ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಬಿಸಿ ಚರ್ಚೆ : ‘ಪವರ್ ಶೇರಿಂಗ್’ ರಾಜಕೀಯಕ್ಕೆ ಹೊಸ ತಿರುವು

On: November 21, 2025 11:19 PM
Follow Us:

ರಾಜ್ಯದಲ್ಲಿ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸಿದ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮರುಜೀವಗೊಂಡಿದ್ದು, ಕಾಂಗ್ರೆಸ್ ಪಕ್ಷದೊಳಗಿನ ರಾಜಕೀಯ ತಾಪಮಾನ ಹೆಚ್ಚಾಗಿದೆ. ಡಿ.ಕೆ. ಶಿವಕುಮಾರ್ ಬಣ ಮತ್ತು ಸಿಎಂ ಸಿದ್ದರಾಮಯ್ಯ ಬಣಗಳ ನಡುವಿನ ‘ಪವರ್ ಶೇರಿಂಗ್’ ಹಂಗಾಮಾ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಡಿಕೆ ಬಣದ ಶಾಸಕರು ಹೈಕಮಾಂಡ್ ಭೇಟಿ ಮೂಲಕ ಒತ್ತಡ ಹೇರುತ್ತಿದ್ದರೆ, ಸಿಎಂ ಆಪ್ತರು ಡಿನ್ನರ್ ರಾಜಕೀಯದ ಮೂಲಕ ಪ್ರತಿತಂತ್ರ ರೂಪಿಸಿರುವುದು ಗಮನಾರ್ಹ.

ಡಿ.ಕೆ.ಶಿವಕುಮಾರ್ ಪರ ಶಾಸಕ, ನಾಯಕರು ನಿನ್ನೆ ದೆಹಲಿಗೆ ಹಾರಿದ್ದು ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಲು ತೆರಳಿದಾಗ ಅವರಿಗೆ ಹೆಚ್ಚಿನ ಅವಕಾಶ ನೀಡದೇ, “ಬೆಂಗಳೂರು ಬಂದ ನಂತರ ಮಾತಾಡೋಣ” ಎಂದು ಖರ್ಗೆ ಅವರು ಬಾಗಿಲಲ್ಲಿಯೇ ಹಿಂತಿರುಗಿಸಿದ್ದಾರೆ. ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ಶೃಂಗೇರಿ ಶಾಸಕ ರಾಜೇಗೌಡ, ಆನೇಕಲ್ ಶಾಸಕ ಶಿವಣ್ಣ, ನೆಲಮಂಗಲ ಶಾಸಕ ಶ್ರೀನಿವಾಸ್, ಕುಣಿಗಲ್ ಶಾಸಕ ರಂಗನಾಥ್ ಸೇರಿ ಹಲವರು ಡಿಕೆ ಪರವಾಗಿ ದೆಹಲಿಗೆ ತೆರಳಿದ್ದರು.

ಇದರ ನಡುವೆಯೇ ಬೆಂಗಳೂರಿನ ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಸಚಿವರು, ಶಾಸಕರು, ಪರಿಷತ್ ಸದಸ್ಯರು ಸೇರಿಕೊಂಡಿದ್ದು, ಮುಂದಿನ ರಾಜಕೀಯ ತಂತ್ರದ ಕುರಿತು ಚರ್ಚೆ ನಡೆದಿದೆ. ಸಚಿವ ಡಾ. ಎಂ.ಸಿ. ಸುಧಾಕರ್, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿ.ಸಿ. ಚಂದ್ರಶೇಖರ್ ಸೇರಿದಂತೆ ಹಲವರು ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ. ಡಿಕೆ ಬಣದ ಶಾಸಕರು ದೆಹಲಿಗೆ ಹೋದ ವಿಚಾರ ಕೇಳಿದಾಗ, “ನನಗೆ ಏನೂ ಗೊತ್ತಿಲ್ಲ” ಎಂಬ ಡಿಕೆಶಿಯ ಪ್ರತಿಕ್ರಿಯೆ ರಾಜಕೀಯ ಕುತೂಹಲ ಹೆಚ್ಚಿಸಿದೆ.

ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಬಣ ತಂತ್ರ ರೂಪಿಸಲು ಡಿನ್ನರ್ ನೆಪದಲ್ಲಿ ಪ್ರಮುಖ ನಾಯಕರನ್ನು ಸೇರಿಸಿದೆ. ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ದಿನೇಶ್ ಗುಂಡೂರಾವ್, ಮಹದೇವಪ್ಪ, ರಾಜಣ್ಣ ಮತ್ತು ಮುನಿಯಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಇಬ್ಬರ ಬಣಗಳ ಈ ಚಟುವಟಿಕೆಗಳು ಹೈಕಮಾಂಡ್ ಗಮನ ಸೆಳೆಯುವ ಪ್ರಯತ್ನ ಎಂದೇ ಕಾಣಿಸುತ್ತಿದೆ.

ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ “ಐದು ವರ್ಷ ನಾನೇ ಮುಖ್ಯಮಂತ್ರಿ” ಎಂಬ ಹೇಳಿಕೆ ನೀಡಿದ ಹಿನ್ನೆಲೆ, ಡಿಕೆಶಿ “ಐ ವಿಶ್ ಹಿಮ್ ಆಲ್ ದಿ ಬೆಸ್ಟ್” ಎಂದು ಟಾಂಗ್ ನೀಡಿದ್ದು, ಪವರ್ ಶೇರಿಂಗ್ ವಿಚಾರಕ್ಕೆ ಮತ್ತಷ್ಟು ಉರುಳಾಟ ತಂದಿದೆ. “ನಾನು ಯಾವುದೇ ಬಣದ ನಾಯಕನಲ್ಲ, 140 ಶಾಸಕರ ಅಧ್ಯಕ್ಷ” ಎಂಬ ಡಿಕೆಶಿಯ ಹೇಳಿಕೆ, ಬಣ ರಾಜಕಾರಣದ ಆರೋಪಗಳನ್ನು ತಳ್ಳಿ ಹಾಕಲು ಪ್ರಯತ್ನಿಸಿದಂತಾಗಿದೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರೂ, ಇಬ್ಬರ ಮಾತುಗಳಲ್ಲಿ ಅಡಗಿರುವ ರಾಜಕೀಯ ಸಂದೇಶ ಪಕ್ಷದ ಒಳ ಗೊಂದಲವನ್ನು ಸ್ಪಷ್ಟಪಡಿಸುತ್ತದೆ.

ರಾಜಕೀಯ ತಾಪಮಾನ ಹೆಚ್ಚುತ್ತಿರುವ ನಡುವೆಯೇ, ಡಿ.ಕೆ. ಶಿವಕುಮಾರ್ ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ಭೇಟಿ ನೀಡಿ ಮತ್ತೊಂದು ಕುತೂಹಲ ಮೂಡಿಸಿದ್ದಾರೆ. ಜೈಲಿನಲ್ಲಿ ಇರುವ ಸತೀಶ್ ಶೈಲ್, ವೀರೇಂದ್ರ ಪಪ್ಪಿ, ವಿನಯ್ ಕುಲಕರ್ಣಿ ಡಿಕೆಶಿ ಆಪ್ತರಾಗಿದ್ದು, ಅವರನ್ನು ಭೇಟಿಯಾದ ಡಿಕೆಶಿ ರಾಜಕೀಯ ಸೂಚನೆಗಳನ್ನು ಹಂಚಿಕೊಂಡಿರಬಹುದು ಎಂಬ ಊಹಾಪೋಹ ಜೋರಾಗಿದೆ. ಡಿಕೆ ಬಣದ ಶಾಸಕರನ್ನು ದೆಹಲಿಗೆ ಕಳುಹಿಸಿ, ತಾವು ಮನೆಯಿಂದ ಹೊರಬರದೆ ರಾಜಕೀಯ ಆಟವಾಡುತ್ತಿರುವಂತೆ ಚರ್ಚೆ ನಡೆಯುತ್ತಿದೆ.

ಈ ನಡುವೆ ಶರತ್ ಬಚ್ಚೆಗೌಡ ಕೂಡ ಖರ್ಗೆ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದು, ಡಿಕೆ ಬಣದ ಒತ್ತಡ ತಂತ್ರ ಮುಂದುವರಿದಿರುವುದನ್ನು ಸ್ಪಷ್ಟಪಡಿಸುತ್ತದೆ. ಖರ್ಗೆ ಅವರು ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಇರುವ ಕಾರಣ, ಇಬ್ಬರ ಬಣಗಳು ಅವರನ್ನು ಭೇಟಿಯಾಗಿ ತಮ್ಮ ನಿಲುವು ಮಂಡಿಸಲು ಸಜ್ಜಾಗಿವೆ. ರಾಜ್ಯ ಕಾಂಗ್ರೆಸ್‌ನಲ್ಲಿ ‘ನವೆಂಬರ್ ಕ್ರಾಂತಿ’ ಮಾತುಗಳು, ನಾಯಕತ್ವ ಬದಲಾವಣೆಯ ಗಾಳಿ, ಪವರ್ ಶೇರಿಂಗ್ ಜಗಳ ರಾಜಕೀಯಕ್ಕೆ ಹೊಸ ಉರುಳಾಟ ತಂದಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment