ಶಿವಮೊಗ್ಗ, : ಶಿವಮೊಗ್ಗ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಯಾಗಿ ಬಂದಿರುವ ಬಿ. ನಿಖಿಲ್ ಐಪಿಎಸ್ ಅವರು, ಸಾರ್ವಜನಿಕರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡುವ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಜಾರಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು.
ನಗರದ ಡಿ.ಎ.ಆರ್. ಪೊಲೀಸ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪೊಲೀಸ್ ಅಂದರೆ ಭಯ ಬೇಡ. ಪೊಲೀಸ್ ಅಂದರೆ ಜನಸ್ನೇಹಿ ಎಂಬ ಭಾವನೆ ಜನರಲ್ಲಿ ಮೂಡಬೇಕು” ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಮೂಲದವರಾದ ಬಿ. ನಿಖಿಲ್ ಐಪಿಎಸ್ ಅವರು, ಬೆಂಗಳೂರು ನಗರದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು, ಯುಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ಆಯ್ಕೆ ಮಾಡಿಕೊಂಡು 2017ರ ಐಪಿಎಸ್ ಬ್ಯಾಚ್‌ನ ಅಧಿಕಾರಿ ಆಗಿದ್ದಾರೆ. ಭಟ್ಕಳದಲ್ಲಿ ಎಎಸ್‌ಪಿ ಆಗಿ ಸೇವೆ ಸಲ್ಲಿಸಿರುವ ಅವರು, ನಕ್ಸಲ್ ನಿಗ್ರಹ ದಳದಲ್ಲಿ ಕಾಡು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿದ್ದು, ರಾಯಚೂರು, ಕೋಲಾರ ಜಿಲ್ಲೆಯ ಪೊಲೀಸ್ ಎಸ್ಪಿಯಾಗಿ ಅನುಭವ ಹೊಂದಿದ್ದಾರೆ.

ಡ್ರಗ್ಸ್ ಮತ್ತು ನಶೆ ಮುಕ್ತ ಶಿವಮೊಗ್ಗ
ರಾಜ್ಯವನ್ನು ಡ್ರಗ್ಸ್ ಮತ್ತು ನಶೆ ಮುಕ್ತವಾಗಿಸಲು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಗೊಂಡಿರುವ ದಿಟ್ಟ ಹೆಜ್ಜೆಗೆ ಬೆಂಬಲವಾಗಿ, ಶಿವಮೊಗ್ಗ ಜಿಲ್ಲೆಯನ್ನು ಸಂಪೂರ್ಣ ಡ್ರಗ್ಸ್ ಮತ್ತು ನಶೆ ಮುಕ್ತ ಜಿಲ್ಲೆಯಾಗಿ ರೂಪಿಸುವುದು ನನ್ನ ಉದ್ದೇಶ ಎಂದು ಅವರು ಹೇಳಿದರು. ಡ್ರಗ್ಸ್ ಜಾಲದಲ್ಲಿ ಪೊಲೀಸರು ಭಾಗಿಯಾಗಿದ್ದರೂ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಮಾನತು ಮಾಡಲಾಗುವುದು. ಈ ಕಠಿಣ ಕ್ರಮವನ್ನು ಹಿಂದಿನ ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿದ್ದೇನೆ ಎಂದರು.
ಸಾರ್ವಜನಿಕರಿಗೆ ಮೊದಲ ಆದ್ಯತೆ
ಪೊಲೀಸ್ ಠಾಣೆಗೆ ಸಮಸ್ಯೆ ಹೊತ್ತು ಬರುವ ಪ್ರತಿಯೊಬ್ಬ ನಾಗರಿಕನಿಗೂ ಮೊದಲ ಆದ್ಯತೆ ನೀಡಲಾಗುವುದು. ಸಮಸ್ಯೆ ಹೇಳಿಕೊಳ್ಳಲು ಪೊಲೀಸ್ ಠಾಣೆ ಜನರಿಗೆ ಭಯದ ಸ್ಥಳವಾಗಬಾರದು ಎಂಬುದು ನಮ್ಮ ಧ್ಯೇಯ ಎಂದು ಅವರು ತಿಳಿಸಿದರು.

ಪ್ರತಿ ಠಾಣೆಗೆ ಭೇಟಿ, ಟ್ರಾಫಿಕ್ ಸಮಸ್ಯೆಗೆ ಪರಿಹಾರ
ನಾಳೆಯಿಂದಲೇ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಶಿವಮೊಗ್ಗ ಜಿಲ್ಲೆಯ ಟ್ರಾಫಿಕ್ ಸಮಸ್ಯೆಗಳತ್ತ ಮುಂದಿನ ದಿನಗಳಲ್ಲಿ ವಿಶೇಷ ಗಮನ ಹರಿಸಲಾಗುವುದು ಎಂದು ಅವರು ಹೇಳಿದರು.

