ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧಿಯಾಗಿರುವ ಶಿವಮೊಗ್ಗ ನಗರಕ್ಕೆ ತನ್ನದೇ ಆದ ಅಪೂರ್ವ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯಿದೆ. ಜಿಲ್ಲೆಯಾದ್ಯಂತ ಅನೇಕ ಆಚಾರ್ಯ ಪುರುಷರು, ಶಿವಶರಣರು ಜನ್ಮತಾಳಿ ಈ ಭೂಮಿಯ ಆಧ್ಯಾತ್ಮಿಕ ಸಂಪತ್ತನ್ನು ವೃದ್ಧಿಸಿದ್ದಾರೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.
ನಗರದ ಅರಕೆರೆಯ ಶ್ರೀ ರಂಭಾಪುರೀಶ್ವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
34 ವರ್ಷಗಳ ನಂತರ ಮರುಕಳಿಸಿದ ಐತಿಹಾಸಿಕ ಕ್ಷಣ
ಕಳೆದ 34 ವರ್ಷಗಳ ಹಿಂದೆ ವೀರಶೈವ ಧರ್ಮ ಪರಂಪರೆಯ ಅಂದಿನ ಎಲ್ಲಾ ಜಗದ್ಗುರುಗಳನ್ನು ಶಿವಮೊಗ್ಗ ನಗರಕ್ಕೆ ಸಕಲ ವೈಭವಗಳೊಂದಿಗೆ ಬರಮಾಡಿಕೊಂಡು, ಅತ್ಯಂತ ಸಂಭ್ರಮದಿಂದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಸಮಾರಂಭವನ್ನು ನಡೆಸಲಾಗಿತ್ತು. ಅಂದಿನ ಆ ಐತಿಹಾಸಿಕ ಕಾರ್ಯಕ್ರಮದಲ್ಲಿ ನಾವೂ ಕೂಡ ಪಾಲ್ಗೊಂಡು ಭಕ್ತ ಸಮೂಹಕ್ಕೆ ಹರಸಿದ್ದೆವು. ಈಗ ಭಕ್ತರ ಅಪಾರ ಸದ್ಭಕ್ತಿ ಮತ್ತು ಪೀಠಗಳ ಮೇಲಿನ ಅಭಿಮಾನದ ಫಲವಾಗಿ, ಬರೋಬ್ಬರಿ 34 ವರ್ಷಗಳ ನಂತರ ಮತ್ತೊಮ್ಮೆ ಮೇ 17 ರಂದು ಶ್ರೀ ಜಗದ್ಗುರು ಪಂಚಪೀಠಾಧೀಶರ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಬೃಹತ್ ಧಾರ್ಮಿಕ ಸಮ್ಮೇಳನವನ್ನು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ನಗರಕ್ಕೂ ಮತ್ತು ರಂಭಾಪುರಿ ಪೀಠಕ್ಕೂ ಅತ್ಯಂತ ನಿಕಟ ಹಾಗೂ ಅವಿನಾಭಾವ ಸಂಬಂಧವಿದೆ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಈ ನಗರದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳಿಗೆ ಶ್ರೀಕಾರ ಹಾಕಿ ಆಶೀರ್ವದಿಸಿದ್ದನ್ನು ಇಲ್ಲಿನ ಜನತೆ ಇಂದಿಗೂ ಮರೆತಿಲ್ಲ. ಅದೇ ಪರಂಪರೆಯಲ್ಲಿ ಬಂದ ನಾವೂ ಕೂಡ ಇಲ್ಲಿ ಐತಿಹಾಸಿಕ ದಸರಾ ಧರ್ಮ ಸಮ್ಮೇಳನವನ್ನು ನಡೆಸಿ ಒಂದು ದಾಖಲೆ ನಿರ್ಮಿಸಿದ್ದೆವು ಎಂದು ಶ್ರೀಗಳು ಸ್ಮರಿಸಿದರು.
ಸಮಾನ ಪೀಠಗಳ ಸಮಾಗಮ: ನಾಡಿಗೆ ಸೌಹಾರ್ದತೆಯ ಸಂದೇಶ
ಪ್ರಸ್ತುತ ಮೇ 17 ರಂದು ನಡೆಯಲಿರುವ ಸಮಾರಂಭದಲ್ಲಿ ವೀರಶೈವ ಧರ್ಮದ ಸಮಾನ ಪೀಠಗಳಾದ ಶ್ರೀ ಉಜ್ಜಯಿನಿ, ಶ್ರೀ ಹಿಮವತ್ಕೇದಾರ, ಶ್ರೀ ಶ್ರೀಶೈಲ, ಮತ್ತು ಶ್ರೀ ಕಾಶಿ ಜಗದ್ಗುರುಗಳ ಜಂಟಿ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ನೆರವೇರಿಸುವ ಸಂಕಲ್ಪ ಮಾಡಲಾಗಿದೆ. ಇದು ಕೇವಲ ಶಿವಮೊಗ್ಗ ನಗರದ ಜನತೆಗೆ ಮಾತ್ರವಲ್ಲದೆ ಇಡೀ ರಾಜ್ಯದ ಜನತೆಗೆ ಅತ್ಯಂತ ಸಂತೋಷ ಮತ್ತು ಭಕ್ತಿಯ ಉಲ್ಲಾಸವನ್ನು ತಂದಿದೆ.
“ವೀರಶೈವ-ಲಿಂಗಾಯತ ಧರ್ಮವು ಇಂದು ಜಾತಿ-ಉಪಜಾತಿಗಳಾಗಿ ಹರಿದು ಹಂಚಿಹೋಗುತ್ತಿರುವುದು ವಿಷಾದನೀಯ. ಈ ಸಂದರ್ಭದಲ್ಲಿ ಎಲ್ಲಾ ಒಳಪಂಗಡಗಳು ಒಂದಾಗಿ, ಸೌಹಾರ್ದತೆಯಿಂದ ಧರ್ಮದ ಮೂಲ ವಾಹಿನಿಯಲ್ಲಿ ಸಾಗಬೇಕೆನ್ನುವುದೇ ಪೀಠಾಚಾರ್ಯರ ಸದಾಶಯವಾಗಿದೆ. ಈ ಬೃಹತ್ ಸಮಾವೇಶವು ಸಮಾಜದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿಸಲಿದೆ.” – ಶ್ರೀ ರಂಭಾಪುರಿ ಜಗದ್ಗುರುಗಳು
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪನವರಿಗೆ ಅಭಿನಂದನೆ ಮತ್ತು ಕೃತಜ್ಞತಾ ಸಮರ್ಪಣೆ
ಇದೇ ಸುವರ್ಣ ಸಂದರ್ಭದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಭರ್ತಿ 50 ವರ್ಷಗಳನ್ನು ಪೂರೈಸಿದ ನಾಡಿನ ಧೀಮಂತ ನಾಯಕ, ರೈತಪರ ಹೋರಾಟಗಾರ ಹಾಗೂ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಬೃಹತ್ ಕೃತಜ್ಞತಾ ಸಮಾರಂಭವನ್ನು ಆಯೋಜಿಸಿರುವುದು ಅತ್ಯಂತ ಸ್ವಾಗತಾರ್ಹ ಕಾರ್ಯವಾಗಿದೆ.
ಪುರಸಭಾ ಸದಸ್ಯತ್ವದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿ, ರಾಜ್ಯದ ಪ್ರಭಾವಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಮಾಡಿರುವ ಅದ್ಭುತ ಕಾರ್ಯಗಳು ಇತಿಹಾಸದಲ್ಲಿ ದಾಖಲಾಗಿವೆ. ‘ಭಾಗ್ಯಲಕ್ಷ್ಮಿ’ ಯೋಜನೆ ಸೇರಿದಂತೆ ಅನೇಕ ಜನಪರ ಮತ್ತು ರಚನಾತ್ಮಕ ಯೋಜನೆಗಳ ಮೂಲಕ ಅವರು ಜನಮನ ಗೆದ್ದಿದ್ದಾರೆ. ವಿಶೇಷವಾಗಿ ಶಿವಮೊಗ್ಗ ನಗರದ ಆಧುನಿಕ ಅಭಿವೃದ್ಧಿಗೆ ಬಿ. ಎಸ್. ಯಡಿಯೂರಪ್ಪ ಅವರ ಕೊಡುಗೆ ಅಪಾರವಾದುದು. ಅವರನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ. ಅಂತಹ ಮಹನೀಯರಿಗೆ ಕೃತಜ್ಞತೆ ಸಲ್ಲಿಸುವುದು ಸಮಾಜದ ಕರ್ತವ್ಯವಾಗಿದೆ ಎಂದರು.
ಶ್ರೀ ಬಸವೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ
ಈ ಧಾರ್ಮಿಕ ಸಡಗರದ ಹಿಂದಿನ ದಿನವೇ ನಗರದ ಪ್ರತಿಷ್ಠಿತ ‘ಶ್ರೀ ಬಸವೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘ’ದ ಶತಮಾನೋತ್ಸವ ಆಚರಣೆ ನಡೆಯುತ್ತಿರುವುದು ಒಂದು ಸುಂದರ ಯೋಗಾಯೋಗವಾಗಿದೆ. ಅತ್ಯಂತ ಅಲ್ಪ ಆದಾಯದಿಂದ ಆರಂಭವಾದ ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಲ್ಲಲು ವಿವಿಧ ಕಾಲಘಟ್ಟಗಳಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಶ್ರಮವೇ ಕಾರಣ. ನೂರು ವರ್ಷ ಪೂರೈಸಿರುವ ಈ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಹಾಗೂ ಶ್ರೀ ಕಾಶಿ ಜಗದ್ಗುರುಗಳು ಜತೆಯಾಗಿ ಸಾನ್ನಿಧ್ಯ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದೇವೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಮುಕ್ತ ಆಹ್ವಾನ
ಈ ಎರಡೂ ಅಭೂತಪೂರ್ವ ಸಮಾರಂಭಗಳಿಗೆ ಶಿವಮೊಗ್ಗ ನಗರದ ಎಲ್ಲಾ ಜನಪ್ರತಿನಿಧಿಗಳು, ಸಮಾಜದ ಪ್ರಮುಖರು ಹಾಗೂ ಭಕ್ತಾದಿಗಳು ಪಕ್ಷಾತೀತ ಮತ್ತು ಪಂಗಡಾತೀತವಾಗಿ ಒಂದಾಗಿ ಕೈಜೋಡಿಸಿ ಸಿದ್ಧತೆ ನಡೆಸಿದ್ದಾರೆ. ಸಾರ್ವಜನಿಕರು ಮತ್ತು ಭಕ್ತಾದಿಗಳು ತಮ್ಮ ಕಾರ್ಯದೊತ್ತಡಗಳ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಈ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು. ಪಂಚಪೀಠಾಧೀಶರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಶ್ರೀಗಳು ಕರೆ ನೀಡಿದರು.
ಜಗದ್ಗುರು ರೇಣುಕಾಚಾರ್ಯಾದಿ ಪಂಚಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಹಾಗೂ 12ನೇ ಶತಮಾನದ ಬಸವಾದಿ ಶಿವಶರಣರು ನಾಡಿನ ಸಮಸ್ತ ಜನರಿಗೂ ಆಯುಷ್ಯ, ಆರೋಗ್ಯ, ಸುಖ-ಸಂಪತ್ತನ್ನು ಕರುಣಿಸಲಿ ಎಂದು ಶ್ರೀಗಳು ಇದೇ ಸಂದರ್ಭದಲ್ಲಿ ಪ್ರಾರ್ಥಿಸಿದರು.