ಗ್ರಾಮದ ಅಧಿಕೃತ ನಕ್ಷೆಯಲ್ಲಿ ದಾಖಲಾಗಿರುವ ದಾರಿಯನ್ನು ಯಾರಾದರೂ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆ, ಅಂತಹ ದಾರಿಯನ್ನು ತಕ್ಷಣವೇ ತೆರವುಗೊಳಿಸುವ ಜವಾಬ್ದಾರಿ ಕಂದಾಯ ಇಲಾಖೆಯದ್ದೇ ಆಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಜಮೀನುಗಳ ಮೂಲಕ ಹಾದು ಹೋಗುವ ವಾಡಿಕೆ ರಸ್ತೆಗಳ ಕುರಿತ ಪ್ರಕರಣಗಳು ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಬಂದರೂ, ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ತಾತ್ಕಾಲಿಕ ಪರಿಹಾರ ಒದಗಿಸಲು ತಹಶೀಲ್ದಾರ್‌ಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

‘ಭೂ ಸುರಕ್ಷಾ’ ಯೋಜನೆಗೆ ಚಾಲನೆ
63.58 ಕೋಟಿ ಹಳೆಯ ದಾಖಲೆಗಳು ಡಿಜಿಟಲ್ ರೂಪದಲ್ಲಿ ಸಂಗ್ರಹ
ಭೂ ದಾಖಲೆಗಳ ನಾಶ ಮತ್ತು ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಸರ್ಕಾರ ‘ಭೂ ಸುರಕ್ಷಾ’ ಯೋಜನೆಗೆ ಚಾಲನೆ ನೀಡಿದ್ದು, ರಾಜ್ಯದಾದ್ಯಂತ 63.58 ಕೋಟಿ ಹಳೆಯ ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ರೈತರು ಆನ್‌ಲೈನ್ ಮೂಲಕವೇ ಹಳೆಯ ಕಂದಾಯ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಪಡೆಯಬಹುದಾಗಿದೆ. ಇದರಿಂದ ತಾಲ್ಲೂಕು ಕಚೇರಿಗಳಿಗೆ ಅನಗತ್ಯವಾಗಿ ಅಲೆಯುವ ಪರಿಸ್ಥಿತಿ ತಪ್ಪಲಿದೆ ಎಂದು ಸಚಿವರು ಹೇಳಿದರು.

ದಾಖಲೆರಹಿತ ವಸತಿಗಳಿಗೆ ಕಂದಾಯ ಗ್ರಾಮ ಮಾನ್ಯತೆ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಗುರಿ
ಜನರು ಸಣ್ಣಪುಟ್ಟ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡಬಾರದು ಮತ್ತು ಮಧ್ಯವರ್ತಿಗಳ ಕಾಟ ತಪ್ಪಿಸಬೇಕು ಎಂಬುದು ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ದಾಖಲೆಗಳಿಲ್ಲದ ತಾಂಡಾ, ಹಟ್ಟಿ, ಹಾಡಿ ಹಾಗೂ ಜನವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆ ನೀಡಿ, ಇಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಎರಡೂವರೆ ವರ್ಷಗಳಲ್ಲಿ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಗುರಿ ಹೊಂದಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕಳೆದ ವರ್ಷ ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 1.20 ಲಕ್ಷ ಕುಟುಂಬಗಳಿಗೆ ಈಗಾಗಲೇ ಹಕ್ಕುಪತ್ರ ವಿತರಿಸಲಾಗಿದೆ. ಉಳಿದ 1.10 ಲಕ್ಷ ಕುಟುಂಬಗಳಿಗೆ ಫೆಬ್ರವರಿ 14ರಂದು ಹಾವೇರಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಏಕಕಾಲಕ್ಕೆ ಹಕ್ಕುಪತ್ರ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಕ್ಕುಪತ್ರದ ಜೊತೆಗೆ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಜಾಗದ ನೋಂದಣಿಯನ್ನೂ ಮಾಡಿಕೊಡಲಾಗುತ್ತಿದ್ದು, ಗ್ರಾಮ ಪಂಚಾಯತಿಗಳಲ್ಲಿ ‘ಇ-ಸ್ವತ್ತು’ ನೋಂದಣಿ ಮೂಲಕ ಶೇ.100ರಷ್ಟು ಕಾನೂನುಬದ್ಧ ಮಾಲೀಕತ್ವದ ಭದ್ರತೆ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.
