ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಫೆ.24ರಿಂದ ಶಿವಮೊಗ್ಗದ ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ: ಐದು ದಿನಗಳ ಭಕ್ತಿ-ಭಾವೈಕ್ಯತೆಯ ಮಹಾಸಂಭ್ರಮ

On: February 17, 2026 5:41 PM
Follow Us:

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲೆಂದೇ ಪ್ರಸಿದ್ಧಿ ಪಡೆದ ಶಿವಮೊಗ್ಗ ನಗರದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವವು ಈ ಬಾರಿ ಐದು ದಿನಗಳ ಕಾಲ ಭಕ್ತಿಭಾವ, ಸೌಹಾರ್ದತೆ ಮತ್ತು ಸಂಪ್ರದಾಯಗಳ ಸಂಭ್ರಮದಲ್ಲಿ ನಡೆಯಲಿದೆ ಎಂದು ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷರಾದ ಎಸ್.ಕೆ. ಮರಿಯಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಬಾರಿಯ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆಯನ್ನು ಭಕ್ತಿಭಾವದ ಜೊತೆಗೆ ಸುವ್ಯವಸ್ಥಿತವಾಗಿ ನಡೆಸಲು ಸೇವಾ ಸಮಿತಿ ಹಲವು ವಿಶೇಷ ವ್ಯವಸ್ಥೆಗಳನ್ನು ಕೈಗೊಂಡಿದೆ. ದೇವಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಮುಖವಾಡವನ್ನು ವಿಶೇಷವಾಗಿ ತಯಾರಿಸಿ ಅಲಂಕರಿಸಲಾಗುತ್ತಿದ್ದು, ಇದು ಜಾತ್ರೆಯ ಪ್ರಮುಖ ಆಕರ್ಷಣೆಯಾಗಲಿದೆ.

ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಕಾಳಿ ಅಲಂಕಾರದ ಭವ್ಯ ಮಹಾದ್ವಾರವನ್ನು ನಿರ್ಮಿಸಲಾಗುವುದು, ಜಾತ್ರಾ ವಾತಾವರಣವನ್ನು ಇನ್ನಷ್ಟು ಭಕ್ತಿಪೂರ್ಣವಾಗಿಸುವ ಕೆಲಸ ಮಾಡಲಾಗಿದೆ. ಶಿವಪ್ಪ ನಾಯಕ ಪ್ರತಿಮೆಯಿಂದ ಗದ್ದಿಗೆವರೆಗೆ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ದೂರದೂರಿನಿಂದ ಆಗಮಿಸುವ ಭಕ್ತರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬಿ.ಹೆಚ್. ರಸ್ತೆಯಲ್ಲೂ ಶಾಮಿಯಾನಗಳನ್ನು ಹಾಕಿ ಭಕ್ತರಿಗೆ ನೆರಳು ಮತ್ತು ವಿಶ್ರಾಂತಿ ಸೌಲಭ್ಯ ಒದಗಿಸಲಾಗುತ್ತದೆ ಎಂದು ಹೇಳಿದರು.

ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ತುರ್ತು ಪರಿಸ್ಥಿತಿಗಳಿಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯಗಳನ್ನೂ ಸಿದ್ಧಪಡಿಸಲಾಗುತ್ತದೆ. ಜನಸಂದಣಿ ಹೆಚ್ಚಿರುವ ಹಿನ್ನೆಲೆ ಕುಡಿಯುವ ನೀರು, ಶೌಚಾಲಯ ಹಾಗೂ ಭದ್ರತಾ ವ್ಯವಸ್ಥೆಗಳಿಗೂ ವಿಶೇಷ ಗಮನ ಹರಿಸಲಾಗುವುದು ಎಂದು ಎಸ್.ಕೆ. ಮರಿಯಪ್ಪ ತಿಳಿಸಿದರು.

ಈ ಬಾರಿ ವಿಶೇಷವಾಗಿ ಗಮನಾರ್ಹ ಸಂಗತಿಯೆಂದರೆ, ಶ್ರೀ ಮಾರಿಕಾಂಬಾ ಸೇವಾ ಸಮಿತಿ ವತಿಯಿಂದ ಯಾವುದೇ ದೇಣಿಗೆ ಸಂಗ್ರಹಣೆ ನಡೆಯುವುದಿಲ್ಲ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಜಾತ್ರೆಯ ಎಲ್ಲಾ ವೆಚ್ಚವನ್ನು ಸಮಿತಿಯೇ ಭರಿಸಲಿದ್ದು, ಭಕ್ತರಲ್ಲಿ ಯಾವುದೇ ರೀತಿಯ ಆರ್ಥಿಕ ಒತ್ತಡ ಉಂಟಾಗದಂತೆ ನೋಡಿಕೊಳ್ಳಲಾಗಿದೆ. ಸಾರ್ವಜನಿಕರು ಸಹ ಶಾಂತಿ, ಸುವ್ಯವಸ್ಥೆ ಕಾಪಾಡಿ ಸಮಿತಿಗೆ ಸಹಕಾರ ನೀಡುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಗಿದೆ.

