ಶಿವಮೊಗ್ಗ, ನ.12: ನಗರದ ನೆಹರೂ ರಸ್ತೆಯ ಸಂಚಾರ ಸುಧಾರಣೆ ಕುರಿತು ಇಂದು ಶಿವಮೊಗ್ಗ ನಗರದ ಶುಭಂ ಹೋಟೆಲ್ ಹಾಲ್ ನಲ್ಲಿ ವ್ಯಾಪಾರಿಗಳ ಸಭೆ ನಡೆಯಿತು. ಸಭೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಗರ ಪಾಲಿಕೆಯ ಅಧಿಕಾರಿಗಳು, ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ ನೆಹರೂ ರಸ್ತೆಯ ವ್ಯಾಪಾರಿಗಳ ಸಂಘದ ಪ್ರತಿನಿಧಿಗಳು ಭಾಗವಹಿಸಿದರು.
ಸಭೆಯಲ್ಲಿ ಮಾತನಾಡಿದ ಪೊಲೀಸ್ ಅಧೀಕ್ಷಕರು, ನೆಹರೂ ರಸ್ತೆ ಹೊಸ ಶಿವಮೊಗ್ಗ ಭಾಗದ ಪ್ರಮುಖ ಮಾರ್ಗವಾಗಿದ್ದು, ಇದು ಹಲವು ರಸ್ತೆಗಳ ಸಂಪರ್ಕ ಕೇಂದ್ರವಾಗಿದೆ ಎಂದರು. ವ್ಯಾಪಾರ ಪ್ರದೇಶವಾಗಿರುವುದರಿಂದ ಸಂಚಾರ ಅಸ್ತವ್ಯಸ್ತತೆ ಹೆಚ್ಚಿರುವ ವಿಚಾರವನ್ನು ಅವರು ಉಲ್ಲೇಖಿಸಿದರು.

ಅವರು ಮುಂದುವರಿಸಿ, ಗಾಂಧಿಬಜಾರ್ ರಸ್ತೆಯ ಸಂಚಾರ ವ್ಯವಸ್ಥೆ ಸುಧಾರಿಸಿದಂತೆ, ನೆಹರೂ ರಸ್ತೆಯಲ್ಲಿಯೂ ನಾಗರೀಕರ ಸಹಕಾರದಿಂದ ಶಾಶ್ವತ ಪರಿಹಾರ ಕಂಡುಕೊಳ್ಳಬಹುದೆಂದರು. “ಸಮಸ್ಯೆ ಕಂಡುಬಂದರೆ ತಕ್ಷಣ ಇಲಾಖೆಯ ಗಮನಕ್ಕೆ ತರಬೇಕು, ಆಗ ಸರಿಯಾದ ಸಮಯದಲ್ಲಿ ಕ್ರಮ ಕೈಗೊಳ್ಳಬಹುದು,” ಎಂದು ಅವರು ಹೇಳಿದರು.
ನಗರ ಪಾಲಿಕೆಯು ನೆಹರೂ ರಸ್ತೆಗೆ ಹೊಂದಿಕೊಂಡಂತೆ 21 ಕನ್ಸರ್‌ವೆನ್ಸಿ ರಸ್ತೆಗಳ ಅಭಿವೃದ್ಧಿ ಪಡಿಸಿದ್ದು, ಉಚಿತ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಈ ಮಾರ್ಗಗಳನ್ನು ಸರಿಯಾಗಿ ಬಳಸಿದರೆ 40–50% ಸಂಚಾರ ದಟ್ಟಣೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಅಂಗಡಿ ಮುಂದೆ ಕಬ್ಬಿಣದ ಫುಟ್‌ಬೋರ್ಡ್‌ಗಳು ಅಥವಾ ಅಡ್ಡ ಜಾಲರಿಗಳನ್ನು ಇಡುವ ಮೂಲಕ ರಸ್ತೆಗೆ ಅಡಚಣೆ ಮಾಡಬಾರದು ಎಂದು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು. “ನೆಹರೂ ರಸ್ತೆಯಲ್ಲಿ ಸುಮಾರು 140 ಅಂಗಡಿಗಳಿವೆ. ಎಲ್ಲಾ ಅಂಗಡಿಯವರು ತಮ್ಮ ವಾಹನಗಳನ್ನು ಕನ್ಸರ್‌ವೆನ್ಸಿ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಿದರೆ ಸಂಚಾರ ಸುಗಮವಾಗುತ್ತದೆ,” ಎಂದರು.
ನಗರ ಪಾಲಿಕೆಯ ಸಹಯೋಗದೊಂದಿಗೆ ಲೈಟಿಂಗ್ ಹಾಗೂ ಸಿಸಿಟಿವಿ ಅಳವಡಿಕೆ ಕಾರ್ಯ ನಡೆಯಲಿದ್ದು, ಅಂಗಡಿಗಳ ಮುಂದೆ ಮಾರ್ಕಿಂಗ್ ಸಹ ಮಾಡಲಾಗುತ್ತದೆ. ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ಅವರು ಸೂಚಿಸಿದರು. ಇದು ಅಪರಾಧ ಪತ್ತೆಗೆ ಸಹಕಾರಿಯಾಗುತ್ತದೆ ಎಂದರು.
ಪೊಲೀಸ್ ಇಲಾಖೆ 8277983204 ಈ ಟ್ರಾಫಿಕ್ ಹೆಲ್ಪ್‌ಲೈನ್ ಸಂಖ್ಯೆಯ ಮೂಲಕ ನಾಗರಿಕರಿಂದ ಸಂಚಾರ ಸಂಬಂಧಿತ ಮಾಹಿತಿ ಸ್ವೀಕರಿಸಲಿದೆ. ನಿಯಮ ಉಲ್ಲಂಘನೆ, ಅಸಂಬದ್ಧ ಪಾರ್ಕಿಂಗ್ ಅಥವಾ ಅಡ್ಡ ನಿಲುಗಡೆ ಮಾಡಿದ ವಾಹನಗಳ ಫೋಟೋ ಕಳುಹಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ.
“ನೆಹರೂ ರಸ್ತೆಯಲ್ಲಿ ಅಸಂಬದ್ಧ ಅಥವಾ ಡಬ್ಬಲ್ ಪಾರ್ಕಿಂಗ್ ಮಾಡಿದರೆ ನೋ ಪಾರ್ಕಿಂಗ್ ಕ್ರಮ ಜಾರಿಯಾಗುತ್ತದೆ. ಅಗತ್ಯವಿದ್ದರೆ ವ್ಹೀಲ್ ಲಾಕ್ ಕ್ರಮವೂ ಕೈಗೊಳ್ಳಲಾಗುತ್ತದೆ,” ಎಂದು ಎಚ್ಚರಿಸಿದರು. ನಾಗರಿಕರು ನಗರದಲ್ಲಿರುವ ಮಲ್ಟಿ ಲೆವೆಲ್ ಪಾರ್ಕಿಂಗ್ ಸೌಲಭ್ಯವನ್ನು ಬಳಸಿಕೊಳ್ಳಲು ಅವರು ಮನವಿ ಮಾಡಿದರು.
ಸಭೆಯಲ್ಲಿ, ಬಳ್ಳೆಕೆರೆ ಸಂತೋಷ್, ಅಶ್ವಥನಾರಾಯಣ ಶೆಟ್ಟಿ, ಸಂಚಾರಿ ಠಾಣೆ ಇನ್ಸ್ಪೆಕ್ಟರ್ ದೇವರಾಜ್, ನಗರ ಪಾಲಿಕೆ ಅಧಿಕಾರಿಗಳು, ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.






