ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ರಾಜ್ಯ ಕಾಂಗ್ರೆಸ್ ಅಶಾಂತಿಯ ನಡುವೆಯೇ ಸಿಎಂ ದೆಹಲಿ ಭೇಟಿ ಮಹತ್ವ

On: December 26, 2025 10:11 PM
Follow Us:

ಬೆಂಗಳೂರು, ಡಿ. 26: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತೆ ಉರಿಯುತ್ತಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಇಂದು ಅವರು ನವದೆಹಲಿಗೆ ತೆರಳುತ್ತಿದ್ದು, ನಾಳೆ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ ಎಂಬುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಕಳೆದ ಒಂದು ತಿಂಗಳಿನಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ, ಅಧಿಕಾರ ಹಂಚಿಕೆ ಹಾಗೂ ಕುರ್ಚಿ ಕಿತ್ತಾಟದ ಚರ್ಚೆಗಳು ಬಿರುಸುಗೊಂಡಿವೆ. ಈ ವಿಚಾರದಲ್ಲಿ ಹೈಕಮಾಂಡ್ ಸ್ಪಷ್ಟವಾಗಿ ಮಧ್ಯಪ್ರವೇಶಿಸದ ಹಿನ್ನೆಲೆಯಲ್ಲಿ ಪರಿಸ್ಥಿತಿ ತಾತ್ಕಾಲಿಕ ಶಾಂತಿಯಂತೆ ಕಾಣಿಸಿಕೊಂಡರೂ ಒಳಗೊಳಗೆ ಅಸಮಾಧಾನ ಜೀವಂತವಾಗಿಯೇ ಇದೆ ಎನ್ನಲಾಗುತ್ತಿದೆ.

ಈ ಬೆಳವಣಿಗೆಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ನವದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಇಂದು ದೆಹಲಿಗೆ ತೆರಳುತ್ತಿದ್ದಾರೆ. ಈ ಸಭೆಯ ನಂತರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಭೇಟಿ ಮಾಡುವ ಸಾಧ್ಯತೆ ಹೆಚ್ಚಿದೆ.

ರಾಜ್ಯ ಕಾಂಗ್ರೆಸ್‌ನ ಇತ್ತೀಚಿನ ರಾಜಕೀಯ ವಿದ್ಯಮಾನಗಳು, ಅಧಿಕಾರ ಹಂಚಿಕೆಯ ಗೊಂದಲ, ಸಂಪುಟ ಪುನರ್‌ರಚನೆ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಮುಂದಿಟ್ಟುಕೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಮೂಲಕ ರಾಜ್ಯದಲ್ಲಿ ಉದ್ಭವಿಸಿರುವ ಅಸಮಾಧಾನಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಯಬಹುದೆಂಬ ನಿರೀಕ್ಷೆಯೂ ವ್ಯಕ್ತವಾಗಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉಪಹಾರ ಸಭೆಗಳ ಬಳಿಕ ಅಧಿಕಾರ ಹಂಚಿಕೆಯ ಚರ್ಚೆಗಳಿಗೆ ಸ್ವಲ್ಪ ವಿರಾಮ ಬಿದ್ದಂತಾಗಿತ್ತು. ಆದರೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದ ವೇಳೆ ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು “ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ” ಎಂದು ಹೈಕಮಾಂಡ್ ಹೇಳಿದೆ ಎಂಬ ಹೇಳಿಕೆ ನೀಡಿದ್ದು, ಮತ್ತೆ ರಾಜಕೀಯ ಕಿಚ್ಚಿಗೆ ಕಾರಣವಾಯಿತು.

ಈ ಹೇಳಿಕೆಯ ಬಳಿಕ ಬಣ ರಾಜಕೀಯ ಮತ್ತೊಮ್ಮೆ ತಲೆ ಎತ್ತಿದ್ದು, ಶಾಸಕರಿಂದ ಪರ-ವಿರೋಧ ಹೇಳಿಕೆಗಳು ಕೇಳಿಬಂದವು. ಇದರೊಂದಿಗೆ ಅಧಿಕಾರ ಹಂಚಿಕೆಯ ಜಟಾಪಟಿ ಮತ್ತೊಮ್ಮೆ ತಾರಕಕ್ಕೇರಿತು. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಎರಡು ಬಾರಿ “ಇಂದೂ ನಾನೇ ಮುಖ್ಯಮಂತ್ರಿ, ಮುಂದೆಯೂ ನಾನೇ ಮುಖ್ಯಮಂತ್ರಿ. ಹೈಕಮಾಂಡ್ ನನ್ನ ಬೆಂಬಲದಲ್ಲಿದೆ” ಎಂದು ಹೇಳಿಕೆ ನೀಡಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿತು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಧಿವೇಶನದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿ ಸಂಧಾನ ಸೂತ್ರ ರೂಪಿಸಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಎರಡು ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು “ಅಧಿಕಾರ ಹಂಚಿಕೆಯ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶಿಸುವುದಿಲ್ಲ. ಇದು ಸ್ಥಳೀಯ ಸಮಸ್ಯೆ, ಸ್ಥಳೀಯ ನಾಯಕರೇ ಬಗೆಹರಿಸಿಕೊಳ್ಳಬೇಕು” ಎಂದು ಸ್ಪಷ್ಟವಾಗಿ ಹೇಳಿದ್ದು, ಕಾಂಗ್ರೆಸ್‌ನಲ್ಲಿ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿತು.

