ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಹೊಸ ವರ್ಷ… ನವ ಹರುಷ”

On: December 31, 2025 11:46 PM
Follow Us:

ಈ ಭೂಮಿ ಉದಯಿಸಿದ ದಿನದಿಂದ ಇಂದಿನವರೆಗೂ ನಾವು ದಿನಗಳನ್ನು ಕಳೆಯುತ್ತಲೇ ಬಂದಿದ್ದೇವೆ. ಕಾಲಚಕ್ರ ನಿರಂತರವಾಗಿ ತಿರುಗುತ್ತಿದೆ. ದಿನ, ವಾರ, ತಿಂಗಳುಗಳು ಎಣಿಕೆಯಿಲ್ಲದೆ ಸಾಗುತ್ತಾ ಹನ್ನೆರಡು ಮಾಸಗಳು ಪೂರ್ಣಗೊಂಡಾಗ ಮತ್ತೊಂದು ಸಂಖ್ಯೆಯಲ್ಲಿ ಹೊಸ ವರ್ಷ ಬಂದೇ ಬಿಡುತ್ತದೆ. ಆ ಹೊಸ ದಿನದ ಆಗಮನವನ್ನು ವಿವಿಧ ದೇಶಗಳು, ಸಂಸ್ಕೃತಿಗಳು ವಿಭಿನ್ನ ರೀತಿಯಲ್ಲಿ ‘ಹೊಸ ವರ್ಷಾಚರಣೆ’ಯ ಹೆಸರಿನಲ್ಲಿ ಆಚರಿಸುತ್ತವೆ.

ನಮಗೆ ವಸಂತಾಗಮನದೊಂದಿಗೆ ಬರುವ ಯುಗಾದಿಯೇ ಹೊಸ ವರ್ಷ. ಯುಗಾದಿಯಂದು ಬೇವು–ಬೆಲ್ಲವನ್ನು ಸೇವಿಸುವ ಮೂಲಕ ಜೀವನದಲ್ಲಿ ಬರುವ ಸಿಹಿ–ಕಹಿಗಳನ್ನು ಸಮಬಾಳವಾಗಿ ಸ್ವೀಕರಿಸಿ ಬದುಕನ್ನು ಸುಗಮಗೊಳಿಸುವ ಸಂದೇಶವನ್ನು ನಾವು ಪಡೆಯುತ್ತೇವೆ.

ಜನವರಿ 1 ಪಾಶ್ಚಾತ್ಯ ಸಂಸ್ಕೃತಿಯ ಭಾಗವಾದರೂ, ಅದರ ಆಚರಣೆ ಜಗತ್ತಿನ ನಾನಾ ದೇಶಗಳಲ್ಲಿ ನಾನಾ ರೀತಿಯಲ್ಲಿದೆ. ಈ ಸಂಪ್ರದಾಯ ಬಹು ವರ್ಷಗಳಿಂದ ನಡೆದು ಬರುತ್ತಿದೆ ಎಂದು ಹೇಳಲಾಗುತ್ತದೆ. ಹಾಗಾದರೆ, ಜಗತ್ತಿನ ವಿವಿಧ ದೇಶಗಳಲ್ಲಿ ಹೊಸ ವರ್ಷವನ್ನು ಹೇಗೆ ಆಚರಿಸುತ್ತಾರೆ ಎಂಬುದನ್ನು ಒಮ್ಮೆ ನೋಡೋಣ…

ಸ್ಪೇನ್ ದೇಶದಲ್ಲಿ ಡಿಸೆಂಬರ್ 31ರ ರಾತ್ರಿ 12 ಗಂಟೆಗೆ ಸರಿಯಾಗಿ ಹನ್ನೆರಡು ದ್ರಾಕ್ಷಿ ಹಣ್ಣುಗಳನ್ನು ಒಂದೊಂದಾಗಿ ತಿನ್ನುತ್ತಾರೆ. ಕಳೆದು ಹೋದ ಹನ್ನೆರಡು ತಿಂಗಳುಗಳನ್ನು ನೆನಪಿಸಿಕೊಳ್ಳುತ್ತಾ, ಮುಂದಿನ ವರ್ಷ ಉತ್ತಮವಾಗಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತಾರೆ.

ಬೆಲ್ಜಿಯಂನಲ್ಲಿ ಮಕ್ಕಳು ರೆಡಿಮೇಡ್ ಗ್ರೀಟಿಂಗ್‌ಗಳ ಬದಲು ತಾವೇ ಕೈಯಾರೆ ತಯಾರಿಸಿದ ಶುಭಾಶಯ ಪತ್ರಗಳನ್ನು ಪೋಷಕರಿಗೂ ಬಂಧುಗಳಿಗೂ ನೀಡಿ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತಾರೆ.

ಈಜಿಪ್ಟ್ನಲ್ಲಿ ವಿಭಿನ್ನ ಆಚರಣೆ ಕಂಡುಬರುತ್ತದೆ. ಮನೆಯ ಬಾಗಿಲಿಗೆ ಈರುಳ್ಳಿಯನ್ನು ತೋರಣದಂತೆ ಕಟ್ಟುತ್ತಾರೆ. ಇದನ್ನು “ಕ್ರಿಮಿಡಾ” ಎಂದು ಕರೆಯುತ್ತಾರೆ. ಮಕ್ಕಳ ತಲೆಗೆ ಈರುಳ್ಳಿಯನ್ನು ಸ್ಪರ್ಶಿಸಿ ಶುಭವಾಗಲಿ ಎಂದು ಬೇಡಿಕೊಳ್ಳುತ್ತಾರೆ. ಜೊತೆಗೆ ದಾಳಿಂಬೆಯನ್ನೂ ಮನೆಯ ಬಾಗಿಲಿಗೆ ಕಟ್ಟುವ ಸಂಪ್ರದಾಯವಿದೆ.

ಡೆನ್ಮಾರ್ಕ್ನಲ್ಲಿ ‘ಕ್ರಾನ್ಸೆಕೇಜ್’ ಎಂಬ ವಿಶೇಷ ಕೇಕ್ ತಯಾರಿಸಿ ಸ್ನೇಹಿತರ ಮನೆಯ ಬಾಗಿಲು ಮುಂದೆ ಇಟ್ಟು ಹೋಗುತ್ತಾರೆ ಅಥವಾ ಎಸೆದು ಬಿಡುತ್ತಾರೆ. ಇದರಿಂದ ಹೆಚ್ಚಿನ ಗೆಳೆಯರು ಸಿಗುತ್ತಾರೆ ಎಂಬ ನಂಬಿಕೆ ಅವರದ್ದು. ಇದು ಸಂಪ್ರದಾಯವಾಗಿರಲಿ ಅಥವಾ ಮೌಲ್ಯವಾಗಿರಲಿ, ಇದರ ಹಿಂದೆ ಒಳ್ಳೆಯ ಆಶಯ ಅಡಗಿದೆ.

ಜಪಾನ್ನಲ್ಲಿ ಬುದ್ಧ ಧರ್ಮಕ್ಕೆ ಮಹತ್ವವಿದೆ. ಇಲ್ಲಿನ ಬುದ್ಧ ಮಂದಿರಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು 108 ಬಾರಿ ಗಂಟೆ ಬಾರಿಸುವ ಸಂಪ್ರದಾಯವಿದೆ.

ಈಸ್ಟೋನಿಯಾ ದೇಶದಲ್ಲಿ ಡಿಸೆಂಬರ್ 31ರ ರಾತ್ರಿ ಹನ್ನೆರಡು ಬಗೆಯ ತಿನಿಸುಗಳನ್ನು ತಯಾರಿಸಿ ಸೇವಿಸುತ್ತಾರೆ. ಇದರಿಂದ ಶಕ್ತಿ ಹಾಗೂ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಅವರದ್ದು. ನಿಜಕ್ಕೂ ವಿವಿಧ ಧಾನ್ಯಗಳು ಆರೋಗ್ಯಕ್ಕೆ ಶಕ್ತಿ ನೀಡುತ್ತವೆ ಅಲ್ಲವೇ?

ಫಿನ್‌ಲ್ಯಾಂಡ್ ಜನರು ಭವಿಷ್ಯ ಮತ್ತು ಅದೃಷ್ಟದ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದಾರೆ. ಅವರು ಟಿನ್ ಬಾಟಲಿಯನ್ನು ಕರಗಿಸಿ ತಕ್ಷಣ ನೀರಿಗೆ ಹಾಕುತ್ತಾರೆ. ಅದರಿಂದ ಉಂಟಾಗುವ ಆಕಾರವನ್ನು ನೋಡಿ ಮುಂದಿನ ವರ್ಷದ ಭವಿಷ್ಯವನ್ನು ಊಹಿಸುತ್ತಾರೆ.

ಅರ್ಜೆಂಟೀನಾದಲ್ಲಿ ಡಿಸೆಂಬರ್ 31ರ ರಾತ್ರಿ 12ಕ್ಕೆ ಸರಿಯಾಗಿ ಒಂದೊಂದೇ ಬೀನ್ ಕಾಳುಗಳನ್ನು ತಿನ್ನುವ ಸಂಪ್ರದಾಯವಿದೆ. ಜೊತೆಗೆ, ಸೂಟ್‌ಕೇಸ್ ಹಿಡಿದು ಮನೆಯ ಸುತ್ತ ಸುತ್ತುವ ವಿಶಿಷ್ಟ ಆಚರಣೆಯೂ ಇದೆ. ಇದರಿಂದ ಹೊಸ ವರ್ಷದಲ್ಲಿ ಹೆಚ್ಚಿನ ಪ್ರವಾಸ ಮಾಡುವ ಅವಕಾಶ ದೊರೆಯುತ್ತದೆ ಎಂಬ ನಂಬಿಕೆ ಅವರದ್ದು.

ಹೀಗೆ ಜಗತ್ತಿನ ನಾನಾ ದೇಶಗಳಲ್ಲಿ ನಾನಾ ರೀತಿಯ ಹೊಸ ವರ್ಷಾಚರಣೆಗಳು ಕಂಡುಬರುತ್ತವೆ. ಭಾರತದಲ್ಲಿ ಒಂದೇ ರೀತಿಯ ಆಚರಣೆಯನ್ನು ಕಾಣುವುದು ಕಷ್ಟ. ಕಾರಣ, ಭಾರತ ವಿವಿಧ ಧರ್ಮ, ಸಂಸ್ಕೃತಿ ಮತ್ತು ಪರಂಪರೆಗಳ ನಾಡು. ಈ ಅರ್ಥದಲ್ಲಿ ಭಾರತವೆಂದರೆ ಜಗತ್ತಿನ ಹಲವಾರು ದೇಶಗಳ ಆಚರಣೆಗಳ ಸಂಯೋಜಿತ ಪ್ರಯೋಗಶಾಲೆಯೇ ಸರಿ.

ಒಟ್ಟಿನಲ್ಲಿ, ಹೊಸ ವರ್ಷಾಚರಣೆ ದೇಶದಿಂದ ದೇಶಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರಬಹುದು. ಆದರೆ ಎಲ್ಲರ ಆಶಯ ಒಂದೇ — ಹೊಸ ವರ್ಷ ಎಲ್ಲರ ಬದುಕಿನಲ್ಲಿ ನವ ಹರುಷ ತರಲಿ, ಮುಂದಿನ ದಿನಗಳು ಸುಖಕರವಾಗಿರಲಿ.

ನಮಗೆ ಪರಂಪರೆಯ ಹೊಸ ವರ್ಷ ಯುಗಾದಿಯಾದರೂ, ನಾವು ಅನುಸರಿಸುತ್ತಿರುವ ದಿನಚರಿ, ಕ್ಯಾಲೆಂಡರ್ ಮತ್ತು ಚಟುವಟಿಕೆಗಳು ಜನವರಿಯಿಂದ ಡಿಸೆಂಬರ್ ವರೆಗಿನ ವ್ಯವಸ್ಥೆಯಲ್ಲೇ ನಡೆಯುತ್ತಿವೆ. ಆದ್ದರಿಂದ ಬರುವ ಹೊಸ ವರ್ಷವನ್ನು ಸ್ವಾಗತಿಸಿ, ಕಳೆದ ವರ್ಷದ ಸಿಹಿ–ಕಹಿಗಳನ್ನು ಮೆಲುಕು ಹಾಕಿ, ಯುಗಾದಿಯಲ್ಲಿ ಬೇವು–ಬೆಲ್ಲವನ್ನು ಆಸ್ವಾದಿಸಿ, ಜನವರಿ ಒಂದರಂದು ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ಚಿಂತನೆ ಮತ್ತು ಯೋಜನೆಗಳೊಂದಿಗೆ ಮುಂದಿನ ದಿನಗಳನ್ನು ವ್ಯವಸ್ಥಿತವಾಗಿ ಕಳೆಯಲು ಸಿದ್ಧರಾಗೋಣ.

ಏನಂತೀರಾ?

K.M.Sathish Gowda

Join WhatsApp

Join Now

Facebook

Join Now

Leave a Comment