ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಯಲವಟ್ಟಿ ದೊಡ್ಡಕೆರೆ ಏರಿಯಲ್ಲಿ ಅಕ್ರಮ ಮಣ್ಣು ದಂಧೆ: ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರ ತೀವ್ರ ಆಕ್ರೋಶ,.!

On: February 4, 2026 1:17 PM
Follow Us:

ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ನಿದಿಗೆ ಹೋಬಳಿಯ ಯಲವಟ್ಟಿ ಗ್ರಾಮದ ಸರ್ವೆ ನಂ.66ರಲ್ಲಿ ಇರುವ ಸರ್ಕಾರಿ ದೊಡ್ಡಕೆರೆ ಏರಿಯಿಂದ ಜೆ.ಸಿ.ಬಿ ಹಾಗೂ ಟ್ರಾಕ್ಟರ್ ಬಳಸಿ ಅಕ್ರಮವಾಗಿ ಮಣ್ಣು ತೆಗೆದು ಸಾಗಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಲವಟ್ಟಿ ಗ್ರಾಮದ ಸರ್ವೆ ನಂ.66ರಲ್ಲಿ ಸುಮಾರು 24 ಎಕರೆ 06 ಗುಂಟೆ ವಿಸ್ತೀರ್ಣದ ಸರ್ಕಾರಿ ದೊಡ್ಡಕೆರೆ ಇದ್ದು, ಈ ಕೆರೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಅನೇಕ ರೈತರ ಕೃಷಿ ಜಮೀನುಗಳು ಸೇರಿವೆ. ಭದ್ರಾ ಚಾನಲ್‌ನ ನೀರು ಈ ಕೆರೆಗೆ ಹರಿದು ಬಂದು ಸಂಗ್ರಹವಾಗುತ್ತಿದ್ದು, ಕೃಷಿಗೆ ಮತ್ತು ಪರಿಸರ ಸಮತೋಲನಕ್ಕೆ ಕೆರೆ ಅತ್ಯಂತ ಪ್ರಮುಖವಾಗಿದೆ.

ಆದರೆ ಯಲವಟ್ಟಿ ಗ್ರಾಮದ ಉಮಾಶಂಕರ ಬಿನ್ ಧರ್ಮರಾಜ್ ಅವರು ಯಾವುದೇ ಅನುಮತಿ ಇಲ್ಲದೆ, ಜೆ.ಸಿ.ಬಿ ನಂ. ಕೆಎ–14–ಎಂಎ–9175 ಹಾಗೂ ಟ್ರಾಕ್ಟರ್ ನಂ. ಕೆಎ–14–ಟಿಬಿ–0183 ಬಳಸಿಕೊಂಡು ಕೆರೆ ಏರಿಯ ಮಣ್ಣನ್ನು ಅಕ್ರಮವಾಗಿ ತೆಗೆದು ತಮ್ಮ ಸ್ವಂತ ಜಮೀನಿಗೆ ಸಾಗಿಸಿರುವ ಆರೋಪ ಕೇಳಿಬಂದಿದೆ. ಅಂದಾಜು 650 ಟ್ರಾಕ್ಟರ್ ಲೋಡ್‌ಗಳಷ್ಟು ಮಣ್ಣು ಕೆರೆ ಏರಿಯಿಂದ ತೆಗೆದಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಈ ಅಕ್ರಮದಿಂದಾಗಿ ಕೆರೆಯ ಅಸ್ತಿತ್ವಕ್ಕೆ ಭಾರೀ ಧಕ್ಕೆಯಾಗಿದೆ. ಮುಂದಿನ ಮಳೆಗಾಲದಲ್ಲಿ ಕೆರೆ ನೀರು ತಡೆದುಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುವ ಸಾಧ್ಯತೆ ಇದ್ದು, ರೈತರ ಜಮೀನುಗಳು ಹಾಗೂ ಗ್ರಾಮಾಂತರ ರಸ್ತೆಗಳಿಗೆ ನೀರು ಹರಿದು ಹಾನಿ ಉಂಟಾಗುವ ಆತಂಕವೂ ಹೆಚ್ಚಾಗಿದೆ.

ಈ ಸಂಬಂಧ ಯಲವಟ್ಟಿ ಗ್ರಾಮಸ್ಥರು ದಿನಾಂಕ 14.01.2026ರಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಅದರ ಮೇರೆಗೆ 21.01.2026ರಂದು ಸಹಾಯಕ ಕಾರ್ಯಪಾಲಕ ಅಭಿಯಂತರರು, ಕನೀನಿ ನಂ.3, ಬಿಆರ್‌ಎಲ್‌ಬಿಸಿ ಉಪವಿಭಾಗ ಭದ್ರಾವತಿ ಇವರು ಸ್ಥಳ ಪರಿಶೀಲನೆ ನಡೆಸಿದ್ದು, ಕೆರೆ ಏರಿಯಿಂದ ಮಣ್ಣು ಸಾಗಿಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಆರೋಪಿತ ಉಮಾಶಂಕರ ಬಿನ್ ಧರ್ಮರಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಶಿಫಾರಸು ಮಾಡಿರುವುದಾಗಿ ತಿಳಿದುಬಂದಿದೆ.

ಆದರೆ ಈ ಎಲ್ಲಾ ದಾಖಲೆಗಳು ಮತ್ತು ಶಿಫಾರಸುಗಳಿದ್ದರೂ ಸಹ, ಇಂದಿನವರೆಗೆ ಅಕ್ರಮ ಮಣ್ಣು ತೆಗೆದು ಸಾಗಿಸಿದವರ ವಿರುದ್ಧ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರಲ್ಲಿ ಅನುಮಾನ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ವಿಚಾರದಲ್ಲಿ ಮೀನಮೇಷ ಎಣಿಸುತ್ತಿದ್ದು, ಅಕ್ರಮಕ್ಕೆ ಪರೋಕ್ಷವಾಗಿ ಶಾಮೀಲಾಗಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಕೆರೆ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ, ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಮಣ್ಣು ತೆಗೆದು ಸಾಗಿಸುವುದು ಸ್ಪಷ್ಟವಾಗಿ ಕಾನೂನು ಬಾಹಿರ ಕೃತ್ಯವಾಗಿದ್ದು, ಪರಿಸರ ಮತ್ತು ಸಾರ್ವಜನಿಕ ಆಸ್ತಿಗೆ ಗಂಭೀರ ಹಾನಿ ಉಂಟುಮಾಡುತ್ತದೆ. ಇದನ್ನು ತಕ್ಷಣವೇ ತಡೆಗಟ್ಟದೇ ಇದ್ದರೆ ಮುಂದಿನ ದಿನಗಳಲ್ಲಿ ಅಪಾರ ನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ, ಅಕ್ರಮವಾಗಿ ಕೆರೆ ಏರಿ ಮಣ್ಣು ತೆಗೆದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಕೆರೆ ಏರಿಯ ಮರುಸ್ಥಾಪನೆ, ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ನಡೆಯದಂತೆ ಶಾಶ್ವತ ಕ್ರಮಗಳನ್ನು ಜರುಗಿಸಬೇಕು ಎಂಬುದು ಯಲವಟ್ಟಿ ಗ್ರಾಮಸ್ಥರ ಒತ್ತಾಯವಾಗಿದೆ.

ಸಾರ್ವಜನಿಕ ಸಂಪತ್ತಿನ ಸಂರಕ್ಷಣೆಗಾಗಿ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ ಅವಶ್ಯಕತೆ ಈ ಘಟನೆಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment