ಮಳವಳ್ಳಿ (ಮಂಡ್ಯ ಜಿಲ್ಲೆ): ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ ಜಯಂತೋತ್ಸವಗಳು ರಾಜ್ಯದ ಹಲವು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಭಕ್ತಿಭಾವದಿಂದ ನಡೆಯುತ್ತಿರುವುದು ಸಂತಸದ ವಿಚಾರ. ಮುಂದಿನ ವರ್ಷ ಈ ಮಹೋತ್ಸವವು ಗುಂಡ್ಲುಪೇಟೆಯಲ್ಲಿ ಆಯೋಜನೆಯಾಗುತ್ತಿರುವುದು ವಿಶೇಷವಾಗಿದ್ದು, ಈ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಸಹಕರಿಸಿದ ಶಾಸಕರಾದ ನರೇಂದ್ರಸ್ವಾಮಿಯವರಿಗೆ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಳವಳ್ಳಿಯಲ್ಲಿ ಆಯೋಜಿಸಲಾಗಿದ್ದ ಶ್ರೀ ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಅನೇಕ ಸಾಧು–ಸಂತರು ಹಾಗೂ ಸೂಫಿ ಮಹಾತ್ಮರು ಸಮಾಜ ಪರಿವರ್ತನೆಗಾಗಿ ಶ್ರಮಿಸಿದ್ದಾರೆ. ಆ ಸಾಲಿನಲ್ಲಿ ಆದಿ ಜಗದ್ಗುರುಗಳು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದು ಅಭಿಪ್ರಾಯಪಟ್ಟರು.

ಸಮಾಜದಲ್ಲಿ ವಿವಿಧ ಜಾತಿ–ಧರ್ಮಗಳಿರುವುದು ಸಹಜವಾದರೂ, ಅದೇ ಅಸಮಾನತೆಗೆ ಕಾರಣವಾಗುತ್ತಿರುವುದು ಆತಂಕಕಾರಿ. ಅಸಮಾನತೆ ನಿವಾರಣೆಯಾಗದೆ ಸಮಾಜದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಬಸವಣ್ಣನವರ ನೇತೃತ್ವದ ಶರಣರು ‘ಮನುಷ್ಯ ಸಮಾಜ, ಸಮಸಮಾಜ’ ನಿರ್ಮಾಣಕ್ಕಾಗಿ ಅವಿರತ ಹೋರಾಟ ನಡೆಸಿದರು. ಆದರೂ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ ಎಂಬುದು ನಮ್ಮ ಮುಂದಿರುವ ಸತ್ಯ ಎಂದು ಸಿಎಂ ಹೇಳಿದರು.
ಕವಿ ಕುವೆಂಪು ಕನಸಿನಂತೆ ‘ಸರ್ವಜನಾಂಗದ ಶಾಂತಿಯ ತೋಟ’ ನಿರ್ಮಾಣವಾಗಬೇಕಾದರೆ ಮಾನವೀಯ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡ ಸಮಾಜ ನಿರ್ಮಾಣ ಅಗತ್ಯ. ಯಾವುದೇ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ, ಪ್ರೀತಿಯನ್ನೇ ಸಾರುತ್ತದೆ. ಮನುಷ್ಯ–ಮನುಷ್ಯರನ್ನು ಪ್ರೀತಿಸುವ ಸಮಾಜವೇ ನಮ್ಮ ಸಂಸ್ಕೃತಿಯ ಮೂಲ ಎಂದು ಅವರು ತಿಳಿಸಿದರು.
ಸಮಾಜದಲ್ಲಿ ದ್ವೇಷ ಮತ್ತು ಅಸೂಯೆ ಬಿತ್ತುವ ಶಕ್ತಿಗಳು ಸಕ್ರಿಯವಾಗಿವೆ. ಅಂತಹ ಶಕ್ತಿಗಳ ವಿರುದ್ಧ ಹೋರಾಟ ನಡೆಸುವುದು ಪ್ರತಿಯೊಬ್ಬರ ಕರ್ತವ್ಯ. ಹುಟ್ಟು–ಸಾವಿನ ನಡುವಿನ ಜೀವನವನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕು. ವಿಶೇಷವಾಗಿ ವಿದ್ಯಾವಂತರು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಯೊಂದಿಗೆ ಸಮಾಜಮುಖಿಯಾಗಿ ಬದುಕಬೇಕು. ಮನುಷ್ಯರ ನಡುವಿನ ದ್ವೇಷ ಅಮಾನವೀಯ ಎಂದು ಸಿದ್ದರಾಮಯ್ಯ ಹೇಳಿದರು.
ದಾಸೋಹದ ತತ್ತ್ವವನ್ನು ವಿವರಿಸಿದ ಅವರು, ದೇ. ಜವರೇಗೌಡರು ಹೇಳಿದಂತೆ ‘ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ವಿತರಣೆ’. ಪ್ರತಿಯೊಬ್ಬರೂ ಉತ್ಪಾದನೆಯಲ್ಲಿ ಭಾಗವಹಿಸಬೇಕು. ಒಬ್ಬರು ಉತ್ಪಾದಿಸಿದ ಫಲವನ್ನು ಮತ್ತೊಬ್ಬರು ಮಾತ್ರ ಅನುಭವಿಸುವ ವ್ಯವಸ್ಥೆ ಇರಬಾರದು. ಎಲ್ಲರಿಗೂ ಸಮಾನ ಅವಕಾಶ ದೊರಕಿದಾಗ ಮಾತ್ರ ನಿಜವಾದ ಸಮಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.








