ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನಾಯಕತ್ವ ಬದಲಾವಣೆ ಚರ್ಚೆ: ಡಿಕೆಶಿ ಒತ್ತಡಕ್ಕೂ ಜಗ್ಗದ ಹೈಕಮಾಂಡ್‌ – ರಾಹುಲ್ ಕೈಯಲ್ಲಿರುವ ಗುಪ್ತ ವರದಿ ಏನು?

On: December 28, 2025 12:39 PM
Follow Us:

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಭುಗಿಲೆದ್ದಿದೆ. ಮುಖ್ಯಮಂತ್ರಿ ಸ್ಥಾನವನ್ನು ಕುರಿತಂತೆ ಕಾಂಗ್ರೆಸ್ ಒಳಗೆ ನಡೆಯುತ್ತಿರುವ ಒಳಹೋರಾಟ ಇದೀಗ ತೆರೆದ ಚರ್ಚೆಯ ಹಂತಕ್ಕೆ ಬಂದಿದೆ. ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗಾಗಿ ತೆರೆಮರೆಯಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿ ಹರಿದಾಡುತ್ತಿವೆ. ಆದರೆ, ಪಕ್ಷದ ‘ಟ್ರಬಲ್ ಶೂಟರ್’ ಎಂದೇ ಗುರುತಿಸಲ್ಪಡುವ ಡಿಕೆ ಶಿವಕುಮಾರ್ ಅವರ ಒತ್ತಡಕ್ಕೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತ್ರ ಸದ್ಯಕ್ಕೆ ಮಣಿಯುವ ಸೂಚನೆ ನೀಡಿಲ್ಲ.

ಹೈಕಮಾಂಡ್‌ನ ಈ ಮೌನದ ಹಿಂದೆ ಗಂಭೀರ ಹಾಗೂ ಆಘಾತಕಾರಿ ಕಾರಣಗಳಿವೆ ಎಂಬುದು ಈಗ ನಿಧಾನವಾಗಿ ಬಯಲಾಗುತ್ತಿದೆ.

ಹೊರಗೆ ಶಾಂತಿ, ಒಳಗೆ ಒತ್ತಡ

ಸಾರ್ವಜನಿಕವಾಗಿ ಡಿ.ಕೆ. ಶಿವಕುಮಾರ್ ಅವರು “ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ, ಎಲ್ಲವೂ ಸರಿಯಾಗಿದೆ” ಎಂಬ ಹೇಳಿಕೆಯನ್ನು ಪುನರಾವರ್ತಿಸುತ್ತಲೇ ಬಂದಿದ್ದಾರೆ. ಆದರೆ, ಒಳಗೊಳಗೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ದೆಹಲಿ ಮಟ್ಟದಲ್ಲಿ ತೀವ್ರ ಲಾಬಿ ನಡೆಯುತ್ತಿದೆ ಎನ್ನುವುದು ರಾಜಕೀಯ ವೀಕ್ಷಕರ ಅಭಿಪ್ರಾಯ. ಡಿಕೆಶಿ ಅವರ ಬೆಂಬಲಿಗ ಶಾಸಕರು ಹಾಗೂ ಬಣದ ನಾಯಕರು, ಈಗಲೇ ಅಧಿಕಾರ ಹಸ್ತಾಂತರವಾಗಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಆದರೆ, ಇಷ್ಟೆಲ್ಲಾ ಪ್ರಯತ್ನಗಳ ನಡುವೆಯೂ ಡಿಕೆಶಿಗೆ ದೆಹಲಿಯಿಂದ ಯಾವುದೇ ಸಕಾರಾತ್ಮಕ ಸಂದೇಶ ಬಂದಿಲ್ಲ. ಬದಲಾಗಿ, ಕಾಂಗ್ರೆಸ್ ಹೈಕಮಾಂಡ್ ನಿಗೂಢ ಮೌನಕ್ಕೆ ಶರಣಾಗಿದೆ. ಈ ಮೌನವೇ ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಾಹುಲ್ ಗಾಂಧಿ ಕೈಯಲ್ಲಿರುವ ‘ಗುಪ್ತ ವರದಿ’

ಮೂಲಗಳ ಪ್ರಕಾರ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಹೆಚ್ಚಾದ ಕೂಡಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೂರು ಪ್ರತ್ಯೇಕ ಮೂಲಗಳ ಮೂಲಕ ಕರ್ನಾಟಕ ರಾಜಕೀಯದ ನೈಜ ಸ್ಥಿತಿಗತಿಯ ಕುರಿತು ರಹಸ್ಯ ಸರ್ವೆ ಮಾಡಿಸಿದ್ದಾರೆ. ಈ ಸರ್ವೆ ವರದಿ ಡಿಕೆ ಶಿವಕುಮಾರ್ ಅವರ ಸಿಎಂ ಕನಸಿಗೆ ಸದ್ಯಕ್ಕೆ ತಡೆಗೋಡೆಯಾಗಿ ಪರಿಣಮಿಸಿದೆ ಎನ್ನಲಾಗಿದೆ.

ಆ ವರದಿಯ ಪ್ರಕಾರ, ಈ ಹಂತದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಸರ್ಕಾರದ ಅಸ್ತಿತ್ವಕ್ಕೇ ಅಪಾಯ ಎದುರಾಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರನ್ನು ಬದಲಿಸಿ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದರೆ, ಪಕ್ಷದೊಳಗೆ ಭಾರೀ ಆಂತರಿಕ ಬಂಡಾಯ ಭುಗಿಲೇಳುವ ಆತಂಕವಿದೆ. ಜೊತೆಗೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೇಲೂ ಇದು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ ಎನ್ನಲಾಗಿದೆ.

ಅಪಾಯ ತೆಗೆದುಕೊಳ್ಳಲು ಸಿದ್ಧವಿಲ್ಲದ ಹೈಕಮಾಂಡ್

ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಕರ್ನಾಟಕದಂತಹ ಪ್ರಮುಖ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮೂಲಕ ಅನಗತ್ಯ ಅಪಾಯ ತೆಗೆದುಕೊಳ್ಳಲು ರಾಹುಲ್ ಗಾಂಧಿ ಸಿದ್ಧರಿಲ್ಲ ಎಂದು ಹೇಳಲಾಗುತ್ತಿದೆ. ಗುಪ್ತಚರ ವರದಿಗಳು ಹಾಗೂ ಆಂತರಿಕ ಸಮೀಕ್ಷೆಗಳು “ಇದು ಬದಲಾವಣೆಗೆ ಸೂಕ್ತ ಸಮಯವಲ್ಲ” ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿವೆ.

ಇದೇ ಕಾರಣಕ್ಕೆ, ಡಿಕೆಶಿ ಎಷ್ಟೇ ಒತ್ತಡ ಹೇರಿದರೂ, ಹೈಕಮಾಂಡ್ ಯಥಾಸ್ಥಿತಿಯನ್ನು ಮುಂದುವರಿಸುವ ನಿಲುವಿನಲ್ಲಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಜೋರಾಗಿವೆ.

ಇತ್ತ, ನಿನ್ನೆ ದೆಹಲಿಯ ಇಂದಿರಾ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಗೆ ಘಟಾನುಘಟಿ ಹೈಕಮಾಂಡ್ ನಾಯಕರು ಹಾಜರಿದ್ದರು. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭಾಗವಹಿಸಿದ್ದು, ರಾಜ್ಯ ಕಾಂಗ್ರೆಸ್‌ನ ಒಳಹೊಳಪು-ಗೊಂದಲಗಳ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಗೊಂದಲ ನಿವಾರಣೆಗೆ ಯತ್ನ ನಡೆದರೂ, ಸ್ಪಷ್ಟ ತೀರ್ಮಾನ ಹೊರಬಂದಿಲ್ಲ ಎಂಬುದು ತಿಳಿದುಬಂದಿದೆ.

ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಪಂಚವಾರ್ಷಿಕ ಯೋಜನೆಯವರೆಗೆ ತಾವೇ ಮುಖ್ಯಮಂತ್ರಿ ಎಂಬ ಸಂದೇಶವನ್ನು ಸದನದಲ್ಲಿಯೂ ಸ್ಪಷ್ಟವಾಗಿ ನೀಡಿದ್ದಾರೆ. ಇದನ್ನೆಲ್ಲಾ ಗಮನಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಮೌನವಾಗಿ ದೆಹಲಿಯಾತ್ರೆ ಮಾಡಿ ವಾಪಸ್ ಆಗಿದ್ದಾರೆ. ಅದೇ ವೇಳೆ ಸಿದ್ದರಾಮಯ್ಯ ಕೂಡ ದೆಹಲಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ರಾಜಕೀಯ ವಲಯದ ವಿಶ್ಲೇಷಣೆಯಂತೆ, CWC ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಬದಲಾಗಿ, ವೋಟ್ ಚೋರಿ ಪ್ರಕರಣ, ವಿ-ಬಿಜಿ-ರಾಮ್‌ಜಿ ಬಿಲ್ ಸೇರಿದಂತೆ ಇತರೆ ರಾಷ್ಟ್ರೀಯ ವಿಚಾರಗಳೇ ಸಭೆಯ ಪ್ರಮುಖ ಅಜೆಂಡಾಗಿದ್ದವು. ಇದರಿಂದಾಗಿ ಸಿದ್ದರಾಮಯ್ಯ ಮತ್ತೊಮ್ಮೆ ಮೇಲುಗೈ ಸಾಧಿಸಿದಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ‘ಜಾಲಿ ಮೂಡ್’ನಲ್ಲಿದ್ದು, ಡಿಕೆ ಶಿವಕುಮಾರ್ ಅವರ ಕನಸುಗಳು ಸದ್ಯಕ್ಕೆ ಮಂಕಾಗಿರುವಂತೆ ಕಾಣುತ್ತಿದೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ.

ಜನರ ಪ್ರಶ್ನೆಗೂ ಉತ್ತರಿಸದ ಡಿಕೆಶಿ

ಇತ್ತ, ಪವರ್ ಫೈಟ್ ನಡುವೆಯೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ನಡೆದ ಅವರೆಬೇಳೆ ಮೇಳಕ್ಕೆ ಭೇಟಿ ನೀಡಿದರು. ಈ ವೇಳೆ ಮಹಿಳೆಯೊಬ್ಬರು, “ಡಿಕೆ ಸಾರ್… ಡಿಕೆ ಸಾರ್… ನೀವು ಯಾವಾಗ ಮುಖ್ಯಮಂತ್ರಿ ಆಗ್ತೀರಿ?” ಎಂದು ಪ್ರಶ್ನಿಸಿದ ಘಟನೆ ಗಮನ ಸೆಳೆದಿದೆ. ಆದರೆ, ಆ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಡಿಕೆಶಿ ಅಲ್ಲಿಂದ ತೆರಳಿದರು.

ಮುಂದೇನು?

ಒಟ್ಟಾರೆಯಾಗಿ, ಕಾಂಗ್ರೆಸ್‌ನೊಳಗಿನ ಮುಖ್ಯಮಂತ್ರಿ ಗಾದಿಯ ಸಂಘರ್ಷ ವರ್ಷಾಂತ್ಯದತ್ತ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಸಂಕ್ರಾಂತಿಗೆ ಸಂಕ್ರಾಂತಿ ಬದಲಾವಣೆ ಆಗಬಹುದೇ ಎಂಬ ಕೌತುಕ ಮುಂದುವರಿದಿದ್ದರೂ, ಹೈಕಮಾಂಡ್‌ನ ಮೌನವೇ ಇದೀಗ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಇಬ್ಬರೊಂದಿಗೆ ಹೈಕಮಾಂಡ್ ನೇರ ಸಂಭಾಷಣೆ ನಡೆಸದಿರುವುದು, ಸದ್ಯಕ್ಕೆ ಯಥಾಸ್ಥಿತಿಯೇ ಮುಂದುವರಿಯುವ ಸೂಚನೆ ನೀಡುತ್ತಿದೆ ಎನ್ನುವುದು ರಾಜಕೀಯ ವಲಯದ ಒಟ್ಟಾರೆ ವಿಶ್ಲೇಷಣೆ.

K.M.Sathish Gowda

Join WhatsApp

Join Now

Facebook

Join Now

Leave a Comment