ಬೆಂಗಳೂರು: ಭದ್ರಾ ಜಲಾಶಯವು ಶಿವಮೊಗ್ಗ, ದಾವಣಗೆರೆ, ವಿಜಯನಗರ ಸೇರಿದಂತೆ ಮಧ್ಯ ಕರ್ನಾಟಕದ ಲಕ್ಷಾಂತರ ರೈತರ ಜೀವನಾಧಾರವಾಗಿದೆ. ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಬಳಿ ಸಮುದ್ರಮಟ್ಟದಿಂದ ಸುಮಾರು 601 ಮೀಟರ್ ಎತ್ತರದಲ್ಲಿ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಜಲಾಶಯವು 71,531 ಟಿಎಂಸಿ ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, 1965ರಿಂದ ನಿರಂತರವಾಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುತ್ತಾ ಬಂದಿದೆ.

ಈ ಯೋಜನೆಯಿಂದ 2,53,292 ಎಕರೆ ಕೃಷಿಭೂಮಿಗೆ ಎರಡು ಬೆಳೆಗಳಿಗೆ ನೀರು ಲಭ್ಯವಾಗುತ್ತಿದ್ದು, ಜೊತೆಗೆ ಕುಡಿಯುವ ನೀರು ಹಾಗೂ ಕೈಗಾರಿಕಾ ಅಗತ್ಯಗಳಿಗೂ ನೀರು ಹಂಚಿಕೆ ಮಾಡಲಾಗುತ್ತಿದೆ. ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮೂಲಕ ಈ ಪ್ರದೇಶದ ಸಮಗ್ರ ಅಭಿವೃದ್ಧಿಯೂ ನಡೆಯುತ್ತಿದೆ.
ಇಂತಹ ಪರಿಣಾಮಕಾರಿಯಾಗಿ ಹಾಗೂ ರೈತ ಸ್ನೇಹಿಯಾಗಿ ನಡೆಯುತ್ತಿರುವ ಭದ್ರಾ ನೀರಾವರಿ ಯೋಜನಾ ವೃತ್ತವನ್ನು ಕರ್ನಾಟಕ ನೀರಾವರಿ ನಿಗಮದಿಂದ ಬೇರ್ಪಡಿಸಿ ವಿಶ್ವೇಶ್ವರಯ್ಯ ಜಲ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸುವ ಪ್ರಸ್ತಾವ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿರುವುದು ಆತಂಕಕಾರಿ ವಿಚಾರ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.

“ಭದ್ರಾ ನೀರಾವರಿ ಯೋಜನೆ ರೈತರ ದೀರ್ಘ ಹೋರಾಟ ಹಾಗೂ ತ್ಯಾಗದ ಫಲವಾಗಿದೆ. ಆಡಳಿತಾತ್ಮಕ ಬದಲಾವಣೆಗಳ ಹೆಸರಿನಲ್ಲಿ ಈ ಯೋಜನೆಯನ್ನು ಬೇರೆ ನಿಗಮಕ್ಕೆ ವರ್ಗಾವಣೆ ಮಾಡುವುದು ರೈತರ ಹಿತಾಸಕ್ತಿಗೆ ವಿರುದ್ಧವಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ವ್ಯವಸ್ಥೆಯಲ್ಲೇ ಭದ್ರಾ ಯೋಜನೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವಾಗ ಹಸ್ತಾಂತರದ ಅವಶ್ಯಕತೆ ಇಲ್ಲ. ಒಂದು ವೇಳೆ ಹಸ್ತಾಂತರವಾದರೆ ನೀರು ಹಂಚಿಕೆ, ನಿರ್ವಹಣೆ ಹಾಗೂ ನಿರ್ಣಯ ಪ್ರಕ್ರಿಯೆಗಳಲ್ಲಿ ಗೊಂದಲ ಉಂಟಾಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗಂಭೀರ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಇದಲ್ಲದೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಂಗಳೂರು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ಭದ್ರಾ, ತುಂಗಾ ಮತ್ತು ಅಪ್ಪರ್ ತುಂಗಾ ಜಲಾಶಯಗಳನ್ನು ಕೃಷ್ಣಾ ಜಲಾನಯನ ಪ್ರದೇಶದಿಂದ ಬೇರ್ಪಡಿಸಿ ಸರ್ ಎಂ. ವಿಶ್ವೇಶ್ವರಯ್ಯ ನೀರಾವರಿ ವಲಯಕ್ಕೆ ಸೇರಿಸುವ ಯಾವುದೇ ಪ್ರಕ್ರಿಯೆಯೂ ರೈತರ ಪಾಲಿಗೆ ಗಂಭೀರ ಪರಿಣಾಮಗಳನ್ನುಂಟುಮಾಡಲಿದೆ ಎಂಬ ಆತಂಕವನ್ನು ಹೆಚ್.ಆರ್. ಬಸವರಾಜಪ್ಪ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹೊನ್ನಾಳಿ ಶಾಸಕರಾದ ಡಿ.ಜಿ. ಶಾಂತನಗೌಡ, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಶಾಸಕ ಬಸವಂತಪ್ಪ, ಶಾಸಕಿ ಲತಾ ಮಲ್ಲಿಕಾರ್ಜುನ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ಶಿಕಾರಿಪುರದ ನಾಗರಾಜ್ ಗೌಡ ಅವರ ನೇತೃತ್ವದಲ್ಲಿ ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ.
“ಸರ್ಕಾರ ರೈತರ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಭದ್ರಾ ನೀರಾವರಿ ಯೋಜನಾ ವೃತ್ತವನ್ನು ಹಸ್ತಾಂತರಿಸುವ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದರೆ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಮುಂದಿನ ಹೋರಾಟದ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ” ಎಂದು ಹೆಚ್.ಆರ್. ಬಸವರಾಜಪ್ಪ ತಿಳಿಸಿದ್ದಾರೆ.







