ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ರಾಜ್ಯದಲ್ಲಿ ಆಕ್ರಮ ನಿವೇಶನ ಸಕ್ರಮ: ಇ-ಸ್ವತ್ತು 2.0ಗೆ ಚಾಲನೆ: ಕೇಂದ್ರದ ಮಲತಾಯಿ ಧೋರಣೆ ಬಗ್ಗೆ ಡಿಕೆಶಿ ಬೇಸರ

On: December 1, 2025 9:28 PM
Follow Us:

ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಕ್ರಮ ನಿವೇಶನಗಳನ್ನು ಸಕ್ರಮಗೊಳಿಸಲು ಮಹತ್ವದ ಹೆಜ್ಜೆ ಇಟ್ಟಿದ್ದು, ಇ-ಸ್ವತ್ತು 2.0 ತಂತ್ರಾಂಶಕ್ಕೆ ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಿದರು. ಗ್ರಾಮೀಣ ಜನರಿಗೂ ಆಸ್ತಿ ದಾಖಲೆಗಳನ್ನು ನಿಖರವಾಗಿ ಒದಗಿಸುವ ಉದ್ದೇಶದಿಂದ ರೂಪಿಸಿದ ಈ ವ್ಯವಸ್ಥೆಯು,“ಕಚೇರಿ ಅಲೆದಾಟವಿಲ್ಲದೆ 15 ದಿನಗಳೊಳಗೆ 11B ಖಾತೆ ನೀಡುವ” ಸುಗಮ ಸೇವೆಗೆ ದಾರಿ ತೆರೆದಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ನರೇಗಾ ಮತ್ತು ಜಲಜೀವನ್ ಮಿಷನ್ ಯೋಜನೆಗಳ ವಿಷಯದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 2021ರಲ್ಲಿ ನರೇಗಾದಡಿ 14.65 ಕೋಟಿ ಮಾನವ ಕೂಲಿ ದಿನಗಳಿದ್ದರೆ, ಈ ವರ್ಷ ಅದನ್ನು 9 ಕೋಟಿಗೆ ಇಳಿಸಲಾಗಿದೆ. 5,910 ಕೋಟಿಯಿಂದ 2,691 ಕೋಟಿಗೆ ಅನುದಾನ ಕಡಿತಗೊಂಡಿದ್ದು, ಇದು ಸುಮಾರು 40% ಕುಗ್ಗುವಿಕೆಯಾಗಿದೆ ಎಂದು ಅವರು ವಿವರಿಸಿದರು. ಅದೇ ರೀತಿ, ಜಲಜೀವನ್ ಮಿಷನ್ ಯೋಜನೆಗೆ ರಾಜ್ಯ ಸರ್ಕಾರ 3,700 ಕೋಟಿ ರೂ. ನೀಡಿರುವಾಗ ಕೇಂದ್ರದಿಂದ ಈವರೆಗೂ ಅನುದಾನವೇ ಸಿಕ್ಕಿಲ್ಲ ಎನ್ನುವುದು ಗಂಭೀರ ವಿಷಯ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ 25 ಸಾವಿರ ಕೋಟಿ ರೂ. ಅನುದಾನವನ್ನು ಜಲಜೀವನ್ ಮಿಷನ್, ನರೇಗಾ, ಗ್ರಾಮೀಣ ರಸ್ತೆ ನಿರ್ಮಾಣ, ಸಿಎಂ ಮೂಲಭೂತ ಸೌಕರ್ಯ, ಕಲ್ಯಾಣ ಪಥ ಯೋಜನೆಗಳಿಗೆ ಹಂಚಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಜನಗಳ ಬದುಕಿಗೆ ನೇರವಾಗಿ ಸಂಬಂಧಿಸಿದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಇ-ಸ್ವತ್ತು 2.0 ಕುರಿತು ಮಾತನಾಡಿದ ಡಿಕೆಶಿ, “ನಿಮ್ಮ ಮನೆ ಬಾಗಿಲಿಗೇ ಇ-ಸ್ವತ್ತು ಸೇವೆ ತರುತ್ತಿದ್ದೇವೆ. ಗ್ರಾಮೀಣ ಪ್ರದೇಶದ ಎಲ್ಲಾ ಆಸ್ತಿಗಳಿಗೆ 11B ಖಾತೆ ನೀಡಲಾಗುತ್ತದೆ. ತೆರಿಗೆ ಪಾವತಿಸುವುದರಿಂದ ಹಿಡಿದು ದಾಖಲೆ ತಿದ್ದುಪಡಿ ವರೆಗೆ ಎಲ್ಲವೂ ಸುಲಭವಾಗಲಿದೆ” ಎಂದು ಹೇಳಿದರು. ಇದುವರೆಗೆ ರಾಜ್ಯದ 1.48 ಕೋಟಿ ಮನೆಗಳಲ್ಲಿ 53 ಲಕ್ಷ ಮನೆಗಳಿಗೆ ಮಾತ್ರ ಇ-ಸ್ವತ್ತು ಮಾಡಲಾಗಿದ್ದು, ಬಾಕಿ 95 ಲಕ್ಷ ಮನೆಗಳಿಗೆ ಶೀಘ್ರದಲ್ಲಿ ಸೇವೆ ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಭೂ ದಾಖಲೆ ವಿತರಣೆ ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿ ಎಂದು ಡಿಕೆಶಿ ಸ್ಪಷ್ಟಪಡಿಸಿದರು. ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳಿಗೆ ಇ-ಖಾತಾ ಅಭಿಯಾನ ನಡೆಸಿ, 6 ಲಕ್ಷ ಜನರಿಗೆ ಖಾತೆ ವಿತರಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ 1,11,111 ಮನೆಗಳಿಗೆ ಹಕ್ಕುಪತ್ರಗಳನ್ನು ನೀಡಿರುವುದನ್ನೂ ಅವರು ಉದಾಹರಿಸಿದರು.

