ಸುಳ್ಳು ಸುದ್ದಿ, ದ್ವೇಷ ಪ್ರಚಾರಕ್ಕೆ ಬ್ರೇಕ್ – 67.26 ಕೋಟಿ ರೂ. ವೆಚ್ಚದ ‘ಸೋಶಿಯಲ್ ಮೀಡಿಯಾ ಅನಾಲಿಟಿಕ್ಸ್’ ತಂತ್ರಾಂಶಕ್ಕೆ ಸಂಪುಟ ಅನುಮೋದನೆ
ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿ, ದ್ವೇಷ ಭಾಷಣ ಹಾಗೂ ಕಾನೂನು–ಸುವ್ಯವಸ್ಥೆಗೆ ಧಕ್ಕೆ ತರುವ ವಿಷಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 67.26 ಕೋಟಿ ರೂ. ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಸೋಶಿಯಲ್ ಮೀಡಿಯಾ ಅನಾಲಿಟಿಕ್ಸ್ ಸಲ್ಯೂಷನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಅಳವಡಿಸಲು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಈ ನೂತನ ತಂತ್ರಾಂಶವನ್ನು ಗೃಹ ಇಲಾಖೆಯ ಅಧೀನದಲ್ಲಿ ಸ್ಥಾಪಿಸಲಾಗುವ ಕಮಾಂಡಿಂಗ್ ಸೆಂಟರ್ ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಸಾಮಾಜಿಕ ಮಾಧ್ಯಮಗಳು, ವೆಬ್‌ಸೈಟ್‌ಗಳು ಹಾಗೂ ವಾಟ್ಸಪ್‌ನಂತಹ ಮೆಸೆಂಜರ್ ವೇದಿಕೆಗಳ ಮೂಲಕ ಹರಡುವ ಸುಳ್ಳು ಮಾಹಿತಿ, ದ್ವೇಷ ಭಾಷಣ ಮತ್ತು ತಪ್ಪು ಪ್ರಚಾರಗಳನ್ನು ಪತ್ತೆಹಚ್ಚಿ ತಕ್ಷಣವೇ ಕ್ರಮ ಕೈಗೊಳ್ಳುವ ವ್ಯವಸ್ಥೆ ಇದರಲ್ಲಿ ಅಳವಡಿಸಲಾಗಿದೆ.
ಕೃತಕ ಬುದ್ಧಿಮತ್ತೆಯಿಂದ ಚಾಲಿತ ಈ ಸಾಫ್ಟ್‌ವೇರ್ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ರಿಯಲ್ ಟೈಮ್‌ನಲ್ಲಿ ಮಾಹಿತಿ ರವಾನಿಸುವ ಸಾಮರ್ಥ್ಯ ಹೊಂದಿದ್ದು, ಯಾವುದೇ ಸಂವೇದನಶೀಲ ವಿಷಯಗಳು ಹರಡಿದ ತಕ್ಷಣ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳಿಗೆ ಎಚ್ಚರಿಕೆ ಸಂದೇಶ ತಲುಪಲಿದೆ. ಇದರಿಂದ ಕಾನೂನು–ಸುವ್ಯವಸ್ಥೆ ಕಾಪಾಡುವಲ್ಲಿ ತ್ವರಿತ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು, ಸಾಮಾಜಿಕ ಜಾಲತಾಣಗಳಲ್ಲಿನ ಅನುಮಾನಾಸ್ಪದ ಪೋಸ್ಟ್‌ಗಳ ಮೂಲ ದಾಖಲೆಗಳನ್ನು ಸಂಗ್ರಹಿಸಿ, ಪೊಲೀಸರ ತನಿಖೆಗೆ ನೆರವು ನೀಡುವಂತೆ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ ಎಂದರು. ದೂರು ದಾಖಲಿಸಲು ಅಗತ್ಯವಾದ ತಾಂತ್ರಿಕ ಹಾಗೂ ಮಾಹಿತಿಯ ಬೆಂಬಲ ಈ ತಂತ್ರಾಂಶದಿಂದ ಲಭ್ಯವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಪ್ರಯತ್ನಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನಿರಂತರ ನಿಗಾ ವಹಿಸುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿ ಮತ್ತು ದ್ವೇಷ ಪ್ರಚಾರವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ತಡೆಗಟ್ಟಲು ಈ ಅನಾಲಿಟಿಕ್ಸ್ ಸಲ್ಯೂಷನ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.
ಆದರೆ, ಮುಖ್ಯ ವಾಹಿನಿಯ, ನೈಜ ಹಾಗೂ ಮಾನ್ಯತೆ ಪಡೆದ ಮಾಧ್ಯಮಗಳು ಮತ್ತು ಅವುಗಳ ಅಧಿಕೃತ ಡಿಜಿಟಲ್ ವೇದಿಕೆಗಳನ್ನು ಈ ನಿಗಾ ವ್ಯವಸ್ಥೆಯಿಂದ ಹೊರಗಿಡಲು ಸರ್ಕಾರ ನಿರ್ಧರಿಸಿರುವುದು ಗಮನಾರ್ಹವಾಗಿದೆ. ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.

ಇತ್ತೀಚೆಗೆ ಭದ್ರಾವತಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ರವರಿಗೆ, ಸಾಮಾಜಿಕ ಜಾಲತಾಣಗಳ ಪರಿಣಾಮಗಳ ಕುರಿತು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಸ್ಮರಿಸಿ ಮಾತನಾಡಿದ್ದರು. ಸಾಮಾಜಿಕ ಮಾಧ್ಯಮಗಳ ದುರುಪಯೋಗದಿಂದ ಸಮಾಜದಲ್ಲಿ ಉಂಟಾಗುವ ಅಶಾಂತಿ, ಸುಳ್ಳು ಸುದ್ದಿ ಮತ್ತು ದ್ವೇಷ ಭಾಷಣಗಳಿಗೆ ಸರ್ಕಾರ ಕಟ್ಟುನಿಟ್ಟಿನ ಕಡಿವಾಣ ಹಾಕುವ ಅಗತ್ಯವಿದೆ ಎಂದು ಜಗದ್ಗುರುಗಳು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಕಾನೂನು–ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನೂ ಸಚಿವರು ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದ್ದರು.

ಸಾಮಾಜಿಕ ಮಾಧ್ಯಮ ದುಷ್ಪರಿಣಾಮಗಳ ಬಗ್ಗೆ ತರಳಬಾಳು ಜಗದ್ಗುರು ಎಚ್ಚರಿಕೆ – ಸರ್ಕಾರದ ನಿರ್ಧಾರ ಸ್ವಾಗತಾರ್ಹ
ಈ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಭದ್ರಾವತಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾಮಾಜಿಕ ಜಾಲತಾಣಗಳ ದುರುಪಯೋಗದ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ದರು. ಸಾಮಾಜಿಕ ಮಾಧ್ಯಮಗಳು ಇಂದು ಜನಜೀವನದ ಅವಿಭಾಜ್ಯ ಅಂಗವಾಗಿದ್ದರೂ, ಅವುಗಳ ಮೂಲಕ ಸುಳ್ಳು ಸುದ್ದಿ, ದ್ವೇಷ ಭಾಷಣ ಮತ್ತು ತಪ್ಪು ಮಾಹಿತಿ ಹರಡುವುದರಿಂದ ಸಮಾಜದಲ್ಲಿ ಅಶಾಂತಿ, ವೈಮನಸ್ಸು ಹಾಗೂ ಮೌಲ್ಯಗಳ ಕುಸಿತ ಉಂಟಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು. ಯುವಜನತೆ ವಿಶೇಷವಾಗಿ ಇಂತಹ ತಪ್ಪು ಮಾಹಿತಿಗೆ ಬಲಿಯಾಗುತ್ತಿರುವುದು ಅಪಾಯಕಾರಿಯೆಂದು ಎಚ್ಚರಿಕೆ ನೀಡಿದ ಜಗದ್ಗುರುಗಳು, ಸರ್ಕಾರಗಳು ಸಮಯೋಚಿತವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದರು. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲು ರಾಜ್ಯ ಸರ್ಕಾರ ಈಗ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಹಾಗೂ ಸಕಾರಾತ್ಮಕ ಬೆಳವಣಿಗೆ ಆಗಿದ್ದು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸತ್ಯಾಧಾರಿತ ಮಾಹಿತಿಯ ಹರಿವಿಗೆ ಇದು ನೆರವಾಗಲಿದೆ ಎಂಬ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ, ಸಾಮಾಜಿಕ ಜಾಲತಾಣಗಳ ಮೂಲಕ ಹರಡುವ ತಪ್ಪು ಮಾಹಿತಿಗೆ ಬ್ರೇಕ್ ಹಾಕಿ, ಸಮಾಜದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದಿಕ್ಕಿನಲ್ಲಿ ರಾಜ್ಯ ಸರ್ಕಾರದ ಈ ಕ್ರಮ ಮಹತ್ವದ ಪರಿಣಾಮ ಬೀರುವ ನಿರ್ಧಾರವೆಂದು ವಿಶ್ಲೇಷಿಸಲಾಗುತ್ತಿದೆ.







