ಶಿವಮೊಗ್ಗ: ಶಿವಮೊಗ್ಗ ಪತ್ರಿಕಾಭವನಕ್ಕೆ ಪತ್ರಕರ್ತರ ಪ್ರವೇಶವನ್ನು ನಿರ್ಬಂಧಿಸಿರುವುದು ಮತ್ತು ಅಲ್ಲಿ ನಡೆಯುತ್ತಿರುವ ವಿವಾದ ಮತ್ತು ಅವ್ಯವಹಾರಗಳ ವಿರುದ್ಧ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ (ರಿ) ಶಿವಮೊಗ್ಗ ಘಟಕವು ನವೆಂಬರ್ 20ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ ಜಿಲ್ಲಾ ರಕ್ಷಣಾಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಪ್ರತಿಭಟನೆ ಮತ್ತು ಹೋರಾಟ ಕುರಿತು ಸ್ಪಷ್ಟನೆ ಪಡೆಯಲು ಸಂಘದ ಪ್ರತಿನಿಧಿಗಳು ಇಂದು ಸಂಜೆ ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರನ್ನು ಭೇಟಿ ಮಾಡಿ, ಪತ್ರಿಕಾಭವನದಲ್ಲಿ ನಡೆಯುತ್ತಿರುವ ಅವ್ಯವಹಾರ. ಪತ್ರಿಕಾಭವನದಲ್ಲಿ ನಡೆಯುವ ಪ್ರೆಸ್ ಮೀಟ್ ಪ್ರವೇಶ ನಿರ್ಭಂದಕ್ಕೆ ಸಂಬಂಧಿಸಿದ, ಪತ್ರಕರ್ತರಿಗೆ ಉಂಟಾಗಿರುವ ಅಸಮಾಧಾನ ಮತ್ತು ಭದ್ರತೆ ಸಂಬಂಧಿತ ಪ್ರಶ್ನೆಗಳನ್ನು ವಿವರವಾಗಿ ಚರ್ಚಿಸಿದರು. ಈ ಕುರಿತು ಜಿಲ್ಲಾರಕ್ಷಣಾಧಿಕಾರಿಗಳು ಗಂಭೀರವಾಗಿ ಗಮನಹರಿಸಿ, ಮೂರು ದಿನಗಳೊಳಗೆ ಸಮಸ್ಯೆಗೆ ಸಂಪೂರ್ಣ ಪರಿಹಾರ ಒದಗಿಸುವುದಾಗಿ, ಹಾಗೂ ಪತ್ರಕರ್ತರಿಗೆ ನ್ಯಾಯ ಮತ್ತು ಸೂಕ್ತ ರಕ್ಷಣೆಯನ್ನು ಖಾತರಿಪಡಿಸುವುದಾಗಿ ಭರವಸೆ ನೀಡಿದರು.

ತದನಂತರ ಡಿವೈಎಸ್ಪಿ ಸಂಜೀವ್ ಕುಮಾರ್ ಅವರನ್ನು ಸಂಘದ ಪ್ರತಿನಿಧಿಗಳು ಭೇಟಿ ಮಾಡಿದ್ದು, ಪತ್ರಿಕಾಭವನಕ್ಕೆ ತೆರಳುವ ಪತ್ರಕರ್ತರಿಗೆ ಪೂರ್ಣ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಜೊತೆಗೆ, ಪರಿಸ್ಥಿತಿ ಸುಧಾರಣೆಗೆ ಮೂರು ದಿನಗಳ ಕಾಲಾವಕಾಶ ನೀಡಿ ಸಹಕಾರ ನೀಡುವಂತೆ ವಿನಂತಿಸಿದರು.
ಈ ಭರವಸೆ ಹಾಗೂ ವಿನಂತಿಯನ್ನು ಪರಿಗಣಿಸಿ, ಪತ್ರಕರ್ತರ ಧ್ವನಿ ಸಂಘ-ಶಿವಮೊಗ್ಗ ಘಟಕವು ನವೆಂಬರ್ 20ಕ್ಕೆ ನಿಗದಿಯಾಗಿದ್ದ ಬೃಹತ್ ಪ್ರತಿಭಟನೆ, ಧರಣಿ ಮತ್ತು ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಆದರೆ ಪತ್ರಕರ್ತರ ಗೌರವ, ಹಕ್ಕು ಮತ್ತು ನ್ಯಾಯಕ್ಕಾಗಿ ಹೋರಾಟ ಮುಂದುವರಿಯುವುದನ್ನು ಸಂಘ ಸ್ಪಷ್ಟಪಡಿಸಿದೆ. ಮುಂದಿನ ಹೋರಾಟದ ಕ್ರಮಗಳು ಶೀಘ್ರದಲ್ಲೇ ಸದಸ್ಯರಿಗೆ ತಿಳಿಸಲಾಗುವುದು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಿ.ಜಿ. ನಾಗರಾಜ್, ಪ್ರಧಾನ ಕಾರ್ಯದರ್ಶಿ ಕೆ.ಎಂ. ಸತೀಶ್ ಗೌಡ, ಶಿವರಾಜ್, ಗಿರೀಶ್, ವಿಷ್ಣು, ಅಣ್ಣಪ್ಪ, ಅರವಿಂದ್, ನಾದೀಂ, ಬಾಬಣ್ಣ, ನಂದನ್ ಸಿಂಗ್ ಆಂಜನೇಯ, ಫಾರೂಕ್ ಉಪಸ್ಥಿತರಿದ್ದರು.





