ಬೆಂಗಳೂರು, ನವೆಂಬರ್ 27: ರಾಜ್ಯ ರಾಜಕೀಯದಲ್ಲಿ ತಿಂಗಳುಗಳಿಂದ ಮುಂದುವರಿದಿದ್ದ ‘ಕುರ್ಚಿ ಕದನ’ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೇ ಹೊಸ ಹಂತಕ್ಕೇರಿದೆ. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಎಲ್ಲವೂ ಸಾಮರಸ್ಯದಲ್ಲಿದೆ ಎಂಬ ಹೇಳಿಕೆಗಳು ಬರುತ್ತಿದ್ದರೂ, ಇಬ್ಬರ ಇಂದಿನ ಪೋಸ್ಟ್‌ಗಳು ಸರ್ಕಾರದ ಒಳಗಿನ ಒತ್ತಡವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿವೆ.
ಬೆಳಿಗ್ಗೆ ಡಿಕೆಶಿ ಎಕ್ಸ್ ಖಾತೆಯಲ್ಲಿ, “ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ದೊಡ್ಡ ಶಕ್ತಿ. ಯಾರೇ ಆಗಿರಲಿ—ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ, ನಾನಾಗಲಿ—ಕೊಟ್ಟ ಮಾತನ್ನು ಪಾಲಿಸಲೇಬೇಕು”ಎಂದು ಬರೆದಿದ್ದರು. ಈ ಹೇಳಿಕೆ ‘ಸಿಎಂ ಹಸ್ತಾಂತರ ಒಪ್ಪಂದ’ದತ್ತ ಪರೋಕ್ಷವಾಗಿ ಸೂಚಿಸುತ್ತಿದೆ ಎಂಬ ರಾಜಕೀಯ ಚರ್ಚೆ ತೀವ್ರಗೊಂಡಿತ್ತು. ಆದರೆ, ಮಾಧ್ಯಮಗಳು ಪ್ರಶ್ನಿಸಿದಾಗ “ನಾನು ಅಂಥ ಪೋಸ್ಟ್ ಮಾಡಿಲ್ಲ” ಎಂಬ ಡಿಕೆಶಿಯ ಉತ್ತರ ಮತ್ತಷ್ಟು ಕುತೂಹಲಕ್ಕೆ ಕಾರಣವಾಯಿತು.
ಆದರೆ, ಕೆಲವು ಗಂಟೆಗಳಲ್ಲೇ ಸಿಎಂ ಸಿದ್ದರಾಮಯ್ಯ, ಡಿಕೆಶಿಯ ಹೇಳಿಕೆಗೆ ನೇರ ಪ್ರತಿಕ್ರಿಯೆಯಂತಿರುವ ಪೋಸ್ಟ್ ಒಂದನ್ನು ಹಂಚಿಕೊಂಡರು. “ಕರ್ನಾಟಕದ ಜನತೆಗೆ ನಾವು ಕೊಟ್ಟ ಮಾತು ಘೋಷಣೆ ಅಲ್ಲ; ಜನರ ಹಿತಕ್ಕಾಗಿ ಮಾಡಿದ ಕಾರ್ಯವೇ ನಮ್ಮ ನಿಜವಾದ ಮಾತು. ಮಾತು ಶಕ್ತಿಯಾಗುವುದು ಅದು ಜನರ ಬದುಕಿಗೆ ಬದಲಾವಣೆ ತರುತ್ತಿದ್ದಾಗ ಮಾತ್ರ,” ಎಂದು ಸಿಎಂ ಬರೆದುಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ, ಹಿಂದಿನ ಸರ್ಕಾರದಲ್ಲಿ ನೀಡಿದ 165 ಭರವಸೆಗಳಲ್ಲಿ 157 ಈಡೇರಿಸಿದ್ದೇವೆ ಮತ್ತು ಈಗಿನ ಅವಧಿಯಲ್ಲಿ 593 ಭರವಸೆಗಳಲ್ಲಿ 243 ಪೂರ್ಣಗೊಂಡಿವೆ ಎಂಬ ಅಂಕಿಅಂಶಗಳನ್ನು ಸಿಎಂ ಪ್ರಕಟಿಸಿದರು. ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಡಿ 600 ಕೋಟಿಗೂ ಹೆಚ್ಚು ಪ್ರಯಾಣ ನಡೆದಿರುವುದನ್ನು ಉಲ್ಲೇಖಿಸಿ, “ನಾವು ಮಾತಿನಲ್ಲಿ ಅಲ್ಲ, ಕಾರ್ಯದಲ್ಲಿ ಭರವಸೆ ತೋರಿಸಿದ್ದೇವೆ. ಜನರ ನಂಬಿಕೆಗೆ ನೀಡಿದ ಅಧಿಕಾರ ಐದು ವರ್ಷದ ಹೊಣೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಸಿಎಂ–ಡಿಕೆಶಿ ನಡುವಿನ ಈ ‘ಪೋಸ್ಟ್ ಕಾಳಗ’ ಮತ್ತೆ ಕಾಂಗ್ರೆಸ್ ಸರ್ಕಾರದ ಒಳ ಕಿಚ್ಚನ್ನು ಮೇಲ್ಮೈಗೆ ತರುತ್ತಿದೆ. ಅಧಿಕಾರ ಹಸ್ತಾಂತರ ವಿಚಾರ ರಾಜಕೀಯವಾಗಿ ಬಿಸಿ ಆಗುತ್ತಿರುವ ಸಂದರ್ಭದಲ್ಲಿ, ಹೈಕಮಾಂಡ್ ಮಧ್ಯಪ್ರವೇಶಿಸುವ ಸಾಧ್ಯತೆಗಳೂ ಚರ್ಚೆಗೆ ಗ್ರಾಸವಾಗಿವೆ.
ಒಟ್ಟಾರೆ, ಕುರ್ಚಿ ಕದನದ ರಾಜಕೀಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ತಿರುವು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುವುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.





