ಬೆಳಗಾವಿ, ಡಿ.8: ನಮ್ಮ ರಕ್ತದಲ್ಲಿ ಕನ್ನಡ ಇದೆ. ಕನ್ನಡ ಮಾಧ್ಯಮದ ಯಾವುದೇ ಶಾಲೆಯನ್ನು ನಮ್ಮ ಸರ್ಕಾರ ಮುಚ್ಚುವುದಿಲ್ಲ. ಒಬ್ಬ ಮಗು ಇದ್ದರೂ ಆ ಶಾಲೆಗೆ ಒಬ್ಬ ಟೀಚರ್ ಇರ್ತಾರೆ. ಮಕ್ಕಳು ಬಂದರೆ ಹೊಸ ಶಾಲೆಗಳನ್ನೂ ಆರಂಭಿಸುತ್ತೇವೆ, ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನ ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಸ್ಪಷ್ಟಪಡಿಸಿದರು.
ಬಿಜೆಪಿ ಸದಸ್ಯ ಚಿದಾನಂದ ಎಂ. ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುತ್ತಾ, ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲಿರುವ ಆರೋಪವನ್ನು ಸಚಿವರು ತಳ್ಳಿ ಹಾಕಿದರು. ಗ್ರಾಮ ಪಂಚಾಯಿತಿಗೆ ಒಂದು ಶಾಲೆ ಮಾಡುವುದು ಸರ್ಕಾರದ ಉದ್ದೇಶ. ಕೆಪಿಎಸ್ ಶಾಲೆಗಳಿಗೆ ಹಳೆಯ ಕಟ್ಟಡ ಬೇಡ, ಹೊಸ ಕ್ಯಾಂಪ್ ನಿರ್ಮಾಣ ಮಾಡಬೇಕು. ಪ್ರತಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಇರಬೇಕು, ಕೆಪಿಎಸ್ ಶಾಲೆಗಳನ್ನು 6 ರಿಂದ 12ನೇ ತರಗತಿವರೆಗೆ ವಿಸ್ತರಿಸಬೇಕು, ಎಂದು ಸದಸ್ಯ ಚಿದಾನಂದಗೌಡ ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, 2025-26ನೇ ಸಾಲಿನಲ್ಲಿ 900 ಸರ್ಕಾರಿ ಶಾಲೆಗಳನ್ನು ಕೆಪಿಎಸ್ (KPS) ಶಾಲೆಗಳಾಗಿ ಉನ್ನತೀಕರಿಸಲಾಗುತ್ತಿದೆ ಎಂದು ಘೋಷಿಸಿದರು. ಬಜೆಟ್‌ನಲ್ಲಿ 500 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸುವ ಯೋಜನೆಗೂ ಅವರು ಉಲ್ಲೇಖ ಮಾಡಿದರು. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 309 ಕೆಪಿಎಸ್ ಶಾಲೆಗಳಲ್ಲಿ 2,72,464 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದನ್ನು ಸಚಿವರು ತಿಳಿಸಿದರು.
ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕ
ಕೆಪಿಎಸ್ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ. ಶಿಕ್ಷಕರ ಕೋರಿಕೆ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ, ಅದನ್ನು ಪೂರ್ಣಗೊಳಿಸಿದ ನಂತರ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆಗೆ ಆದ್ಯತೆ ನೀಡಿ, ಕೆಪಿಎಸ್ ಶಾಲೆಗಳಲ್ಲಿ ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
‘ಉತ್ತಮ ಕಲಿಕೆ–ಉಜ್ವಲ ಭವಿಷ್ಯ’ ಗುರಿ
“ಉತ್ತಮ ಕಲಿಕೆ, ಉಜ್ವಲ ಭವಿಷ್ಯ” ಎಂಬ ಧ್ಯೇಯದೊಂದಿಗೆ ಕೆಪಿಎಸ್ ಶಾಲೆಗಳಿಗೆ ಏಕರೂಪದ ನೀತಿ ಅನುಷ್ಠಾನಗೊಳಿಸಲು ಕರ್ನಾಟಕ ಪಬ್ಲಿಕ್ ಶಾಲಾ ಮಾನಕಗಳು ಕೈಪಿಡಿ ಸಿದ್ಧವಾಗಿದೆ ಎಂದು ಸಚಿವರು ಹೇಳಿದರು. ಪ್ರತಿ ಶಾಲೆಯಲ್ಲಿ ಕನಿಷ್ಠ 1200 ವಿದ್ಯಾರ್ಥಿಗಳಿಗೆ ತಕ್ಕಂತೆ ಶೈಕ್ಷಣಿಕ ಹಾಗೂ ಭೌತಿಕ ಸೌಕರ್ಯಗಳನ್ನು ಒದಗಿಸುವ ಮೂಲಕ ಹಂತ ಹಂತವಾಗಿ ಉನ್ನತೀಕರಣ ಮಾಡಲಾಗುವುದಾಗಿದೆ.
ಈ ಘೋಷಣೆಗಳ ಮೂಲಕ ಸರ್ಕಾರವು ಕನ್ನಡ ಮಾಧ್ಯಮ ಶಿಕ್ಷಣವನ್ನು ಬಲಪಡಿಸುವತ್ತ ಗಂಭೀರವಾದ ದೃಷ್ಟಿಯನ್ನು ತೋರಿಸಿದೆ. ಆದರೆ ಶಿಕ್ಷಕರ ಕೊರತೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಹೂಡಿಕೆ–ಇವುಗಳ ಪರಿಣಾಮಕಾರಿ ಅನುಷ್ಠಾನ ಅತ್ಯಗತ್ಯವಾಗುತ್ತದೆ.






