ಬೆಂಗಳೂರು : ರಾಜ್ಯ ಸರ್ಕಾರ ಹೊಸ ವರ್ಷದ ಮುನ್ನ ದಿನವೇ ಆಡಳಿತ ಯಂತ್ರದಲ್ಲಿ ಭಾರೀ ಬದಲಾವಣೆಗಳಿಗೆ ಕೈಹಾಕಿದ್ದು, 48 ಐಪಿಎಸ್ ಅಧಿಕಾರಿಗಳಿಗೆ ಪದೋನ್ನತಿ ಹಾಗೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದರೊಂದಿಗೆ ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಹಾಗೂ ಬೆಂಗಳೂರು ನಗರದ ಡಿಸಿಪಿ ಹುದ್ದೆಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ವಿಶೇಷವಾಗಿ ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಪ್ರಮುಖವಾಗಿರುವ ಡಿಸಿಪಿ ಹುದ್ದೆಗಳಲ್ಲಿ ದೊಡ್ಡ ಮಟ್ಟದ ಮರುಹೊಂದಾಣಿಕೆ ಮಾಡಲಾಗಿದೆ. ವೈಟ್‌ಫೀಲ್ಡ್ ವಿಭಾಗಕ್ಕೆ ಸೈದುಲು ಅದಾವತ್, ಪಶ್ಚಿಮ ವಿಭಾಗಕ್ಕೆ ಯತೀಶ್ ಎನ್., ಈಶಾನ್ಯ ವಿಭಾಗಕ್ಕೆ ಮಿಥುನ್ ಕುಮಾರ್, ಪೂರ್ವ ವಿಭಾಗಕ್ಕೆ ವಿಕ್ರಮ್ ಆಮ್ಟೆ ಹಾಗೂ ಆಗ್ನೇಯ ವಿಭಾಗಕ್ಕೆ ಮಹಮ್ಮದ್ ಸುಜೀತಾ ಎಂ.ಎಸ್. ಅವರನ್ನು ನೇಮಕ ಮಾಡಲಾಗಿದೆ.

ಇತ್ತ ಬೆಳಗಾವಿ ಜಿಲ್ಲಾ ಎಸ್‌ಪಿ ಆಗಿದ್ದ ಭೀಮಾಶಂಕರ್ ಗುಳೇದ್ ಅವರಿಗೆ ಡಿಐಜಿಪಿಯಾಗಿ ಮುಂಬಡ್ತಿ ನೀಡಿ ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಕೊಡಗು ಜಿಲ್ಲೆಯ ಎಸ್‌ಪಿ ಆಗಿದ್ದ ಕೆ. ರಾಮರಾಜನ್ ಅವರನ್ನು ಬೆಳಗಾವಿ ಎಸ್‌ಪಿಯಾಗಿ ನೇಮಕ ಮಾಡಲಾಗಿದೆ. ಮೈಸೂರು ಎಸ್‌ಪಿ ಆಗಿದ್ದ ವಿಷ್ಣುವರ್ಧನ ಅವರನ್ನು ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ) ನಿರ್ದೇಶಕರನ್ನಾಗಿ ನಿಯೋಜಿಸಲಾಗಿದೆ. ಮಂಡ್ಯ ಎಸ್‌ಪಿ ಆಗಿದ್ದ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ಮೈಸೂರು ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ದಕ್ಷಿಣ ವಲಯದ ಡಿಐಜಿಪಿ ಆಗಿದ್ದ ಡಾ. ಎಂ.ಬಿ. ಬೋರಲಿಂಗಯ್ಯ ಅವರಿಗೆ ಐಜಿಪಿಯಾಗಿ ಮುಂಬಡ್ತಿ ನೀಡಲಾಗಿದ್ದು, ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ. ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿದ್ದ ಅಜಯ್ ಹಿಲೋರಿ ಅವರಿಗೂ ಐಜಿಪಿ ಹುದ್ದೆಗೆ ಪದೋನ್ನತಿ ನೀಡಿ, ಹೆಚ್ಚುವರಿ ಆಯುಕ್ತರಾಗಿ ಮುಂದುವರೆಸಲಾಗಿದೆ.
