ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಮಲೆನಾಡಿನ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದರೂ, ಈ ಹೋರಾಟದ ನಡುವೆ ಇದೀಗ ಪತ್ರಕರ್ತರ ನೈತಿಕತೆ ಕುರಿತ ಚರ್ಚೆಯೂ ಜೋರಾಗಿದೆ. ಪರಿಸರ ಸಂರಕ್ಷಣೆಯ ಹೋರಾಟದಲ್ಲಿ ಬೆಂಬಲ ನೀಡಬೇಕಾಗಿದ್ದ ಕೆಲ ಪತ್ರಕರ್ತರು ಕೆಪಿಸಿಎಲ್ ಅಧಿಕಾರಿಗಳ “ಲೆದರ್ ಬ್ಯಾಗ್” ಉಡುಗೊರೆ ವಿವಾದಕ್ಕೆ ಸಿಕ್ಕಿಹಾಕಿಕೊಂಡಿದ್ದು, ಶರಾವತಿ ಹೋರಾಟದ ನೈಜ ಧ್ಯೇಯವನ್ನು ಮಸುಕಾಗಿಸಿದೆ ಎಂಬ ಆರೋಪ ಕೇಳಿಬಂದಿದೆ.
“ಲೆದರ್ ಬ್ಯಾಗ್ ವಿವಾದದಿಂದ ಪತ್ರಿಕೋದ್ಯಮದ ನೈತಿಕತೆ ಪ್ರಶ್ನೆಯಾದ ಶರಾವತಿ ಹೋರಾಟ”
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ ತೀವ್ರವಾಗುತ್ತಿದ್ದಂತೆ, ಕೆಪಿಸಿಎಲ್ ಅಧಿಕಾರಿಗಳು ಶಿವಮೊಗ್ಗಕ್ಕೆ ಭೇಟಿ ನೀಡಿ ಕೆಲವು ಪತ್ರಕರ್ತರಿಗೆ “ಲೆದರ್ ಬ್ಯಾಗ್”ನೀಡಿದ ಘಟನೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. “ಬ್ಯಾಗ್‌ನಲ್ಲಿ ಏನಿತ್ತು, ಯಾಕೆ ಕೊಟ್ಟರು”ಎಂಬ ಪ್ರಶ್ನೆಗಳಿಗೆ ಸ್ಪಷ್ಟನೆ ಸಿಗದ ಹಿನ್ನೆಲೆಯಲ್ಲಿ ಪತ್ರಕರ್ತರ ಬದ್ಧತೆ ಮತ್ತು ವೃತ್ತಿಧರ್ಮ ಪ್ರಶ್ನೆಯಾಗಿದೆ.
ದೇಶಾದ್ರಿ ಹೊಸ್ಮನೆ ಅವರು ತಮ್ಮ ಲೇಖನದಲ್ಲಿ, “ಕೆಲ ಪತ್ರಕರ್ತರು ಪರಿಸರ ಕಾಳಜಿಯನ್ನು ಲೆದರ್ ಬ್ಯಾಗ್‌ನಲ್ಲಿ ಮುಚ್ಚಿಟ್ಟಿದ್ದಾರೆ. ಶರಾವತಿ, ಪಶ್ಚಿಮ ಘಟ್ಟ ಹಾಗೂ ಅರಣ್ಯ ಉಳಿಯಬೇಕೆಂಬ ಧ್ಯೇಯ ಬಿಟ್ಟು ತಮ್ಮ ನೈತಿಕತೆ ಮಾರಾಟಕ್ಕಿಟ್ಟಿದ್ದಾರೆ” ಎಂದು ಟೀಕಿಸಿದ್ದಾರೆ.
ಹೋರಾಟದ ತೀವ್ರತೆಯ ನಡುವೆಯೇ ಪತ್ರಕರ್ತ ದೇಶಾದ್ರಿ ಹೊಸ್ಮನೆ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಲೇಖನದ ಮೂಲಕ ಕೆಲವು ಸಹೋದ್ಯೋಗಿಗಳ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರ ಪ್ರಕಾರ, ಪತ್ರಕರ್ತರ ವೃತ್ತಿ ಬದ್ಧತೆಯ ಬದಲಿಗೆ “ಋಣಭಾರ”ಗಳೇ ಇಂದು ನೈತಿಕತೆಯ ಮಾನದಂಡವಾಗಿ ಪರಿಣಮಿಸಿರುವುದು ಪತ್ರಿಕೋದ್ಯಮದ ಅಪಮಾನ.

