ಬೆಂಗಳೂರು: ಸಂಯುಕ್ತ ಹೋರಾಟ–ಕರ್ನಾಟಕ ಹಾಗೂ ಜೆ.ಸಿ.ಟಿ.ಯು ವತಿಯಿಂದ ಫೆಬ್ರವರಿ 12ರಂದು ಹಮ್ಮಿಕೊಳ್ಳಲಾಗಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಟಿ ನಡೆಸಲಾಯಿತು. ಈ ಪತ್ರಿಕಾ ಗೋಷ್ಟಿಯಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ ಅವರು ಭಾಗವಹಿಸಿ ಮಾತನಾಡಿದರು.
ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಜನಪರ ಆಡಳಿತವನ್ನು ಸ್ಥಾಪಿಸಲು ದೇಶದ ಜನರು ಹೋರಾಟ ನಡೆಸಿ ಸ್ವಾತಂತ್ರ್ಯವನ್ನು ಪಡೆದರು. ಸ್ವಾತಂತ್ರ್ಯ ನಂತರದ ಆರಂಭಿಕ ಅವಧಿಯಲ್ಲಿ ಜನಪರ ಆಡಳಿತದ ಲಕ್ಷಣಗಳು ಕಂಡುಬಂದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದ ನೀತಿಗಳ ಪರಿಣಾಮವಾಗಿ ರೈತರು, ಕಾರ್ಮಿಕರು, ದಲಿತರು ಹಾಗೂ ಶ್ರಮಿಕ ವರ್ಗಗಳ ವಿರುದ್ಧವಾಗಿ ಬಂಡವಾಳಶಾಹಿಗಳ ಪರವಾದ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ತೀವ್ರವಾಗಿ ಟೀಕಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿ.ರಾಮ್.ಜಿ ಕಾಯ್ದೆಯನ್ನು ರಾಜ್ಯ ಸರ್ಕಾರ ವಿರೋಧಿಸಬೇಕೆಂದು ಆಗ್ರಹಿಸಿದ ಅವರು, ಅದೇ ರೀತಿ ವಿದ್ಯುತ್ ತಿದ್ದುಪಡಿ ಮಸೂದೆ, ಕಾರ್ಮಿಕರ ಕೋಡ್‌ಗಳು, ಬೀಜ ಮಸೂದೆ ಸೇರಿದಂತೆ ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನೂ ರಾಜ್ಯ ಸರ್ಕಾರ ಸ್ಪಷ್ಟವಾಗಿ ವಿರೋಧಿಸಿ ವಾಪಸ್ಸು ಪಡೆಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತರು ಮತ್ತು ಕಾರ್ಮಿಕರ ಬದುಕಿಗೆ ಮಾರಕವಾಗಿರುವ ಈ ನೀತಿಗಳ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯವಾಗಿದೆ. ಜನಪರ ಆಡಳಿತವನ್ನು ಪುನಃ ಸ್ಥಾಪಿಸಲು ದೇಶವ್ಯಾಪಿ ಹೋರಾಟ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಫೆಬ್ರವರಿ 12ರಂದು ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು ಹಾಗೂ ಜನಪರ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಹೆಚ್.ಆರ್. ಬಸವರಾಜಪ್ಪ ಮನವಿ ಮಾಡಿದರು.
ಈ ಪತ್ರಿಕಾ ಗೋಷ್ಟಿಯಲ್ಲಿ ಸಂಯುಕ್ತ ಹೋರಾಟ–ಕರ್ನಾಟಕ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ವಿವಿಧ ಕಾರ್ಮಿಕ, ರೈತ ಸಂಘಟನೆಗಳ ಮುಖಂಡರು ಹಾಜರಿದ್ದರು.