22 ಐಎಎಸ್ ಅಧಿಕಾರಿಗಳ ವರ್ಗಾವಣೆ; 4 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬದಲಾವಣೆ
ಇದೇ ದಿನ ರಾಜ್ಯ ಸರ್ಕಾರ 4 ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಸೇರಿದಂತೆ ಒಟ್ಟು 22 ಐಎಎಸ್ ಅಧಿಕಾರಿಗಳ ವರ್ಗಾವಣೆಗೂ ಆದೇಶ ಹೊರಡಿಸಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಹೊಸ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಶಿವಮೊಗ್ಗ ಹಾಗೂ ತುಮಕೂರಿಗೆ ಇನ್ನೂ ಜಿಲ್ಲಾಧಿಕಾರಿಗಳ ನಿಯೋಜನೆ ಮಾಡಿಲ್ಲ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆಗಿದ್ದ ರವೀಂದ್ರ ಪಿ.ಎನ್. ಅವರನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದ ಪ್ರಭು ಜಿ. ಅವರನ್ನು ನೇಮಕ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಆಗಿದ್ದ ಮೀನಾ ನಾಗರಾಜ್ ಸಿ.ಎನ್. ಅವರನ್ನು ಕಂದಾಯ ಇಲಾಖೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದ್ದು, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ನಾಗರಾಜ ಎನ್.ಎಂ. ಅವರನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರನ್ನಾಗಿ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸಿ.ಟಿ. ಅವರನ್ನು ಪಶುಸಂಗೋಪನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಶ್ರೀರೂಪಾ ಅವರನ್ನು ಚಾಮರಾಜನಗರದ ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
10 ಐಎಎಸ್ ಅಧಿಕಾರಿಗಳಿಗೆ ಹುದ್ದೆ ಕಾಯ್ದಿರಿಕೆ
ವರ್ಗಾವಣೆಗೊಂಡಿರುವ ಇನ್ನೂ 10 ಮಂದಿ ಐಎಎಸ್ ಅಧಿಕಾರಿಗಳಿಗೆ ಪ್ರಸ್ತುತ ಯಾವುದೇ ಹುದ್ದೆ ನಿಯೋಜನೆ ಮಾಡದೇ ಸರ್ಕಾರ ಕಾಯ್ದಿರಿಸಿದೆ.
