“ಶರಣರ ನಾಡಿನಲ್ಲಿ ಮರ್ಯಾದೆ ಹತ್ಯೆ ನಾಚಿಕೆಗೇಡಿನ ಸಂಗತಿ; ಕಟ್ಟುನಿಟ್ಟಿನ ಕ್ರಮ – ಎಚ್.ಕೆ. ಪಾಟೀಲ್”
ಶಿವಮೊಗ್ಗ, : ಶರಣರು, ತತ್ವಜ್ಞಾನಿಗಳು ಹಾಗೂ ಸಮಾನತೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕರು ಹುಟ್ಟಿದ ನಾಡಿನಲ್ಲಿ ಇತ್ತೀಚೆಗೆ ಮರ್ಯಾದೆ ಹತ್ಯೆಗಳಂತಹ ಅಮಾನುಷ ಘಟನೆಗಳು ನಡೆಯುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಇವುಗಳಿಗೆ ಕಟ್ಟುನಿಟ್ಟಾದ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

ನಗರದ ಬೆಕ್ಕಿನ ಕಲ್ಮಠದಲ್ಲಿ ಆಯೋಜಿಸಿದ್ದ ಭಾವೈಕ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನನ್ನು ಕೇವಲ ಧಾರ್ಮಿಕ ವ್ಯಕ್ತಿಯಾಗಿ ನೋಡದೇ ಇದ್ದರೆ ಅವರು ಜಗತ್ತಿನ ಅತ್ಯಂತ ಕ್ರಾಂತಿಕಾರಿ ಚಿಂತಕರಲ್ಲಿ ಒಬ್ಬರಾಗುತ್ತಿದ್ದರು. ಆದರೆ ಅವರನ್ನು ನಾವು ಒಂದು ನಿರ್ದಿಷ್ಟ ವಲಯಕ್ಕೆ ಸೀಮಿತಗೊಳಿಸಿದ್ದೇವೆ ಎಂಬ ವಿಷಾದ ವ್ಯಕ್ತಪಡಿಸಿದರು. ಬಸವಣ್ಣನ ತತ್ವ, ವಿಚಾರ ಮತ್ತು ಬದುಕಿನ ಸಂದೇಶಗಳನ್ನು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವ ಉದ್ದೇಶದಿಂದಲೇ ನಮ್ಮ ಸರ್ಕಾರ ಅವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದೆ ಎಂದು ಹೇಳಿದರು.
ವಚನ ಸಾಹಿತ್ಯವನ್ನು ಬಹುತೇಕ ಜನರು ಭಾಷಣದ ವಸ್ತುವಾಗಿ ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಆದರೆ ಅದು ನಮ್ಮ ನಡವಳಿಕೆ, ಆಚಾರ-ವಿಚಾರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬುದೇ ಇಂದು ದೊಡ್ಡ ಬೇಸರದ ಸಂಗತಿ ಎಂದು ಹೇಳಿದರು. ಅಂದಿನ ಶರಣರು ಆರೋಗ್ಯಕರ, ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ್ದರು. ಆದರೆ ಇಂದು ನಮ್ಮ ಮನೆಗಳಲ್ಲೇ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ದೊರಕಿದೆಯೇ ಎಂಬುದರ ಕುರಿತು ಆತ್ಮಾವಲೋಕನ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮಾಜವನ್ನು ಜಾತಿಯ ವಿಷಬೀಜ ಬಿತ್ತುವ ಮೂಲಕ ಛಿದ್ರ ಛಿದ್ರಗೊಳಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಇಂತಹ ಸಂಕಟಕರ ಪರಿಸ್ಥಿತಿಯಲ್ಲಿಯೂ ನಾವೆಲ್ಲರೂ ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯಗಳನ್ನು ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಎಚ್ಚರಿಸಿದರು. ಭಾವೈಕ್ಯ ಎಂಬ ಪದ ಇಂದು ಕೇವಲ ಸಾಮಾನ್ಯ ಮಾತಿನ ಭಾಷೆಯಾಗಿ ಉಳಿದಿದೆ. ಆದರೆ ಬಸವೇಶ್ವರರ ಕಾಲದಲ್ಲಿ ಭಾವೈಕ್ಯಕ್ಕೆ ಅತ್ಯಂತ ಗಂಭೀರ ಹಾಗೂ ಆಳವಾದ ಅರ್ಥವಿತ್ತು ಎಂದು ಸಚಿವರು ಹೇಳಿದರು.

ಜಾತಿ ಲೇಪನ ದುರಂತ – ಈಶ್ವರಪ್ಪ ಟೀಕೆ
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಬಸವಣ್ಣ ಎಲ್ಲರನ್ನೂ ಯಾವುದೇ ಭೇದಭಾವವಿಲ್ಲದೆ ಒಂದೇ ವೇದಿಕೆಯಲ್ಲಿ ಕರೆದುಕೊಂಡು ಹೋಗುವ ದೃಷ್ಟಿಕೋನ ಹೊಂದಿದ್ದರು ಎಂದು ಸ್ಮರಿಸಿದರು. ಆದರೆ ಇಂದು ಯಾವುದೇ ಕಾರ್ಯಕ್ರಮಕ್ಕೂ ಜಾತಿಯ ಲೇಪನ ಅಂಟಿಕೊಳ್ಳುತ್ತಿರುವುದು ದುರಂತಕರ ಸಂಗತಿ ಎಂದರು. ಜಾತಿ ಗಣತಿಯ ವಿಚಾರಕ್ಕೂ ಜಾತಿ ಜಂಜಾಟ ಅಂಟಿಕೊಂಡಿರುವುದು ಸಮಾಜದ ಅಸಹಜ ಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು. ಇಂತಹ ಸಂದರ್ಭದಲ್ಲಿ ಪಂಚ ಪೀಠಗಳು ಒಂದೇ ವೇದಿಕೆಯಲ್ಲಿ ಒಂದಾಗಿರುವುದು ಸಮಾಜಕ್ಕೆ ಬಲವಾದ ಸಂದೇಶ ನೀಡುವ ಬೆಳವಣಿಗೆಯಾಗಿದೆ ಎಂದರು.
ವರ್ಗ ವ್ಯವಸ್ಥೆಯೊಳಗೆ ಮಹಿಳೆಯರಿಗೆ ಗೌರವ ಹಾಗೂ ಪೂಜೆ ಸಲ್ಲಿಸುವ ಪರಂಪರೆ ಇತ್ತು. ಹಾಗಿರುವಾಗ ನಾವು ಇಂದು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬುದರ ಕುರಿತು ಆತ್ಮಾವಲೋಕನ ಅಗತ್ಯವಿದೆ ಎಂದು ಹೇಳಿದರು.

556ನೇ ಶಿವಾನುಭವ ಕಾರ್ಯಕ್ರಮ: ಗುರುಕೃಪೆಯ ಸಂದೇಶ
ಬೆಕ್ಕಿನ ಕಲ್ಮಠದ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಮುರುಘರಾಜೇಂದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ 556ನೇ ಶಿವಾನುಭವ ಕಾರ್ಯಕ್ರಮ ಭಕ್ತಿಭಾವ, ಆತ್ಮಚಿಂತನೆ ಹಾಗೂ ಧಾರ್ಮಿಕ ಸಂಸ್ಕಾರದ ಮಹತ್ವವನ್ನು ಸಾರುವ ಭವ್ಯ ವೇದಿಕೆಯಾಗಿತು. ಆಶೀರ್ವಚನ ನೀಡಿದ ಶ್ರೀಗಳು, ಜೀವನದಲ್ಲಿ ಗುರುಕೃಪೆಯ ಮಹತ್ವವನ್ನು ವಿವರಿಸಿ, ಗುರುಗಳಿಂದ ದೊರೆಯುವ ರಕ್ಷೆ ಮಾನವನ ಆತ್ಮಿಕ ಮತ್ತು ಸಾಮಾಜಿಕ ಬದುಕಿಗೆ ದಾರಿ ತೋರಿಸುವ ಬೆಳಕು ಎಂದು ಉಪದೇಶಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರು ಗುರುಗಳಿಂದ ಗುರುರಕ್ಷೆ ಪಡೆದು ಧನ್ಯರಾದರು. ಶಿವಾನುಭವ ಕಾರ್ಯಕ್ರಮವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಮಾನವೀಯ ಮೌಲ್ಯಗಳು, ಸಮಾಜಸೇವೆಯ ಸಂಕಲ್ಪ ಮತ್ತು ಧರ್ಮನಿಷ್ಠ ಬದುಕಿನ ಸಂದೇಶವನ್ನು ಸಾರುವ ಮಹತ್ವದ ವೇದಿಕೆಯಾಗಿರುವುದಕ್ಕೆ ಮತ್ತೊಮ್ಮೆ ಸಾಕ್ಷಿಯಾಯಿತು.

ಸಂಸದ ಬಿ.ವೈ. ರಾಘವೇಂದ್ರರಿಗೆ “ಗುರುಬಸವ” ಪ್ರಶಸ್ತಿ
ಇದೇ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಅವರ ಅಮೋಘ ಸಾರ್ವಜನಿಕ ಸೇವೆ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ನೀಡಿದ ಕೊಡುಗೆ ಹಾಗೂ ಧಾರ್ಮಿಕ–ಸಾಂಸ್ಕೃತಿಕ ಮೌಲ್ಯಗಳ ಸಂರಕ್ಷಣೆಯತ್ತ ತೋರಿದ ಬದ್ಧತೆಯನ್ನು ಗುರುತಿಸಿ ಪ್ರತಿಷ್ಠಿತ “ಗುರುಬಸವ” ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಈ ಗೌರವವನ್ನು ತಮ್ಮ ಜೀವನದ ಸ್ಮರಣೀಯ ಕ್ಷಣವೆಂದು ಬಣ್ಣಿಸಿ, ಮುಂದೆಯೂ ಸಮಾಜಸೇವೆ ಮತ್ತು ಧರ್ಮಪಥದಲ್ಲಿ ನಡೆಯುವ ಸಂಕಲ್ಪ ವ್ಯಕ್ತಪಡಿಸಿದರು.

ಮೂರು ದಿನಗಳ ಪುಣ್ಯಸ್ಮರಣೋತ್ಸವಕ್ಕೆ ಭವ್ಯ ಆರಂಭ
ಲಿಂಗೈಕ್ಯ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳ 114ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಮೂರು ದಿನಗಳ ಕಾರ್ಯಕ್ರಮ ಜ.3ರಂದು ಆರಂಭಗೊಂಡಿತು. ವಚನ ಗಾಯನ, ಕಂಠಪಾಠ ಸ್ಪರ್ಧೆಗಳು, ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಭಾವಪೂರ್ಣವಾಗಿ ನಡೆಯಿತು. ವಚನಗಳ ಆಳವಾದ ಅರ್ಥವನ್ನು ಗಾಯನ ಹಾಗೂ ಪಠಣದ ಮೂಲಕ ಪ್ರಸ್ತುತಪಡಿಸಿದ ಸ್ಪರ್ಧಿಗಳು ಎಲ್ಲರ ಮನ ಗೆದ್ದರು.
ಮುರುಘಮಠದ ಡಾ. ನಾಗೇಶ್ ಸುವರ್ಣ ಕವಿ ಆಯುರ್ವೇದ ಆಸ್ಪತ್ರೆ ಹಾಗೂ ವಾಸನ್ ಐ ಕೇರ್ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು. ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಆರೋಗ್ಯವೇ ಸಕಲ ಸಾಧನೆಗಳ ಮೂಲ ಎಂದು ಹೇಳಿದರು.

ಸಮಾಜಕ್ಕೆ ಸಂದೇಶ ನೀಡಿದ ವೇದಿಕೆ
ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಶಾಸಕರು, ಸಂಸದರು, ಸಾಹಿತಿಗಳು, ಸಾಮಾಜಿಕ ನಾಯಕರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಉಪನ್ಯಾಸಗಳು, ಆಶೀರ್ವಚನಗಳು, ಭಾವೈಕ್ಯ ಸಮ್ಮೇಳನ, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಆಧ್ಯಾತ್ಮಿಕ ಚೇತನ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಿತು.
ಒಟ್ಟಾರೆ, ಬಸವ ತತ್ವ, ಭಾವೈಕ್ಯ ಮತ್ತು ಮಾನವೀಯ ಮೌಲ್ಯಗಳ ಸಾರವನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸುವಲ್ಲಿ ಬೆಕ್ಕಿನ ಕಲ್ಮಠದಲ್ಲಿ ನಡೆದ ಈ ಮೂರು ದಿನಗಳ ಮಹಾಕಾರ್ಯಕ್ರಮ ಯಶಸ್ವಿಯಾಗಿ ಇತಿಹಾಸದಲ್ಲೊಂದು ಮಹತ್ವದ ಅಧ್ಯಾಯವಾಗಿ ಮೂಡಿಬಂದಿತು.
ಕೊನೆಯ ದಿನದ ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಇ. ಕಾಂತೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ರುದ್ರಮುನಿ ಸಜ್ಜನ್, ಎಸ್.ಎಸ್. ಜ್ಯೋತಿಪ್ರಕಾಶ್, ಶ್ರೀಮತಿ ಶಾಂತಾ ಸುರೇಂದ್ರ, ಎಸ್.ಪಿ. ದಿನೇಶ್, ಬಳ್ಳೆಕೆರೆ ಸಂತೋಷ್, ಗುರುಬಸವ ಶ್ರೀ ಪುಣ್ಯಸ್ಮರಣೋತ್ಸವ ಸಮಿತಿಯ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಕೆ.ಎನ್. ತಾರಾನಾಥ್, ರೇಣುಕಾರಾಧ್ಯ, ಎಸ್.ಎನ್. ಮಹಾಲಿಂಗಯ್ಯ ಶಾಸ್ತ್ರಿ, ಶಿವರಾಜ್ ಹಾಗೂ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಇ. ವಿಶ್ವಾಸ್, ಸೇರಿದಂತೆ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.











