ಶಿವಮೊಗ್ಗ : ಅನಾರೋಗ್ಯದ ಕಾರಣ ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಅನಾಮಧೇಯ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಉಸಿರಾಟದ ತೊಂದರೆಯಿಂದ ಅದೇ ದಿನ ಮೃತಪಟ್ಟ ಘಟನೆ ನಡೆದಿದೆ. ಆಸ್ಪತ್ರೆಗೆ ದಾಖಲಾಗುವ ವೇಳೆ ಮಹಿಳೆಯು ತನ್ನ ಹೆಸರನ್ನು ತಿಳಿಸದೆ, ಕೇವಲ “ಮೈಸೂರು” ಎಂಬ ಊರಿನ ಹೆಸರು ಮಾತ್ರ ಹೇಳಿದ್ದರು.
ಮೃತೆಯ ವಾರಸುದಾರರನ್ನು ಪತ್ತೆಹಚ್ಚಲು ಪರಿಶೀಲನೆ ನಡೆಸಿದಾಗ ಯಾವುದೇ ಸ್ಪಷ್ಟ ಸುಳಿವುಗಳು ಲಭ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಮೃತೆಯ ಹತ್ತಿರ ದೊರೆತ ಚೀಟಿಯಲ್ಲಿ ಬರೆದಿದ್ದ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿದಾಗ, ಆಕೆಯ ಮಗಳು ಪತ್ತೆಯಾಗಿದ್ದು, ಬಳಿಕ ಸಂಪೂರ್ಣ ಮಾಹಿತಿ ದೃಢಪಟ್ಟಿತು.
ಪರಿಶೀಲನೆಯ ನಂತರ ಮೃತೆಯ ಬಳಿ ಇದ್ದ ರೂ. 34,400 ನಗದು ಹಣ, ಒಂದು ಕೊರಳು ಚೈನ್ ಹಾಗೂ ಎರಡು ಉಂಗುರಗಳನ್ನು ಕ್ರಮಬದ್ಧವಾಗಿ ಮೃತೆಯ ಮಗಳಿಗೆ ಹಸ್ತಾಂತರಿಸಲಾಯಿತು.

ಅನಾಮಧೇಯ ಮಹಿಳೆಯ ವಾರಸುದಾರರನ್ನು ಪತ್ತೆಹಚ್ಚಿದ ಪೊಲೀಸ್ ಅಧಿಕಾರಿ – ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ಪ್ರಶಂಸೆ
ಅನಾಮಧೇಯವಾಗಿ ಮೃತಪಟ್ಟ ಮಹಿಳೆಯ ಪ್ರಕರಣದಲ್ಲಿ ಯಾವುದೇ ಸುಳಿವುಗಳಿಲ್ಲದ ಪರಿಸ್ಥಿತಿಯಲ್ಲೂ ಮಾನವೀಯತೆ, ಕರ್ತವ್ಯನಿಷ್ಠೆ ಮತ್ತು ಜವಾಬ್ದಾರಿಯನ್ನು ಮೆರೆದ ಚೌಡಪ್ಪ ಕಮತರ ಅವರು ಅತ್ಯುತ್ತಮ ಪೊಲೀಸ್ ನಡೆ ಪ್ರದರ್ಶಿಸಿದ್ದಾರೆ. ಮೃತೆಯ ಬಳಿ ದೊರೆತ ಚೀಟಿಯಲ್ಲಿದ್ದ ದೂರವಾಣಿ ಸಂಖ್ಯೆಗೆ ಸ್ವತಃ ಕರೆ ಮಾಡಿ ಮಗಳನ್ನು ಪತ್ತೆಹಚ್ಚಿ, ನಂತರ ಮೃತೆಯ ಬಳಿ ಇದ್ದ ನಗದು ಹಣ ಹಾಗೂ ಬಂಗಾರದ ಚೈನ್ ಅನ್ನು ಸಂಪೂರ್ಣ ಪಾರದರ್ಶಕವಾಗಿ ವಾರಸುದಾರಿಗೆ ಹಸ್ತಾಂತರಿಸುವ ಮೂಲಕ ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸಿದ್ದಾರೆ. ಅವರ ಈ ಮಾನವೀಯ ಹಾಗೂ ಶ್ಲಾಘನೀಯ ಕಾರ್ಯವು ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸುವಂತಿದ್ದು, ಸಮಾಜಕ್ಕೆ ಮಾದರಿಯಾಗಿದೆ. ಅವರ ಮಾನವೀಯತೆ ಹಾಗೂ ವೃತ್ತಿಪರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ, ಅವರನ್ನು ಅಧಿಕೃತವಾಗಿ ಪ್ರಶಂಸಿಸಿ ಅಭಿನಂದಿಸಿದೆ.






