ಹೊನ್ನಾಳಿ/ಲಿಂಗಾಪುರ: ಲಿಂಗಾಪುರ ಗ್ರಾಮ ಘಟಕದ ವತಿಯಿಂದ ರೈತ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ರೈತ ಧ್ವಜ ದ್ವಜಾರೋಹಣ ನೆರವೇರಿಸಲಾಯಿತು. ನಂತರ ರೈತ ಗೀತೆಯ ಗಾಯನದ ಮೂಲಕ ರೈತರ ಶ್ರಮ, ತ್ಯಾಗ ಮತ್ತು ಸಮಾಜದ ಮೇಲೆ ಅವರ ಅಪಾರ ಕೊಡುಗೆಯನ್ನು ಸ್ಮರಿಸಲಾಯಿತು.
ದ್ವಜಾರೋಹಣದ ನಂತರ ಗ್ರಾಮದಲ್ಲಿ ಬೈಕ್ ರ್ಯಾಲಿ ನಡೆಸಲಾಗಿದ್ದು, ರೈತರ ಏಕತೆಯ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಲಾಯಿತು. “ರೈತ ಉಳಿದರೆ ದೇಶ ಉಳಿಯುತ್ತದೆ”, “ರೈತರ ಹಕ್ಕುಗಳಿಗೆ ಭದ್ರತೆ ನೀಡಬೇಕು” ಎಂಬ ಘೋಷಣೆಗಳು ರ್ಯಾಲಿಯಲ್ಲಿ ಮೊಳಗಿದವು. ಈ ರ್ಯಾಲಿಯು ಗ್ರಾಮದಲ್ಲಿ ವಿಶೇಷ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಘಟಕದ ಅಧ್ಯಕ್ಷರಾದ ಮಲ್ಲೇಶಚಾರಿ ರವರು, “ರೈತ ದಿನಾಚರಣೆ ಕೇವಲ ಒಂದು ಆಚರಣೆಯಲ್ಲ, ಇದು ರೈತರ ಹಕ್ಕುಗಳು ಮತ್ತು ಸಂಕಷ್ಟಗಳ ಕುರಿತು ಸರ್ಕಾರಗಳ ಗಮನ ಸೆಳೆಯುವ ಹೋರಾಟದ ಸಂಕೇತ. ಅನ್ನದಾತನ ಜೀವನ ಇಂದು ತೀವ್ರ ಸಂಕಷ್ಟದಲ್ಲಿದ್ದು, ಬೆಳೆ ಬೆಲೆ, ಸಾಲಭಾರ, ನೀರಿನ ಕೊರತೆ, ಹಾಗೂ ಅನಿಶ್ಚಿತ ಹವಾಮಾನದಿಂದ ರೈತ ಕಂಗೆಟ್ಟಿದ್ದಾನೆ” ಎಂದು ಹೇಳಿದರು.
ರೈತ ಸಂಘದ ಪದಾಧಿಕಾರಿಗಳು ಮಾತನಾಡಿ,
ಸರ್ಕಾರಗಳು ರೈತರ ಹಿತ ಕಾಯುವ ನಿಟ್ಟಿನಲ್ಲಿ ಪರಿಣಾಮಕಾರಿ ನೀತಿಗಳನ್ನು ಜಾರಿಗೊಳಿಸಬೇಕು, ಕನಿಷ್ಠ ಬೆಂಬಲ ಬೆಲೆ ಖಚಿತಪಡಿಸಬೇಕು, ಸಾಲಮನ್ನಾ, ಬೆಳೆ ವಿಮೆ ಹಾಗೂ ನೀರಾವರಿ ಸೌಲಭ್ಯಗಳನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು. ರೈತ ದಿನಾಚರಣೆ ಆಚರಿಸುವುದರಿಂದ ಮಾತ್ರ ಸಾಲದು, ವರ್ಷಪೂರ್ತಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಸರ್ಕಾರಗಳಿಗೆ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಗ್ರಾಮ ಘಟಕದ ಅಧ್ಯಕ್ಷರಾದ ಮಲ್ಲೇಶಚಾರಿ, ಹಿರಿಯ ಮುಖಂಡರಾದ ಎಲ್.ಎನ್. ನಾಗರಾಜರಾವ್ ಅಪ್ಪಣ್ಣ, ಜಿ.ಪಿ. ಲೋಕೇಶಪ್ಪ ಗೌಡ್ರು, ಎಸ್. ಪರಶುರಾಮ, ಸತೀಶ್ ಜಿ. ಟೈಲರ್, ಬಸವರಾಜಪ್ಪ ಗೌಡ್ರು (ಕೆ.ಟಿ.), ಗೋಪಾಲಕೃಷ್ಣ (ಹೆಚ್.ಪಿ.), ಮಂಜುನಾಥ್ ಎಂ.ಎಸ್. ಅಜೇನರ್, ಶ್ರೀಕಾಂತ್ ಹೆಚ್. ಕೋಡಿಹಳ್ಳಿ, ಗಂಗಾಧರ ಕೆ., ಯೋಗೇಶ್ ಪಾಟೀಲ್ (ಜಿ.ಎಸ್.), ಮಂಜುನಾಥ್ ಹೆಚ್.ಕೆ., ವೀರೇಂದ್ರ ಪಾಟೀಲ್ (ಜಿ.ಡಿ.), ಲಕ್ಷ್ಮಣ ರಾಣವರ್, ರಂಗೋಜಿರಾವ್ (ಎಲ್.ವೈ.) ಕೋರೆನರ್, ಸುರೇಶ್ ಆರ್. ಬೀರನಹಳ್ಳಿ, ನಾಗರಾಜ್ ಕೆ., ಎನ್. ತಿಪ್ಪೇಶ್ ರಾಣವರ್, ಗಿರೀಶ್ ಹೆಚ್., ಚಂದು ಎಸ್.ಬಿ., ರಮೇಶ್ ಕೆ., ಆರ್ಮುಗ ಎಸ್., ಶರತ್ ಎಸ್. ಡೊಡ್ಡರಂಗಜ್ಜರ, ಪ್ರಶಾಂತ್ ಬಿ., ಶ್ರೀನಿವಾಸ್ ಮಂಗೋಟೆ, ಹಾಗೂ ಹನುಮಂತರಾವ್ ಕೆ.ಸಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ರೈತ ದಿನಾಚರಣೆಯ ಮೂಲಕ ರೈತರ ಹೋರಾಟ ಸದಾ ಜೀವಂತವಾಗಿರಬೇಕು ಮತ್ತು ಮುಂದಿನ ದಿನಗಳಲ್ಲಿ ಸರ್ಕಾರಗಳು ರೈತರ ಹಿತ ಕಾಯುವ ನಿಟ್ಟಿನಲ್ಲಿ ಸ್ಪಷ್ಟ ಹಾಗೂ ದೃಢ ಕ್ರಮ ಕೈಗೊಳ್ಳಬೇಕೆಂಬ ಸಂದೇಶವನ್ನು ಈ ಕಾರ್ಯಕ್ರಮ ಬಲವಾಗಿ ಸಾರಿತು.