ಹೊಸ ವರ್ಷದ ಮುನ್ನ ದಿನವೇ ಇಂತಹ ಭಾರೀ ಮಟ್ಟದ ಆಡಳಿತಾತ್ಮಕ ಬದಲಾವಣೆಗಳಿಗೆ ಸರ್ಕಾರ ಕೈಹಾಕಿರುವುದು ರಾಜಕೀಯ ಹಾಗೂ ಆಡಳಿತ ವಲಯಗಳಲ್ಲಿ ಅಚ್ಚರಿಯೊಂದಿಗೆ ಚರ್ಚೆಗೆ ಕಾರಣವಾಗಿದೆ
ಐಪಿಎಸ್ ಅಧಿಕಾರಿಗಳು (ಪದೋನ್ನತಿ / ವರ್ಗಾವಣೆ):
- ಭೀಮಾಶಂಕರ್ ಗುಳೇದ್ – ಎಸ್‌ಪಿ, ಬೆಳಗಾವಿ → ಡಿಐಜಿಪಿ, ಸಿಐಡಿ
- ಇಲಾಕ್ಕಿಯ ಕರುಣಾಕರನ್ – ಎನ್‌ಎಚ್‌ಆರ್‌ಸಿ → ಡಿಐಜಿಪಿ, ವೈರ್‌ಲೆಸ್
- ವೇದಮೂರ್ತಿ – ಎಸ್‌ಪಿ, ರಾಜ್ಯ ಗುಪ್ತಚರ → ಡಿಐಜಿಪಿ, ರಾಜ್ಯ ಗುಪ್ತಚರ
- ಕೆ.ಎಂ. ಶಾಂತರಾಜು – ಎಸ್‌ಪಿ, ಐಎಸ್‌ಡಿ → ಡಿಐಜಿಪಿ, ಐಎಸ್‌ಡಿ
- ಹನುಮಂತರಾಯ – ಎಸ್‌ಪಿ, ಕೆಎಲ್‌ಎ → ಡಿಐಜಿಪಿ, ಎಸ್‌ಎಚ್‌ಆರ್‌ಸಿ
- ಡಿ. ದೇವರಾಜು – ಡಿಸಿಪಿ, ಪೂರ್ವ ವಿಭಾಗ → ಡಿಐಜಿಪಿ, ತರಬೇತಿ
- ಡಾ. ಸಿರಿ ಗೌರಿ – ಎಸ್‌ಪಿ, ಎಸ್‌ಸಿಆರ್‌ಬಿ → ಡಿಐಜಿಪಿ, ಲೋಕಾಯುಕ್ತ
- ಡಾ. ಕೆ. ಧರಣಿ ದೇವಿ – ಎಸ್‌ಪಿ, ಡಿಸಿಆರ್‌ಇ → ಡಿಐಜಿಪಿ, ಗುಪ್ತಚರ
- ಎಸ್. ಸವಿತಾ – ಎಸ್‌ಪಿ, ಸಿಐಡಿ → ಡಿಐಜಿಪಿ, ಗೃಹ ರಕ್ಷಕ ದಳ
- ಸಿ.ಕೆ. ಬಾಬಾ – ಎಸ್‌ಪಿ, ಬೆಂಗಳೂರು ಗ್ರಾಮಾಂತರ → ಡಿಐಜಿಪಿ, ಕೆಎಸ್‌ಆರ್‌ಪಿ
- ಎಸ್. ಗಿರೀಶ್ – ಡಿಸಿಪಿ, ಪಶ್ಚಿಮ ವಿಭಾಗ → ಡಿಐಜಿಪಿ, ಎಎನ್‌ಟಿಎಫ್
- ಎಂ. ಪುಟ್ಟಮಾದಯ್ಯ – ಎಸ್‌ಪಿ, ರಾಯಚೂರು → ಡಿಐಜಿಪಿ, ಪಿಟಿಸಿ ಕಲಬುರಗಿ
- ಟಿ. ಶ್ರೀಧರ – ಎಸ್‌ಪಿ, ಡಿಸಿಆರ್‌ಇ → ಡಿಐಜಿಪಿ, ಕೇಂದ್ರ ಕಚೇರಿ
- ಎ.ಎನ್. ಪ್ರಕಾಶ್ ಗೌಡ – ಎಸ್‌ಪಿ, ಐಎಸ್‌ಡಿ → ಡಿಐಜಿಪಿ, ಎಸ್‌ಎಎಫ್
- ಜಿನೇಂದ್ರ ಖಾನಗಾವಿ – ಎಸ್‌ಪಿ, ಐಎಸ್‌ಡಿ → ಡಿಐಜಿಪಿ, ಕಾರಾಗೃಹ
- ಜೆ.ಕೆ. ರಶ್ಮಿ – ಡೆಪ್ಯುಟಿ ಕಮಾಂಡೆಂಟ್ → ಡಿಐಜಿಪಿ, ರೈಲ್ವೆ
- ಟಿ.ಪಿ. ಶಿವಕುಮಾರ್ – ಎಸ್‌ಪಿ, ಕೆಪಿಸಿಎಲ್ → ಡಿಐಜಿಪಿ, ಎಸ್‌ಸಿಆರ್‌ಬಿ
- ವಿಷ್ಣುವರ್ಧನ – ಎಸ್‌ಪಿ, ಮೈಸೂರು → ನಿರ್ದೇಶಕರು, ಕೆಪಿಎ
ಐಜಿಪಿ ಪದೋನ್ನತಿ:
- ಡಾ. ಎಂ.ಬಿ. ಬೋರಲಿಂಗಯ್ಯ – ಡಿಐಜಿಪಿ, ದಕ್ಷಿಣ ವಲಯ → ಐಜಿಪಿ, ದಕ್ಷಿಣ ವಲಯ
- ಅಜಯ್ ಹಿಲೋರಿ – ಜಂಟಿ ಆಯುಕ್ತ, ಅಪರಾಧ → ಹೆಚ್ಚುವರಿ ಆಯುಕ್ತ, ಅಪರಾಧ
ಎಸ್‌ಪಿ / ಡಿಸಿಪಿ ವರ್ಗಾವಣೆ:
- ಸೈದುಲು ಅದಾವತ್ – ಎಸ್‌ಪಿ, ಸಿಐಡಿ → ಡಿಸಿಪಿ, ವೈಟ್‌ಫೀಲ್ಡ್
- ಯತೀಶ್ ಎನ್ – ಎಸ್‌ಪಿ, ರೈಲ್ವೆ → ಡಿಸಿಪಿ, ಪಶ್ಚಿಮ ವಿಭಾಗ
- ಮಿಥುನ್ ಕುಮಾರ್ – ಎಸ್‌ಪಿ, ಶಿವಮೊಗ್ಗ → ಡಿಸಿಪಿ, ಈಶಾನ್ಯ ವಿಭಾಗ
- ವಿಕ್ರಮ್ ಆಮ್ಟೆ – ಎಸ್‌ಪಿ, ಚಿಕ್ಕಮಗಳೂರು → ಡಿಸಿಪಿ, ಪೂರ್ವ ವಿಭಾಗ
- ಮಹಮ್ಮದ್ ಸುಜೀತಾ – ಎಸ್‌ಪಿ, ಹಾಸನ → ಡಿಸಿಪಿ, ಆಗ್ನೇಯ ವಿಭಾಗ
- ಕೆ. ರಾಮರಾಜನ್ – ಎಸ್‌ಪಿ, ಕೊಡಗು → ಎಸ್‌ಪಿ, ಬೆಳಗಾವಿ
- ಬಿ. ನಿಖಿಲ್ – ಎಸ್‌ಪಿ, ಕೋಲಾರ → ಎಸ್‌ಪಿ, ಶಿವಮೊಗ್ಗ
- ಮಲ್ಲಿಕಾರ್ಜುನ ಬಾಲದಂಡಿ – ಎಸ್‌ಪಿ, ಮಂಡ್ಯ → ಎಸ್‌ಪಿ, ಮೈಸೂರು
ಐಎಎಸ್ ಅಧಿಕಾರಿಗಳು – ವರ್ಗಾವಣೆ:
- ರವೀಂದ್ರ ಪಿ.ಎನ್ – ಡಿಸಿ, ಚಿಕ್ಕಬಳ್ಳಾಪುರ → ನಿರ್ದೇಶಕರು, ಪೌರಾಡಳಿತ
- ಮೀನಾ ನಾಗರಾಜ್ – ಡಿಸಿ, ಚಿಕ್ಕಮಗಳೂರು → ಆಯುಕ್ತರು, ಕಂದಾಯ
- ಗುರುದತ್ ಹೆಗಡೆ – ಡಿಸಿ, ಶಿವಮೊಗ್ಗ → ಆಯುಕ್ತರು, ಆರೋಗ್ಯ ಇಲಾಖೆ
- ಶಿಲ್ಪಾ ನಾಗ್ – ಡಿಸಿ, ಚಾಮರಾಜನಗರ → ಆಯುಕ್ತರು, ಪಶುಸಂಗೋಪನೆ
- ಪ್ರಭು ಜಿ – ಸಿಇಒ, ತುಮಕೂರು ಜಿಪಂ → ಡಿಸಿ, ಚಿಕ್ಕಬಳ್ಳಾಪುರ
- ನಾಗರಾಜ ಎನ್.ಎಂ – ಎಂಡಿ, ಕೌಶಲ್ಯಾಭಿವೃದ್ಧಿ → ಡಿಸಿ, ಚಿಕ್ಕಮಗಳೂರು
- ಶ್ರೀರೂಪಾ – ಆಯುಕ್ತರು → ಡಿಸಿ, ಚಾಮರಾಜನಗರ