ವೃತ್ತಿಧರ್ಮದ ಹಿನ್ನಡೆ – “ಬೇಲಿಯೇ ಹೊಲ ಮೇಯ್ದ ಕಥೆ”
ಶಿವಮೊಗ್ಗದ ಕೆಲವು ಪತ್ರಕರ್ತರು “ಕೆಪಿಸಿಎಲ್ ಸ್ನೇಹಿತರು” ಎಂಬ ಹೆಸರಿನಲ್ಲಿ ನಿಲುಕಿದ ಉಡುಗೊರೆಯ ವಿಚಾರ ಸಾರ್ವಜನಿಕ ವಲಯದಲ್ಲಿ ನೈತಿಕ ಚರ್ಚೆಗೆ ಕಾರಣವಾಗಿದೆ. “ಹೋರಾಟದ ಧ್ವನಿಯಾಗಬೇಕಾದ ಪತ್ರಕರ್ತರು, ಅಧಿಕಾರಿಗಳ ಪರ ಧ್ವನಿಯಾಗಿ ಮಾರ್ಪಟ್ಟರೆ, ಅದೇ ನೈಜ ಪತ್ರಿಕೋದ್ಯಮದ ಮರಣ”ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ದೇಶಾದ್ರಿ ಹೊಸ್ಮನೆಯವರ ಪ್ರಕಾರ, “ಬೇಲಿಯೇ ಹೊಲ ಮೇಯ್ದಂತಾಗಿದೆ — ನೈತಿಕ ಪತ್ರಕರ್ತರನ್ನು ಪಾಠ ಬೋಧಿಸುವವರೇ ಇಂದಿನ ‘ಲೆದರ್ ಬ್ಯಾಗ್ ಪತ್ರಿಕೋದ್ಯಮದ’ ಜೀವಂತ ಉದಾಹರಣೆ” ಎಂದು ವ್ಯಂಗ್ಯವಾಡಿದ್ದಾರೆ.

“ಪರಿಸರ ಉಳಿಯಲಿ ಅಂದವರು ಈಗ ಬ್ಯಾಗ್ ಉಳಿಸಿಕೊಂಡರು”— ಸ್ವಯಂಘೋಷಿತ ಪ್ರೆಸ್ ಟ್ರಸ್ಟ್ ಅಧ್ಯಕ್ಷನ ಬೇಜವಾಬ್ದಾರಿಯಿಂದ ಒಂದು ಬ್ಯಾಗ್ ಪಡೆದುಕೊಂಡು ಇಡೀ ಜಿಲ್ಲೆಯ ಪತ್ರಕರ್ತರು ತಲೆತಗ್ಗಿಸುವ ಸ್ಥಿತಿಗೆ ತಲುಪಿದ ಶೋಚನೀಯ ವಾಸ್ತವ,.!
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಹೋರಾಟ ತೀವ್ರಗೊಳ್ಳುತ್ತಿದ್ದರೂ, ಈ ಹೋರಾಟದ ಮಧ್ಯೆ ಪತ್ರಕರ್ತರ ನೈತಿಕತೆ ಕುರಿತ ಪ್ರಶ್ನೆಗಳು ಕಾಡುತ್ತಿವೆ. ಪರಿಸರ ಸಂರಕ್ಷಣೆ, ಜೀವ ವೈವಿಧ್ಯತೆ ಮತ್ತು ನದಿ ರಕ್ಷಣೆ ಕುರಿತ ಹೋರಾಟದಲ್ಲಿ ಜನರ ಬೆಂಬಲ ಅಗತ್ಯವಿರುವ ಈ ಸಮಯದಲ್ಲಿ, “ಶಿವಮೊಗ್ಗದ ಕೆಲ ಪತ್ರಕರ್ತರು ತಮ್ಮ ವೃತ್ತಿಧರ್ಮ ಮತ್ತು ನೈತಿಕತೆಯನ್ನು ಬಿಟ್ಟು, ಗಾಳಿ–ನೀರು–ಪರಿಸರ ಉಳಿಸುವ ಮನೋಭಾವನೆ ಕಳೆದುಕೊಂಡಿದ್ದಾರೆ”ಎಂಬ ಆರೋಪ ತೀವ್ರವಾಗಿ ಕೇಳಿಬಂದಿದೆ. ಜನರ ಪರವಾಗಿ ನಿಂತು ಪ್ರಶ್ನೆ ಕೇಳಬೇಕಾದ ಪತ್ರಕರ್ತರೇ “ಶರಾವತಿ ನದಿ ನಮ್ಮದು”ಎನ್ನುವ ಅರಿವನ್ನು ಕಳೆದುಕೊಂಡು ವರ್ತಿಸಿರುವುದು ಪತ್ರಿಕೋದ್ಯಮದ ನಂಬಿಕೆಗೆ ಧಕ್ಕೆಯಾಗಿದೆ ಎಂದು ಹೋರಾಟಗಾರರು ಖಂಡಿಸಿದ್ದಾರೆ.
ಸ್ವಯಂ ಘೋಷಿತ ಒಬ್ಬ ಪ್ರೆಸ್ ಟ್ರಸ್ಟ್ ಅಧ್ಯಕ್ಷನ ಬೇಜವಾಬ್ದಾರಿಯಿಂದ, ಒಂದು ಬ್ಯಾಗ್ ಪಡೆದುಕೊಂಡು ಇಡೀ ಜಿಲ್ಲೆಯ ಪತ್ರಕರ್ತರು ತಲೆತಗ್ಗಿಸುವ ಸ್ಥಿತಿಗೆ ತಲುಪಿರುವುದು ಶೋಚನೀಯ, ಎಂದು ಹೋರಾಟಗಾರರು ತೀವ್ರ ಖಂಡಿಸಿದ್ದಾರೆ. ಅವರು “ಲೆದರ್ ಬ್ಯಾಗ್ ಪತ್ರಿಕೋದ್ಯಮ”ಎನ್ನುವ ಪದ ಬಳಸಿ, ಪತ್ರಕರ್ತರ ಆತ್ಮಸಾಕ್ಷಿಯನ್ನು ಮಾರಾಟಕ್ಕಿಟ್ಟಿರುವ ಈ ನೈತಿಕ ಕುಸಿತವನ್ನು ನಿಂದಿಸಿದ್ದಾರೆ. “ಪತ್ರಕರ್ತರು ಯಾರ ಪರವಾಗಿಯೂ ಇರಬಾರದು, ಸತ್ಯದ ಪರವಾಗಿರಬೇಕು, ಆದರೆ ಇಂದು ಅದು ಕೇವಲ ನುಡಿಗಟ್ಟು ಆಗಿದೆ”ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಘಟನೆ ಪತ್ರಿಕೋದ್ಯಮದ ನೈತಿಕತೆ, ಸಾಮಾಜಿಕ ಬದ್ಧತೆ ಮತ್ತು ವಸ್ತುನಿಷ್ಠತೆಯ ಸಿದ್ಧಾಂತಗಳೇ ಪ್ರಶ್ನೆಗೆ ಒಳಪಟ್ಟಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಪಶ್ಚಿಮ ಘಟ್ಟದ ಕಣಿವೆಗಳು ಅಪಾಯದ ದಾರಿಯಲ್ಲಿ
ಶರಾವತಿ ನದಿ ತೀರ ಮತ್ತು ಅದರ ಸುತ್ತಮುತ್ತಲಿನ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳು ಅಪರೂಪದ ಜೀವ ವೈವಿಧ್ಯತೆಯ ತಾಣಗಳಾಗಿವೆ. ಪರಿಸರ ತಜ್ಞರ ಎಚ್ಚರಿಕೆಯ ಪ್ರಕಾರ, ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಬಂದರೆ ಅರಣ್ಯ ನಾಶ, ವನ್ಯಜೀವಿ ವಲಸೆ ಮತ್ತು ನದಿ ಪರಿಸರದ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ.
ಸ್ಥಳೀಯ ರೈತರು, ವಿದ್ಯಾರ್ಥಿಗಳು, ಲೇಖಕರು ಹಾಗೂ ಸಾಮಾಜಿಕ ಸಂಘಟನೆಗಳು ಹೋರಾಟಕ್ಕೆ ಕೈಜೋಡಿಸಿರುವಂತೆಯೇ, “ಜನರ ಪ್ರತಿರೋಧವೇ ಯೋಜನೆ ತಡೆಗಟ್ಟುವ ಶಕ್ತಿ” ಎಂಬ ನಂಬಿಕೆಯಲ್ಲಿ ಹೋರಾಟ ಮುಂದುವರಿಯುತ್ತಿದೆ. ಮಲೆನಾಡಿನ ಜನರ ಹೋರಾಟ ಪ್ರಕೃತಿಯನ್ನು ಉಳಿಸುವ ಹೋರಾಟವಾಗಿದ್ದು, ಈ ಹೋರಾಟದ ಪಾಠವೇ ಸತ್ಯ, ನೈತಿಕತೆ ಮತ್ತು ಬದ್ಧತೆಯ ಪರ ಹೋರಾಡಬೇಕು ಎಂಬ ಸಂದೇಶವನ್ನು ಸಮಾಜದ ಎಲ್ಲ ವಲಯಕ್ಕೂ ನೀಡುತ್ತಿದೆ.

ಹೋರಾಟದ ಧ್ವನಿ – ಜನರ ಬದ್ಧತೆ
ಶರಾವತಿ ನದಿ, ಮಲೆನಾಡಿನ ಜನಜೀವನದ ಶಿರಾಧಾರವಾಗಿದೆ. ನದಿಯ ನೀರು, ಅರಣ್ಯ, ಗಾಳಿ ಇವುಗಳ ಸಂರಕ್ಷಣೆ ಮಲೆನಾಡಿನ ಬದುಕಿನ ಅಸ್ತಿತ್ವಕ್ಕೆ ಅವಶ್ಯಕ ಎಂದು ಹೋರಾಟಗಾರರು ಹೇಳುತ್ತಾರೆ. “ಅಧಿಕಾರವೇ ಅಪರಾಧವಾದರೆ, ಮೌನವೂ ಅಪರಾಧವೇ” ಎಂಬ ಘೋಷಣೆಗಳೊಂದಿಗೆ ಹೋರಾಟ ತೀವ್ರಗೊಳ್ಳುತ್ತಿದೆ.
ಜನಸಾಮಾನ್ಯರ ಹೋರಾಟವನ್ನು ಕುಗ್ಗಿಸಲು ಉಡುಗೊರೆ ರಾಜಕೀಯ ನಡೆಯುತ್ತಿದ್ದರೆ, ಅದನ್ನು ಜನರು ಬಯಲು ಮಾಡುವ ಹೊಣೆ ಪತ್ರಕರ್ತರದ್ದು ಎಂಬ ಅಭಿಪ್ರಾಯ ಸಾಮಾಜಿಕ ವಲಯದಲ್ಲಿ ವ್ಯಕ್ತವಾಗಿದೆ.

ಪತ್ರಕರ್ತರ ನೈತಿಕತೆ, ಹೋರಾಟದ ಅಸ್ತಿತ್ವದ ಪ್ರಶ್ನೆ
ಈ ಘಟನೆಯು ಪತ್ರಿಕೋದ್ಯಮದ ನೈತಿಕತೆಯ ಮೂಲ ಸಿದ್ಧಾಂತಗಳನ್ನೇ ಪ್ರಶ್ನೆಗೆ ಒಳಪಡಿಸಿದೆ. ವಸ್ತುನಿಷ್ಠತೆ, ನಿಖರತೆ, ಹಾಗೂ ಸಾಮಾಜಿಕ ಬದ್ಧತೆ ಎಂಬ ಮೌಲ್ಯಗಳು ‘ಲೆದರ್ ಬ್ಯಾಗ್’ಗೆ ಬಲಿಯಾಗಿದ್ದಾವೆ ಎಂಬ ಪ್ರಶ್ನೆ ಹೋರಾಟದ ಗಂಭೀರತೆಯ ಮಧ್ಯೆ ನಿಲ್ಲುತ್ತಿದೆ.
“ಶರಾವತಿ ನದಿ ನಮ್ಮದು” ಅನ್ನುವ ಮನೋಭಾವನೆ ಉಳಿಯಬೇಕಾದರೆ, ಹೋರಾಟಗಾರರಷ್ಟೇ ಪತ್ರಕರ್ತರೂ ತಮ್ಮ ಆತ್ಮಸಾಕ್ಷಿಯ ಮುಂದೆ ನಿಂತು ನೈತಿಕ ಪತ್ರಿಕೋದ್ಯಮದ ದೀಪವನ್ನು ಬೆಳಗಿಸಬೇಕು ಎನ್ನುವುದು ಜನರ ಕೋರಿಕೆ.

ಜನರ ಆಶಯ – ನದಿಯು ಉಳಿಯಲಿ, ನೈತಿಕತೆ ಬೆಳಗಲಿ
ಶರಾವತಿ ಹೋರಾಟಗಾರರು ಹೇಳುವಂತೆ, “ಶರಾವತಿ ನಮ್ಮದು, ಅದನ್ನು ಉಳಿಸೋಣ” ಎಂಬ ಘೋಷಣೆ ಕೇವಲ ಪರಿಸರ ಸಂರಕ್ಷಣೆಯ ಮಾತಲ್ಲ, ಅದು ನೈತಿಕ ಹೋರಾಟವೂ ಹೌದು.
“ಲೆದರ್ ಬ್ಯಾಗ್ ಪತ್ರಿಕೋದ್ಯಮ” ಎಂಬ ಹೊಸ ವಿವಾದ ಜನರ ವಿಶ್ವಾಸವನ್ನು ಕುಂದಿಸುವಂತದ್ದಾಗಿದೆ. ಮಲೆನಾಡಿನ ಜನರ ಆಶಯ ಒಂದೇ – ಶರಾವತಿ ನದಿಯೂ ಉಳಿಯಲಿ, ಪತ್ರಕರ್ತರ ನೈತಿಕತೆಯೂ ಉಳಿಯಲಿ.