ಬೆಳಿಗ್ಗೆ 5 ಗಂಟೆಗೆ ಮಂಗಳವಾದ್ಯದೊಂದಿಗೆ ಬಿ.ಬಿ. ರಸ್ತೆಯ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ. ಮುತ್ತೈದೆಯರು ಮೆರವಣಿಗೆಯೊಂದಿಗೆ ಗಾಂಧಿಬಜಾರದ ತವರು ಮನೆಯಲ್ಲಿರುವ ಶ್ರೀ ಮಾರಿಕಾಂಬೆಗೆ ಉಡಿ ತುಂಬಿ ಪೂಜೆ ಸಲ್ಲಿಸುತ್ತಾರೆ. ವಿಶ್ವಕರ್ಮ ಸಮಾಜದವರು ವಿಸರ್ಜನಾ ಮೂರ್ತಿಗೆ ಮಾಂಗಲ್ಯಧಾರಣೆ ಮಾಡಿ ಸಾರ್ವಜನಿಕ ಪೂಜೆಗೆ ಚಾಲನೆ ನೀಡುತ್ತಾರೆ. ರಾತ್ರಿ ವರೆಗೆ ಲಕ್ಷಾಂತರ ಮುತ್ತೈದೆಯರು ಮಡ್ಲಕ್ಕಿ ನೀಡಿ ಉಡಿ ತುಂಬಿ ಪೂಜೆ ಸಲ್ಲಿಸುತ್ತಾರೆ. ಬಳಿಕ ಉಪ್ಪಾರ ಸಮಾಜದವರು ರಥದಲ್ಲಿ ಅಮ್ಮನವರನ್ನು ಗದ್ದಿಗೆಗೆ ಕರೆತರುತ್ತಾರೆ. ಈ ಸಂದರ್ಭದಲ್ಲಿ ಗಂಗಾಪರಮೇಶ್ವರಿ ದೇವಸ್ಥಾನದಿಂದ ಗಂಗಾಮತಸ್ಥ ಸಮಾಜದವರು ಗಂಗೆ ಪೂಜೆಯೊಂದಿಗೆ ಸ್ವಾಗತಿಸುತ್ತಾರೆ.

ಬೆಳಿಗ್ಗೆ 4 ಗಂಟೆಗೆ ಹರಿಜನ ಸಮಾಜದವರು ಬೇವಿನುಡುಗೆಯೊಂದಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ನಂತರ ಅಮ್ಮನವರನ್ನು ಗದ್ದುಗೆಯಲ್ಲಿ ಕೂರಿಸಲಾಗುತ್ತದೆ. ಕುರುಬ ಸಮಾಜದ ಚೌಡಿಕೆ ಕುಟುಂಬದವರು ನೈವೇದ್ಯ ಸಲ್ಲಿಸುತ್ತಾರೆ.
ವಾಲ್ಮೀಕಿ, ಉಪ್ಪಾರ, ಮಡಿವಾಳ ಸಮಾಜದವರು ಸರದಿಯಂತೆ ನಾಲ್ಕು ದಿನಗಳ ಕಾಲ ಪೂಜೆ ನೆರವೇರಿಸುತ್ತಾರೆ.

ರಾತ್ರಿ 7 ಗಂಟೆಗೆ ಜಾನಪದ ಕಲಾ ತಂಡಗಳ ಮೆರಗು ನಡುವೆ ಶ್ರೀ ಮಾರಿಕಾಂಬೆಯ ಉತ್ಸವ ನಡೆಯಲಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅಮ್ಮನವರನ್ನು ವನ ಪ್ರವೇಶಕ್ಕೆ ಕಳಿಸಿಕೊಡುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಗುತ್ತದೆ. ಮಡಿವಾಳ ಸಮಾಜದವರು ಸಂಪ್ರದಾಯದಂತೆ ವನದಲ್ಲಿ ಅಂತಿಮ ಪೂಜೆ ನೆರವೇರಿಸುತ್ತಾರೆ.

ಮಾರ್ಚ್ 6ರಿಂದ 8ರವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯ ಹಾಗೂ ಅಂತರರಾಜ್ಯದ ಖ್ಯಾತ ಪೈಲ್ವಾನರ ಭಾಗವಹಿಸುವಿಕೆಯಿಂದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ತಿಳಿಸಿದರು.

ಜಾತ್ರೆ ಆಯೋಜನೆಗಾಗಿ 8 ಬಾಬುದಾರರು, ವಿವಿಧ ಉಪಸಮಿತಿಗಳು ಹಾಗೂ ಎಲ್ಲಾ ಸಮುದಾಯದ ಸದಸ್ಯರು ಭೇದಭಾವವಿಲ್ಲದೆ ಕೈಜೋಡಿಸಿದ್ದಾರೆ. ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆ ರಾಜ್ಯದಲ್ಲೇ ಇತಿಹಾಸ ಪ್ರಸಿದ್ಧಿ ಪಡೆದಿದ್ದು, ಧರ್ಮ-ಸಾಮರಸ್ಯದ ಸಂಕೇತವಾಗಿ ಗುರುತಿಸಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಉಪಾಧ್ಯಕ್ಷರಾದ ಎನ್. ಉಮಾಪತಿ, ಎಂ.ಕೆ. ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್, ವಿ.ರಾಜು, ಸುನೀಲ್, ಹರೀಶ್ ಲಾಲ್ ಹಾಗೂ ಇತರರು ಉಪಸ್ಥಿತರಿದ್ದರು.

ಐದು ದಿನಗಳ ಕಾಲ ನಡೆಯುವ ಈ ಭವ್ಯ ಜಾತ್ರೆ ಶಿವಮೊಗ್ಗ ನಗರದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ವೈಭವವನ್ನು ಮತ್ತೊಮ್ಮೆ ಪ್ರತಿಬಿಂಬಿಸಲಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment