ನವದೆಹಲಿ: ಕೇಂದ್ರದ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಮಾಹಿತಿ–ಪ್ರಸಾರ ಖಾತೆಗಳ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಭೇಟಿಯಾಗಿ, ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಅಭಿವೃದ್ಧಿ ಹಾಗೂ ರೈಲ್ವೆ ಯೋಜನೆಗಳ ಕುರಿತು ವಿಸ್ತೃತ ಮತ್ತು ಸಕಾರಾತ್ಮಕ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಬೆಂಗಳೂರು–ಪುಣೆ ಹೈ-ಸ್ಪೀಡ್ ರೈಲು ಕಾರಿಡಾರ್ ಯೋಜನೆ, ಪ್ರಸ್ತಾವಿತ ಬೆಂಗಳೂರು–ಮುಂಬೈ ಹೊಸ ರೈಲು ಸಂಪರ್ಕ ಮಾರ್ಗ, ಹಾಗೂ ರಾಜ್ಯದ ವಿವಿಧ ರೈಲು ಮಾರ್ಗಗಳಲ್ಲಿ ವನ್ಯಜೀವಿಗಳ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೆ ಬೇಲಿ ನಿರ್ಮಾಣ ಮತ್ತು ಬ್ಲಾಕ್ ಕಾರಿಡಾರ್‌ಗಳ ಪರಿಣಾಮಕಾರಿ ಅನುಷ್ಠಾನದ ಅಗತ್ಯದ ಕುರಿತು ವಿವರವಾಗಿ ಮಾತುಕತೆ ನಡೆಸಲಾಯಿತು.

ಅದೇ ರೀತಿ, ಮಂಡ್ಯ ಲೋಕಸಭಾ ಕ್ಷೇತ್ರ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ರೈಲ್ವೆ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸುವ ಕುರಿತು ಚರ್ಚಿಸಲಾಯಿತು. ಮೈಸೂರು–ಬೆಂಗಳೂರು ನಡುವಿನ ಪ್ರಮುಖ ಪ್ರಯಾಣಿಕ ರೈಲು ‘ಒಡೆಯರ್ ಎಕ್ಸ್‌ಪ್ರೆಸ್’ಗೆ ರಾಮನಗರದಲ್ಲಿ ನಿಲುಗಡೆ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಇದರಿಂದ ರಾಮನಗರ ಜಿಲ್ಲೆಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ವಿವರಿಸಿದರು.
ಇದಲ್ಲದೆ, ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ಉದ್ದೇಶದಿಂದ ಮಂಡ್ಯ ಜಿಲ್ಲೆಯಲ್ಲಿ ಸುಧಾರಿತ ಆಧಾರ್ ಸೇವೆಗಳು, ಆಧುನಿಕ ಮೂಲಸೌಕರ್ಯ ಹಾಗೂ ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿರುವುದನ್ನೂ ಈ ಸಂದರ್ಭದಲ್ಲಿ ಒತ್ತಿ ಹೇಳಲಾಯಿತು.

ಕರ್ನಾಟಕದಲ್ಲಿ ರೈಲ್ವೆ ಮೂಲಸೌಕರ್ಯ ವಿಸ್ತರಣೆ, ಸಂಪರ್ಕ ವ್ಯವಸ್ಥೆ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳ ಬಲವರ್ಧನೆಗೆ ಸಂಬಂಧಿಸಿದಂತೆ ನಡೆದ ಈ ಚರ್ಚೆ ಫಲಪ್ರದವಾಗಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ದೊರೆಯಲಿದೆ ಎಂಬ ವಿಶ್ವಾಸವನ್ನು ಹೆಚ್.ಡಿ.ಕುಮಾರಸ್ವಾಮಿ ಅವರು ವ್ಯಕ್ತಪಡಿಸಿದರು.







