ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಎರಡೂವರೆ ವರ್ಷ ಒಪ್ಪಂದವೇ ಇಲ್ಲ; ಐದು ವರ್ಷ ನಾನೇ ಸಿಎಂ – ಬೆಳಗಾವಿ ಸದನದಲ್ಲಿ ಸಿದ್ದರಾಮಯ್ಯ ಖಡಕ್ ಘೋಷಣೆ

On: December 19, 2025 1:50 PM
Follow Us:

ಬೆಳಗಾವಿ : ರಾಜ್ಯದಲ್ಲಿ ತಮ್ಮ ನಾಯಕತ್ವದ ಕುರಿತು ಎದ್ದಿರುವ ಊಹಾಪೋಹಗಳಿಗೆ ವಿಧಾನಸಭೆ ಚಳಿಗಾಲದ ಅಧಿವೇಶನದ ಕೊನೆಯ ದಿನವೇ ತೆರೆ ಎಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ನನಗೆ ರಾಜಕೀಯ ನಿಶ್ಶಕ್ತಿ ಎಂದೇ ಇಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರೋದು ಪಕ್ಕಾ” ಎಂದು ಸದನದಲ್ಲೇ ಖಡಕ್‌ ಆಗಿ ಸ್ಪಷ್ಟಪಡಿಸಿದ್ದಾರೆ.

ವಿಪಕ್ಷ ನಾಯಕ ಆರ್.ಅಶೋಕ್ ಅವರು, CLP ಸಭೆಯಲ್ಲಿ ನಿಮ್ಮನ್ನು ಐದು ವರ್ಷಕ್ಕಾ ಅಥವಾ ಎರಡೂವರೆ ವರ್ಷಕ್ಕಾ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಿ ಎಂದು ಒತ್ತಾಯಿಸಿದಾಗ, ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿ, “ಎರಡೂವರೆ ವರ್ಷ ಎಂಬ ಮಾತೇ ಇಲ್ಲ. ಯಾವುದೇ ಒಪ್ಪಂದವಾಗಿಲ್ಲ. 2023ರಲ್ಲಿ ಐದು ವರ್ಷಕ್ಕೆ ನನ್ನನ್ನೇ ಸಿಎಂ ಆಗಿ ಆಯ್ಕೆ ಮಾಡಿದ್ದಾರೆ” ಎಂದು ಘೋಷಿಸಿದರು. ನಾಯಕತ್ವ ಬದಲಾವಣೆ ಪಕ್ಷದ ಆಂತರಿಕ ವಿಚಾರ; ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಹೇಳಿದರು. “ಈಗ ನಾನು ಸಿಎಂ, ಮುಂದೆಯೂ ನಾನೇ ಇರುತ್ತೇನೆ” ಎಂಬ ಅವರ ಮಾತುಗಳು ಸದನದಲ್ಲಿ ಗಮನ ಸೆಳೆದವು.

ಉತ್ತರ ಕರ್ನಾಟಕಕ್ಕೆ ಘೋಷಣೆಗಳ ಜಾರಿಗೆ ನೀವು ಮುಂದುವರಿಯಬೇಕಲ್ಲವೇ? ಎಂದು ಶಾಸಕ ಸುನಿಲ್ ಕುಮಾರ್ ಪ್ರಶ್ನಿಸಿದಾಗ, “ನಾನೇ ಇರುತ್ತೇನೆ” ಎಂದು ಸಿಎಂ ಸ್ಪಷ್ಟ ಉತ್ತರ ನೀಡಿದರು.

ಈ ವೇಳೆ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಮಾತಿನ ಜುಗಲ್‌ಬಂದಿ ನಡೆಯಿತು. “ನಿನ್ನೆ ನಿಮ್ಮ ಮುಖದಲ್ಲಿ ರಾಜಕೀಯ ನಿಶ್ಶಕ್ತಿ ಕಾಣ್ತಿತ್ತು” ಎಂಬ ವಿಪಕ್ಷ ನಾಯಕರ ಟೀಕೆಗೆ ಉತ್ತರಿಸಿದ ಸಿದ್ದರಾಮಯ್ಯ, “ನನಗೆ ರಾಜಕೀಯ ನಿಶ್ಶಕ್ತಿ ಯಾವಾಗಲೂ ಇಲ್ಲ—ಹಿಂದೆಯೂ ಇಲ್ಲ, ಈಗಲೂ ಇಲ್ಲ, ಮುಂದೆಯೂ ಇಲ್ಲ. ಅದು ತಪ್ಪು ಮಾಹಿತಿ” ಎಂದು ತಿರುಗೇಟು ನೀಡಿದರು. ಪ್ರಜಾಪ್ರಭುತ್ವದಲ್ಲಿ ಅಧಿಕಾರ ನಿರ್ಧಾರ ಮಾಡುವವರು ಮತದಾರರು; ಜನರ ಆಶೀರ್ವಾದದಿಂದಲೇ ಅಧಿಕಾರ ಸಿಗುತ್ತದೆ ಎಂದು ಹೇಳಿದರು.

“ನೀವು ಐದು ವರ್ಷ ಪೂರ್ತಿ ಮಾಡ್ತೀರಾ? ಅಥವಾ ಇವತ್ತೇ ವಿದಾಯ ಹೇಳ್ತೀರಾ?” ಎಂದು ಯತ್ನಾಳ್ ಪ್ರಶ್ನಿಸಿದಾಗ, “ಯತ್ನಾಳ್‌ಗೆ ಏನೇನೋ ಸಂಶಯಗಳಿವೆ; ಅದಕ್ಕೇ ಅವರ ಪಕ್ಷದಿಂದ ಅವರನ್ನು ತೆಗೆದುಹಾಕಿದ್ದಾರೆ” ಎಂದು ಸಿಎಂ ಪ್ರತಿಕ್ರಿಯಿಸಿದರು. ಇದಕ್ಕೆ ಉತ್ತರಿಸಿದ ಯತ್ನಾಳ್, “ನನಗೂ ಹೊರ ಹಾಕಿದ್ದಾರೆ, ನಿಮಗೂ ಹೊರ ಹಾಕಿದ್ದಾರೆ. ರಾಜಕೀಯದಲ್ಲಿ ಇದು ಸಾಮಾನ್ಯ” ಎಂದರು. ಆಗ ಸಿಎಂ, “ನನಗೆ ಅನ್ಯಾಯ ಆಯ್ತು ಅಂತ ಹೇಳಲ್ಲ. ಸಂಶಯ ಇಟ್ಕೋಬೇಡಿ” ಎಂದು ಹೇಳಿದರು. ಇದರಿಂದ ಸಿದ್ದರಾಮಯ್ಯ ಐದು ವರ್ಷ ಪೂರ್ತಿ ಮುಗಿಸುತ್ತಾರೆ ಎಂಬ ಸಂದೇಶ ಸ್ಪಷ್ಟವಾಗಿದೆ ಎಂದು ಯತ್ನಾಳ್ ಅಭಿಪ್ರಾಯಪಟ್ಟರು.

‘ಎರಡೂವರೆ ವರ್ಷ’ ಒಪ್ಪಂದವೇ ಇಲ್ಲ

“ಹೈಕಮಾಂಡ್ ಮುಂದೆ 2023ರಲ್ಲಿ ಯಾವುದೇ ಎರಡೂವರೆ ವರ್ಷ–ಎರಡೂವರೆ ವರ್ಷ ಒಪ್ಪಂದವಾಗಿಲ್ಲ” ಎಂದು ಸಿಎಂ ಮೂರು ಬಾರಿ ಪುನರುಚ್ಚರಿಸಿದರು. ಐದು ವರ್ಷಕ್ಕೆ ಸಿಎಂ ಆಗಿ ತಮ್ಮನ್ನೇ ಆಯ್ಕೆ ಮಾಡಲಾಗಿದೆ ಎಂದು ಸದನದ ದಾಖಲೆಗೆ ಹೋಗುವ ರೀತಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಕುರಿತ ಚರ್ಚೆಗಳಿಗೆ ತೆರೆ ಎಳೆದಂತೆ ಕಂಡಿತು.

ಚಳಿಗಾಲ ಅಧಿವೇಶನದ ಕೊನೆಯ ದಿನ ಸುವರ್ಣಸೌಧದಲ್ಲಿ ಭಾಷಣ ಮಾಡಿದ ಸಿಎಂ, ಸುಗಮ ಕಲಾಪಕ್ಕೆ ಸಹಕರಿಸಿದ ಎಲ್ಲ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಆದರೆ ಕುರ್ಚಿ ಕಾಳಗದ ಪ್ರಶ್ನೆಗಳು ಮರುಕಳಿಸಿದಾಗ, ತಮ್ಮ ಎಂದಿನ ಧಾಟಿಯಲ್ಲೇ ತೀಕ್ಷ್ಣ ಉತ್ತರ ನೀಡಿ ವಿಪಕ್ಷ ನಾಯಕರ ಬಾಯಿ ಮುಚ್ಚಿಸಿದರು.

“ರಾಜಕೀಯ ನಿಶ್ಶಕ್ತಿ ಅನ್ನೋ ಪದವೇ ನನ್ನಲ್ಲಿ ಇಲ್ಲ” ಎಂಬ ಸಿದ್ದರಾಮಯ್ಯ ಅವರ ಘೋಷಣೆ, ಬೆಳಗಾವಿ ಅಧಿವೇಶನದ ಕೊನೆಯ ದಿನದ ಪ್ರಮುಖ ರಾಜಕೀಯ ಸಂದೇಶವಾಗಿ ಹೊರಹೊಮ್ಮಿತು.

K.M.Sathish Gowda

Join WhatsApp

Join Now

Facebook

Join Now

Leave a Comment