ಶಾಲೆಗಳಲ್ಲಿ ಅರಿವು ಕಾರ್ಯಕ್ರಮ
ಪ್ರತಿ 15 ದಿನಗಳಿಗೊಮ್ಮೆ ಆರಕ್ಷಕರ ದಿನ ಆಚರಣೆ ಅಂಗವಾಗಿ, ಶಾಲೆಗಳಲ್ಲಿ ಸೈಬರ್ ಕ್ರೈಮ್, ಪೋಕ್ಸೋ ಪ್ರಕರಣಗಳು, ಡ್ರಗ್ಸ್ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಲಾಗುವುದು. ಮಗು ಪಡೆದ ಮಾಹಿತಿ ತನ್ನ ಕುಟುಂಬಕ್ಕೆ ತಲುಪಿಸಿದಾಗ ಅದು ಇಲಾಖೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ವಾಟ್ಸ್‌ಆಪ್ ಚಾಲನ್ ವ್ಯವಸ್ಥೆ
ಸಾರ್ವಜನಿಕರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ವಾಟ್ಸ್‌ಆಪ್ ಚಾಲನ್ ವ್ಯವಸ್ಥೆ ಜಾರಿಗೆ ತರಲಾಗುವುದು. ಇದರ ಮೂಲಕ ಜನರು 24 ಗಂಟೆಗಳೂ ತಮ್ಮ ಸಮಸ್ಯೆಗಳನ್ನು ಪೊಲೀಸರಿಗೆ ತಿಳಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕೋಮು ಸೌಹಾರ್ದಕ್ಕೆ ಒತ್ತು
ಜಿಲ್ಲೆಯ ಕೋಮು ಸೌಹಾರ್ದದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲಿದೆ. ಸಮಾಜದ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಭದ್ರಾವತಿ ಮೇಲೂ ವಿಶೇಷ ಗಮನ
“ಭದ್ರಾವತಿ ರಿಪಬ್ಲಿಕ್ ಆಗಿದೆ” ಎಂಬ ಸಾರ್ವಜನಿಕರ ಮಾತುಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭದ್ರಾವತಿ ಭಾಗದಲ್ಲಿ ಹೆಚ್ಚುವರಿ ಪೊಲೀಸ್ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.
ಎಲ್ಲಾ ಪ್ರದೇಶಗಳ ಅನುಭವ
ಗಡಿನಾಡು, ಬಯಲು ಸೀಮೆ ಹಾಗೂ ಕಾಡು ಪ್ರದೇಶಗಳಲ್ಲಿ ಕೆಲಸ ಮಾಡಿದ ಅನುಭವ ನನಗಿದ್ದು, ಮಲೆನಾಡು ಪ್ರದೇಶವಾದ ಶಿವಮೊಗ್ಗ ಜಿಲ್ಲೆಯ ಯಾವುದೇ ಸಮಸ್ಯೆಗಳಿಗೂ ಸ್ಪಂದಿಸುವ ಸಾಮರ್ಥ್ಯವಿದೆ ಎಂದು ಹೇಳಿದರು.

ಹೆಲ್ಮಟ್ ಕುರಿತು ಮನವಿ
“ಹೆಲ್ಮಟ್ ಧರಿಸುವುದು ದಂಡ ತಪ್ಪಿಸಲು ಅಲ್ಲ, ನಿಮ್ಮ ಮನೆಯ ಪ್ರೀತಿಪಾತ್ರರ ನೆನಪಿಗಾಗಿ” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸಹಕಾರ ಕೋರಿಕೆ
ನಾನು ಹೊಸದಾಗಿ ಈ ಜಿಲ್ಲೆಗೆ ಬಂದಿರುವುದರಿಂದ ಎಲ್ಲರ ಸಲಹೆ ಮತ್ತು ಸಹಕಾರ ಅತ್ಯಂತ ಅಗತ್ಯವಾಗಿದೆ. ಸ್ವಲ್ಪ ಸಮಯ ಕೊಟ್ಟರೆ, ಜಿಲ್ಲೆಯಲ್ಲಿ ಪರಿಣಾಮಕಾರಿಯಾದ ಪೊಲೀಸ್ ವ್ಯವಸ್ಥೆ ಕಟ್ಟುವೆನೆಂದು ನೂತನ ಎಸ್‌ಪಿ ಬಿ. ನಿಖಿಲ್ ಐಪಿಎಸ್ ವಿಶ್ವಾಸ ವ್ಯಕ್ತಪಡಿಸಿದರು.






