ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಬಿಜೆಪಿ–ಆರ್‌ಎಸ್‌ಎಸ್ ಟೀಕೆ ಬಿಟ್ಟು ದಲಿತರ 39 ಸಾವಿರ ಕೋಟಿ ಎಲ್ಲಿ ಹೋಯಿತು?” – ಪ್ರಿಯಾಂಕ್ ಖರ್ಗೆ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆಕ್ರೋಶ

On: February 16, 2026 7:19 PM
Follow Us:

ಬೆಂಗಳೂರು: ರಾಜ್ಯದಲ್ಲಿ ದಲಿತರ ಸಮಸ್ಯೆಗಳು ಗಂಭೀರವಾಗಿರುವ ಸಂದರ್ಭದಲ್ಲಿ ಅವುಗಳನ್ನು ಪ್ರಸ್ತಾಪಿಸದೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತು ನೀಡಿದ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

“ಕಾಂಗ್ರೆಸ್ ಪಕ್ಷವನ್ನು ಕೆಲವರು ‘ಡೆವಿಲ್ಸ್ ವರ್ಕ್‌ಶಾಪ್’ ಎಂದು ಕರೆಯುತ್ತಾರೆ. ಈಗ ಬಿಜೆಪಿ ಮತ್ತು ಆರ್‌ಎಸ್‌ಎಸ್ ದೆವ್ವದ ನೆರಳಿನಲ್ಲಿ ಬದುಕುತ್ತಿವೆ ಎಂಬ ಹೇಳಿಕೆ ನೀಡಿರುವುದು ದುರಾದೃಷ್ಟಕರ. ಇಂತಹ ಭಾಷೆ ಬಳಸುವುದು ಸರಿಯಾದ ರಾಜಕೀಯ ಸಂಸ್ಕೃತಿ ಅಲ್ಲ,” ಎಂದು ಅವರು ಹೇಳಿದರು.

ಪ್ರಿಯಾಂಕ್ ಖರ್ಗೆ ಅವರಿಗೆ ವೈಯಕ್ತಿಕವಾಗಿ ಉದ್ದೇಶಿಸಿ ಮಾತನಾಡಿದ ನಾರಾಯಣಸ್ವಾಮಿ, “ರಾಜ್ಯದಲ್ಲಿ ಅನೇಕ ಗಂಭೀರ ಸಮಸ್ಯೆಗಳಿವೆ. ನೀವು ಸೇರಿದ ಸಮುದಾಯದ ಜನರು ಸಂಕಷ್ಟದಲ್ಲಿದ್ದಾರೆ. ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಸುಮಾರು 39 ಸಾವಿರ ಕೋಟಿ ರೂಪಾಯಿ ಹಣದ ಬಳಕೆ ಬಗ್ಗೆ ನೀವು ಒಂದೇ ದಿನವಾದರೂ ಸ್ಪಷ್ಟನೆ ನೀಡಿದ್ದೀರಾ?” ಎಂದು ಪ್ರಶ್ನಿಸಿದರು.

ಒಳ ಮೀಸಲಾತಿ ವಿಚಾರವಾಗಿ ರಾಜ್ಯದಲ್ಲಿ ಅಸಮಾಧಾನ ಉಂಟಾಗಿದೆ ಎಂದು ಹೇಳಿದ ಅವರು, “ಸಚಿವರು ಮತ್ತು ಉಪ ಮುಖ್ಯಮಂತ್ರಿ ಭೇಟಿ ನೀಡಿದ ಸಂದರ್ಭಗಳಲ್ಲಿ ಕಪ್ಪು ಬಾವುಟ ಪ್ರದರ್ಶನಗಳು ನಡೆಯುತ್ತಿವೆ. ವಿಶೇಷವಾಗಿ ಮೈಸೂರು ಭಾಗದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ತಮ್ಮನ್ನು ನಂಬಿದ ದಲಿತ ಸಮುದಾಯಕ್ಕೆ ನ್ಯಾಯ ನೀಡಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಮೂಡಿದೆ,” ಎಂದು ಆರೋಪಿಸಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡುವ ಮೊದಲು ಯೋಗ್ಯತೆ ಬಗ್ಗೆ ಚಿಂತಿಸಬೇಕು ಎಂದು ಅವರು ಹೇಳಿದರು. “ಆರ್‌ಎಸ್‌ಎಸ್ ಒಂದು ಸಾಮಾಜಿಕ ಸಂಘಟನೆ. ಅದು ದೇಶಭಕ್ತರ ಕೂಟ. ದೇಶದ ಹಿತಾಸಕ್ತಿ ಪ್ರಮುಖ ಎಂದು ನಂಬುವ ಸಂಘಟನೆಗೆ ದೆವ್ವದ ಉಪಮೆ ನೀಡುವುದು ಸರಿಯಲ್ಲ,” ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ದೇಶಪ್ರಥಮ ನಿಲುವು ಹೊಂದಿರುವ ಪಕ್ಷವಾಗಿದ್ದು, ರಾಷ್ಟ್ರಹಿತದ ವಿಚಾರದಲ್ಲಿ ಯಾವುದೇ ರಾಜಕೀಯ ಭೇದಾಭೇದವಿಲ್ಲದೆ ನಿಲುವು ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದರು. “ದೇಶದ ಪರವಾಗಿ ನಿಂತವರೊಂದಿಗೆ ನಾವು ಇದ್ದೇವೆ. ಅದರಲ್ಲಿ ಯಾವುದೇ ತಪ್ಪಿಲ್ಲ,” ಎಂದು ಹೇಳಿದರು.

ರಾಜಕೀಯ ವಾಗ್ವಾದಗಳಿಗಿಂತ ಜನರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ ನಾರಾಯಣಸ್ವಾಮಿ, ದಲಿತರು ಸೇರಿದಂತೆ ಎಲ್ಲಾ ಹಿಂದುಳಿದ ಸಮುದಾಯಗಳ ಹಕ್ಕು ಮತ್ತು ಕಲ್ಯಾಣದ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

K.M.Sathish Gowda

Join WhatsApp

Join Now

Facebook

Join Now

Leave a Comment