ನರೇಗಾ ಯೋಜನೆ ಅಡಿಯಲ್ಲಿ ತಮ್ಮ ಕ್ಷೇತ್ರದಲ್ಲಿ 250 ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದಾಗ, ಇದನ್ನು ನೋಡಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಗಾಬರಿಯಾಗಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿತು ಎಂದು ಡಿಕೆಶಿ ಹೇಳಿದರು. ಆದರೆ ಜನರ ಹಿತಕ್ಕಾಗಿ ಮಾಡಿದ ಕೆಲಸಕ್ಕೆ ಪ್ರಶಸ್ತಿ ದೊರೆತಿದ್ದು, ತಮ್ಮ ತಾಲೂಕು ಪಂಚಾಯ್ತಿ ಈ ಬಗ್ಗೆ ರಾಜ್ಯ ಮಟ್ಟದ ಗೌರವ ಪಡೆದಿದೆ ಎಂದು ಅವರು ನೆನಪಿಸಿದರು.

ಸ್ಥಳೀಯ ಸಂಸ್ಥೆಗಳ ಮಹತ್ವವನ್ನು ಉಲ್ಲೇಖಿಸಿದ ಅವರು, ರಾಜೀವ್ ಗಾಂಧಿ ತಂದ 73 ಮತ್ತು 74ನೇ ತಿದ್ದುಪಡಿ ದೇಶದಲ್ಲಿ ಹೊಸ ನಾಯಕರನ್ನು ತರಲು ಕಾರಣವಾಗಿದೆ ಎಂದು ಹೇಳಿದರು. ತಾವು ಕೂಡ ಪಂಚಾಯಿತಿ ಸ್ಥರದಿಂದಲೇ ರಾಜಕೀಯ ಪ್ರವಾಸ ಆರಂಭಿಸಿ ದೊಡ್ಡ ಸ್ಥಾನ ತಲುಪಿರುವುದನ್ನು ಉದಾಹರಿಸಿದರು. ಜನಪ್ರತಿನಿಧಿಗಳು ಕಾನೂನು ತಿಳಿದು, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು; ಜನರ ಸೇವೆಯಲ್ಲಿ ಪ್ರೀತಿ, ತಾಳ್ಮೆ ಹಾಗೂ ಬದ್ಧತೆ ಮುಖ್ಯ ಎಂದು ಅವರು ಸಲಹೆ ನೀಡಿದರು.

K.M.Sathish Gowda

Join WhatsApp

Join Now

Facebook

Join Now

Leave a Comment