ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕೋವಿಡ್ ಅವ್ಯವಹಾರ: ನ್ಯಾ. ಜಾನ್ ಮೈಕೆಲ್ ಡಿ. ಕುನ್ಹಾ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆ

On: December 31, 2025 6:36 PM
Follow Us:

ಬೆಂಗಳೂರು, ಡಿ.31: ಕೋವಿಡ್–19 ಮಹಾಮಾರಿ ಅವಧಿಯಲ್ಲಿ ಕರ್ನಾಟಕದಲ್ಲಿ ಸಂಭವಿಸಿದ ಸಾವುಗಳು, ವೈದ್ಯಕೀಯ ಉಪಕರಣಗಳ ಖರೀದಿ ಹಾಗೂ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ. ಕುನ್ಹಾ ನೇತೃತ್ವದ ವಿಚಾರಣಾ ಆಯೋಗ ತನ್ನ ಅಂತಿಮ ವರದಿಯನ್ನು ಬುಧವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವರದಿಯನ್ನು ಸ್ವೀಕರಿಸಿದರು.

ಕೋವಿಡ್ ಅವಧಿಯಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಉಂಟಾದ ಅವ್ಯವಸ್ಥೆ, ಆಮ್ಲಜನಕ ಕೊರತೆ, ವೈದ್ಯಕೀಯ ಸಾಧನಗಳು ಹಾಗೂ ಔಷಧಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದವು. ಈ ಹಿನ್ನೆಲೆ 2023ರ ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರವು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ. ಕುನ್ಹಾ ಅವರ ನೇತೃತ್ವದಲ್ಲಿ ಒಬ್ಬರ ಸದಸ್ಯರ ವಿಚಾರಣಾ ಆಯೋಗವನ್ನು ರಚಿಸಿ ಸಮಗ್ರ ತನಿಖೆಗೆ ಆದೇಶ ನೀಡಿತ್ತು.

ಆಯೋಗವು ತನಿಖೆಯ ಭಾಗವಾಗಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯವೈಖರಿ, ಹಣಕಾಸು ವ್ಯವಹಾರಗಳು, ತುರ್ತು ನಿರ್ಧಾರ ಪ್ರಕ್ರಿಯೆಗಳು ಹಾಗೂ ಅಧಿಕಾರಿಗಳ ಪಾತ್ರವನ್ನು ಪರಿಶೀಲಿಸಿತು. ಈ ತನಿಖೆಯ ಮಧ್ಯಂತರ ಹಂತವಾಗಿ ಆಯೋಗವು 2025ರ ಏಪ್ರಿಲ್‌ನಲ್ಲಿ 1,808 ಪುಟಗಳ ಎರಡನೇ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಇದೀಗ ಎಲ್ಲಾ ಅಂಶಗಳನ್ನು ಒಳಗೊಂಡ ಅಂತಿಮ ವರದಿ ಸರ್ಕಾರದ ಕೈ ಸೇರಿದೆ.

ಆಯೋಗದ ವರದಿಯನ್ನು ಈವರೆಗೆ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ. ಆದರೂ, ಈ ಪ್ರಕರಣವು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಪಟ್ಟಿರುವುದನ್ನು ಗಮನದಲ್ಲಿಟ್ಟುಕೊಂಡು, ಪಾರದರ್ಶಕತೆ ಮತ್ತು ಜನರ ನಂಬಿಕೆ ದೃಢಪಡಿಸುವ ನಿಟ್ಟಿನಲ್ಲಿ ವರದಿಯನ್ನು ಸಾಧ್ಯವಾದಷ್ಟು ಬೇಗ ಸಾರ್ವಜನಿಕಗೊಳಿಸುವ ಬಗ್ಗೆ ಸರ್ಕಾರ ಪರಿಗಣಿಸಬೇಕೆಂದು ನ್ಯಾ. ಜಾನ್ ಮೈಕೆಲ್ ಡಿ. ಕುನ್ಹಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಅಂತಿಮ ವರದಿಯಲ್ಲಿ ಕೋವಿಡ್ ಅವಧಿಯ ಅವ್ಯವಹಾರಗಳಿಗೆ ಸಂಬಂಧಿಸಿದ ಹೊಣೆಗಾರಿಕೆ, ಶಿಫಾರಸುಗಳು ಹಾಗೂ ಮುಂದಿನ ಕ್ರಮಗಳ ಬಗ್ಗೆ ಯಾವ ಅಂಶಗಳು ಉಲ್ಲೇಖಗೊಂಡಿವೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ. ವರದಿಯ ಆಧಾರದಲ್ಲಿ ಕಾನೂನು ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆಯೇ ಎಂಬುದರ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ವ್ಯಕ್ತವಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment