ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ರಾಜ್ಯಾದ್ಯಂತ ಲೋಕಾಯುಕ್ತ ರೇಡ್‌: ನಾಲ್ವರು ಅಧಿಕಾರಿಗಳ ಮನೆ–ಕಚೇರಿ ಶೋಧ, 18.2 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ

On: December 16, 2025 11:15 PM
Follow Us:

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿತ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬೆಳಗಾವಿ, ಧಾರವಾಡ, ಶಿವಮೊಗ್ಗ, ಮಂಡ್ಯ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ನಡೆದ ಈ ದಾಳಿಯಲ್ಲಿ ಒಟ್ಟು 21 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದ್ದು, ಸುಮಾರು 18.2 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಬೆಳಗಾವಿಯ ಕೃಷಿ ಇಲಾಖೆಯ ವಿಜಿಲೆನ್ಸ್ ಸೆಲ್‌ನ ಜಂಟಿ ನಿರ್ದೇಶಕ ರಾಜಶೇಖರ್ ಈರಪ್ಪ ಬಿಜಾಪುರ ಅವರ ಮನೆ ಮೇಲೆ ನಡೆದ ದಾಳಿ ವೇಳೆ ಅಚ್ಚರಿಯ ಘಟನೆ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ಮನೆಗೆ ಬಂದ ಸಂದರ್ಭದಲ್ಲಿ ಗಾಬರಿಗೊಂಡ ರಾಜಶೇಖರ್ ಸುಮಾರು 50 ಸಾವಿರ ರೂ. ನಗದನ್ನು ಟಾಯ್ಲೆಟ್ ಕಮೋಡ್‌ಗೆ ಹಾಕಿ ಫ್ಲಷ್ ಮಾಡಿದ ಆರೋಪ ಎದುರಿಸಿದ್ದಾರೆ. ಅಲ್ಲದೇ ಅವರು ಅರ್ಧ ಗಂಟೆಗೂ ಹೆಚ್ಚು ಸಮಯ ಮನೆಯ ಬಾಗಿಲು ತೆರೆಯದೇ ಅಧಿಕಾರಿಗಳನ್ನು ಹೊರಗೆ ಕಾಯಿಸಿದ ಬಳಿಕ ಒಳಗೆ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ. ಬಿಜಾಪುರ, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಚಿತ್ರದುರ್ಗದಲ್ಲಿರುವ ಅವರ ಮನೆಗಳ ಮೇಲೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ಮುಂದುವರಿದಿದೆ.

ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಲ್.ಆರ್. ಶಂಕರ್ ನಾಯಕ್ ಅವರ ಮನೆ, ಕಚೇರಿ ಹಾಗೂ ಖಾಸಗಿ ಆಸ್ಪತ್ರೆಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೊಸಪೇಟೆ ನಗರದ ಜಂಬುನಾಥ ರಸ್ತೆಯಲ್ಲಿರುವ ನಿವಾಸ ಹಾಗೂ ಸಮೀಪದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆಯಿಂದಲೇ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಶಂಕರ್ ನಾಯಕ್ ಅವರ ಪತ್ನಿ ಆಸ್ಪತ್ರೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರೂಪ್ಲಾ ನಾಯಕ್ ಎಸ್. ಅವರ ಮನೆ ಮತ್ತು ಕಚೇರಿಗಳ ಮೇಲೆ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಬಸವನಗುಡಿ ನಿವಾಸ, ಕಚೇರಿ, ಬೆಂಗಳೂರಿನ ಕೆಂಗೇರಿ ಹಾಗೂ ಕುಂಬಳಗೋಡು ಸಮೀಪದ ಮನೆಗಳು ಮತ್ತು ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ನಿವಾಸದಲ್ಲಿ ಶೋಧ ಕಾರ್ಯ ನಡೆದಿದೆ. ದಾಳಿಯ ವೇಳೆ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಚೇರಿ ಅಧೀಕ್ಷಕ ಬೈರೇಶ್ ವಿ.ಎಸ್. ಅವರ ಮನೆ, ಮದ್ದೂರಿನ ಅತ್ತೆ ಮನೆ ಹಾಗೂ ಕಚೇರಿಯ ಮೇಲೂ ದಾಳಿ ನಡೆದಿದೆ. ಸಾರ್ವಜನಿಕರಿಂದ ಬಂದ ಅನೇಕ ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಲೋಕಾಯುಕ್ತ ಅಧಿಕಾರಿಗಳ ಪ್ರಕಾರ, ದಾಳಿಗೆ ಒಳಗಾದ ನಾಲ್ವರು ಅಧಿಕಾರಿಗಳ ಪೈಕಿ ರಾಜಶೇಖರ್ ಅವರ ಬಳಿ ಅತಿ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದ್ದು, ಅದರ ಮೌಲ್ಯ 6.07 ಕೋಟಿ ರೂ. ಆಗಿದೆ. ಅವರ ಬಳಿ ಮೂರು ಪ್ಲಾಟ್‌ಗಳು, ಮೂರು ಮನೆಗಳು, ಸುಮಾರು 19 ಲಕ್ಷ ರೂ. ಮೌಲ್ಯದ ಆಭರಣಗಳು ಹಾಗೂ 38.8 ಲಕ್ಷ ರೂ. ಮೌಲ್ಯದ ವಾಹನಗಳು ಇರುವುದನ್ನು ಅಧಿಕಾರಿಗಳು ಗುರುತಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಈ ದಾಳಿಗಳು ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಮಹತ್ವದ ಸಂದೇಶ ನೀಡಿದ್ದು, ದಾಖಲೆಗಳ ಪರಿಶೀಲನೆ ಮತ್ತು ಮುಂದಿನ ಕಾನೂನು ಕ್ರಮಗಳು ಮುಂದುವರಿಯಲಿವೆ ಎಂದು ಲೋಕಾಯುಕ್ತ ಮೂಲಗಳು ಸ್ಪಷ್ಟಪಡಿಸಿವೆ.

K.M.Sathish Gowda

Join WhatsApp

Join Now

Facebook

Join Now

Leave a Comment