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ಪಣಜಿ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಹೈ ಅಲರ್ಟ್ ನೀಡಲಾಗಿದೆ.
ಗಾಯಾಳುಗಳನ್ನು ತಕ್ಷಣವೇ ವಿಶೇಷ ರಕ್ಷಣಾ ವಾಹನಗಳ ಮೂಲಕ LNJP (ಲೋಕನಾಯಕ ಜಯಪ್ರಕಾಶ ನಾರಾಯಣ) ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಮೂರು ಮಂದಿ ಗಾಯಾಳುಗಳ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸ್ಫೋಟದ ತನಿಖೆಯನ್ನು NIA (ರಾಷ್ಟ್ರೀಯ ತನಿಖಾ ದಳ) ಮತ್ತು ದೆಹಲಿ ಕ್ರೈಂ ಬ್ರಾಂಚ್ ವಹಿಸಿಕೊಂಡಿದ್ದು, ಸ್ಥಳದಲ್ಲೇ ಸಾಕ್ಷ್ಯ ಸಂಗ್ರಹಣೆ ನಡೆಯುತ್ತಿದೆ. CCTV ದೃಶ್ಯಗಳು, ವಾಹನಗಳ ನಂಬರಿನ ಡೇಟಾ ಮತ್ತು ಸ್ಫೋಟಕದ ಅವಶೇಷಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ದೆಹಲಿ ಪೊಲೀಸ್ ಆಯುಕ್ತರು, “ಘಟನೆ ಭಯೋತ್ಪಾದಕ ದಾಳಿ ಆಗಿರುವ ಶಂಕೆಯನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ. ಜನರು ವದಂತಿ ಅಥವಾ ಅಪಪ್ರಚಾರ ಹಂಚಬಾರದು” ಎಂದು ಮನವಿ ಮಾಡಿದ್ದಾರೆ. ಕೆಂಪುಕೋಟೆಯಂತಹ ರಾಷ್ಟ್ರದ ಐತಿಹಾಸಿಕ ಮತ್ತು ಸಂವೇದನಾಶೀಲ ಪ್ರದೇಶದಲ್ಲೇ ಸ್ಫೋಟ ಸಂಭವಿಸಿರುವುದು ರಾಷ್ಟ್ರದ ಭದ್ರತೆ ಎದುರು ದೊಡ್ಡ ಪ್ರಶ್ನೆ ಎಬ್ಬಿಸಿದೆ.






