ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗ: ಯಡಮನೆ ರೈತರಿಗೆ ಆತಂಕ ಬೇಡ – ಸಚಿವ ಮಧು ಬಂಗಾರಪ್ಪ ಸ್ಪಷ್ಟ ಭರವಸೆ

On: February 16, 2026 1:26 PM
Follow Us:

ಶಿವಮೊಗ್ಗ: ಸಾಗರ ತಾಲ್ಲೂಕಿನ ಕರೂರು ಹೋಬಳಿಯ ಯಡಮನೆ ಗ್ರಾಮದಲ್ಲಿನ ರೈತಾಪಿ ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ನೀಡಲಾಗಿರುವ ನೋಟಿಸ್‌ಗಳ ವಿಚಾರ ಗಂಭೀರವಾಗಿದ್ದು, ಇದು ನನ್ನ ಗಮನಕ್ಕೆ ಬಂದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಲಾ ಶಿಕ್ಷಣ–ಸಾಕ್ಷರತಾ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು, ಯಡಮನೆ ಭಾಗದ ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ರೈತರನ್ನು ಬಲವಂತವಾಗಿ ತೆರವುಗೊಳಿಸುವ ಅಥವಾ ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಅರಣ್ಯ ಇಲಾಖೆಯಿಂದ ನೀಡಲಾಗಿರುವ ನೋಟಿಸ್‌ಗಳು 2012–13ರ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳ ಅನ್ವಯ ಜಾರಿಗೊಂಡಿರುವ ಹಳೆಯ ಆದೇಶಗಳ ಆಧಾರದಲ್ಲಿವೆ ಎಂಬುದು ಪರಿಶೀಲನೆ ವೇಳೆ ತಿಳಿದುಬಂದಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ, ಈಗಿನ ಸರ್ಕಾರದ ಮೇಲೆ ಅನಗತ್ಯ ಆರೋಪ ಮಾಡುವುದು ಸರಿಯಲ್ಲ. ನಮ್ಮ (ಕಾಂಗ್ರೆಸ್) ಸರ್ಕಾರವು ರೈತರ ಹಿತಾಸಕ್ತಿಯನ್ನು ಕಾಪಾಡಲು ಸಂಪೂರ್ಣ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ರೈತರನ್ನು ಬಲವಂತವಾಗಿ ಸ್ಥಳಾಂತರಿಸದಂತೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಕೆಲವು ರೈತರು ಅರ್ಜಿ ಸಲ್ಲಿಸಿದ್ದರೂ, ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಅವು ಇನ್ನೂ ಅಂತಿಮ ಮಾನ್ಯತೆ ಪಡೆಯದೇ ಉಳಿದಿವೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ಮೂಲಕ ಅರ್ಜಿಗಳ ಮರುಪರಿಶೀಲನೆ ಹಾಗೂ ಮೇಲ್ಮನವಿ ಪ್ರಕ್ರಿಯೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ನ್ಯಾಯ ಸಿಗುವಂತೆ ಕಾನೂನುಬದ್ಧ ಮಾರ್ಗದಲ್ಲಿ ಪರಿಹಾರ ಕಲ್ಪಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

ಯಡಮನೆ ಗ್ರಾಮದ ರೈತರು ಹಲವು ದಶಕಗಳಿಂದ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದು, ಅವರ ಬದುಕು ಮತ್ತು ಜೀವನೋಪಾಯದ ಪ್ರಶ್ನೆ ಸರ್ಕಾರದ ಗಮನದಲ್ಲಿದೆ. ರೈತರ ಸಮಸ್ಯೆಯನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಲಾಗುವುದು. ಸರ್ಕಾರದ ಉದ್ದೇಶ ಜನರನ್ನು ಸಂಕಷ್ಟಕ್ಕೆ ತಳ್ಳುವುದು ಅಲ್ಲ; ಅವರ ಹಕ್ಕುಗಳನ್ನು ರಕ್ಷಿಸುವುದೇ ನಮ್ಮ ಪ್ರಾಮುಖ್ಯತೆ ಎಂದು ಅವರು ಹೇಳಿದರು.

“ರೈತರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತವಾಗಿರಬೇಕು. ಸರ್ಕಾರ ನಿಮ್ಮೊಂದಿಗೆ ಇದೆ. ನ್ಯಾಯ ಮತ್ತು ಕಾನೂನು ವ್ಯಾಪ್ತಿಯೊಳಗೆ ನಿಮ್ಮ ಹಕ್ಕುಗಳನ್ನು ಕಾಪಾಡಲು ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ” ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟ ಸಂದೇಶ ನೀಡಿದ್ದಾರೆ.

ಈ ಮೂಲಕ ಯಡಮನೆ ಭಾಗದ ರೈತರಿಗೆ ಸರ್ಕಾರದಿಂದ ಭದ್ರ ಭರವಸೆ ದೊರೆತಿದ್ದು, ಸಮಸ್ಯೆ ಶೀಘ್ರದಲ್ಲೇ ಸಕಾರಾತ್ಮಕವಾಗಿ ಪರಿಹಾರವಾಗುವ ನಿರೀಕ್ಷೆ ವ್ಯಕ್ತವಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment