ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕುರ್ಚಿ ಚರ್ಚೆಗಳ ಮಧ್ಯೆ ಸಾಧನೆಗಳ ಪಟ್ಟಿ: ಹಾವೇರಿ ವೇದಿಕೆಯಲ್ಲಿ ಸರ್ಕಾರದ ಶಕ್ತಿ ಪ್ರದರ್ಶನ

On: February 14, 2026 10:13 PM
Follow Us:

ಹಾವೇರಿ: ರಾಜ್ಯ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿ ಹಾವೇರಿಯಲ್ಲಿ ಆಯೋಜಿಸಿದ್ದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ರಾಜಕೀಯವಾಗಿ ಮಹತ್ವ ಪಡೆದಿದೆ. ಒಂದೆಡೆ ಕುರ್ಚಿ ಕದನದ ಚರ್ಚೆಗಳು ಜೋರಾಗಿದ್ದರೆ, ಮತ್ತೊಂದೆಡೆ ಸಾಧನೆಗಳನ್ನೇ ಉತ್ತರವಾಗಿ ನೀಡುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದರು.

ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, “ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷಾಂತರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುತ್ತಿದ್ದೇವೆ. ಈಗಾಗಲೇ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದು ದಾಖಲೆ ನಿರ್ಮಿಸಿದ್ದೇವೆ. ರಾಜ್ಯದ ಜಿಡಿಪಿ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲೂ ರಾಜ್ಯ ದಾಖಲೆಯ ವೇಗದಲ್ಲಿ ಸಾಗುತ್ತಿದೆ,” ಎಂದು ಹೇಳಿದರು.

“ಕೇಂದ್ರದ ಅನ್ಯಾಯದ ನಡುವೆಯೂ ನಾವು ಸಾಧನೆ ಮಾಡಿದ್ದೇವೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಮತ್ತು ಜಗದೀಶ್ ಶೆಟ್ಟರ್ ರಾಜ್ಯದ ಪರವಾಗಿ ಕೇಂದ್ರದಲ್ಲಿ ಧ್ವನಿ ಎತ್ತುತ್ತಿಲ್ಲ,” ಎಂದು ಟೀಕಿಸಿದರು.

ಸರ್ಕಾರಕ್ಕೆ ಎರಡು ವರ್ಷ ಒಂಬತ್ತು ತಿಂಗಳು ಪೂರ್ಣಗೊಂಡಿದ್ದು, ಘೋಷಿಸಿದ 243 ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಭರವಸೆಗಳನ್ನೂ ಅವಧಿಯೊಳಗೆ ಈಡೇರಿಸುತ್ತೇವೆ. ಹಿಂದಿನ ಅವಧಿಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿ, ಪ್ರಣಾಳಿಕೆಯಲ್ಲಿ ಇರದ 30 ಭರವಸೆಗಳನ್ನು ಕೂಡ ಜಾರಿಗೆ ತಂದಿದ್ದೇವೆ. “ನುಡಿದಂತೆ ನಡೆದು” ದಾಖಲೆಯನ್ನೇ ನಿರ್ಮಿಸಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಮೂಲಕ ಈಗಾಗಲೇ ₹1,18,000 ಕೋಟಿ ರೂಪಾಯಿಗಳನ್ನು ನೇರವಾಗಿ ಜನರಿಗೆ ತಲುಪಿಸಿದ್ದೇವೆ. ಆರ್ಥಿಕ ತಜ್ಞರಾದ ಅಮರ್ತ್ಯ ಸೇನ್ ಮತ್ತು ಅಭಿಜಿತ್ ಬ್ಯಾನರ್ಜಿ ಸೇರಿದಂತೆ ವಿವಿಧ ಅಧ್ಯಯನಗಳು ಗ್ಯಾರಂಟಿಗಳ ಬಗ್ಗೆ ಸದಾಭಿಪ್ರಾಯ ವ್ಯಕ್ತಪಡಿಸಿವೆ ಎಂದು ಅವರು ಹೇಳಿದರು.

“ಕುರ್ಚಿ ಅಲ್ಲ, ಜನರ ವಿಶ್ವಾಸ ಮುಖ್ಯ” – ಡಿ.ಕೆ.ಶಿವಕುಮಾರ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಕುರ್ಚಿ ಕದನದ ಪ್ರಶ್ನೆಗೆ ತಿರುಗೇಟು ನೀಡಿದರು. “ನಮಗೆ ಕುರ್ಚಿ ಮುಖ್ಯವಲ್ಲ, ಜನರ ವಿಶ್ವಾಸ ಮುಖ್ಯ. ನಾವು ನೀಡಿದ ಐದು ಗ್ಯಾರಂಟಿಗಳು ದೇಶದ ಗ್ಯಾರಂಟಿಯಾಗಿವೆ. ಈಗ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡುತ್ತಿದ್ದೇವೆ,” ಎಂದು ಹೇಳಿದರು.

“ನಾನು ಹಲವು ಬಾರಿ ಬಜೆಟ್ ಮಂಡಿಸಿರುವ ಅನುಭವ ಹೊಂದಿದ್ದೇನೆ. ರಾಜ್ಯದ ಆರ್ಥಿಕ ಸ್ಥಿತಿ ದೃಢವಾಗಿದೆ. ಖಜಾನೆ ಖಾಲಿ ಎಂಬುದು ವಿರೋಧ ಪಕ್ಷದ ಅಪಪ್ರಚಾರ. ಗ್ಯಾರಂಟಿಗಳಿಗೆ ಸಾವಿಲ್ಲ, ಅಭಿವೃದ್ಧಿಗೂ ಸಾವಿಲ್ಲ. ಆದರೆ ಟೀಕೆಗಳಿಗೆ ಸಾವಿದೆ,” ಎಂದು ಅವರು ಕಿಡಿಕಾರಿದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಡಿ.ಕೆ.ಶಿವಕುಮಾರ್, “ಭೂ ಮಾಲೀಕರಿಗೆ ಪೋಡಿ, ಪಟ್ಟಾ ಹಾಗೂ ಆಸ್ತಿ ದಾಖಲೆಗಳನ್ನು ನೀಡುವ ಮೂಲಕ ಜನರ ಬದುಕಿನಲ್ಲಿ ನಂಬಿಕೆ ಮೂಡಿಸಿದ್ದೇವೆ,” ಎಂದರು.

ಹೈಕಮಾಂಡ್ ಗೈರುಹಾಜರಾತಿ: ರಾಜಕೀಯ ಸಂದೇಶವೇ?

ಸಮಾವೇಶಕ್ಕೆ ಪಕ್ಷದ ಹೈಕಮಾಂಡ್ ನಾಯಕರು ಗೈರುಹಾಜರಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು. ಆದರೆ ರಾಜ್ಯ ನಾಯಕರು ಇದನ್ನು ತಗ್ಗಿಸಿಕೊಂಡು, “ಇದು ರಾಜ್ಯದ ಸಾಧನೆಗಳ ಕಾರ್ಯಕ್ರಮ. ಜನರ ಆಶೀರ್ವಾದವೇ ನಮ್ಮ ಶಕ್ತಿ,” ಎಂದು ಸ್ಪಷ್ಟಪಡಿಸಿದರು.

“ಬದುಕಿನ ಮೇಲೆ ರಾಜಕೀಯ”

“ವಿಪಕ್ಷ ಭಾವನೆಗಳ ಮೇಲೆ ರಾಜಕೀಯ ಮಾಡುತ್ತದೆ. ನಾವು ಬದುಕಿನ ಮೇಲೆ ರಾಜಕೀಯ ಮಾಡುತ್ತಿದ್ದೇವೆ,” ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಬಡವರು, ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಕಾರ್ಮಿಕರ ಪರವಾಗಿ ಸರ್ಕಾರ ನಿಂತಿದೆ ಎಂದು ಅವರು ಒತ್ತಿ ಹೇಳಿದರು.

ಸಾವಿರ ದಿನಗಳ ಆಡಳಿತವನ್ನು ಕಾಂಗ್ರೆಸ್ ಸರ್ಕಾರ ತನ್ನ ಬದ್ಧತೆಯ ಸಾಕ್ಷಿಯೆಂದು ಪ್ರಚಾರ ಮಾಡುತ್ತಿರುವ ಸಂದರ್ಭದಲ್ಲಿ, ಕುರ್ಚಿ ಕದನದ ಚರ್ಚೆಗಳು ಮುಂದುವರಿದರೂ, ಹಾವೇರಿ ಸಮಾವೇಶದಲ್ಲಿ ನಾಯಕರು ಒಗ್ಗಟ್ಟಿನ ಸಂದೇಶ ನೀಡಲು ಪ್ರಯತ್ನಿಸಿದರು. “ಗ್ಯಾರಂಟಿಗಳಿಗೂ ಸಾವಿಲ್ಲ, ಅಭಿವೃದ್ಧಿಗೂ ಸಾವಿಲ್ಲ” ಎಂಬ ಘೋಷಣೆಯೊಂದಿಗೆ ಸಭೆ ರಾಜಕೀಯವಾಗಿ ಗಮನಸೆಳೆಯಿತು.

K.M.Sathish Gowda

Join WhatsApp

Join Now

Facebook

Join Now

Read more

ಸಾವಿನ ಬಲೆ ಹೆಣೆಯುತ್ತಿರುವ ಕೇಬಲ್‌ಗಳು: ವಿದ್ಯುತ್ ಇಲಾಖೆ–ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಕೋಟೆ ರಸ್ತೆಯಲ್ಲಿ ಹಸು ಬಲಿ; ನಗರದ ವಿದ್ಯುತ್ ಕಂಬಗಳಲ್ಲೇ ಸಾಕ್ಷಾತ್ ಯಮನ ದರ್ಶನ!

ಸಮಾಜಮುಖಿ ಸೇವೆಯಲ್ಲಿ ಶಿವಮೊಗ್ಗ ಸರ್ವೋದಯ ಮಂಡಳಿ ರಾಜ್ಯಕ್ಕೆ ಮಾದರಿ: ಡಾ. ಎಚ್.ಎಸ್. ಸುರೇಶ್

​ವಿದ್ಯೆಯ ಜೊತೆಗೆ ಸಂಸ್ಕಾರಯುತ ಶಿಕ್ಷಣ ಇಂದಿನ ತುರ್ತು ಅಗತ್ಯ; ಸಿದ್ಧಗಂಗಾ ಶ್ರೀಗಳ ದಾಸೋಹ ಪರಂಪರೆಯೇ ನಮಗೆ ಪ್ರೇರಣೆ: ಸಿ.ಎಸ್. ಷಡಾಕ್ಷರಿ

ಶಿವಮೊಗ್ಗದ ನೀರಾವರಿ ಯೋಜನೆಗಳಿಗೆ ತುರ್ತು ಅನುದಾನ ಬಿಡುಗಡೆ ಮಾಡಿ; ರೈತರ ಹಿತಕ್ಕೆ ಆದ್ಯತೆ ನೀಡಿ: ಸಚಿವ ರಾಮಲಿಂಗಾರೆಡ್ಡಿಗೆ ಸಂಸದ ಬಿ.ವೈ. ರಾಘವೇಂದ್ರ ಒತ್ತಾಯ

‘ಎಂಪಿ, ಎಂಎಲ್‌ಎ ಆಗುವುದಕ್ಕಿಂತ ನೌಕರರ ವಿಶ್ವಾಸ ಗಳಿಸುವುದೇ ದೊಡ್ಡ ಸಾಧನೆ’: ಸಿ.ಎಸ್. ಷಡಾಕ್ಷರಿ ಕಾರ್ಯವೈಖರಿಗೆ ಸಂಸದ ಬಿ.ವೈ. ರಾಘವೇಂದ್ರ ಮೆಚ್ಚುಗೆ

ಜರ್ಮನಿಯಲ್ಲೂ ಶರಣ ಸಂಸ್ಕೃತಿಯ ವೈಭವ: “ವಿದೇಶದಲ್ಲೂ ತಾಯ್ನಾಡಿನ ಸಂಸ್ಕಾರ ಉಳಿಸಿಕೊಳ್ಳುವುದೇ ನಿಜವಾದ ಧರ್ಮನಿಷ್ಠೆ” – ಮ್ಯೂನಿಚ್‌ನಲ್ಲಿ ತರಳಬಾಳು ಶ್ರೀಗಳ ಜಾಗತಿಕ ಕರೆ

Leave a Comment