ನವದೆಹಲಿ, ಜನವರಿ 18: ನವದೆಹಲಿಯ ಯಶೋಭೂಮಿ, ದ್ವಾರಕಾದಲ್ಲಿ ನಡೆದ “68ನೇ ಅಖಿಲ ಭಾರತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಮಹಾಸಮ್ಮೇಳನ (68th All India Congress of Obstetrics & Gynaecology – AICOG)”ದಲ್ಲಿ ಶಿವಮೊಗ್ಗದ ರವಿ ಕುಮಾರ್ ಕೆ.ಎಂ ಅವರು ಅತ್ಯುತ್ತಮ ಇ–ಪೋಸ್ಟರ್ ಪ್ರಸ್ತುತಿಕರಣದ ಮೂಲಕ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹೊರ ದೇಶದ ಹಾಗೂ ನಮ್ಮ ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ನಡುವೆ ನಡೆದ ಈ ಪ್ರತಿಷ್ಠಿತ ವೈಜ್ಞಾನಿಕ ಸಮ್ಮೇಳನದಲ್ಲಿ, ರವಿ ಕುಮಾರ್ ಕೆ.ಎಂ ಅವರು ಮಂಡಿಸಿದ ಸಂಶೋಧನಾ ಆಧಾರಿತ ಇ–ಪೋಸ್ಟರ್ ತಜ್ಞರ ಗಮನ ಸೆಳೆದು, ಮೌಲ್ಯಮಾಪನ ಸಮಿತಿಯಿಂದ ಅತ್ಯುತ್ತಮ ಎಂದು ಗುರುತಿಸಲ್ಪಟ್ಟಿದೆ. ನವೀನ ಅಧ್ಯಯನ, ವೈಜ್ಞಾನಿಕ ನಿಖರತೆ ಹಾಗೂ ಚಿಕಿತ್ಸಾ ಪ್ರಾಮುಖ್ಯತೆಗಾಗಿ ಅವರ ಪ್ರಸ್ತುತಿಕರಣಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಪ್ರಶಸ್ತಿ ವಿಜೇತ ರವಿ ಕುಮಾರ್ ಕೆ.ಎಂ ಅವರು ಶಿವಮೊಗ್ಗ ನಗರದ ನಿವಾಸಿಗಳಾಗಿದ್ದು, ಶ್ರೀಮತಿ ಲತಾ ಹಾಗೂ ಮೋಹನ್ ಕುಮಾರ್, ನಿವೃತ್ತ ಸಹಾಯಕ ಕೃಷಿ ನಿರ್ದೇಶಕರು ಇವರ ಪುತ್ರರಾಗಿದ್ದಾರೆ. ಅವರ ಈ ಸಾಧನೆ ಶಿವಮೊಗ್ಗ ಜಿಲ್ಲೆಗೆ ಮಾತ್ರವಲ್ಲದೆ ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ.

ರವಿಕುಮಾರ್ ಕೆ.ಎಂ ಅವರು ಸಮಾಜದ ಹಿರಿಯರು ಹಾಗೂ ಸ್ವಾತಂತ್ರ ಹೋರಾಟಗಾರರಾದ ಕುಂಸಿ ಗ್ರಾಮದ ಹಾಲೇಶಪ್ಪ ಗೌಡ್ರು ಅವರ ಮೊಮ್ಮಗರಾಗಿದ್ದಾರೆ. ದೇಶಭಕ್ತಿ, ಶಿಸ್ತು ಮತ್ತು ಮೌಲ್ಯಗಳನ್ನು ಜೀವನದ ಭಾಗವಾಗಿಸಿಕೊಂಡಿರುವ ಈ ಕುಟುಂಬಪರಂಪರೆಯ ಪ್ರಭಾವವು ಅವರ ವ್ಯಕ್ತಿತ್ವ ಹಾಗೂ ಸೇವಾಭಾವನೆಯಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದ್ದು, ಅವರ ಸಾಧನೆ ಯುವಜನತೆಗೆ ಪ್ರೇರಣೆಯಾಗಿದೆ.

ವಿಶೇಷವಾಗಿ, ವೀರಶೈವ ಲಿಂಗಾಯತ ಸಮಾಜದಿಂದ ರಾಷ್ಟ್ರಮಟ್ಟದ ವೈದ್ಯಕೀಯ ವೇದಿಕೆಯಲ್ಲಿ ಇಂತಹ ಮಹತ್ವದ ಸಾಧನೆ ಹೊರಹೊಮ್ಮಿರುವುದು ಸಮಾಜದ ಶೈಕ್ಷಣಿಕ ಹಾಗೂ ಬೌದ್ಧಿಕ ಪ್ರಗತಿಗೆ ಪ್ರೇರಣೆಯಾಗಿದೆ ಎಂದು ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು, ವೈದ್ಯಕೀಯ ವಲಯದ ಸಹೋದ್ಯೋಗಿಗಳು ಹಾಗೂ ಸಮಾಜದ ಮುಖಂಡರು ರವಿ ಕುಮಾರ್ ಕೆ.ಎಂ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವಂತೆ ಶುಭ ಹಾರೈಸಿದ್ದಾರೆ.







