ಅಜ್ಜಂಪುರ, ಡಿಸೆಂಬರ್ 31: ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಶಾಪಾನುಗ್ರಹ ಶಕ್ತಿಯನ್ನು ಹೊಂದಿದ್ದ ಮಹಾತಪಸ್ವಿಗಳಾಗಿದ್ದರೂ, ತಮ್ಮ ಸಂಪೂರ್ಣ ಜೀವನವನ್ನು ಭಕ್ತ ಸಮಾಜದ ಆತ್ಮೀಯ ಹಾಗೂ ಸಾಮಾಜಿಕ ಏಳಿಗೆಗಾಗಿ ಅರ್ಪಿಸಿದ್ದ ಮಹಾನ್ ದಾರ್ಶನಿಕರು ಎಂದು ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ಅವರು ಬುಧವಾರ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಪ್ರಸಿದ್ಧ ಬುಕ್ಕಾಂಬುಧಿ ಕ್ಷೇತ್ರದಲ್ಲಿ ಲಿಂಗೈಕ್ಯ ಮಹಾ ತಪಸ್ವಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳ 70ನೇ ಜನ್ಮವರ್ಧಂತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಲಿಂ. ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಸಮಾಜದಲ್ಲಿ ಧರ್ಮ, ನೀತಿ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಿದವರು. ಅವರು ಪ್ರತಿಯೊಬ್ಬ ಭಕ್ತನನ್ನು ತಮ್ಮ ಕುಟುಂಬದ ಸದಸ್ಯನಂತೆ ಕಾಣುತ್ತಿದ್ದರು. ಅವರ ತಪಸ್ಸು, ತ್ಯಾಗ ಮತ್ತು ಸೇವಾ ಮನೋಭಾವ ಇಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಸ್ವಾಮಿಗಳು ಹೇಳಿದರು.
ಜನವರಿ 7ರಂದು ಲಿಂ. ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ರಂಭಾಪುರಿ ಜಗದ್ಗುರುಗಳ ಜನ್ಮದಿನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಈ ಮಹೋತ್ಸವವನ್ನು ಭಕ್ತರೆಲ್ಲರೂ ಒಗ್ಗಟ್ಟಿನಿಂದ ಯಶಸ್ವಿಗೊಳಿಸಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಳಲಿ ಸಂಸ್ಥಾನಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಬುಕ್ಕಾಂಬುಧಿ ಬೆಟ್ಟದಲ್ಲಿ ನಡೆಸಿದ್ದ ತಮ್ಮ ಐದು ದಿನಗಳ ಮೌನ ಅನುಷ್ಠಾನವನ್ನು ಸಮಾಪ್ತಿಗೊಳಿಸಿದರು. ಮೌನ ಅನುಷ್ಠಾನದಿಂದ ಆತ್ಮಶುದ್ಧಿ, ಧ್ಯಾನ ಮತ್ತು ಆತ್ಮಜ್ಞಾನಕ್ಕೆ ದಾರಿ ತೆರೆದುಕೊಳ್ಳುತ್ತದೆ ಎಂದು ಅವರು ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು, ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಅನೇಕ ಶಿವಾಚಾರ್ಯರು ಉಪಸ್ಥಿತರಿದ್ದರು.
ಶ್ರೀಮದ್ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟ್‌ನ ಎಲ್ಲಾ ಪದಾಧಿಕಾರಿಗಳು, 108 ದಿನಗಳ ರುದ್ರಾಭಿಷೇಕ ನೆರವೇರಿಸಿದ ದರ್ಶನ್ ಶಾಸ್ತ್ರಿಗಳು ಹಾಗೂ ಅವರ ಸಹಚರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾವರೆಕೆರೆ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿ ಕಾರ್ಯಕ್ರಮದ ನಿರೂಪಣೆ ನಡೆಸಿದರು.
ಇದಕ್ಕೂ ಪೂರ್ವವಾಗಿ, ಉಪಸ್ಥಿತರಿದ್ದ ಎಲ್ಲಾ ಶಿವಾಚಾರ್ಯರು ಕುಂಭಗಳನ್ನು ಹೊತ್ತು ಅಗ್ರೋದಕ ತರುವ ಮೂಲಕ ಬುಕ್ಕಾಂಬುಧಿ ಬೆಟ್ಟದಲ್ಲಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಮಂಗಲ ಮೂರ್ತಿಗೆ ವೈದಿಕ ವಿಧಿ ವಿಧಾನಗಳೊಂದಿಗೆ ಕುಂಭಾಭಿಷೇಕ ನೆರವೇರಿಸಿದರು. ಈ ಪುಣ್ಯ ಸಂದರ್ಭದಲ್ಲಿ ಗ್ರಾಮದ ಸಕಲ ಸದ್ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಶ್ರದ್ಧೆ ವ್ಯಕ್ತಪಡಿಸಿದರು.









