ನವದೆಹಲಿ: ನವದೆಹಲಿಯ ಕರ್ತವ್ಯ ಪಥದಲ್ಲಿ ಜನವರಿ 26ರಂದು ನಡೆಯುವ 2026ರ ಗಣರಾಜ್ಯೋತ್ಸವ ಪೇರೇಡ್ ಹಾಗೂ ಕೆಂಪುಕೋಟೆಯಲ್ಲಿ ಆಯೋಜಿಸಲಾಗುವ ‘ಭಾರತ ಪರ್ವ’ದಲ್ಲಿ ಕರ್ನಾಟಕದ ವೈಶಿಷ್ಟ್ಯಪೂರ್ಣ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದ್ದು, ಇದು ನಾಡಿಗೆ ಹೆಮ್ಮೆಯ ಕ್ಷಣವಾಗಿದೆ. ‘ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ (ಮಿಲ್ಲೆಟ್ ಟು ಮೈಕ್ರೋಚಿಪ್)’ ಎಂಬ ಆಕರ್ಷಕ ಹಾಗೂ ಅರ್ಥಪೂರ್ಣ ವಿಷಯವನ್ನೊಳಗೊಂಡ ಈ ಸ್ತಬ್ಧಚಿತ್ರವು, ಕೃಷಿಯಿಂದ ಉನ್ನತ ತಂತ್ರಜ್ಞಾನವರೆಗೆ ಕರ್ನಾಟಕ ಸಾಧಿಸಿರುವ ಸಮತೋಲನಯುತ ಪ್ರಗತಿಯನ್ನು ದೇಶದ ಮುಂದೆ ಅನಾವರಣಗೊಳಿಸಲಿದೆ.

ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ಮಹತ್ತರ ಗುರಿಯತ್ತ ಸಾಗಿಸುವಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿ, ಕೈಗಾರಿಕೆ, ಶಿಕ್ಷಣ, ವಿಜ್ಞಾನ ಹಾಗೂ ಆಧುನಿಕ ತಂತ್ರಜ್ಞಾನಗಳ ಸಮನ್ವಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಈ ಸಾಧನೆಯನ್ನು ಸಂಕೇತಾತ್ಮಕವಾಗಿ ಪ್ರತಿಬಿಂಬಿಸುವ ಉದ್ದೇಶದಿಂದಲೇ ಈ ವರ್ಷದ ಸ್ತಬ್ಧಚಿತ್ರ ರೂಪುಗೊಂಡಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರಂತರ ಸಾಧನೆ
ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವ ಪಥಸಂಚಲನ ಹಾಗೂ ಭಾರತ ಪರ್ವದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರತಿವರ್ಷವೂ ತನ್ನ ವಿಶಿಷ್ಟ ಸ್ತಬ್ಧಚಿತ್ರಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಾ ಬಂದಿದೆ. ಕಳೆದ ಹಲವು ವರ್ಷಗಳಿಂದ ನಾಡಿನ ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಅಭಿವೃದ್ಧಿಯ ಚಿತ್ರಣವನ್ನು ದೇಶದ ಮುಂದೆ ಮನಮುಟ್ಟುವ ರೀತಿಯಲ್ಲಿ ಪ್ರದರ್ಶಿಸುತ್ತಿರುವ ಇಲಾಖೆ, ಈ ಬಾರಿಯೂ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಈ ಕುರಿತು ಮಾಹಿತಿ ನೀಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್, “ಈ ಬಾರಿ ಕೃಷಿ, ಶಿಕ್ಷಣ, ವಿಜ್ಞಾನ, ಉನ್ನತ ತಂತ್ರಜ್ಞಾನ ಹಾಗೂ ಮೈಕ್ರೋಚಿಪ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಕರ್ನಾಟಕ ಸಾಧಿಸಿರುವ ಸಮತೋಲನಯುತ ಬೆಳವಣಿಗೆಯನ್ನು ಸ್ತಬ್ಧಚಿತ್ರದ ಮೂಲಕ ಪ್ರದರ್ಶಿಸಲಾಗಿದೆ. ಇದು ರಾಜ್ಯದ ಪ್ರಗತಿಯ ಸಮಗ್ರ ಚಿತ್ರಣವಾಗಿದೆ” ಎಂದು ತಿಳಿಸಿದ್ದಾರೆ.
ಕೃಷಿಯಿಂದ ತಂತ್ರಜ್ಞಾನವರೆಗೆ ಕರ್ನಾಟಕದ ಮುನ್ನುಡಿ
ಸಿರಿಧಾನ್ಯಗಳ ಉತ್ಪಾದನೆ ಮತ್ತು ಪೌಷ್ಟಿಕ ಆಹಾರದ ಬಳಕೆಯನ್ನು ಉತ್ತೇಜಿಸುವಲ್ಲಿ ಕರ್ನಾಟಕ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಇದೇ ವೇಳೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಮೈಕ್ರೋಚಿಪ್, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವಲಯಗಳಲ್ಲಿನ ಆವಿಷ್ಕಾರಗಳು ಕರ್ನಾಟಕವನ್ನು ಶ್ರೇಷ್ಠ ತಂತ್ರಜ್ಞಾನ ಕೇಂದ್ರವಾಗಿಸಿದೆ. ಸಂಶೋಧನೆ, ನವೀನತೆ ಹಾಗೂ ಕೌಶಲ್ಯಾಭಿವೃದ್ಧಿಗೆ ನೀಡಲಾಗುತ್ತಿರುವ ಆದ್ಯತೆಯಿಂದ ಯುವಶಕ್ತಿಗೆ ಉದ್ಯಮಶೀಲ ಅವಕಾಶಗಳು ಸೃಷ್ಟಿಯಾಗುತ್ತಿದ್ದು, ಭವಿಷ್ಯದ ಆರ್ಥಿಕತೆಗೆ ಭದ್ರ ಬುನಾದಿ ನಿರ್ಮಾಣವಾಗುತ್ತಿದೆ.
ಹೂಡಿಕೆ ಸ್ನೇಹಿ ನೀತಿಗಳ ಮೂಲಕ ಉತ್ಪಾದನಾ ವಲಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿರುವ ಕರ್ನಾಟಕ, ಕೈಗಾರಿಕಾ ಅಭಿವೃದ್ಧಿಯಲ್ಲಿಯೂ ಮುಂಚೂಣಿಯಲ್ಲಿದೆ. ಜೊತೆಗೆ, ‘ಸ್ಟಾರ್ಟ್‌ಅಪ್ ಕ್ಯಾಪಿಟಲ್ ಆಫ್ ಇಂಡಿಯಾ’ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಈ ಎಲ್ಲ ಸಾಧನೆಗಳು ಈ ಬಾರಿ ಸ್ತಬ್ಧಚಿತ್ರದಲ್ಲಿ ಸಮನ್ವಯಗೊಂಡಿವೆ.







