ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗ ಮಾರಿಕಾಂಬಾ ಜಾತ್ರೆ ಪ್ಲಾಸ್ಟಿಕ್ ಮುಕ್ತವಾಗಲಿ: ಪರ್ಯಾವರಣ ಟ್ರಸ್ಟ್ ಮನವಿ

On: February 4, 2026 2:05 PM
Follow Us:

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆಯುವ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರೆಯನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಬೇಕೆಂದು ಪರ್ಯಾವರಣ ಟ್ರಸ್ಟ್ ಮನವಿ ಮಾಡಿದೆ.

ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು, ಲೋಟಗಳು, ತಟ್ಟೆಗಳು ಹಾಗೂ ಕವರ್‌ಗಳ ಬಳಕೆ ಮಿತಿ ಮೀರಿದ್ದು, ಇದು ಪರಿಸರಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರದ ಸ್ವಚ್ಛತೆ ಹದಗೆಡುವುದರ ಜೊತೆಗೆ ಜಲಮೂಲಗಳು ಮಾಲಿನ್ಯಗೊಂಡು ಮಾನವ ಆರೋಗ್ಯಕ್ಕೂ ಅಪಾಯ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಪರಿಸರ ಸ್ನೇಹಿ ಪರ್ಯಾಯ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಎಂ. ಕುಮಾರಸ್ವಾಮಿ ತಿಳಿಸಿದ್ದಾರೆ.

ಶಿವಮೊಗ್ಗ ಮಾರಿಕಾಂಬಾ ದೇವಿ ಜಾತ್ರಾ ಸಮಿತಿ ಪದಾಧಿಕಾರಿಗಳನ್ನು ಭೇಟಿಯಾಗಿ ಮಾತನಾಡಿದ ಅವರು, ಪ್ಲಾಸ್ಟಿಕ್ ವಸ್ತುಗಳ ಸಂಗ್ರಹ, ಮಾರಾಟ ಹಾಗೂ ಬಳಕೆ ಕಾನೂನುಬಾಹಿರವಾಗಿದ್ದು, ಇದು ದಂಡನೀಯ ಅಪರಾಧವೂ ಆಗಿದೆ ಎಂಬುದನ್ನು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತಿಳಿದುಕೊಳ್ಳಬೇಕು ಎಂದು ಹೇಳಿದರು. ಜಾತ್ರೆಯಂತಹ ದೊಡ್ಡ ಸಾರ್ವಜನಿಕ ಉತ್ಸವಗಳಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಕಡ್ಡಾಯವಾಗಿ ಜಾರಿಗೊಳಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದಾಗಿದೆ ಎಂದರು.

ದೇವಸ್ಥಾನದ ಆಡಳಿತ ಮಂಡಳಿಯವರು ಜಾತ್ರಾ ವ್ಯಾಪಾರಿ ಮಳಿಗೆಗಳಿಗೆ ಅನುಮತಿ ನೀಡುವ ವೇಳೆ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಬೇಕು. ಜೊತೆಗೆ ಬಟ್ಟೆ ಚೀಲಗಳು, ಜೈವಿಕವಾಗಿ ಕರಗುವ ಕ್ಯಾರಿ ಬ್ಯಾಗ್‌ಗಳು ಹಾಗೂ ಪರಿಸರ ಸ್ನೇಹಿ ಕವರ್‌ಗಳ ಬಳಕೆಯನ್ನು ಉತ್ತೇಜಿಸಬೇಕು. ಇಂತಹ ಕ್ರಮಗಳಿಂದ ಪರಿಸರ ಸಂರಕ್ಷಣೆಯ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೂ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಾರಿಕಾಂಬಾ ದೇವಿ ಜಾತ್ರಾ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಮಾತನಾಡಿ, ದೇವಿಯ ಪ್ರಸಾದ ವಿತರಣೆಗೆ ಆಡಳಿತ ಸಮಿತಿಯ ವತಿಯಿಂದ ಈಗಾಗಲೇ 22 ಸಾವಿರಕ್ಕೂ ಹೆಚ್ಚು ಬಟ್ಟೆ ಚೀಲಗಳನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದಕ್ಕೆ ನಗರದ ಸಂಸ್ಥೆಯೊಂದು ಸಹಕಾರ ನೀಡಿರುವುದನ್ನು ಅವರು ಪ್ರಶಂಸಿಸಿದರು. ಪ್ಲಾಸ್ಟಿಕ್ ಮುಕ್ತ ಜಾತ್ರೆ ಆಚರಿಸಲು ದೇವಸ್ಥಾನದ ಆಡಳಿತ ಮಾತ್ರವಲ್ಲದೆ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರ ಸಹಕಾರವೂ ಅತ್ಯಂತ ಅಗತ್ಯವಾಗಿದೆ ಎಂದರು. ಜಾತ್ರಾ ವ್ಯಾಪಾರಿ ಮಳಿಗೆಗಳಿಗೆ ಅನುಮತಿ ನೀಡುವ ವೇಳೆ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಸ್ಪಷ್ಟ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಪ್ರಮುಖರಾದ ಎನ್. ಉಮಾಪತಿ, ಸಿ. ಹೊನ್ನಪ್ಪ, ಕೆ. ರಂಗನಾಥ್, ಪರ್ಯಾವರಣ ಟ್ರಸ್ಟ್‌ನ ಡಾ. ಶ್ರೀಪತಿ ಎಲ್.ಕೆ., ಎಂ. ಶಂಕರ್, ಎನ್. ಮಂಜುನಾಥ್, ರಮೇಶ್ ಹೆಗ್ಡೆ, ತ್ಯಾಗರಾಜ ಮಿತ್ಯಾಂತ, ದಿನೇಶ್ ಶೇಟ್, ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ಲಾಸ್ಟಿಕ್ ಮುಕ್ತ ಮಾರಿಕಾಂಬಾ ಜಾತ್ರೆಯ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರ್ವಜನಿಕರಿಗೆ ತಲುಪಿಸಿ, ಮುಂದಿನ ತಲೆಮಾರಿಗೆ ಸ್ವಚ್ಛ ಹಾಗೂ ಆರೋಗ್ಯಕರ ಪರಿಸರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಪರ್ಯಾವರಣ ಟ್ರಸ್ಟ್ ಮನವಿ ಮಾಡಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment