ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಪೋಕ್ಸೋ ಕೇಸ್‌ನಲ್ಲಿ ಮಹತ್ವದ ತೀರ್ಪು: ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ನಿರ್ದೋಷಿ,.!

On: November 26, 2025 11:00 PM
Follow Us:

ಚಿತ್ರದುರ್ಗ: ಬಹುಚರ್ಚಿತ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ನಿರಪರಾಧಿ ಎಂದು ಚಿತ್ರದುರ್ಗದ 2ನೇ ಅಪರ ಜಿಲ್ಲಾ ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣದ ವಾದ–ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿ ಸ್ವಾಮೀಜಿಯವರ ಬಿಡುಗಡೆಗೂ ಆದೇಶ ನೀಡಿದೆ.

ಮೈಸೂರು ನಜರಾಬಾದ್ ಠಾಣೆಯಲ್ಲಿ 2022ರ ಆಗಸ್ಟ್ 26ರಂದು ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ನೀಡಿದ್ದ ದೂರಿನ ಆಧಾರದ ಮೇಲೆ ಪೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ನಂತರ ಕೇಸ್ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆವಾಗಿ, ಡಿವೈಎಸ್ಪಿ ಅನಿಲ್ ನೇತೃತ್ವದ ತಂಡವು ತನಿಖೆ ನಡೆಸಿ ಒಟ್ಟು 694 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತ್ತು.

A1 ಮುರುಘಾಶ್ರೀ, A2 ವಾರ್ಡನ್ ರಶ್ಮಿ, A3 ಬಸವಾದಿತ್ಯ, A4 ಪರಮಶಿವಯ್ಯ ಮತ್ತು A5 ಗಂಗಾಧರಯ್ಯ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಲೇಡಿ ವಾರ್ಡನ್‌ ಮೂಲಕ ನಿರಂತರ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಪ್ರಮುಖ ಆರೋಪವೂ ಇದರಲ್ಲಿ ಸೇರಿತ್ತು.

ಮೊದಲ ಕೇಸ್‌ನಲ್ಲಿ ಎರಡು ಪ್ರತ್ಯೇಕ ಚಾರ್ಜ್‌ಶೀಟ್‌ಗಳು (A ಮತ್ತು B) ಸಲ್ಲಿಕೆಯಾಗಿದ್ದರೂ, ಅವುಗಳಲ್ಲಿ ಆರೋಪವನ್ನು ಸಾಬೀತುಪಡಿಸುವಂತೆ ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳು ಪರಿಪೂರ್ಣವಾಗಿರಲಿಲ್ಲ ಎಂದು ಕೋರ್ಟ್ ಗಮನಿಸಿದೆ. ಸಿ.ವಿ. ನಾಗೇಶ್ ಮುಂತಾದ ಹಿರಿಯ ವಕೀಲರು ಸ್ವಾಮೀಜಿಯ ಪರವಾಗಿ ವಾದ ಮಂಡನೆ ಮಾಡಿದ್ದು, ತನಿಖೆಯಲ್ಲಿರುವ ಲೋಪದೋಷಗಳು, ಸಾಕ್ಷ್ಯಗಳ ಕೊರತೆಗಳನ್ನು ಸ್ಪಷ್ಟವಾಗಿ ಪ್ರಸ್ತಾಪಿಸಿದ್ದರು.

ಕೋರ್ಟ್ ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಗಂಗಾಧರ್ ಚನ್ನಬಸಪ್ಪ ಹಡಪ ಅವರು “ಸಾಕ್ಷ್ಯಾಧಾರಗಳು ಪರ್ಯಾಪ್ತವಾಗಿಲ್ಲ” ಎಂಬ ಆಧಾರದ ಮೇಲೆ ಮೊದಲ ಪೋಕ್ಸೋ ಕೇಸ್‌ನಲ್ಲಿ ಸ್ವಾಮೀಜಿ ನಿರಪರಾಧಿ ಎಂದು ಘೋಷಿಸಿದ್ದಾರೆ.

ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವ ಕುರಿತು ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಅವರು ತೀರ್ಪಿನ ಪ್ರತಿಯನ್ನು ಪಡೆದು ಸಂಪೂರ್ಣ ಅಧ್ಯಯನ ನಡೆಸುವುದಾಗಿ ತಿಳಿಸಿದ್ದಾರೆ. ನಂತರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದೂ ಹೇಳಿದ್ದಾರೆ. ರಾಜ್ಯ ಸರ್ಕಾರವೂ ಪ್ರಾಸಿಕ್ಯೂಷನ್‌ ಮೂಲಕ ಮೇಲ್ಮನವಿ ಸಲ್ಲಿಸಬಹುದಾಗಿದೆ.

ಪೋಕ್ಸೋ ಕೇಸ್‌ಗಳಲ್ಲಿ ಸಂತ್ರಸ್ತೆಯರ ಹೇಳಿಕೆ ಮುಖ್ಯ ಸಾಕ್ಷಿಯಾಗಿದ್ದರೂ, ಅದಕ್ಕೆ ಪೂರಕವಾದ ದೃಢವಾದ ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯಾಧಾರಗಳ ಕೊರತೆ ಇದ್ದಲ್ಲಿ, ಕೋರ್ಟ್ ಆರೋಪಿಗಳನ್ನು ನಿರಪರಾಧಿಗಳೆಂದು ಪರಿಗಣಿಸುವುದು ಸಹಜ. ಈ ಪ್ರಕ್ರಿಯೆಯನ್ನು ಇಲ್ಲಿ ಕೂಡ ಕೋರ್ಟ್ ಹಿಂಬಾಲಿಸಿದೆ ಎಂದು ಕಾನೂನು ವಲಯದವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾ ಕೋರ್ಟ್‌ನ ತೀರ್ಪು ಅಂತಿಮವಲ್ಲ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ವರೆಗೆ ಕೇಸ್ ಸಾಗುವ ಸಾಧ್ಯತೆ ಇದ್ದು, ಮುಂದಿನ ಹಂತದಲ್ಲಿ ಎರಡೂ ಪಕ್ಷಗಳ ಕಾನೂನು ಹೋರಾಟ ತೀವ್ರಗೊಳ್ಳುವ ಸೂಚನೆಗಳು ಕಂಡುಬರುತ್ತಿವೆ.

K.M.Sathish Gowda

Join WhatsApp

Join Now

Facebook

Join Now

Leave a Comment