ಬೆಳಗಾವಿ : ವಿಧಾನಪರಿಷತ್ ಸದನದಲ್ಲಿ ಇಂದು ಕಾವೇರಿ–2 ವ್ಯವಸ್ಥೆಯ ಸರ್ವರ್ ದೋಷ ಮತ್ತು ಇ–ಸ್ವತ್ತು ವ್ಯವಸ್ಥೆಯೊಂದಿಗೆ ಸಂಯೋಜನೆಯಿಂದ ಉಂಟಾಗಿರುವ ಗಂಭೀರ ತಾಂತ್ರಿಕ ಸಮಸ್ಯೆಗಳ ಕುರಿತು ತೀವ್ರ ಚರ್ಚೆ ನಡೆಯಿತು. ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಅವರು, ಈ ಸಮಸ್ಯೆಯಿಂದ ಸಾರ್ವಜನಿಕರು, ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಮೊದಲ ಬಾರಿಗೆ ಉಪನೋಂದಣಿ ಕಚೇರಿಗೆ ಬರುವವರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸರ್ಕಾರದ ಗಮನ ಸೆಳೆದರು.

ಕಾವೇರಿ–2 ವ್ಯವಸ್ಥೆಯನ್ನು ಇ–ಸ್ವತ್ತಿನೊಂದಿಗೆ ಸಂಯೋಜಿಸಿದ ಬಳಿಕ ವಿಭಾಗ ಪತ್ರಗಳ ಮೂಲಕ ಆಸ್ತಿ ನೋಂದಣಿ ಹಾಗೂ ಪಾರಂಪರಿಕ ಆಸ್ತಿಗಳ ವರ್ಗಾವಣೆಯಲ್ಲಿ ತಾಂತ್ರಿಕ ಅಡಚಣೆಗಳು ಎದುರಾಗುತ್ತಿವೆ. ಎರಡು ಪ್ರಮುಖ ಸಾಫ್ಟ್‌ವೇರ್‌ಗಳನ್ನು ಸಂಯೋಜಿಸುವಾಗ ಅಗತ್ಯ ಸರ್ವರ್ ಸಾಮರ್ಥ್ಯವನ್ನು ಹೆಚ್ಚಿಸದಿರುವುದೇ ಸಮಸ್ಯೆಗಳ ಮೂಲ ಕಾರಣವಾಗಿದ್ದು, ಇದರಿಂದ ಸರ್ಕಾರದ ರಾಜಸ್ವ ಸಂಗ್ರಹಕ್ಕೂ ಧಕ್ಕೆಯಾಗುತ್ತಿದೆ ಎಂದು ಡಿ.ಎಸ್. ಅರುಣ್ ವಿವರಿಸಿದರು.
ಇದಕ್ಕೂ ಜೊತೆಗೆ ಖಾತಾ ವಿಭಜನೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿದ್ದು, ಜನಸಾಮಾನ್ಯರಿಗೆ ಅನಗತ್ಯ ವಿಳಂಬ ಮತ್ತು ಅನಾನುಕೂಲ ಉಂಟಾಗುತ್ತಿದೆ ಎಂದು ಅವರು ಉಲ್ಲೇಖಿಸಿ, ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಕಾವೇರಿ–2 ಮತ್ತು ಇ–ಸ್ವತ್ತು ಸಂಯೋಜನೆಯಿಂದ ಸರ್ವರ್ ಹಾಗೂ ಖಾತಾ ವಿಭಜನೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಿರುವುದನ್ನು ಒಪ್ಪಿಕೊಂಡರು. ನಗರಸಭೆಗಳು ಚೆಕ್‌ಬಂದಿ ಪ್ರಕ್ರಿಯೆಯಲ್ಲಿ ಆದಷ್ಟು ಬೇಗನೆ ಕ್ರಮ ವಹಿಸಿ ಸಾರ್ವಜನಿಕರಿಗೆ ಸಹಕಾರ ನೀಡುವಂತೆ ಸೂಚಿಸಲಾಗುವುದು ಎಂದು ಹೇಳಿದರು. ಜೊತೆಗೆ ಆರ್‌ಡಿಪಿಆರ್ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶೀಘ್ರದಲ್ಲೇ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಸ್ತುತ ಸರ್ವರ್ ಸಮಸ್ಯೆ ಗಂಭೀರವಾಗಿದ್ದು, ಅದನ್ನು ಸರಿಪಡಿಸಲು ಅಗತ್ಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ಅಲ್ಲದೆ, ಈ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಡೀಡ್ ರೈಟರ್‌ಗಳಿಗೆ ಫಲಾನುಭವಿಗಳು ಹಾಗೂ ಸಾರ್ವಜನಿಕರ ವಿವರಗಳನ್ನು ಅಪ್‌ಲೋಡ್ ಮಾಡುವ ಅವಕಾಶ ನೀಡುವ ಕುರಿತು ಸಹ ಪರಿಗಣಿಸಲಾಗುವುದು ಎಂದು ತಿಳಿಸಿದರು. ಈ ಕುರಿತು ಡಿ.ಎಸ್. ಅರುಣ್ ಅವರು ನೀಡಿದ ಸಲಹೆಯನ್ನು ಸ್ವೀಕರಿಸಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ತ್ವರಿತ ಮತ್ತು ಸುಲಭ ಸೇವೆ ದೊರೆಯಲಿದೆ ಎಂದು ಸಚಿವರು ಹೇಳಿದರು.






