ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಲಿಂಗಧಾರಣೆ ಕೇವಲ ಆಚರಣೆ ಅಲ್ಲ, ಅದು ಅರಿವಿನ ಸಾಧನ : ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು

On: December 29, 2025 11:51 AM
Follow Us:

ಶಿವಮೊಗ್ಗ: ನಗರದ ಅಂಬೇಡ್ಕರ್ ಭವನದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘ ಹಾಗೂ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಲಿಂಗತತ್ವದರ್ಶನ’ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಎರಡನೇ ದಿನ ಕಾಶಿಯ ಜಂಗಮವಾಡಿ ಮಠದ ಶ್ರೀ ಮತ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರರಾದ ಶ್ರೀ ಶ್ರೀ ಶ್ರೀ 1008 ಜಗದ್ಗುರು ವಿದ್ಯಾವಾಚಸ್ಪತಿ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ವೀರಶೈವ ಲಿಂಗಾಯತ ಧರ್ಮದ ತಾತ್ವಿಕ ಆಳ, ಆಚರಣೆಗಳ ಅರ್ಥ ಮತ್ತು ಮುಂದಿನ ಪೀಳಿಗೆಗೆ ಅದರ ಹೊಣೆಗಾರಿಕೆಯನ್ನು ವಿವರವಾಗಿ ಪ್ರತಿಪಾದಿಸಿದರು.

ಲಿಂಗ ಧಾರಣೆ ಕೇವಲ ದೇಹದ ಮೇಲಿನ ಆಚರಣೆ ಮಾತ್ರವಲ್ಲ, ಅದು ಆತ್ಮಜ್ಞಾನಕ್ಕೆ ದಾರಿ ಮಾಡಿಕೊಡುವ ಮಹತ್ವದ ಪ್ರಕ್ರಿಯೆ ಎಂದು ಅವರು ತಿಳಿಸಿದರು. “ಮನುಷ್ಯ ತಿಳಿದು ತಿಳಿಯದೆ ಅನೇಕ ತಪ್ಪುಗಳನ್ನು ಮಾಡುತ್ತಾನೆ. ಆದರೆ ದೇವರು ಕೊರಳಲ್ಲಿ ಇದ್ದರೆ, ಹಣೆಯಲ್ಲಿ ಭಸ್ಮ ಇದ್ದರೆ, ಮನಸ್ಸಿನಲ್ಲಿ ಭಯಕ್ಕೆ ಜಾಗವಿರುವುದಿಲ್ಲ” ಎಂದು ಅವರು ಹೇಳಿದರು.

ಪ್ರತಿಯೊಬ್ಬ ವೀರಶೈವ ಲಿಂಗಾಯತನು ಲಿಂಗವನ್ನು ಧರಿಸಬೇಕು ಮಾತ್ರವಲ್ಲದೆ, ಕನಿಷ್ಠ ದಿನಕ್ಕೆ ಒಂದು ಬಾರಿ ಇಷ್ಟಲಿಂಗ ಪೂಜೆ ಮಾಡಬೇಕು ಎಂಬುದು ಧರ್ಮದ ಆಧಾರಶಿಲೆ ಎಂದು ಜಗದ್ಗುರುಗಳು ಸ್ಪಷ್ಟಪಡಿಸಿದರು. “ಲಿಂಗ ಧಾರಣೆ ಕೇವಲ ಕೊರಳಿಗೆ ಕಟ್ಟಿಕೊಳ್ಳುವ ಕ್ರಿಯೆಯಲ್ಲ. ಅದು ದೇವರನ್ನು ಸದಾ ಸ್ಮರಿಸುವ ಸಂಕೇತ. ಲಿಂಗ ಧರಿಸಿಕೊಂಡು ದಿನನಿತ್ಯ ಪೂಜೆ ಮಾಡದೇ ಇದ್ದರೆ ಅದು ಧರ್ಮದ ಆತ್ಮವನ್ನೇ ಕಳೆದುಕೊಳ್ಳುವಂತೆ ಆಗುತ್ತದೆ” ಎಂದು ಹೇಳಿದರು.

ವೀರಶೈವ ಲಿಂಗಾಯತ ಧರ್ಮದಲ್ಲಿ ಪ್ರತಿಯೊಬ್ಬರೂ ಲಿಂಗವನ್ನು ಧರಿಸಬೇಕು ಮಾತ್ರವಲ್ಲದೆ, ಕನಿಷ್ಠ ದಿನಕ್ಕೆ ಒಂದು ಬಾರಿ ಇಷ್ಟಲಿಂಗ ಪೂಜೆ ಮಾಡಬೇಕು ಎಂಬುದು ಅನಿವಾರ್ಯ ಎಂದು ತಿಳಿಸಿದ ಜಗದ್ಗುರುಗಳು, “ಬಹಳಷ್ಟು ಬಾರಿ ನಾವು ಪೀಠಾಧಿಪತಿಗಳು ಮನೆಗಳಿಗೆ ಬಂದಾಗ, ಕೆಲವರು ಕೊರಳಿನಲ್ಲಿರುವ ಲಿಂಗವನ್ನು ತೆಗೆಯಲು ಸಾಧ್ಯವಾಗುವುದಿಲ್ಲ. ನಂತರ ಹೆಂಡತಿ ಅಥವಾ ಮಗಳು ಬಂದು ಅದನ್ನು ತೆಗೆಯುತ್ತಾರೆ. ಇದರಿಂದ ಅವರು ದಿನನಿತ್ಯ ಲಿಂಗ ಪೂಜೆ ಮಾಡುತ್ತಿಲ್ಲ ಎಂಬುದು ನಮಗೆ ಸ್ಪಷ್ಟವಾಗುತ್ತದೆ” ಎಂದು ಕಠಿಣವಾಗಿ ಹೇಳಿದರು.

ಈ ಸಂದರ್ಭದಲ್ಲಿ ಅಲ್ಲಮಪ್ರಭುಗಳ ಶರಣ ವಚನವನ್ನು ಉದಾಹರಿಸಿ ಜಗದ್ಗುರುಗಳು ಅದರ ಆಂತರಾರ್ಥವನ್ನು ವಿವರಿಸಿದರು:

ಹಸಿದವನ ಹೊಟ್ಟೆಯ ಮೇಲೆ ತಿಂಡಿಗಳನ್ನು ಗಂಟು ಮಾಡಿ ಕಟ್ಟಿದರೆ ಹಸಿವು ಹೋಗುವುದಿಲ್ಲ. ಹಾಗೆಯೇ ದೇಹದ ಮೇಲೆ ಲಿಂಗವನ್ನು ಧರಿಸಿದರೆ ಮಾತ್ರ ಭಕ್ತಿ ಬರುತ್ತದೆ ಎಂದು ಭ್ರಮಿಸಬಾರದು. ಲಿಂಗದ ಹಿಂದೆ ಅಡಗಿರುವ ತತ್ತ್ವ, ಅದರ ಮಹತ್ವ ಮತ್ತು ಲಿಂಗ ನೀಡಿದ ಗುರುವಿನ ಕುರಿತು ಗೌರವ ಇದ್ದಾಗ ಮಾತ್ರ ನಿಜವಾದ ಭಕ್ತಿ ಬೆಳೆಯುತ್ತದೆ ಎಂದು ಜಗದ್ಗುರುಗಳು ವಿವರಿಸಿದರು.

ಲಿಂಗ ಪೂಜೆಯೇ ವೀರಶೈವ ಧರ್ಮದ ಕೇಂದ್ರಬಿಂದು ಎಂದು ಜಗದ್ಗುರುಗಳು ಸ್ಪಷ್ಟಪಡಿಸಿದರು. “ಲಿಂಗ ಪೂಜೆಗಿಂತ ಶ್ರೇಷ್ಠವಾದ ಪೂಜೆ ಮತ್ತೊಂದು ಇಲ್ಲ. ಲಿಂಗ ಪೂಜೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಸದಾ ಲಿಂಗವನ್ನು ಕೊರಳಲ್ಲಿ ಧರಿಸಿಕೊಂಡು ಪೂಜೆ ಮಾಡುವ ವೀರಶೈವ ಲಿಂಗಾಯತರು ಅತ್ಯಂತ ಭಾಗ್ಯಶಾಲಿಗಳು” ಎಂದು ಹೇಳಿದರು.

ಸಿದ್ಧಾಂತ ಶಿಖಾಮಣಿಯಲ್ಲಿ ಹೇಳಿರುವ ಸಂಪತ್ತಿನ ತತ್ತ್ವವನ್ನು ವಿವರಿಸಿದ ಜಗದ್ಗುರುಗಳು, “ವೀರಶೈವರು ಮೂರು ವಿಧದ ಸಂಪತ್ತುಗಳನ್ನು ಹೊಂದಿರುವವರು. ಆದರೆ ಅವು ಹೊಲ–ಮನೆ, ಗದ್ದೆ, ಬಂಗಾರ, ಹಣವಲ್ಲ” ಎಂದು ತಿಳಿಸಿದರು. ಅಲ್ಲಮಪ್ರಭುಗಳ ವಚನವನ್ನು ಉಲ್ಲೇಖಿಸಿ,

ಎಂದು ಹೇಳುತ್ತಾ, ಈ ಜಗತ್ತಿನ ಎಲ್ಲ ವಸ್ತುಗಳು ದೇವರ ಸೃಷ್ಟಿಯೇ ಆಗಿರುವುದರಿಂದ ಆತ್ಮಿಕವಾಗಿ ಅವು ಎಲ್ಲರಿಗೂ ಸೇರಿವೆ. ಆದರೆ ಭೌತಿಕವಾಗಿ ಯಾವುದೂ ನಮ್ಮದೇ ಅಲ್ಲ. ಸತ್ತ ಮೇಲೆ ನಮ್ಮ ದೇಹವೂ ನಮ್ಮ ಜೊತೆ ಬರುವುದಿಲ್ಲ. ಹೀಗಿದ್ದರೂ ಹೊನ್ನು–ಹೆಣ್ಣು–ಮಣ್ಣುಗಳನ್ನು ಸಂಪತ್ತು ಎಂದು ಭ್ರಮಿಸುವುದು ಮಾನವನ ದೊಡ್ಡ ಅಜ್ಞಾನ ಎಂದು ಹೇಳಿದರು.

ಮನದ ಮುಂದಣ ಆಸೆಯೇ ಮಾಯೆ ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ಈ ಆಸೆಯನ್ನು ಮೀರಿಸಿ ಜ್ಞಾನವನ್ನು ಅರಿತವನೇ ನಿಜವಾದ ಶ್ರೀಮಂತ. ಈ ಜ್ಞಾನವೇ ದಿವ್ಯಜ್ಞಾನರತ್ನ. ಅದನ್ನು ಕಾಪಾಡಿಕೊಂಡು ಅನುಭಾವದ ಲೋಕದಲ್ಲಿ ನಡೆಯುವವರು ಎಲ್ಲರಿಗಿಂತ ಶ್ರೀಮಂತರು ಎಂದು ಜಗದ್ಗುರುಗಳು ಹೇಳಿದರು.

ವೀರಶೈವ ಲಿಂಗಾಯತ ಧರ್ಮದಲ್ಲಿ ಮೂರು ಮಹಾಸಂಪತ್ತುಗಳಿವೆ ಎಂದು ತಿಳಿಸಿದ ಜಗದ್ಗುರುಗಳು, “ಗುರು, ಲಿಂಗ, ಜಂಗಮ – ಇವೇ ನಮ್ಮ ಸಂಪತ್ತುಗಳು. ಇವುಗಳನ್ನು ಯಾರು ಗೌರವಿಸುತ್ತಾರೋ, ಪಾಲಿಸುತ್ತಾರೋ, ತೃಪ್ತಿಪಡಿಸುತ್ತಾರೋ ಅವರೇ ನಿಜವಾದ ಶ್ರೀಮಂತರು” ಎಂದು ಹೇಳಿದರು.

ಹನುಮಂತ ಮತ್ತು ರಾಮನ ಸಂಭಾಷಣೆಯನ್ನು ಉದಾಹರಿಸಿದ ಅವರು, “ದೇವರನ್ನು ಮರೆಯುವುದೇ ವಿಪತ್ತು, ದೇವರನ್ನು ಸ್ಮರಿಸುವುದೇ ಸಂಪತ್ತು ಎಂದು ಹನುಮಂತನು ಹೇಳುತ್ತಾನೆ. ವೀರಶೈವ ಲಿಂಗಾಯತರಿಗೆ ಮನೆ ಇಲ್ಲದಿರಬಹುದು, ಅನ್ನ ಇಲ್ಲದಿರಬಹುದು, ಬಟ್ಟೆ ಇಲ್ಲದಿರಬಹುದು. ಆದರೆ ಕೊರಳಲ್ಲಿ ಲಿಂಗ ಇದ್ದರೆ, ಗುರುವಿನಲ್ಲಿ ಭಕ್ತಿ ಇದ್ದರೆ, ಜಂಗಮರಿಗೆ ಗೌರವ ಇದ್ದರೆ ಅವರಷ್ಟು ಶ್ರೀಮಂತರು ಯಾರು ಇಲ್ಲ” ಎಂದು ಹೇಳಿದರು.

ಇಷ್ಟಲಿಂಗವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುವ ಪ್ರವೃತ್ತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಗದ್ಗುರುಗಳು, “ಲಿಂಗವನ್ನು ಬಂಗಾರದಲ್ಲಿ ಮಾಡಿಸಬೇಕು ಎಂದು ಎಲ್ಲಿಯೂ ಹೇಳಿಲ್ಲ. ಲಿಂಗವನ್ನು ಸದಾ ಧರಿಸಬೇಕು, ಪ್ರತಿದಿನ ಪೂಜೆ ಮಾಡಬೇಕು. ಲಾಕರ್‌ನಲ್ಲಿ ಇಡುವ ಲಿಂಗದಿಂದ ಆತ್ಮೋನ್ನತಿ ಸಾಧ್ಯವಿಲ್ಲ” ಎಂದು ಎಚ್ಚರಿಸಿದರು.

ಮಕ್ಕಳು ಮತ್ತು ಯುವ ಪೀಳಿಗೆಗೆ ವೀರಶೈವ ಲಿಂಗಾಯತ ಪರಂಪರೆ, ಧಾರ್ಮಿಕ ವಿಧಿ–ವಿಧಾನಗಳು, ಇಷ್ಟಲಿಂಗ ಪೂಜೆಯ ಮಹತ್ವವನ್ನು ತಿಳಿಸುವ ಹೊಣೆ ಪ್ರತಿಯೊಬ್ಬ ವೀರಶೈವ ಲಿಂಗಾಯತನ ಮೇಲಿದೆ ಎಂದು ಜಗದ್ಗುರುಗಳು ಕರೆ ನೀಡಿದರು. “ಲಿಂಗತತ್ತ್ವವನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಂಡಾಗಲೇ ವೀರಶೈವ ಧರ್ಮ ಮುಂದಿನ ಪೀಳಿಗೆಗೂ ದೃಢವಾಗಿ ಸಾಗುತ್ತದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೊನ್ನಾಳಿ ಹಿರೇಕಲ್ಮಠದ ಶ್ರೀಗಳು, ಬಿಳಿಕಿ ಮಠದ ಶ್ರೀಗಳು, ಸಿ.ಎಸ್. ಷಡಾಕ್ಷರಿ, ಜ್ಯೋತಿಪ್ರಕಾಶ್, ಸಿ.ಎ. ಹೀರೆಮಠ್, ಬಳ್ಳೇಕೆರೆ ಸಂತೋಷ್, ಶಿವಯೋಗಿ ಯಾಲಿ, ಪರಮೇಶ್ವರಪ್ಪ, ರುದ್ರೇಶ್, ತಾರನಾಥ್, ರೇಣುಕಾರಾಧ್ಯ, ಶಾಂತ ಆನಂದ್, ರತ್ನಮ್ಮ ಮಂಜುನಾಥ್, ಮೋಹನ್ ಹಾಗೂ ಮಲ್ಲಿಕಾರ್ಜುನಸ್ವಾಮಿ ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಕರ್ತವ್ಯದ ಜಾಗೃತಿ ಮತ್ತು ಜ್ಞಾನದ ಬೆಳಕು: ತರಳಬಾಳು ಶ್ರೀ ಹಾಗೂ ಬಸವಕೇಂದ್ರ ಶ್ರೀಗಳ ಹೊಸ ವರ್ಷದ ಸಂದೇಶ

ಬುಕ್ಕಾಂಬುಧಿ ಬೆಟ್ಟದಲ್ಲಿ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಮಂಗಲ ಮೂರ್ತಿಗೆ ಕುಂಭಾಭಿಷೇಕ

ಲಿಂ. ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳ 114ನೇ ಪುಣ್ಯ ಸ್ಮರಣೋತ್ಸವ: ಜನವರಿ 3, 4 ಮತ್ತು 5, 2026ರಂದು ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಮೂರು ದಿನಗಳ ಧಾರ್ಮಿಕ–ಸಾಂಸ್ಕೃತಿಕ ಮಹೋತ್ಸವ

ಹಿರಿಯರನ್ನು ಗೌರವಿಸುವ ಸಂಸ್ಕಾರವೇ ಎಸ್ಸೆಸ್ ಅವರ ದೀರ್ಘಾಯುಷ್ಯದ ಗುಟ್ಟು : ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಸಮಸಮಾಜ ನಿರ್ಮಾಣವೇ ಆದಿ ಜಗದ್ಗುರುಗಳ ಸಂದೇಶ: ಸಿಎಂ ಸಿದ್ದರಾಮಯ್ಯ

ಜನವರಿ 24ರಿಂದ ಫೆಬ್ರವರಿ 1ರವರೆಗೆ ಭದ್ರಾವತಿಯಲ್ಲಿ ಭಾವೈಕ್ಯದ ಬೆಳಕು ತರಳಬಾಳು ಹುಣ್ಣಿಮೆ ಮಹೋತ್ಸವ – 2026

Leave a Comment