ಶಬರಿಮಲೆ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಮಂಡಲ–ಮಕರವಿಳಕ್ಕು ಯಾತ್ರೆ ಆರಂಭಗೊಂಡಿದ್ದು, ದೇಶದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದ ದೇವಾಲಯ ಪ್ರದೇಶದಲ್ಲಿ ಭಾರಿ ಜನಸಂದಣಿ ಉಂಟಾಗಿ ನೂಕುನುಗ್ಗಲು ಪರಿಸ್ಥಿತಿ ನಿರ್ಮಾಣವಾಗಿದೆ.
ಜನಸಂದಣಿ ನಿಯಂತ್ರಣಕ್ಕಾಗಿ ಟ್ರಾವಂಕೂರ್ ದೇವಸ್ವಂ ಬೋರ್ಡ್ ನವೆಂಬರ್ 20ರಿಂದ ಪ್ರತಿದಿನ ಕೇವಲ 5,000 ಮಂದಿಗೆ ಮಾತ್ರ ಸ್ಪಾಟ್ ಬುಕ್ಕಿಂಗ್ ಅವಕಾಶ ನೀಡುವುದಾಗಿ ಘೋಷಿಸಿದೆ. ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆ ನಿಳಕ್ಕಲ್ ಮತ್ತು ವಂಡಿಪೆರಿಯಾರ್ ಕೇಂದ್ರಗಳಲ್ಲಿ ಮಾತ್ರ ಲಭ್ಯವಿರಲಿದೆ. ಪಂಪ, ಎರುಮೆಲಿ ಮತ್ತು ಚೆಂಗನೂರ್ ಕೇಂದ್ರಗಳಲ್ಲಿ ಈ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ನವೆಂಬರ್ 24ರವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ.
ಶಬರಿಮಲೆ ದರ್ಶನಕ್ಕಾಗಿ ಭಕ್ತರು ಸಾಧ್ಯವಾದಷ್ಟು ಆನ್‌ಲೈನ್ ಬುಕ್ಕಿಂಗ್ ಬಳಸಿ ಯಾತ್ರೆಗೆ ಬರಬೇಕೆಂದು ಟಿಡಿಬಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ನವೆಂಬರ್ 17ರಂದು ದೇವಾಲಯ ತೆರೆದ ನಂತರ ಕೇವಲ 48 ಗಂಟೆಗಳಲ್ಲೇ ಸುಮಾರು 2 ಲಕ್ಷ ಭಕ್ತರು ಆಗಮಿಸಿದ್ದರಿಂದ ಜನಸಂದಣಿ ನಿಯಂತ್ರಣಕ್ಕೆ ತೊಂದರೆ ಉಂಟಾಗಿದೆ.
ಮಂಡಲ–ಮಕರವಿಳಕ್ಕು ಋತುವಿನಲ್ಲಿ ಪ್ರತಿದಿನ ಸರಾಸರಿ 1 ಲಕ್ಷ ಯಾತ್ರಾರ್ಥಿಗಳು ದರ್ಶನಕ್ಕೆ ಬರುತ್ತಾರೆ. ವಾರ್ಷಿಕವಾಗಿ 50 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ಕಾರಣದಿಂದ ಪ್ರಸ್ತುತ ಸೌಲಭ್ಯಗಳ ನಿರ್ವಹಣೆಗಾಗಿ ಹೈಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ.
ಸನ್ನಿಧಾನಂ ಫ್ಲೈಓವರ್ ಉದ್ದಕ್ಕೂ ಉದ್ದನೆಯ ಸರದಿ, ಕುಡಿಯುವ ನೀರು ಮತ್ತು ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳ ಕೊರತೆಯನ್ನು ವಿವರಿಸುವ ಅರ್ಜಿಗಳನ್ನು ವಿಲೇವಾರಿ ಮಾಡುವ ವೇಳೆ ಹೈಕೋರ್ಟ್ ಟಿಡಿಬಿಯ ಕಾರ್ಯಪದ್ದತಿಯನ್ನು ಟೀಕಿಸಿದೆ.
ಅರ್ಜಿದಾರ ದೀಪಕ್ ಪ್ರವೀಣ್ ಮಾವಾನಿ, ಮೇ 16ರಂದು 18 ಪವಿತ್ರ ಮೆಟ್ಟಿಲುಗಳನ್ನು ಹತ್ತಿದ ನಂತರ ದರ್ಶನಕ್ಕೆ ಮೂರುವರೆ ಗಂಟೆ ಕಾಯಬೇಕಾದ ಪರಿಸ್ಥಿತಿ ಎದುರಾಯಿತು ಎಂದು ತಿಳಿಸಿದ್ದಾರೆ. ಜನಸಂದಣಿಯಲ್ಲಿ ನಿರಂತರ ತಳ್ಳಾಟ ಹಾಗೂ ಕುಡಿಯುವ ನೀರು–ಶೌಚಾಲಯದ ಕೊರತೆಯ ಬಗ್ಗೆ ಅವರು ನ್ಯಾಯಾಲಯಕ್ಕೆ ವಿವರಿಸಿದರು.
ಮತ್ತೊಬ್ಬ ಅರ್ಜಿದಾರ ಕೆ.ಕೆ. ರಾಜೀವ್ ಕುಮಾರ್ ಅವರು ವಸತಿ ಸೌಲಭ್ಯ ಪಡೆಯಲು ಮೂರು ಗಂಟೆಗಳ ಕಾಲ ಸರದಿಯಲ್ಲಿ ನಿಂತರೂ ಕೊಠಡಿ ಸಿಗಲಿಲ್ಲ ಎಂದು ದೂರು ನೀಡಿದರು. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿದ ಹೈಕೋರ್ಟ್, ಶಬರಿಮಲೆ ಸನ್ನಿಧಾನದಲ್ಲಿ ಮೂಲಭೂತ ಸೌಲಭ್ಯಗಳಲ್ಲಿ ತಕ್ಷಣ ಸುಧಾರಣೆ ಮಾಡಬೇಕೆಂದು ಟಿಡಿಬಿಗೆ ಆದೇಶಿಸಿದೆ.