ಇದರ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಈ ವೇಳೆ “ನಾನು ಪಕ್ಷದಲ್ಲಿ ಎಲ್ಲ ಕೆಲಸ ಮಾಡಿದ್ದೇನೆ. ಕಸ ಗುಡಿಸಿದ್ದೇನೆ, ಬಾವುಟ ಕಟ್ಟಿದ್ದೇನೆ. ವೇದಿಕೆಯ ಮೇಲೆ ಭಾಷಣಕ್ಕೆ ಮಾತ್ರ ಸೀಮಿತವಾಗಿಲ್ಲ” ಎಂದು ಹೇಳಿಕೆ ನೀಡಿದ್ದು, ಅಧಿಕಾರ ಹಂಚಿಕೆಯ ವಿಚಾರ ಇನ್ನೂ ಮುಗಿದಿಲ್ಲ ಎಂಬ ಸಂದೇಶ ನೀಡಿದಂತಾಯಿತು.

ಈ ಎಲ್ಲಾ ಹಿನ್ನೆಲೆಯ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾತ್ರಿ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿ ನಾಳೆ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲಿ ರಾಹುಲ್ ಗಾಂಧಿ ಸೇರಿದಂತೆ ವರಿಷ್ಠರೊಂದಿಗೆ ನಡೆಯುವ ಭೇಟಿಯಲ್ಲಿ ಯಾವೆಲ್ಲಾ ವಿಚಾರಗಳು ಚರ್ಚೆಯಾಗಲಿವೆ, ಅಧಿಕಾರ ಹಂಚಿಕೆಯ ಜಟಾಪಟಿಗೆ ತೆರೆ ಬೀಳಲಿದೆಯೇ, ಸಂಪುಟ ಪುನರ್‌ರಚನೆಗೆ ಅನುಮತಿ ಸಿಗಲಿದೆಯೇ ಎಂಬುದರ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿದೆ.

ಗಮನಾರ್ಹ ಅಂಶವೆಂದರೆ, ನಾಳಿನ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಆಹ್ವಾನ ದೊರೆತಿರುವ ಹಿನ್ನೆಲೆಯಲ್ಲಿ ಅವರು ಮಾತ್ರ ದೆಹಲಿಗೆ ತೆರಳಿದ್ದಾರೆ. ಈ ಅಂಶವೂ ರಾಜಕೀಯವಾಗಿ ಹಲವು ಅರ್ಥೈಸಿಕೆಗಳಿಗೆ ಕಾರಣವಾಗಿದೆ.

ಪಕ್ಷದ ನಿರ್ದೇಶನ ಪಾಲನೆ ಕಾರ್ಯಕರ್ತರ ಕರ್ತವ್ಯ

ಇದರ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗಳಿಗೆ ಪರೋಕ್ಷ ಪ್ರತಿಕ್ರಿಯೆಯಂತೆ ಮುಖ್ಯಮಂತ್ರಿ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಕ್ಷದ ನಿರ್ದೇಶನವನ್ನು ಪಾಲಿಸುವುದು ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಥವಾ ಸಾಮಾನ್ಯ ಕಾರ್ಯಕರ್ತ ಯಾರೂ ಕೂಡಾ ಶಾಶ್ವತ ಅಧಿಕಾರಿಗಳು ಅಲ್ಲ” ಎಂದು ಹೇಳಿದ್ದಾರೆ.

ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಪಕ್ಷವನ್ನು ಕಟ್ಟುವುದು ಮತ್ತು ಪಕ್ಷದ ಆದೇಶಗಳನ್ನು ಪಾಲಿಸುವುದು ಎಲ್ಲರ ಜವಾಬ್ದಾರಿ. ಈ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಅವರ ಈ ಹೇಳಿಕೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾವು ಸಾಮಾನ್ಯ ಕಾರ್ಯಕರ್ತನಾಗಿಯೇ ಕೆಲಸ ಮಾಡಿದ್ದೇನೆ ಎಂದು ನೀಡಿದ್ದ ಹೇಳಿಕೆಗೆ ತಿರುಗೇಟು ಎನ್ನುವಂತೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಒಟ್ಟಾರೆ, ಸಿಎಂ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಮಹತ್ವದ ತಿರುವು ತರುವ ಸಾಧ್ಯತೆ ಇದ್ದು, ನಾಳಿನ ಬೆಳವಣಿಗೆಗಳು ರಾಜ್ಯದ ರಾಜಕೀಯ ದಿಕ್ಕನ್ನು ನಿರ್ಧರಿಸುವಲ್ಲಿ ಪ್ರಮುಖವಾಗಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment