ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ವಿಭಿನ್ನ ಹೆಸರುಗಳಿಂದ ಶಿವನ ಆರಾಧನೆ ನಡೆಯುತ್ತದೆ. ದೇವರ ರೂಪದಲ್ಲಿ ಶಿವನನ್ನು ಪೂಜಿಸಿದರೂ, “ಶಿವ” ಎಂದರೆ ಕೇವಲ ಒಂದು ಮೂರ್ತಿ ಅಲ್ಲ; ಅದು ಸೃಷ್ಟಿ, ಪ್ರಕೃತಿ, ಜೀವ ಮತ್ತು ಜೀವನದ ಒಟ್ಟಾರೆ ತತ್ತ್ವ. ಅಂತಹ ಶಿವತತ್ತ್ವಕ್ಕೆ ಭಾರತ ಭೂಮಿ ಅತ್ಯಂತ ಮಹತ್ವದ ಆರಾಧನಾ ಕ್ಷೇತ್ರವಾಗಿದೆ. ಇಲ್ಲಿ ಆಚರಿಸಲ್ಪಡುವ ಮಹಾ ಶಿವರಾತ್ರಿ ಹಬ್ಬಕ್ಕೆ ಪೌರಾಣಿಕ, ಐತಿಹಾಸಿಕ ಹಾಗೂ ವೈಜ್ಞಾನಿಕ ಅರ್ಥಗಳೂ ಸೇರಿಕೊಂಡಿವೆ.
ಶಿವರಾತ್ರಿ ಬಗ್ಗೆ ಹಲವು ಪುರಾಣ ಪ್ರಸಂಗಗಳು ಪ್ರಸಿದ್ಧ. ಶಿವ–ಪಾರ್ವತಿಯ ದಿವ್ಯ ವಿವಾಹವಾದ ಗಿರಿಜಾ ಕಲ್ಯಾಣ ಇದೇ ರಾತ್ರಿಯಲ್ಲಿ ನಡೆದಿತ್ತೆಂದು ಹೇಳುತ್ತಾರೆ. ಭಗೀರಥನ ಭಕ್ತಿಗೆ ಮೆಚ್ಚಿ ಶಿವನು ಗಂಗೆಯನ್ನು ತನ್ನ ಜಟೆಯಲ್ಲಿ ಹಿಡಿದು ಭೂಮಿಗೆ ಹರಿಸಿದ ದಿನವೂ ಇದೇ ಎಂಬ ನಂಬಿಕೆಯಿದೆ. ದೇವತೆಗಳು ಮತ್ತು ದಾನವರ ಸಮುದ್ರ ಮಂಥನದ ವೇಳೆ ಉಂಟಾದ ಹಾಲಾಹಲ ವಿಷವನ್ನು ಲೋಕಕ್ಷೇಮಕ್ಕಾಗಿ ಶಿವನು ಪಾನ ಮಾಡಿದನು. ಆಗ ಪಾರ್ವತಿಯವರು ಶಿವನನ್ನು ರಾತ್ರಿಯಿಡೀ ಜಾಗರಣೆಯಲ್ಲಿ ಇಟ್ಟುಕೊಂಡರು; ಅದೇ ಶಿವರಾತ್ರಿ ಎಂದು ಪೌರಾಣಿಕ ವೃತ್ತಾಂತಗಳು ತಿಳಿಸುತ್ತವೆ.

ವೈಜ್ಞಾನಿಕ ದೃಷ್ಟಿಯಿಂದಲೂ ಶಿವಾರಾಧನೆಗೆ ಅರ್ಥವಿದೆ. ಶಿವಲಿಂಗದ ಆಕಾರವು ಶಕ್ತಿಯ ಸಂಕೇತ. ಬಿಲ್ವಪತ್ರದ ಮಹತ್ವವು ಆಯುರ್ವೇದ ಹಾಗೂ ಪರಿಸರ ಶಾಸ್ತ್ರಗಳಲ್ಲೂ ಉಲ್ಲೇಖಿತವಾಗಿದೆ. ಶಿವಾಲಯಗಳು ಸಾಮಾನ್ಯವಾಗಿ ವಾಸ್ತುಶಾಸ್ತ್ರದ ನಿಯಮಾನುಸಾರ ನಿರ್ಮಿಸಲ್ಪಟ್ಟಿದ್ದು, ಅಲ್ಲಿ ಪ್ರವೇಶಿಸಿದ ಕ್ಷಣದಲ್ಲೇ ಮನಸ್ಸಿಗೆ ಶಾಂತಿ ಮತ್ತು ಸಕಾರಾತ್ಮಕ ಚೈತನ್ಯ ದೊರೆಯುತ್ತದೆ. ಈ ರೀತಿಯಾಗಿ ಶಿವರಾತ್ರಿ ಭಕ್ತಿ, ಆರೋಗ್ಯ ಮತ್ತು ಆತ್ಮಶುದ್ಧಿಯ ಪರಾಕಾಷ್ಠೆಯ ಹಬ್ಬವಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ದೇವರನ್ನು ಅನೇಕ ರೂಪಗಳಲ್ಲಿ ಕಾಣುತ್ತೇವೆ. ಅದರಲ್ಲಿ ಶಿವನ ಸ್ಥಾನ ವಿಶಿಷ್ಟ. ಜಗತ್ತು ಒಂದು ಮಹಾನಾಟಕರಂಗ; ಅದರ ಸೃಷ್ಟಿಕರ್ತ, ನಿರ್ದೇಶಕ ಮತ್ತು ಮಹಾನಟ ಶಿವನೇ ಎಂಬ ಕಲ್ಪನೆ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. ನಾವು ಮಾಡುವ ಪ್ರತಿಯೊಂದು ಕಾರ್ಯವೂ ಶಿವಾರಾಧನೆಯೆಂದು ನಂಬಿದವರು ನಾವು. ಶಿವನನ್ನು ನಟರಾಜನಾಗಿ ಕಾಣುವ ಸಂಪ್ರದಾಯವು ವಿಶೇಷವಾಗಿ ಚಿದಂಬರಂ ನಟರಾಜ ದೇವಾಲಯದ ಮೂಲಕ ವಿಶ್ವಪ್ರಸಿದ್ಧವಾಗಿದೆ. ಅಲ್ಲಿ ಶಿವನ ತಾಂಡವ ನೃತ್ಯ ಸೃಷ್ಟಿ–ಸ್ಥಿತಿ–ಲಯಗಳ ಸಂಕೇತವಾಗಿ ಆರಾಧಿತವಾಗಿದೆ.
ನಟರಾಜನ ಅಭಿನಯದಲ್ಲಿ ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಎಂಬ ನಾಲ್ಕು ಅಭಿನಯಗಳ ತತ್ವಗಳು ಒಳಗೊಂಡಿವೆ. ಸೃಷ್ಟಿ, ಸ್ಥಿತಿ, ಲಯ, ತಿರೋಭಾವ ಮತ್ತು ಅನುಗ್ರಹ—ಈ ಪಂಚಕೃತ್ಯಗಳು ಶಿವತತ್ತ್ವದ ಮರ್ಮ. “ತಿರೋಭಾವ” ಅಂದರೆ ಮಾಯೆ; ಅದು ಅರಿವಿಗೆ ಅಡ್ಡಿಯಾಗುತ್ತದೆ. ಆದರೆ “ಅನುಗ್ರಹ”ದಿಂದಲೇ ಜೀವಿಗೆ ನಿಜವಾದ ಅರಿವು ದೊರೆಯುತ್ತದೆ. ಶಿವನ ತೆರೆಮರೆ ಅಭಿನಯವೇ ಜಗತ್ತಿನ ರಹಸ್ಯ.

“ಆಂಗಿಕಂ ಭುವನಂ ಯಸ್ಯ, ವಾಚಿಕಂ ಸರ್ವವಾಂಗ್ಮಯಂ; ಆಹಾರ್ಯಂ ಚಂದ್ರತಾರಾದಿ, ತಂ ವಂದೇ ಸಾತ್ವಿಕಂ ಶಿವಂ” ಎಂಬ ಪದ್ಯವು ಶಿವನಿಗೂ ಜಗತ್ತಿಗೂ ಇರುವ ಅವಿನಾಭಾವ ಸಂಬಂಧವನ್ನು ಸೂಚಿಸುತ್ತದೆ. ಹಕ್ಕಿಗಳ ಕೂಗು ಅವನ ವಾಚಿಕಾಭಿನಯ; ಸೂರ್ಯ, ಚಂದ್ರ, ನಕ್ಷತ್ರಗಳು ಅವನ ಆಹಾರ್ಯಾಭರಣ; ಸೃಷ್ಟಿಯೇ ಅವನ ಆಂಗಿಕಾಭಿನಯ.
ವೇದಗಳಲ್ಲಿ ಶಿವನು ರುದ್ರನಾಗಿ ಉಲ್ಲೇಖಿತ. ರುದ್ರ ಎಂದರೆ “ಅಳುವಂತೆ ಮಾಡುವವನು”. ಅಳು ತೀವ್ರ ದುಃಖದಲ್ಲಿಯೂ ತೀವ್ರ ಸಂತೋಷದಲ್ಲಿಯೂ ಬರುತ್ತದೆ. ಆ ಕ್ಷಣದಲ್ಲಿ ಅಹಂಕಾರ ಕರಗುತ್ತದೆ; ಆತ್ಮಾನುಭವ ಮೂಡುತ್ತದೆ. ಅದೇ ಮೋಕ್ಷದ ದಾರಿ. ಈ ರೀತಿ ಶಿವನು ಬಂಧನಗಳಿಂದ ಮುಕ್ತಿಗೊಳಿಸುವ ಶಕ್ತಿ.
ಯಜುರ್ವೇದದಲ್ಲಿನ ರುದ್ರಾಧ್ಯಾಯ (ನಮಕ) ಮಂತ್ರಗಳು ಶಿವಾಭಿಷೇಕ ಸಂದರ್ಭದಲ್ಲಿ ಪಠಿಸಲ್ಪಡುತ್ತವೆ. “ನಮಃ” ಎಂಬ ಶಬ್ದದಿಂದ ಆರಂಭವಾಗುವ ಈ ಮಂತ್ರಗಳು ಜಗತ್ತಿನ ಪ್ರತಿಯೊಂದು ಚರಾಚರ ವಸ್ತುವನ್ನೂ ಶಿವಮಯವಾಗಿ ಕಾಣುವ ದಾರಿಯನ್ನು ತೋರಿಸುತ್ತವೆ. ಬೆಟ್ಟಗಳಲ್ಲೂ, ಕಾಡುಗಳಲ್ಲೂ, ರಾತ್ರಿಯ ಸಂಚಾರಿಗಳಲ್ಲೂ, ಮಂತ್ರಗಳಲ್ಲೂ—ಎಲ್ಲೆಡೆ ಶಿವತತ್ತ್ವವೇ ವ್ಯಾಪಿಸಿದೆ ಎಂಬ ದೃಷ್ಟಿ ನೀಡುತ್ತವೆ.
ಜಗತ್ತು ನಾಟಕರಂಗ. ಇಲ್ಲಿ ನೋವು–ನಲಿವು, ಸುಖ–ದುಃಖ, ಸಿರಿತನ–ಬಡತನ ಎಲ್ಲವೂ ಜೀವನದ ಭಾಗ. ಯಾವುದಕ್ಕೂ ಅಂಟಿಕೊಳ್ಳದೆ, ಆದರೆ ಎಲ್ಲವನ್ನೂ ಒಪ್ಪಿಕೊಂಡು ತಟಸ್ಥ ಭಾವದಲ್ಲಿ ಬದುಕಿದಾಗಲೇ ಜೀವನದ ನಿಜಾನಂದ ಸಿಗುತ್ತದೆ. ಶಿವನು ವಿಷಹಾವನ್ನು ಭಯವಿಲ್ಲದೆ ಧರಿಸಿದ್ದಾನೆ; ತಂಪಿನ ಚಂದ್ರನನ್ನು ಕಾಮಾಸಕ್ತಿಯಿಲ್ಲದೆ ತಲೆಯ ಮೇಲೆ ಇಟ್ಟಿದ್ದಾನೆ; ಸ್ಮಶಾನವಾಸಿಯಾಗಿದ್ದರೂ ಶಾಂತಮೂರ್ತಿಯಾಗಿ ವಿರಾಜಿಸುತ್ತಾನೆ. ಇದು ವೈರಾಗ್ಯ ಮತ್ತು ಸಮತ್ವದ ಪಾಠ.
ಶಿವರಾತ್ರಿಯ ಜಾಗರಣೆ ಹೊರಗಿನ ಜಾಗೃತಿಯಷ್ಟೇ ಅಲ್ಲ; ಅದು ಒಳಗಿನ ಅರಿವಿನ ಎಚ್ಚರಿಕೆ. ಉಪವಾಸ ಎಂದರೆ ಕೇವಲ ಅನ್ನತ್ಯಾಗವಲ್ಲ. “ಉಪ” ಅಂದರೆ ಸಮೀಪ, “ವಾಸ” ಅಂದರೆ ಇರುವುದು—ದೇವರ ಸಾನಿಧ್ಯದಲ್ಲಿ ಇರೋದು. ತನು–ಮನ ಶುದ್ಧಿಯಿಂದ, ಇಂದ್ರಿಯ ನಿಯಂತ್ರಣದಿಂದ, ಶಿವನಾಮ ಸ್ಮರಣೆಯಿಂದ ಆತ್ಮಸಾಕ್ಷಾತ್ಕಾರದ ದಾರಿಯತ್ತ ಸಾಗುವುದು.

“ಹೇ ಶಿವಾ! ಆತ್ಮವೇ ನೀನು; ಬುದ್ಧಿಯೇ ಪಾರ್ವತಿ; ಪ್ರಾಣಗಳೇ ಗೆಳೆಯರು; ದೇಹವೇ ಮಂದಿರ; ಇಂದ್ರಿಯಗಳ ಚಟುವಟಿಕೆಗಳೇ ಪೂಜೆ; ನಿದ್ರೆಯೇ ಧ್ಯಾನ; ನಡೆದಾಟವೇ ಪ್ರದಕ್ಷಿಣೆ; ಮಾತೆಲ್ಲವೂ ಸ್ತೋತ್ರ” — ಈ ಭಾವನೆ ಮೂಡಿದಾಗ ಬದುಕೇ ಆರಾಧನೆ.
ಶಿವ ಎಂದರೆ ಮಂಗಳ, ಒಳಿತು. ಜಗತ್ತನ್ನು ಒಳ್ಳೆಯ ದೃಷ್ಟಿಯಿಂದ ನೋಡುವುದು, ಅದು ಕೊಡುವ ಪ್ರತಿಯೊಂದನ್ನೂ ಅನುಗ್ರಹವೆಂದು ಸ್ವೀಕರಿಸುವುದು ಶಿವಸಾಕ್ಷಾತ್ಕಾರದ ಮಾರ್ಗ.
“ಸರ್ವಂ ಶಿವಮಯಂ” — ಹೃದಯ ಶಿವಮಯವಾದಾಗ ಎತ್ತಲೂ ಶಿವಮಯವೇ ಹೊಳೆಯುತ್ತದೆ.
ಈ ಮಹಾಶಿವರಾತ್ರಿಯ ಸಂದರ್ಭದಲ್ಲಿ ಜಾಗರಣೆ, ಉಪವಾಸ, ಪೂಜೆ ಮತ್ತು ಆತ್ಮಪರಿಶೀಲನೆಯ ಮೂಲಕ ಬದುಕನ್ನು ಹಸನು ಮಾಡಿಕೊಳ್ಳೋಣ.
ಶಿವಾರ್ಪಣ ಮಸ್ತು.
— ಸಂತೋಷ್ ಬಿದರಗಡ್ಡೆ
ಶಿಕ್ಷಕ, ಸಾಹಿತಿ.