11 ಲಕ್ಷ ಪೌತಿ ಖಾತೆ ಬದಲಾವಣೆ ಮೃತರ ಹೆಸರಿನ ಜಮೀನಿಗೆ ವಾರಸುದಾರರ ಹೆಸರಿನ ದಾಖಲೆ
ಜಮೀನಿನ ನಕಲಿ ವ್ಯವಹಾರ ಮತ್ತು ವಂಚನೆ ತಡೆಯುವ ಉದ್ದೇಶದಿಂದ ಆರ್‌ಟಿಸಿ ದಾಖಲೆಗಳಿಗೆ ಮಾಲೀಕರ ಆಧಾರ್ ಸಂಖ್ಯೆಯನ್ನು ಜೋಡಿಸುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಈ ವೇಳೆ ರಾಜ್ಯದಾದ್ಯಂತ 49 ಲಕ್ಷ ಜಮೀನು ಖಾತೆಗಳು ಮೃತರ ಹೆಸರಿನಲ್ಲಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ‘ಇ-ಪೌತಿ’ ಅಭಿಯಾನ ಆರಂಭಿಸಿ, ಮೃತ ಮಾಲೀಕರ ಹೆಸರಿನಲ್ಲಿರುವ ಜಮೀನನ್ನು ಅವರ ವಾರಸುದಾರರಿಗೆ ವರ್ಗಾಯಿಸುವ ಕಾರ್ಯ ನಡೆಯುತ್ತಿದೆ. ಗ್ರಾಮ ಆಡಳಿತಾಧಿಕಾರಿಗಳು ಮನೆಬಾಗಿಲಿಗೆ ತೆರಳಿ ಇ-ಕೆವೈಸಿ ಪ್ರಕ್ರಿಯೆ ನಡೆಸುತ್ತಿದ್ದು, ಇದುವರೆಗೆ 11 ಲಕ್ಷಕ್ಕೂ ಅಧಿಕ ಪೌತಿ ಖಾತೆಗಳ ಬದಲಾವಣೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕಂದಾಯ ಇಲಾಖೆಯಲ್ಲಿ ಬಾಕಿ ಇದ್ದ ಅವಧಿ ಮೀರಿದ ಪ್ರಕರಣಗಳನ್ನು ವಿಲೇವಾರಿ ಮಾಡಲು ಸರ್ಕಾರ ಗಂಭೀರ ಕ್ರಮ ಕೈಗೊಂಡಿದೆ. ಅಧಿಕಾರ ವಹಿಸಿಕೊಂಡ ವೇಳೆ ತಹಶೀಲ್ದಾರ್ ಹಂತದಲ್ಲಿ 10,774 ಹಾಗೂ ಉಪವಿಭಾಗಾಧಿಕಾರಿಗಳ ಹಂತದಲ್ಲಿ 73,624 ಪ್ರಕರಣಗಳು ಬಾಕಿ ಇದ್ದವು. ಹೆಚ್ಚುವರಿಯಾಗಿ 25 ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಿದ ಪರಿಣಾಮ ಈಗ ತಹಶೀಲ್ದಾರ್ ನ್ಯಾಯಾಲಯದಲ್ಲಿ 488 ಹಾಗೂ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 11,800 ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಪ್ರಕರಣ ವಿಲೇವಾರಿ ಅವಧಿಯನ್ನು 250 ದಿನಗಳಿಂದ 84 ದಿನಗಳಿಗೆ ಇಳಿಸಲಾಗಿದೆ ಎಂದು ಸಚಿವರು ಹೇಳಿದರು.
ಹೊಸದಾಗಿ ಘೋಷಣೆಯಾದ ತಾಲೂಕುಗಳಿಗೂ ಮೂಲಸೌಕರ್ಯ ಒದಗಿಸಲಾಗುತ್ತಿದ್ದು, ಉಳಿದ 49 ತಾಲೂಕುಗಳಲ್ಲಿ ‘ಪ್ರಜಾಸೌಧ’ ಹೆಸರಿನಡಿ ಸುಸಜ್ಜಿತ ಕಚೇರಿ ಕಟ್ಟಡಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಮುಂದಿನ ಒಂದೂವರೆ ವರ್ಷದೊಳಗೆ ಈ ಕಟ್ಟಡಗಳು ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ. ರೈತರ ಪೋಡಿ ಹಾಗೂ ದರಖಾಸ್ತು ಕೆಲಸಗಳಿಗೆ ವೇಗ ನೀಡಲಾಗಿದ್ದು, ಕಳೆದ ಒಂದು ವರ್ಷದಲ್ಲಿ ದಾಖಲೆಯ 1,89,499 ರೈತರ ಜಮೀನುಗಳ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.







